Friday, January 27, 2012

ಹಿಂದಿ ಭಾರತದ ರಾಷ್ಟ್ರಭಾಷೆ ಅಲ್ಲ..

****

ಶ್ರೀಯುತ ಬಸವರಾಜ್, ಹೊಸಪೇಟೆ ಅವರ 'ಕನ್ನಡಿಗರು ಕನ್ನಡ ಮರೆತರಾ!' ಎಂಬ ಪತ್ರ ವಿಜಯ ಕರ್ನಾಟಕ ದ ವಾಚಕರವಿಜಯ ವಿಭಾಗದಲ್ಲಿ ೨೫/೦೧/೨೦೧೨) ಪ್ರಕಟವಾಗಿತ್ತು. .ಗಣರಾಜ್ಯೋತ್ಸವ ಕವಾಯತಿನಲ್ಲಿ ಕರ್ನಾಟಕದ ಸ್ತಬ್ಧಚಿತ್ರದಲ್ಲಿ ಕನ್ನಡವನ್ನು ಕಾಣೆಯಾಗಿಸಿ (ಅಂತೆಯೇ ಇತರ ರಾಜ್ಯಗಳ ಸ್ತಬ್ಧ ಚಿತ್ರಗಳಲ್ಲಿ ಆಯಾ ರಾಜ್ಯ ಭಾಷೆಯನ್ನು ಕಡೆಗಣಿಸಿ) ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ಸ್ತಬ್ಧ ಚಿತ್ರದ ಮಾಹಿತಿ ಅಳವಡಿಸಿದ್ದರ ಕುರಿತಾದ ಪತ್ರವದು. ಪತ್ರದ ಚಿತ್ರಪ್ರತಿ ಕೆಳಗೆ ಗಮನಿಸಿ


*****
ಅದೇ ಪತ್ರದಲ್ಲಿ ಬಸವರಾಜ್ ರವರು ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂಬ ಅಭಿಪ್ರಾಯ ಹೊಂದಿರುವುದರ ಕಡೆ ಗಮನ ಹರಿದು "ಹಿಂದಿ ಭಾರತದ ರಾಷ್ಟ್ರ ಭಾಷೆ ಅಲ್ಲ" ಎಂದು ಮನವರಿಕೆ ಮಾಡಿಸಲು ಆ ಪತ್ರಕ್ಕೆ ಪ್ರತಿಕ್ರಿಯೆಯಾಗಿ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಪತ್ರದ ಚಿತ್ರಪ್ರತಿ...



ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ
*****

Tuesday, July 26, 2011

ಕನ್ನಡ ಪ್ರೇಮ ಮೆರೆಯುವುದು ಕಾನೂನು ಬಾಹಿರ!

*****

ನಾಡಪ್ರೇಮ ಮತ್ತು ಭಾಷೆಯ ಮೇಲಿನ ಅಭಿಮಾನದಿಂದ ಭಾರತದ ಆಯಾ ರಾಜ್ಯಗಳಲ್ಲಿ ಅಲ್ಲಿನ ಭಾಷೆಯಲ್ಲಿ ತಮ್ಮ ವಾಹನಗಳ ನೋಂದಣಿ ವಿವರವನ್ನು ಬರೆಸಿರುವುದುನ್ನು ನಾವು ಕಾಣಬಹುದಾಗಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಬರೆಸಿರುವ ಇಂತಹ ಫಲಕ ಕಂಡಾಗ ಅದು ನಮಗೆ ನಮ್ಮ ನುಡಿಯ ಹಿರಿಮೆಯ ಮತ್ತು ಜಾಗೃತಿಯ ಸಂಕೇತವೆನಿಸುವುದು ಸಹಜ. ಈ ನಿಟ್ಟಿನಲ್ಲಿ ರಾಜ್ಯೋತ್ಸವ, ಭಾಷಾ ಸಮ್ಮೇಳನಗಳಲ್ಲಿ ಇತರ ಕನ್ನಡ ಪರ ಕಾಳಜಿಯನ್ನು ವ್ಯಕ್ತಪಡಿಸುವ ಜತೆಗೆ, ವಾಹನಗಳ ನೋಂದಣಿ ವಿವರವನ್ನು ಕನ್ನಡದಲ್ಲಿ ಬರೆಸುವ ಜಾಗೃತಿ ಅಭಿಯಾನವನ್ನು ಕನ್ನಡ ಪರ ಸಂಘಟನೆಗಳು ಹಮ್ಮಿಕೊಳ್ಳುತ್ತಾ ಬಂದಿರುವುದನ್ನು ನಾವು ಗಮನಿಸಬಹುದು.

ವಿಷಾದವೆಂದರೆ ಭಾರತದ ಒಪ್ಪುಕೂಟದಲ್ಲಿ ಈ ರೀತಿಯ ಭಾಷಾ ಪ್ರೇಮ ಮೆರೆಯುವುದು ಕಾನೂನು ಬಾಹಿರ! ಭಾರತದ ಸಾರಿಗೆ ಇಲಾಖೆಯ ಕಾಯ್ದೆ ರಾಜ್ಯಭಾಷೆಗಳಲ್ಲಿ ನೋಂದಣಿ ವಿವರ ಬರೆಸುವ ಬಗ್ಗೆ ಎಲ್ಲೂ ಉಲ್ಲೀಖಿಸಿಲ್ಲ. ಆದರೂ ಆಯಾ ರಾಜ್ಯದ ಸಂಚಾರಿ ಪೋಲಿಸರು ತಮ್ಮ ಭಾಷೆಯಲ್ಲಿನ ನೋಂದಣಿ ಫಲಕ ಕಂಡು ಹೆಮ್ಮೆ ಪಡುತ್ತಾರೆಯೇ ವಿನಾ ಎಲ್ಲೂ ಇದನ್ನು ಕಾನೂನು ಉಲ್ಲಂಘನೆಯೆಂದು ಪರಿಗಣಿಸಿದ ಉದಾಹರಣೆಯಿಲ್ಲ. ಆದರೆ ಇತ್ತೀಚೆಗೆ ಬೆಂಗಳೂರು ಸಂಚಾರಿ ಪೋಲಿಸರು ಕನ್ನಡದಲ್ಲಿ ನೋಂದಣಿ ವಿವರ ಇರುವ ವಾಹನಗಳನ್ನು ಹಿಡಿದು ಕಾನೂನು ಉಲ್ಲಂಘನೆಯಡಿ ದಂಡ ವಿಧಿಸುವ ಕೆಲಸಕ್ಕೆ ಚಾಲನೆ ಕೊಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ ಅಪರಾಧ ಚಟುವಟಿಕೆ ನಡೆಸುವವರು ಕನ್ನಡ ನೋಂದಣಿ ಸಂಖ್ಯಾ ಫಲಕ ಹಾಕಿಸಿಕೊಳ್ಳುತ್ತಿದ್ದಾರೆ, ಇಲ್ಲಿ ನೆಲೆಸಿರುವ ಪರಭಾಷಿಗರಿಗೆ ಇದರಿಂದ ಅನಾನುಕೂಲವಾಗುತ್ತಿದೆ ಮತ್ತು ನಮ್ಮ ಪೋಲಿಸರಿಗೂ ಕನ್ನಡ ಒದುವುದು ದುಸ್ಸಾಧ್ಯ ಎಂಬ ವಾದದ ಸಮರ್ಥನೆ ನಮ್ಮ ಪೋಲಿಸ್ ಅಧಿಕಾರಿಗಳದ್ದಾಗಿದೆ.

ಇಷ್ಟೇ ಅಲ್ಲದೆ ನಮ್ಮ ಸಂಚಾರಿ ಪೋಲಿಸರು, ಸಂಚಾರ ಸಮಸ್ಯೆಯ ಜಾಗೃತಿಯನ್ನು ಕೇವಲ ವಲಸಿಗರನ್ನ ಮಾತ್ರ ಗಣನೆಗೆ ತೆಗೆದುಕೊಂಡು ಇಲ್ಲಿನ ಬಹುಸಂಖ್ಯಾತ ಕನ್ನಡಿಗರನ್ನ ಮರೆತಿರುವುದನ್ನು ನಾವು ಕಾಣಬಹುದಾಗಿದೆ.ಕೆಲ ದಿನಗಳ ಹಿಂದೆ ಜನರಲ್ಲಿ ಸಂಚಾರಿ ವ್ಯವಸ್ಥೆಯ ಬಗ್ಗೆ ಒಂದು ವೀಡಿಯೋ ಮಾಡಿ ಬೆಂಗಳೂರಿನ ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಮೊದಲು ಪ್ರದರ್ಶನ ಮಾಡೊ ವ್ಯವಸ್ಥೆ ಮಾಡಿದ್ದಾರೆ. ವಿಪರ್ಯಾಸವೆಂದರೆ ಈ ಜಾಗೃತಿ ಚಿತ್ರ ಕನ್ನಡೇತರ ಭಾಷೆಯಲ್ಲಿರುವುದು! ಹಾಗೆಯೇ ನಗರದೆಲ್ಲೆಡೆ ಸಂಚಾರಿ ವ್ಯವಸ್ಥೆ ಕುರಿತು ಅಳವಡಿಸಿರೋ ಜಾಹೀರಾತುಗಳು, ಮತ್ತು ವಿದ್ಯುನ್ಮಾನ ಪ್ರದರ್ಶನ ಸೂಚಿಗಳಲ್ಲಿ ಕನ್ನಡದ ಬಳಕೆ ಸಮರ್ಪಕವಾಗಿಲ್ಲದಿರುವುದನ್ನು ಸಹ ನಾವು ಕಾಣಬಹುದಾಗಿದೆ.

ಆಯಾ ರಾಜ್ಯದ ಯಾವುದೇ ಇಲಾಖೆಯಿರಲಿ ಅದರ ವ್ಯವಸ್ಥೆಯ ಅನುಕೂಲ ಮೊದಲಿಗೆ ಸ್ಥಳೀಯರಿಗೆ ದೊರಕಬೇಕಾದ್ದು ಸಹಜವಾದದ್ದು ಮತ್ತು ಆ ನಿಟ್ಟಿನಲ್ಲಿ ವ್ಯವಸ್ಥೆ ಕಟ್ಟುವುದು ಆಯಾ ಇಲಾಖೆಯ ಮೂಲ ಕರ್ತವ್ಯಗಳಲ್ಲೊಂದು. ಇಲ್ಲದಿದ್ದರೆ ಇದು ಮನೆಗೆ ಮಾರಿ ಊರಿಗೆ ಉಪಕಾರಿ ಯ ಕೆಲಸವಾಗುತ್ತದೆ. ಬಹುಷಃ ಕನ್ನಡಿಗರಲ್ಲದ ಅಧಿಕಾರಿಗಳು ಆಯಕಟ್ಟಿನ ಸ್ಥಾನಗಳಲ್ಲಿ ವಿರಜಮಾನರಾಗುತ್ತಿರುವುದು ಕನ್ನಡದೆಡೆಗಿನ ಈ ಉದಾಸೀನ - ಅಸಡ್ಡೆಗೆ ಮುಖ್ಯ ಕಾರಣವಿರಬಹುದು. ರಾಜ್ಯದಲ್ಲಿನ ಇತ್ತೀಚಿನ ಆಗು-ಹೋಗುಗಳಲ್ಲಿ ನಮ್ಮ ಕನ್ನಡ ಪರ ಸರ್ಕಾರ! ಕನ್ನಡಪರ ಮಂತ್ರಿಗಳಿಗೆ! ಇದನ್ನೆಲ್ಲಾ ಗಮನಿಸುವಷ್ಟು - ಯೋಚಿಸುವಷ್ಟು ಬಿಡುವಿನ ಸಮಯ ಇನ್ನು ದೊರಕುವುದು ಕಷ್ಟವೇ! ಕೇಂದ್ರದ ಸಾರಿಗೆ ಕಾಯ್ದೆಯಲ್ಲಿ ವಾಹನಗಳ ನೋಂದಣಿ ಫಲಕಗಳಲ್ಲಿ ಆಯಾ ರಾಜ್ಯದ ಭಾಷೆಯನ್ನು ಕಡ್ಡಾಯವಾಗಿ ಬಳಸುವ ಬಗ್ಗೆ ತಿದ್ದುಪಡಿ ಆಗುವುದೆ ಇದಕ್ಕೆ ಕೊಡಬಹುದಾದ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಹೋರಾಟ ರೂಪಿಸುವುದು ಅತ್ಯಗತ್ಯವಾಗಿದೆ.

*****



ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ
*****

Thursday, March 3, 2011

ಕೇಂದ್ರ ಸಚಿವರ ಬಂಗಾಳಿ ಪ್ರೇಮ! ಕನ್ನಡ ರಾಜಕಾರಣಿಗಳ ಇಚ್ಛಾಶಕ್ತಿ?

*****

ಇತ್ತೀಚಿನ ಕೇಂದ್ರ ರೈಲು ಮತ್ತು ಹಣಕಾಸು ಮುಂಗಡ ಪತ್ರಗಳನ್ನು ಕ್ರಮವಾಗಿ ಮಂಡಿಸಿದ ಮಮತಾ ಬ್ಯಾನರ್ಜಿ ಮತ್ತು ಪ್ರಣಬ್ ಮುಖರ್ಜಿ ಅವರು ತಮಗೆ ದೊರೆತ ಅವಕಾಶದಲ್ಲಿ ತಮ್ಮ ಬಂಗಾಳಿ ಪ್ರೇಮವನ್ನು ಮೆರೆದ ಉದಾಹರಣೆ ಕುರಿತಾಗಿ ಈ ಪತ್ರ. ರೈಲ್ವೇ ಸಚಿವೆ ಮಮತಾರವವರು ರೈಲ್ವೇ ಮುಂಗಡ ಪತ್ರದ ಮೂಲಕ ಪಶ್ಚಿಮ ಬಂಗಾಳದ ಜನತೆಗೆ ಬಂಪರ್ ಕೊಡುಗೆ ನೀಡುತ್ತ ಇಡೀ ಭಾರತಕ್ಕೆ ಅನ್ವಯವಾಗುವ ಎರಡು ರೈಲ್ವೇ ಸೇವೆಗಳಿಗೆ ವಿವೇಕಾನಂದರ ನೆನಪಿನಲ್ಲಿ 'ವಿವೇಕ್ ರೈಲು' ಮತ್ತು ರವೀಂದ್ರನಾಥ ಠಾಗೋರರ ನೆನಪಿನಲ್ಲಿ 'ಕವಿ ಗುರು' ಎಕ್ಸ್ ಪ್ರೆಸ್ ಎಂಬ ಹೆಸರಿಟ್ಟು ತಮ್ಮ ಬಂಗಾಳಿ ಪ್ರೇಮವನ್ನು ಮೆರೆದಿದ್ದಾರೆ. ಕಳೆದ ರೈಲು ಬಜೆಟ್ ನಲ್ಲಿ ಸೇರ್ಪಡೆಗೊಂಡಿದ್ದ 'ತುರಂತೋ' ರೈಲು ಸೇವೆ ಸಹ ಅವರ ಬಂಗಾಳಿ ಪ್ರೇಮಕ್ಕೆ ಸಾಕ್ಷಿ. ಹಣಕಾಸು ಬಜೆಟ್ ಮಂಡಿಸಿದ ಪ್ರಣಬ್ ಮುಖರ್ಜಿಯವರು ಪೈಪೋಟಿಗೆ ಬಿದ್ದಂತೆ 'ಠಾಗೋರರ' ನೆನಪಿನಲ್ಲಿ ಕೋಟಿ ರೂಗಗಳ ಅಂತರ ರಾಷ್ಟ್ರೀಯ ಮಟ್ಟದ ಬಹುಮಾನ ಪ್ರಕಟಿಸುವ ಮೂಲಕ 'ರವೀಂದ್ರ'ರ ಹೆಸರನ್ನು ವಿಶ್ವವ್ಯಾಪಿ ಮಾಡಲು ಮುಂದಡಿಯಿಟ್ಟಿದ್ದಾರೆ.

ವಿಪರ್ಯಾಸ ನೋಡಿ, ಕರ್ನಾಟಕದ ರಾಜಕಾರಣಿಗಳಿಗೆ - ಅಧಿಕಾರಿಗಳಿಗೆ ಸ್ವಯಂ ಆಗಿ ಈ ರೀತಿಯ ಕರ್ನಾಟಕದ ಸ್ವಾಭಿಮಾನದ ಸಂಕೇತಗಳು - ನಾಡು ನಾಡಿಗರ ಬಗೆಗಿನ ಒಲವು ಮೂಡಿರುವುದನ್ನು ನಾವು ಎಂದೂ ಕಂಡಿಲ್ಲ. ಕನಿಷ್ಠ ಈ ಮೇಲಿನ ಉದಾಹರಣೆ ಅವರನ್ನು ಚಿಂತಿಸುವಂತೆ ಮಾಡುತ್ತದೆ ಎಂದರೂ ಅದು ತಪ್ಪಾಗುತ್ತದೆ. ಇವರಿಗೆ ಕನ್ನಡ - ಕನ್ನಡದ ಬಗೆಗಿನ ಮಾತು ರಾಷ್ಟ್ರೀಯತೆಯೆಂಬ ಗುಂಗಿನಲ್ಲಿ ಸಂಕುಚಿತವಾಗಿ ಬಿಡುತ್ತದೆ. ಇದು ನಮ್ಮ ಹೃದಯ ವೈಶಾಲ್ಯದ ಕರ್ಮ!

ಬೆಂಮೆರೈನಿನಿ ಇನ್ನೇನು ಆರಂಭವಾಗಲಿರುವ ತನ್ನ ಬೆಂಗಳೂರಿನ ಮೆಟ್ರೋ ರೈಲು ನಿಲ್ದಾಣಗಳಿಗೆ ಕನ್ನಡಿಗ ಸಾಧಕರ ಹೆಸರಿಡಲು ಮುಂದಾಗಿಲ್ಲದಿರುವುದು. ಬೆಂಮಸಾಸಂ ಒಡಗೂಡಿ ತರಲಿರುವ ಜಂಟಿ ಪಾಸುಗಳಿಗೆ 'ಸರಲ್' ಮತ್ತು 'ಸರಾಗ್' ಎಂಬ ಹಿಂದಿ ಅರ್ಥ ಬರುವ ಹೆಸರಿಡಲು ಯೋಜಿಸಿರುವುದು. ಬೆಂಮಸಾಸಂ ತನ್ನ ಸೇವೆಗೆ 'ಬಿಗ್ 10' ಎಂಬ ಹೆಸರು ಇಟ್ಟುಕೊಂಡಿರುವುದು, ಇವ್ಯಾವುದನ್ನೂ ಕುರಿತು ನಮ್ಮ ಆಡಳಿತಗಾರರು ಚಕಾರವೆತ್ತದೆ ಸುಮ್ಮನಿರುವುದು ನಮ್ಮ ನಿರಭಿಮಾನಕ್ಕೆ ಕೆಲ ಉದಾಹರಣೆಗಳು. ನಮ್ಮ ಊರುಗಳಲ್ಲಿನ ಯೋಜನೆಗೆ ನಮ್ಮ ಸಂಕೇತಗಳಿರಬೇಕು ಎಂದು ಧನಿ ಎತ್ತದ, ಕನ್ನಡ ಇಚ್ಛಾಶಕ್ತಿಯಿಲ್ಲದ ನಮ್ಮ ರಾಜಕಾರಣಿಗಳಿಂದ ಕೇಂದ್ರ ಸರ್ಕಾರದ ಆದೇಶಕ್ಕಾಗಿ ಇನ್ನೂ ಕಾಯಬೇಕಾಗಿರುವ 'ಬ್ಯಾಂಗಲೋರ್ - ಬೆಂಗಳೂರಾಗಿ' ಬದಲಾಗಬೇಕಾಗಿರುವುದು ಮತ್ತು ನಮ್ಮ ಹೊಸ ವಿಮಾನ ನಿಲ್ದಾಣ 'ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ' ವಾಗಬೇಕಾಗಿರುವುದು ಕೇವಲ ನಮ್ಮ ಹಗಲುಗನಸಾಗಿ ಮಾತ್ರ ಮುಂದುವರೆದಿದೆ

*****



*****

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ
*****

Thursday, January 20, 2011

ಕಿಂಗ್ ಫಿಷರ್ ವಿಮಾನದ ಗ್ರಾಹಕ ಸೇವೆಯಲ್ಲಿ ಕನ್ನಡ!

*****

ನೆನ್ನೆಯ ದಿನ (೨೦/೦೧/೨೦೧೧) ತಾವು ಕರೆ ಮಾಡಿ "ಕಿಂಗ್ ಫಿಷರ್" ವಿಮಾನ ಯಾನ ಸಂಸ್ಥೆಗೆ ೭/೧/೨೦೧೧ ರಂದು ಮಿಂಚೆ ಮೂಲಕ ಒಂದು ಪತ್ರ ಕಳಿಸಿದ್ದೆ. ಕಿಂಗ್ ಫಿಷರ್ ನ ವಿಮಾನಗಳಲ್ಲಿ, ಅದು ಹಾರಾಡುವ ವಿಮಾನ ನಿಲ್ದಾಣಗಳು, ಭಾರತದ ವಿವಿದೆಡೆ ಅವರು ಹೊಂದಿರುವ ಕಚೇರಿಗಳು, ಅವರ ಗ್ರಾಹಕ ಸಹಾಯವಾಣಿ ಕೇಂದ್ರಗಳಲ್ಲಿ ಹೀಗೆ ಇವರ ಯಾವುದೇ ರೀತಿಯ ಗ್ರಾಹಕ ಸೇವೆಯಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿ ಬಳಕೆಯಲ್ಲಿರುವ ಭಾಷೆಗಳಲ್ಲಿ ಏಕೆ ಸೇವೆ ಒದಗಿಸುತ್ತಿಲ್ಲ ಎಂದು ಗ್ರಾಹಕನಾಗಿ ಕೇಳಿದ್ದೆ. ಆ ಪತ್ರವನ್ನು ಗಮನಿಸಿ ಕಿಂಗ್ ಫಿಷರ್ ಕಚೇರಿಯಿಂದ ನನಗೆ ಕರೆ ಮಾಡಿ, ಪತ್ರದಲ್ಲಿ ನಾನು ತಿಳಿಸಿರುವಂತೆ "ಕಿಂಗ್ ಫಿಷರ್" ವಿಮಾನ ಯಾನ ಸಂಸ್ಥೆ ಆದಷ್ಟು ಬೇಗ ತನ್ನ ಗ್ರಾಹಕ ಸೇವೆಯಲ್ಲಿ ಆಯಾ ರಾಜ್ಯದ ಭಾಷೆಗಳನ್ನು ಅಳವಡಿಸಿಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಿದೆ ಎಂಬ ವಿಷಯ ತಿಳಿಸಿರುತ್ತಾರೆ.

ಅವರಿಗೆ ನಾನು ಕಳುಹಿಸಿದ್ದ ಪತ್ತ ......

*****

೭ ಜನವರಿ ೨೦೧೧

ಡಾ. ವಿಜಯ್ ಮಲ್ಯ
ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್,
ಕಿಂಗ್ ಫಿಷರ್ ವಿಮಾನ ಯಾನ ಸಂಸ್ಥೆ

ಮಾನ್ಯರೇ,

ನಾನು ಕಿಂಗ್ ಫಿಷರ್ ವಿಮಾನದಲ್ಲಿ ಹಲವು ಬಾರಿ ಪ್ರಯಾಣಿಸಿದ್ದೇನೆ ಮತ್ತು ಕೆಲವೊಮ್ಮೆ ಗ್ರಾಹಕ ಮರುಮಾಹಿತಿಯನ್ನು ನೀಡಿದ್ದರೂ ಯಾವುದೇ ಉತ್ತರ ಕಿಂಗ್ ಫಿಷರ್ ಸಂಸ್ಥೆಯಿಂದ ಬಾರದಿರುವುದು ಅತಿಥಿಗಳಿಗೆ(guest) ಕಿಂಗ್ ಫಿಷರ್ ಸಂಸ್ಥೆ ನೀಡುವ ಮಾನ್ಯತೆ ಏನು ಎಂದು ಸಾಬೀತಾಗಿದೆ. ಹಾಗಾಗಿ ನೇರವಾಗಿ ತಮಗೆ ವಿಷಯ ತಿಳಿಸಲು ಈ ಪ್ರಯತ್ನ. ೨೭ನೇ ನವಂಬರ್ ೨೦೧೦ (27th November 2010)ರಂದು ನಾನು ೧೮.೪೫ಕ್ಕೆ ಹೊರಟ ಐಟಿ ೩೪೩೨ (IT3432-Time 18:45)ಕೊಲ್ಕೊತ್ತಾ ದಿಂದ ಬೆಂಗಳೂರಿಗೆ ಪ್ರಯಾಣಿಸಿದೆ. ಸೀಟು ಸಂಖ್ಯೆ ೧೬ ಇ (seat number 16E)ನಲ್ಲಿ ಕುಳಿತಿದ್ದ ನಾನು ಅಂದು ವಿಮಾನ ಹೊರಟ ಕೂಡಲೆ ನಡೆದ ಘಟನೆಯೊಂದನ್ನು ಗಮನಿಸಿದ್ದೆ. ಕೂಡಲೆ ಆ ಕುರಿತು ನಿಮಗೆ ತಿಳಿಸಲು ಮರುಮಾಹಿತಿ ಅರ್ಜಿ ಪಡೆದಿದ್ದೆ. ಆದರೆ ನನ್ನ ಕೆಲಸದ ಒತ್ತಡದ ನಡುವೆ ಇದನ್ನು ಬರೆಯಲು ಈಗ ಸಾಧ್ಯವಾಗಿದೆ.

ಹಿನ್ನಲೆ:

ಅಂದು ಸಂಜೆ ಸುಮಾರು ೫:೦೦ ಘಂಟೆ ಸುಮಾರಿನಲ್ಲಿ ವಿಮಾನ ನಿಲ್ದಾಣದ ಹೊರಭಾಗದ ಟಿಕೆಟಿಂಗ್ ಕೌಂಟರಿನಲ್ಲಿ ನಾನು ಬಂದಾಗ ಗಮನಿಸಿದ್ದು

೧] ಕೇವಲ ಒಬ್ಬ ಯುವತಿ ಮತ್ತು ಒಬ್ಬ ಯುವಕ ಟಿಕೆಟಿಂಗ್ ವಿತರಣೆಯಲ್ಲಿ ನಿರತರಾಗಿದ್ದರು. ಇವರು ಎಲ್ಲರೊಡನೆ ಇಂಗ್ಲೀಷ್ ಭಾಷೆಯಲ್ಲಿ ವ್ಯವಹರಿಸುತ್ತಿದ್ದರು. ಕೌಂಟರಿನಲ್ಲಿ ಪ್ರಸ್ತುತ ಪಡಿಸಿದ ಎಲ್ಲ ಮಾಹಿತಿ - ವಿವರಗಳು ಕೇವಲ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಇತ್ತು. ಅತಿಥಿಗಳು ಕೌಂಟರಿನ ಗಾಜಿನ ಹೊರ ನಿಂತು ಸರಿಯಾಗಿ ವ್ಯವಹರಿಸಲು ಸಾಧ್ಯವಿಲ್ಲದಂತ ಪರಿಸ್ಥಿತಿ ಇತ್ತು. ನಡು ನಡುವೆ ಟಿಕೆಟಿಂಗ್ ಸಿಬ್ಬಂಧಿ ತಮಗೆ ದೂರವಾಣಿ ಮೂಲಕ ಬರುತ್ತಿದ್ದ ಕರೆಗಳಿಗೂ ಉತ್ತರಿಸುತ್ತಿದ್ದರು. ನೇರವಾಗಿ ಒಬ್ಬರ ವ್ಯವಹಾರ ಪೂರ್ತಿ ಮುಗಿಸುವ ವ್ಯವಧಾನ-ಸಮಯ-ಸೌಲಭ್ಯ ಸಿಬ್ಬಂಧಿಗೆ ಅಲ್ಲಿರದಿದ್ದದ್ದು ಗೋಚರಿಸಿತು.

೧] ಬಹಳಷ್ಟು ಜನ ಸರತಿಯಲ್ಲಿ ಕಾಯುತ್ತಿದ್ದರು(ಹೊಸದು ಖರೀದಿಸಲು, ಪಿಎನ್ಆರ್ ಸಂಖ್ಯೆ ನೀಡಿ ಮುದ್ರಿತ ಟಿಕೆಟ್ ಪದೆಯಲು,ಮತ್ತು ಮಾಹಿತಿಗಾಗಿ). ಇಬ್ಬರೂ ಬಹಳ ಶ್ರಮ ವಹಿಸಿ ಆಧಷ್ಟು ತ್ವರಿತವಾಗಿ ಟಿಕೆಟ್ ವಿತರಿಸಲು ಪ್ರಯತ್ನಿಸುತ್ತಿದ್ದರು. ನನ್ನ ಸರತಿ ಬಂದಾಗ ಪ್ರಿಂಟಿಗ್ ಮೆಷಿನ್ ಕೆಟ್ಟು ಹೋಗಿ ಟಿಕೆಟ್ ಮುದ್ರಣ ಸ್ಥಗಿತ ಗೊಂಡಿತು. ಶೀಘ್ರ ನಿರ್ಧಾರ ತೆಗೆದುಕೊಂಡ ಯುವತಿ ಟಿಕೆಟ್ ಗೆ ಬದಲಾಗಿ ನೇರವಾಗಿ ಬೋರ್ಡಿಂಗ್ ಪಾಸು ನೀಡಲು ಶುರು ಮಾಡಿದ್ದು ಕಂಡೆ. ಆದರೆ ನನಗೆ ಮುದ್ರಿತ ಟಿಕೆಟ್ ನ ಅವಶ್ಯಕತೆ ಇದ್ದುದರಿಂದ ಟಿಕೆಟ್ ಪ್ರತಿ ಸಹ ಬೇಕು ಎಂದು ತಿಳಿಸಿದಾಗ ಅವರು ಕೂಡಲೇ ತಮ್ಮ ಐಟಿ ಸಿಬ್ಬಂಧಿಗೆ (ನಿಲ್ದಾಣದಲ್ಲೆ ಇದ್ದಿರಬಹುದು) ದೂರವಾಣಿ ಮೂಲಕ ತಿಳಿಸಿದರು. ಮತ್ತು ನನಗೆ ೧೫-೨೦ ನಿಮಿಷದ ನಂತರ ಬರಲು ತಿಳಿಸಿದರು. ನಾನು ಚೆಕ್ ಇನ್ ಮುಗಿಸಿಕೊಂಡು ಸುಮಾರು ೨೫ ನಿಮಿಷಗಳ ನಂತರ ಬಂದರೂ ಪ್ರಿಂಟರ್ ಇನ್ನೂ ಸರಿಯಾಗಿರಲಿಲ್ಲ. ಇನ್ನೂ ನೇರವಾಗಿ ಬೋರ್ಡಿಂಗ್ ಪಾಸು ವಿತರಣೆ ನಡೆಯುತ್ತಿತ್ತು. ನನ್ನಂತೆ ಕೆಲವು ಅತಿಥಿಗಳು (Guest) ತಮ್ಮ ಟಿಕೆಟ್ ಪ್ರತಿ ಪಡೆಯಲು ಕಾಯುತ್ತಿದ್ದರು. ಕೆಲ ಸಮಯದ ನಂತರ ಬಂದ ಐಟಿಯವ ಪ್ರಿಂಟರ್ ಸರಿಪಡಿಸಿದ. ನಾನು ಟಿಕೆಟ್ ಪ್ರತಿ ಪಡೆದು ಎಲ್ಲ ಔಪಚಾರಿಕತೆ ಮುಗಿಸಿ ವಿಮಾನವೇರಲು ಒಳಬಂದೆ.

ವಿಮಾನ ಹೊರಟ ಮೇಲೆ

ವಿಮಾನ ಮೇಲೇರಿ ಹಾರಾಟಕ್ಕೆ ಅಣಿಯಾಗುತ್ತಿದ್ದಂತೆಯೆ ಆಸನ ೧೭ಇ (Seat 17E) ಲಿ ಇದ್ದ ವ್ಯಕ್ತಿ ಗೊಣಗುತ್ತ ತನ್ನ ಆತಂಕ ವ್ಯಕ್ತ ಪಡಿಸುತ್ತಿದ್ದ. ಅವನು ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದ ತಿಳಿಯಲಿಲ್ಲ (ಬಹುಷ: ಬಂಗಾಳಿ ಇರಬೇಕು) ಕೂಡಲೆ ಗಗನ ಸಖಿ ಆ ವ್ಯಕ್ತಿಯ ಬಳಿ ಮಾತಿಗಿಳಿದದ್ದು ಮತ್ತು ಸಹ ಅತಿಥಿಗಳು ಗಗನಸಖಿಯೊಡನೆ ವ್ಯವಹರಿಸುತ್ತಿದ್ದುದರಿಂದ ನನಗೆ ಏನು ನಡೆದಿದೆ ಎಂದು ಸ್ಪಷ್ಟವಾಯಿತು. ಈ ವ್ಯಕ್ತಿಯ ಜತೆಗೆ ಮತ್ತೊಬ್ಬ ಸಹಪ್ರಯಾಣಿಕ ೧೫ ಇ ಸೀಟಿನಲ್ಲಿ ಆಸೀನರಾಗಿದ್ದರು.

೧] ವಿಮಾನ ಕೊಲ್ಕೊತ್ತಾ ದಿಂದ ಬೆಂಗಳೂರಿಗೆ ಹಾರಾಟ ಪ್ರಾರಂಭಿಸಿತ್ತು. ಆದರೆ ೧೭ ಇ ನಲ್ಲಿ ಕುಳಿತಿದ್ದ ವ್ಯಕ್ತಿ ದೆಹಲಿಗೆ ಹೋಗಬೇಕಾಗಿತ್ತು.

೨] ೧೭ ಇ ನಲ್ಲಿ ಕುಳಿತಿದ್ದ ವ್ಯಕ್ತಿ ವಿಮಾನ ನಿಲ್ದಾಣದ ಕೌಂಟರಿನಲ್ಲಿ ದೆಹಲಿಗೆ ಟಿಕೆಟ್ ನೀಡಿ ಎಂದು ಕೇಳಿದ್ದ. ಆ ಸಮಯದಲ್ಲಿ ಆತನನ್ನು ಗಮನಿಸುತ್ತಿದ್ದ ಸಿಬ್ಬಂಧಿ ದೂರವಾಣಿ ಕರೆಯಲ್ಲಿ ನಿರತರಾಗಿದ್ದರು ಮತ್ತು ಈತ ಹೇಳಿದ್ದು ಸರಿಯಾಗಿ ಕೇಳಿಸಿಕೊಳ್ಳಲಿಲ್ಲ

೩] ೧೭ ಇ ನಲ್ಲಿ ಕುಳಿತಿದ್ದ ವ್ಯಕ್ತಿಗೆ ದೆಹಲಿಗೆ ಹೋಗುವ ಟಿಕೆಟ್ ವಿತರಿಸುವ ಬದಲು ಬೆಂಗಳೂರಿಗೆ ಹೋಗುವ ಬೋರ್ಡಿಂಗ್ ಪಾಸು ನೀಡಲಾಗಿತ್ತು (ಪ್ರಿಂಟರ್ ಕೆಟ್ಟಿದ್ದರಿಂದ ಅತ ಸಹ ಟಿಕೆಟ್ ಪ್ರತಿ ನಂತರ ಪಡೆದಿದ್ದ).

೪] ೧೭ ಇ ನಲ್ಲಿ ಕುಳಿತಿದ್ದ ವ್ಯಕ್ತಿಗೆ ಬೋರ್ಡಿಂಗ್ ಪಾಸಿನಲ್ಲಿದ್ದ ಮತ್ತು ಟಿಕೆಟ್ ನಲ್ಲಿ ಮುದ್ರಿಸಿದ್ದ ವಿವರ ತಿಳಿಯಲಿಲ್ಲ. ಕಾರಣ ಆತನಿಗೆ ಇಂಗ್ಲೀಷ್ ಓದಲು ಬರುತ್ತಿರಲಿಲ್ಲ.

೫] ಆತ ಟಿಕೆಟ್ ಪದೆದು ನಿಲ್ದಾಣದ ಒಳಭಾಗಕ್ಕೆ ಬಂದಾಗ ಆಗಲೆ ಬೆಂಗಳೂರಿಗೆ! ತೆರಳುವ ವಿಮಾನದ ಸಮಯ ಮೀರುತ್ತಿತ್ತು. ಕಿಂಗ್ ಫಿಷರ್ ಸಿಬ್ಬಂಧಿಯೊಬ್ಬ ಈ ವ್ಯಕ್ತಿಯನ್ನು ಎಲ್ಲಿಗೆ ಹೋಗಬೇಕು ಅಂತ ಇಂಗ್ಲೀಷಿನಲ್ಲಿ ಕೇಳಿದ್ದಾನೆ. ಈತ ಉತ್ತರಿಸಲಾಗದೆ ಬೋರ್ಡಿಂಗ್ ಪಾಸು ತೋರಿಸಿದ್ದಾನೆ. ಅದನ್ನು ನೋಡಿದ ಕೂಡಲೆ ಆ ಸಿಬ್ಬಂಧಿ ಅತನನ್ನು ಬೆಂಗಳೂರು ವಿಮಾನಕ್ಕೆ ತೆರಳುವ ಬಸ್ಸಿನಲ್ಲಿ ಕೂರಿಸುವ ಔದಾರ್ಯ ತೋರಿದ್ದಾನೆ!

೬] ವಿಮಾನ ಹತ್ತುವಾಗ ಅಲ್ಲಿ ಬೆಂಗಳೂರು ಅಂತ ಬರೆದಿತ್ತು ಅದನ್ನು ನೀವ್ಯಾಕೆ ಗಮನಿಸಲಿಲ್ಲ ಎಂದು ಗಗನಸಖಿ ಮುಗ್ದತೆ-ಮುಗುಳುನಗೆಯಿಂದ ಪ್ರಶ್ನಿಸಿದಳು. ಅದು ನಾನು ದೆಹಲಿ ಅನ್ಕೊಂಡೆ ಅಂತ ವ್ಯಕ್ತಿ ಉತ್ತರಿಸಿದ. ಏಕೆಂದ್ರೆ ಅದು ಅವನಿಗೆ ಗೊತ್ತಿರುವ! ಭಾಷೆಯಲ್ಲಿ ಬರೆದಿರಲಿಲ್ಲ.

ನಂತರ ಗಗನಸಖಿ ಮತ್ತು ಪೈಲಟ ನಡುವೆ ಮಾತು ಕತೆ ನಡೆಯಿತು. ಕೊನೆಗೆ ಹೈದರಾಬಾದು ಮೂಲಕ ಬೆಂಗಳೂರಿಗೆ ಹೊರಟಿದ್ದ ಆ ವಿಮಾನದಲ್ಲಿ, ಹೈದರಾಬಾದಿನಲ್ಲಿ ಆ ಇಬ್ಬರು "ಅತಿಥಿ" ಗಳನ್ನು ಇಳಿಸಲಾಯಿತು. ನಂತರ ಗಗನಸಖಿಯಿಂದ ತಿಳಿದದ್ದು. ಅಂದು ರಾತ್ರಿ ಅವರಿಬ್ಬರಿಗೂ ಹೈದರಾಬಾದಿನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿ ಮುಂದಿನ ದಿನ ಉಚಿತವಾಗಿ ದೆಹಲಿಗೆ ಕಳುಹಿಸುವ ಏರ್ಪಾಡು ಮಾಡಲಾಗಿದೆ ಎಂದು!

ಮುಂದಿನ ಕ್ರಮ

ನನ್ನ ಮೇಲಿನ ದಾಖಲೆಗೆ ಕೊಲ್ಕೊತ್ತಾ ವಿಮಾನನಿಲ್ದಾಣದಲ್ಲಿ ಕಿಂಗ್ ಫಿಷರ್ ಸಂಸ್ಥೆ ತನ್ನ ಗ್ರಾಹಕ(ಅತಿಥಿ)ರಿಗೆ ಸೇವೆಯನ್ನು ಉತ್ತಮಗೊಳಿಸಲು ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ತಮಗೆ ಈಗಾಗಲೆ ತಿಳಿದು ಸೂಕ್ತವಾದುದನ್ನು ಮಾಡುತ್ತೀರಿ ಎಂಬ ನಂಬಿಕೆಯಿದೆ

ಈ ಘಟನೆಯ ಮೂಲಕ ನಾನು ಹೇಳಬಯಸುವುದು

ಒಬ್ಬ ಸಾಮಾನ್ಯ ಪ್ರಜೆಯೂ ಯಾರ ಮೇಲೂ ಅವಲಂಬಿತನಾಗದೆ, ವಿಮಾನಗಳಲ್ಲಿ ಯಾವುದೇ ತೊಂದರೆಗಳಿಲ್ಲದೆ ಪ್ರಯಾಣ ಮಾಡುವ ವ್ಯವಸ್ಥೆ ನಮ್ಮಲ್ಲಿ ಇನ್ನೂ ಜಾರಿಯಲ್ಲಿಲ್ಲದರುವುದು ವಿಪರ್ಯಾಸ. ಭಾರತದಲ್ಲಿ ವಿಮಾನದಲ್ಲಿ ಪ್ರಯಾಣ ಮಾಡಬೇಕೆಂದರೆ ಅವನಿಗೆ ಕಡ್ಡಾಯವಾಗಿ ಇಂಗ್ಲೀಷ್ ಜ್ಞಾನ ಇರಬೇಕು ಎಂಬ ನಿಯಮ - ಕೀಳರಿಮೆ ನಮ್ಮಲ್ಲಿ ಉಂಟುಮಾಡಲಾಗಿದೆ. ಭಾರತದಲ್ಲಿ ಇಂಗ್ಲಿಷ್ ಬರದವನು ವಿಮಾನದಲ್ಲಿ ಕುಳಿತರೆ ವಿಮಾನ ಮೇಲೆ ಹಾರಲ್ಲ ಎಂಬ ಹಾಸ್ಯ ಚಟಾಕಿ ಸಹ ಚಾಲ್ತಿಯಲ್ಲಿದೆ. ಆದರೆ ವಿದೇಶಗಳಲ್ಲಿ ಇದಕ್ಕೆ ತದ್ವಿರುದ್ಧ. ಅಲ್ಲಿ ಸಾಧ್ಯವಾದದ್ದು ನಮ್ಮಲ್ಲಿ ಏಕೆ ಸಾಧ್ಯವಾಗಿಲ್ಲ. ಅದು ಸಾಧ್ಯವಾಗಿಸುವುದು ಅಷ್ಟು ಕಠಿಣವೆ. ಒಮ್ಮೆಯಾದರೂ ಇದನ್ನು ಯೋಚಿಸಿದ್ದೀರ? ಭಾರತದ ವಿಮಾನ ಯಾನ ಸೇವೆ, ವಿಮಾನ ನಿಲ್ದಾಣಗಳಲ್ಲಿ ಏಕೆ ಆಯಾ ಪ್ರದೇಶದ ಭಾಷೆಗಳ ಬಳಕೆ ಇಲ್ಲ. ಇತರ ದೇಶಗಳಲ್ಲಿ ತಂತ್ರಜ್ಞಾನ ಬೆಳೆದಂತೆ ಅದರ ಜತೆಗೆ ಅವರ ಭಾಷೆ ಸಹ ಬೆಳೆದಿರುತ್ತೆ. ಅವರ ಭಾಷೆಗೆ ಅವರು ಆ ರೀತಿ ಕಾಪಾಡಿಕೊಂಡು ಬಂದಿದ್ದಾರೆ. ಮತ್ತು ಆ ಮೂಲಕ ಅವರು ಹೆಚ್ಚು ಹೆಚ್ಚು ಜನರನ್ನು (ಗ್ರಾಹಕ-ಅತಿಥಿ)ಗಳನ್ನು ತಲುಪಿದ್ದಾರೆ. ಕೊಲಂಬೋದಲ್ಲಿ, ಬಾಂಗ್ಲಾದೇಶದಲ್ಲಿ, ಸಿಂಗಪುರದಲ್ಲಿ, ದುಬೈ, ಸೌದಿ ಜತೆಗೆ ಯೂರೋಪ್ ನ ಎಲ್ಲ ದೇಶದಲ್ಲಿ ಅಲ್ಲಿಯ ಸ್ಥಳೀಯ ಭಾಷೆಗೆ ವಿಮಾನ ಯಾನ ಸೇವೆಯಲ್ಲಿ ಮಹತ್ತರ ಸ್ಥಾನ ನೀಡಲಾಗಿದೆ. ಅದೇ ಬೆಂಗಳೂರಿನಲ್ಲಿ ನಾನು ಒಂದು ವಿಮಾನ ಟಿಕೆಟ್ ಖರೀದಿಸಲು ನನ್ನದಲ್ಲದ ಇಂಗ್ಲೀಷ್ ಮತ್ತು ಸುಳ್ಳೆ ಸುಳ್ಳಾಗಿ ಈ ದೇಶದ ರಾಷ್ಟ್ರ ಭಾಷೆಯೆಂದು ಪ್ರಚಲಿತದಲ್ಲಿರುವ ಹಿಂದಿಯಲ್ಲಿ ಮಾತಾಡ ಬೇಕಾದ ಅನಿವಾರ್ಯತೆ ಸೃಷ್ಟಿಸಲಾಗಿದೆ.

ಪ್ರಪಂಚದ ಇತರ ಭಾಗಗಳ ಜನರು ತಮ್ಮ ಪ್ರದೇಶಗಳಲ್ಲಿ ತಮ್ಮದೆ ಬಾಷೆಯಲ್ಲಿ ಗ್ರಾಹಕ ಸೇವೆ ಪಡೆಯುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕದ ಜನರ ಭಾಷೆ ಕನ್ನಡವಾಗಿದ್ದು, ಕಿಂಗ್ ಫಿಷರ್ ನ ಕರ್ನಾಟಕದ ಚಟುವಟಿಕೆ ಮತ್ತು ಗ್ರಾಹಕ ಸೇವೆ ಕನ್ನಡದಲ್ಲೆ ಇರಬೇಕಾದ್ದು ಸಹಜವಾದದ್ದು ಅಲ್ಲವೆ. ಆ ನಿಟ್ಟಿನಲ್ಲಿ

೧] ಕರ್ನಾಟಕದ ನಿಮ್ಮ ಸಂಸ್ಥೆಯ ಎಲ್ಲ ಕಾರ್ಮಿಕರಿಗೂ ಸಾಮಾನ್ಯ ಕನ್ನಡ ಭಾಷೆಯ ಪರಿಜ್ಞಾನ ಇರಬೇಕು.

೨] ಕರ್ನಾಟಕದಲ್ಲಿನ ನಿಮ್ಮ ಉದ್ಯೋಗಳು ಕನ್ನಡಿಗನಿಗೆ ಸಿಗುವಂತಾದರೆ ಅದು ಇನ್ನೂ ಹೆಚ್ಚು ಪರಿಣಾಮಕಾರಿ

೩] ನಗರದಲ್ಲಿನ ನಿಮ್ಮ ಕಚೇರಿ ವಿಮಾನ ನಿಲ್ದಾಣದ ನಿಮ್ಮ ಕಚೇರಿ ಹಾಗು ಇತರೆಡೆ ಪ್ರದರ್ಶಿತವಾಗುವ ಎಲ್ಲ ರೀತಿಯ ಫಲಕಗಳಲ್ಲಿ ಕನ್ನಡ ಕಂಡು ಬರಬೇಕು

೪] ನಿಲ್ದಾಣದಲ್ಲಿನ ನಿಮ್ಮ ಘೋಷಣೆ ಹೆಚ್ಚು ಹೆಚ್ಚಾಗಿ ಕನ್ನಡ ಭಾಷೆಯಲ್ಲಿ ಪ್ರಸಾರವಾಗುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು

೫] ವಿಮಾನ ಪ್ರಯಾಣಕ್ಕೆ ಸಂಬಂಧ ಪಡುವ ಎಲ್ಲ ಮುದ್ರಿತ ವಸ್ತುಗಳಲ್ಲಿ, ಟಿವಿ ಪರದೆ, ದರ್ಶಿಕೆಗಳಲ್ಲಿ ಕನ್ನಡ ಭಾಷೆಯ ಬಳಕೆ ಇರಬೇಕು

೬]ಅತಿಥಿಗಳನ್ನ ಆಹ್ವಾನಿಸುವುದರಲ್ಲಿ, ಬೀಳ್ಕೊಡುವುದರಲ್ಲಿ ನಿಮ್ಮ ಸಿಬ್ಬಂಧಿಯವರು ಕನ್ನಡವನ್ನು ಬಳಸುವಂತಾಗಬೇಕು

೫] ವಿಮಾನದಲ್ಲಿ ಕನ್ನಡ ದಿನ ಪತ್ರಿಕೆ, ಮ್ಯಾಗಜೀನ್ ಗಳು, ಮನರಂಜನೆ ಟಿವಿ ಯಲ್ಲಿ ಕನ್ನಡ ಹಾಡುಗಳು, ಚಿತ್ರಗಳು ಮೂಡಿಬರಬೇಕು

೬] ಮುಖ್ಯವಾಗಿ ಸುರಕ್ಷೆ ಸೂಚನೆಗಳನ್ನು ಕನ್ನಡದಲ್ಲಿ ಸಹ ಹೇಳುವಂತಾಗಬೇಕು.

ಬೆಂಗಳೂರು - ಕರ್ನಾಟಕದಲ್ಲಿ ಎಲ್ಲವು ಕನ್ನಡದಲ್ಲಿ ಇರಬೇಕೆಂದು ಹೇಳುತ್ತಿರುವುದು, ಭಾರತದ ಇತರ ರಾಜ್ಯಗಳಲ್ಲಿ ಆಯಾ ರಾಜ್ಯದ ಭಾಷೆಯ ಬಳಕೆಯಾಗಬೇಕು ಎನ್ನುವುದೇ ಅಗಿದೆ. ಇದು ಸರಿಯಾಗಿ, ಯಶಸ್ವಿಯಾಗಿ ನೆರವೇರಿದಲ್ಲಿ ಮೇಲೆ ನಾನು ತಿಳಿಸಿದಂತೆ ಕೊಲ್ಕೊತ್ತ - ಬೆಂಗಳೂರು ವಿಮಾನದಲ್ಲಿ ನಡೆದ ಘಟನೆ ಮರುಕಳಿಸುವುದಿಲ್ಲ. ಒಬ್ಬ ಸಾಮಾನ್ಯ ಪ್ರಜೆಯೂ ಯಾವುದೇ ಅಂಜಿಕೆ-ಕೀಳರಿಮೆ ಇಲ್ಲದೆ ಬದುಕಲು ಅವಾಕಾಶ ಮಾಡಿಕೊಡುತ್ತದೆ.

ಇದನ್ನು ಕಾರ್ಯಗತಗೊಳಿಸಲು "ಇಚ್ಛಾಶಕ್ತಿ" ತೋರುವ ಮೊದಲಿಗರು ನೀವಾಗುತ್ತೀರಿ ಎಂಬ ಆಶಯದೊಂದಿಗೆ.

*****

ಇದು ಆದಷ್ಟು ಬೇಗ ಅನುಷ್ಠಾನಗೊಂಡಲ್ಲಿ "ಕಿಂಗ್ ಫಿಷರ್" ಸಂಸ್ಥೆ ಆಯಾ ರಾಜ್ಯಗಳ ಭಾಷೆಯಲ್ಲಿ "ಗ್ರಾಹಕ ಸೇವೆ" ಒದಗಿಸುವ ಮೊದಲ ಸಂಸ್ಥೆಯಾಗಿ ಹೊರಹೊಮ್ಮಲಿದೆ. ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಚಿನ್ನದ ಗರಿ ಸೇರಿಸುವ
ಇಚ್ಛಾಶಕ್ತಿಯ ನಿರ್ಣಯವನ್ನು ಕಿಂಗ್ ಫಿಷರ್ ಸಂಸ್ಥೆ ತೆಗೆದುಕೊಳ್ಳಬೇಕಿದೆ.

ಗ್ರಾಹಕರಾಗಿ ನಾವು ನಮ್ಮ ಭಾಷೆಯಲ್ಲಿ ಸೇವೆಯನ್ನು ಕೇಳುವುದು ನಮ್ಮ ಹಕ್ಕು. ಆದರೆ ನಮ್ಮ ಈ ಮೂಲಭೂತ ಹಕ್ಕನ್ನು ಚಲಾವಣೆಗೆ ತರಲು ನಾವು ಆಗ್ರಹ ಪಡಿಸಬೇಕಾಗಿರುವ ಪರಿಸ್ಥಿತಿ ಇರುವುದು ಮಾತ್ರ ವಿಪರ್ಯಾಸ.


ಕಲ್ಯಾಣ ರಾಮನ್ ಚಂದ್ರಶೇಖರನ್

Tuesday, January 11, 2011

ಬಿಎಂಟಿಸಿ - ಬಿಟಿಎಂ ಬಡಾವಣೆ ಅಲ್ಲ, ಅದು ಕುವೆಂಪು ನಗರ..

*****
ಉದಯವಾಣಿ, ಬೆಂಗಳೂರು ೧೧ ಜನವರಿ ೨೦೧೧, ಜನತಾವಾಣಿಯಲ್ಲಿ ಪ್ರಕಟವಾದ ಪತ್ರ
*****


*****
ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

****

Friday, January 7, 2011

೨೦೧೧ ರಲ್ಲಿ ಕನ್ನಡ ಎಲ್ಲೆಲ್ಲೂ ಪುಟಿಯಲಿ

*****



*****
ಹೊಸದಿಗಂತ ೧.೧.೨೦೧೧ ರ ಪತ್ರಮಿತ್ರದಲ್ಲಿನ ಶ್ರೀಯುತ ಕೋಟೇಶ್ವರ ಸೂರ್ಯನಾರಾಯಣರಾವ್ ರ "೨೦೧೧ ರಲ್ಲಿ ಕನ್ನಡ ಎಲ್ಲೆಲ್ಲೂ ಪುಟಿಯಲಿ" ಪತ್ರ ಕಂಡು ಸಂತೋಷವಾಯಿತು. ಬಸವನಗುಡಿಯಲ್ಲಿ ಅಂಗಡಿಗಳನ್ನು ಹೊಂದಿರುವವರೆಲ್ಲರೂ ಇನ್ನು ಮುಂದೆ ಗ್ರಾಹಕರೊಂದಿಗೆ ಕನ್ನಡದಲ್ಲಿಯೇ ಮಾತನಾಡುವ ವ್ಯವಸ್ಥೆಯನ್ನು ಬಸವನಗುಡಿ ವ್ಯಾಪಾರಿಗಳ ವೇದಿಕೆಯ ವತಿಯಿಂದ ಚಾಲನೆ ನೀಡಿರುವುದು ಸ್ವಾಗತಾರ್ಹ.

ಕರ್ನಾಟಕದಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗಬೇಕಾದ್ದು ನಮ್ಮ ಹಕ್ಕು. ಆದರೆ ಇದಕ್ಕಾಗಿ ಒತ್ತಾಯ ಮಾಡಬೇಕಾಗಿರುವ ಪರಿಸ್ಥಿಸಿ ಇಂದು ಬೆಂಗಳೂರಿನಲ್ಲಿದೆ. ಅಂಗಡಿ ಮಳಿಗೆಗಳಿಗೆ ಸಂಬಂಧಿಸಿದಂತೆ ಅಂಗಡಿಗಳಲ್ಲಿನ ನಾಮಫಲಕ ಪ್ರದರ್ಶನ, ಅವರ ಜಾಹೀರಾತುಗಳು, ಅವರು ಮಾರುವ ಉತ್ಪನ್ನಗಳ ವಿವರ, ಖರೀದಿಗಾಗಿ ಅವರು ಕೊಡುವ ರಶೀತಿ, ಕೊಳ್ಳುವ ವಸ್ತುವನ್ನು ನಾವು ಕೊಂಡೊಯ್ಯಲು ಅವರು ನೀಡುವ ಪ್ಲಾಸ್ಟಿಕ್ ಚೀಲ ಮತ್ತು ಅದರ ಮೇಲೆ ಮೂಡಿ ಬರುವ ಬರಹ. ಹೋಟಲ್ ಗಳಲ್ಲಿನ ತಿಂಡಿ ದರ ಪಟ್ಟಿ, ತಿಂಡಿಯ ವಿವರ. ಬ್ಯಾಂಕು-ವಿಮಾ-ಹಣಕಾಸು ಸಂಸ್ಥೆಯಲ್ಲಿ ಕೊಡ ಮಾಡುವ ಮಾಹಿತಿಗಳ ವಿವರ. ಬಸ್ಸಿನಲ್ಲಿ ಪ್ರಯಾಣಿಸುವಾಗ ಅಲ್ಲಿ ದೊರೆಯುವ ಮನರಂಜನೆ, ಹೀಗೆ ಇವೆಲ್ಲವೂ ಗ್ರಾಹಕ ಸೇವೆಯ ದೃಷ್ಟಿಯಿಂದ ಬಹುಮುಖ್ಯವಾದದ್ದು. ಈ ಎಲ್ಲೆಡೆ ಆ ಸೇವೆ ಅಲ್ಲಿನ ಪ್ರದೇಶದ ಭಾಷೆಯಲ್ಲಿರಬೇಕಾದ್ದು ಸಹಜವಾದದ್ದು. ಇದು ಬಹುತೇಕ ವಿದೇಶಗಳೆಲ್ಲೆಡೆ ಚಾಲ್ತಿಯಲ್ಲಿರುವ ನೀತಿ ಮತ್ತು ನಿಯಮ. ಇದು ಭಾರತದಲ್ಲೂ ಪ್ರಚಲಿತಕ್ಕೆ ಬಂದಲ್ಲಿ ಆಯಾ ಪ್ರದೇಶಗಳಿಗೆ ವಲಸೆ ಹೋಗುವವರಿಗೆ ಅಲ್ಲಿನ ಭಾಷೆ ಕಲಿಯಬೇಕಾದ ಅನಿವಾರ್ಯತೆ ಹುಟ್ಟಿಸಿ ಅವರುಗಳು ಸಹ ಬಂದು ನೆಲಸುವ ಪ್ರದೇಶ ಸಂಸ್ಕೃತಿಯೆಡೆ ಆಕರ್ಷಿತರಾಗಿ ಅಲ್ಲಿನ ಮುಖ್ಯ ವಾಹಿನಿಯಲ್ಲಿ ಬೆರೆಯುವ ಒಂದು ಸಾಧನವಾಗುತ್ತದೆ.


ಬಸವನಗುಡಿ ಅಂಗಡಿ ಮಾಲೀಕರ ಸಂಘ ಈ ಹೊಸ ವರ್ಷದಲ್ಲಿ ಕನ್ನಡ ಜನತೆಗೆ ಕನ್ನಡದಲ್ಲಿ ಗ್ರಾಹಕ ಸೇವೆ ಒದಗಿಸುವಲ್ಲಿ ಇಟ್ಟಿರುವ ಮೊದಲ ಹೆಚ್ಚೆಯ ಕೊಡುಗೆಯಿದಾಗಿದೆ. ಇದು ಬೆಂಗಳೂರಿನ ಇತರ ಬಡಾವಣೆಗಳಲ್ಲಿನ ವ್ಯಾಪಾರಿ ಸಂಘಗಳು ಮತ್ತು ಅಂಗಡಿ ಮಳಿಗೆಗಳ ಮಾಲೀಕರಿಗೂ ಪ್ರೇರೇಪಣೆ ನೀಡಲಿ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಕೃತಿ-ಕಲೆ-ಸಾಹಿತ್ಯ-ಕಲಾವಿದರ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ವಹಿಸುವುದು ಸೇರಿದಂತೆ ಈ ಮೇಲೆ ತಿಳಿಸಿದ ಎಲ್ಲ ವ್ಯವಸ್ಥೆಯಲ್ಲೂ ಕನ್ನಡದಲ್ಲಿ ಸೇವೆ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾಗಲಿ.

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ


*****

Friday, December 31, 2010

ಕನ್ನಡಿಗನ ರಾಷ್ಟ್ರೀಯತ್ವಕ್ಕೆ ಹಿಂದಿ ಬೇಕಿಲ್ಲ, ಕನ್ನಡ ಮಾತ್ರ ಸಾಕು

*****


*****
ಕಳೆದ ಭಾನುವಾರ, ೨೬ ಡಿಸಂಬರ್ ೨೦೧೦ ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ, ಕರ್ನಾಟಕ ಮಹಿಳಾ ಹಿಂದಿ ಸೇವಾ ಸಮಿತಿಯ ೩೭ನೇ ಘಟಿಕೋತ್ಸವದಲ್ಲಿ ಸಾಹಿತಿ ಜಯಂತ ಕಾಯ್ಕಿಣಿ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತ "ರಾಷ್ಟ್ರ ಭಾಷೆ ಹಿಂದಿ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳು ಭಾರತದ ಏಕತೆಯ ಸಂಕೇತಗಳಿದ್ದಂತೆ" ಎಂದು ತಿಳಿಸಿರುತ್ತಾರೆ(ವಿಜಯ ಕರ್ನಾಟಕ ಸುದ್ಧಿ ೨೭/೧೨/೨೦೧೦, ಪುಟ ೧೧).

ಮೊದಲಿಗೆ ಹಿಂದಿ ಭಾರತದ ರಾಷ್ಟ್ರ ಭಾಷೆ ಅಲ್ಲ. ಹಾಗೆಂದು ನಮ್ಮ ಸಂವಿಧಾನದಲ್ಲಿ ಎಲ್ಲೂ ನಮೂದಾಗಿಲ್ಲ. ಅರಿವು-ತಿಳಿವುಳ್ಳ ಕಾಯ್ಕಿಣಿಯಂತಹವರೇ, ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂಬ ತಪ್ಪು ಅಭಿಪ್ರಾಯ ಹೊಂದಿರುವಾಗ ಇನ್ನು ಜನ ಸಾಮಾನ್ಯರ ಆಭಿಪ್ರಾಯದ ಕುರಿತಾಗಿ ಹೇಳುವುದೇನಿದೆ? ಇದು ಈ ಹಿಂದಿ ಸೇವಾ ಸಮಿತಿಗಳು, ತಮ್ಮ ಪ್ರಚಾರಕ್ಕಾಗಿ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಬಿಂಬಿಸುತ್ತಿರುವ ಪರಿಯನ್ನು ಎತ್ತಿ ತೋರಿಸುತ್ತಿದೆ ಮತ್ತು ಜನಸಾಮಾನ್ಯರಲ್ಲಿ, ಹಿಂದಿ ಭಾರತದ ರಾಷ್ಟ್ರ ಭಾಷೆ, ಹಿಂದಿ ಬಲ್ಲವ ಮಾತ್ರ ರಾಷ್ಟ್ರ ಭಕ್ತಿ ಹೊಂದಿರಲು ಸಾಧ್ಯ , ಇಡೀ ಭಾರತದ ಸಂಸ್ಕೃತಿಯೆಂದರೆ ಕೇವಲ ಹಿಂದಿ ಸಂಸ್ಕೃತಿ ಮಾತ್ರ, ಹಿಂದಿ ಬಲ್ಲವನಿಗೆ ಮಾತ್ರ ಸರ್ಕಾರದ ಎಲ್ಲಾ ಉದ್ಯಮಗಳಲ್ಲಿ ಕೆಲಸ ಲಭ್ಯ, ಹಿಂದಿಯನ್ನು ಕಲಿತು ಇಡೀ ಭಾರತವನ್ನು ಸುತ್ತಾಡಿ ಎಲ್ಲವನ್ನು ಗ್ರಹಿಸಿ, ಎಲ್ಲರೊಂದಿಗೆ ಐಕ್ಯತೆಯನ್ನು ಸಾಧಿಸಿಬಿಡಬಹುದು ಮತ್ತು ಹಿಂದಿ ಬಾರದಿರುವುದೇ ನಮ್ಮ ಜನಪ್ರತಿನಿಧಿಗಳಿಗೆ ರಾಷ್ಟ್ರ ವರ್ಚಸ್ಸು ಗಳಿಸಲು ಸಾಧ್ಯವಾಗದಿರುವ ಕಾರಣ ಎಂಬ ಕಲ್ಪನೆ - ಭ್ರಮೆಯನ್ನು ಆಳವಾಗಿ ಬಿತ್ತಿದೆ. ವಾಸ್ತವವೆಂದರೆ ಭಾರತದೆಲ್ಲೆಡೆ ಹಿಂದಿಯ ಪ್ರತಿಪಾದನೆ ಕೇವಲ ಹಿಂದಿ ಭಾಷಿಕರಿಗೆ/ಪ್ರದೇಶಗಳಿಗೆ ಮಾತ್ರ ಒಲಿದಿರುವ ವರದಾನವಾಗಿ ಪರಿಣಮಿಸಿದೆ ಮತ್ತು ಹಿಂದಿ ಭಾಷಿಕರು ತಾವು ನೆಲಸಲು ಬರುವ ಪ್ರದೇಶಗಳ ಭಾಷೆಯನ್ನು ಕಡೆಗಣಿಸಲು ಮತ್ತು ಅಸಡ್ಡೆ ತೋರಲು ಪರೋಕ್ಷವಾಗಿ ಸಹಕಾರಿಯಾಗಿದೆ.

ಭಾಷೆ ಕೇವಲ ಸಂಪರ್ಕ ಸಾಧನವಲ್ಲ. ಅದು ಒಂದು ಪ್ರದೇಶದ ಆಚಾರ,ವಿಚಾರ,ನಡೆ,ನುಡಿಗಳ ಸಂಕೇತ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋಗುವವ ಹಿಂದಿ ಕಲಿತು ಹೋಗುವುದು/ ರಾಷ್ಟ್ರಭಾಷೆ ಸೋಗಿನಲ್ಲಿ ಹಿಂದಿಗಾಗಿ ಆಗ್ರಹಿಸುವುದು ಖಂಡಿತ ಈ ದೇಶವನ್ನು ಒಗ್ಗೂಡಿಸುವ ಸಾಧನವಲ್ಲ ಎಂಬುದನ್ನು ನಾವು ಅರಿಯಬೇಕಿದೆ. ಯಾವುದೇ ಪ್ರಾಂತ್ಯಕ್ಕೆ ವಲಸೆ ಹೋಗುವವ ಆಯಾ ಪ್ರದೇಶದ ಭಾಷೆ ಕಲಿತು, ಅಲ್ಲಿನ ಸಂಸ್ಕೃತಿಯನ್ನ ಮನ್ನಿಸಿ, ಅಲ್ಲಿಯವರ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಔದಾರ್ಯ-ಸಜ್ಜನಿಕೆ-ಕರ್ತವ್ಯವನ್ನು ಮೆರೆಯುವುದು ಮಾತ್ರ ಪರಸ್ಪರ ಸಂಸ್ಕೃತಿ ವಿನಿಮಯಕ್ಕೆ ಅವಕಾಶವೀಯುತ್ತದೆ. ತಮಿಳ ಕರ್ನಾಟಕಕ್ಕೆ ಬಂದು ನೆಲೆಸಿದರೆ ಅವನು ಕನ್ನಡ ಕಲಿಯಬೇಕು, ಮಲಯಾಳಿ ಮಹಾರಾಷ್ಟ್ರಕ್ಕೆ ಹೋದರೆ ಮರಾಠಿಗೆ ಒಲಿಯಬೇಕು. ಉತ್ತರ-ಮಧ್ಯ-ಹಿಮಾಚಲ ಪ್ರದೇಶದವರು ಆಂದ್ರಕ್ಕೆ ಹೋದರೆ ತೆಲುಗು ಕಲಿಯಬೇಕು... ಎನ್ನುವುದೇ ಸತ್ಯವಾದದ್ದು ಮತ್ತು ಇದೇ ಭಾರತ ಒಕ್ಕೂಟ ವ್ಯವಸ್ಥೆಯ ಐಕ್ಯತೆಯನ್ನು ಬಲಪಡಿಸುವ ಇಂದಿನ ಬಹುದೊಡ್ಡ ಸಾಧನವಾಗಿದೆ ಮತ್ತು ಕಾಯ್ಕಿಣಿಯವರು ತಿಳಿಸಿದಂತೆ "ಎಲ್ಲ ಪ್ರಾದೇಶಿಕ ಭಾಷೆಗಳು ಭಾರತದ ಏಕತೆಯ ಸಂಕೇತಗಳಂತೆ " ಎಂಬ ಮಾತಿಗೆ ಅರ್ಥ ಬರುತ್ತದೆ. ಹಾಗಾಗಿ ಆಯಾ ರಾಜ್ಯಗಳ ಸಂಸ್ಕೃತಿಯ - ಭಾಷೆಯ ಬೆಳವಣಿಗೆಗೆ ಅಕಾಡಮಿ, ನಿಗಮ, ಮಂಡಳಿ, ಸೇವಾ ಸಂಸ್ಥೆಗಳು ಶ್ರಮಿಸಬೇಕಾಗಿರುವುದು ಪ್ರಸ್ತುತ ಸತ್ಯವಾಗಿದೆ.

ಕನ್ನಡಿಗರು ಕನ್ನಡವನ್ನು ಪ್ರೀತಿಸಿ ಕನ್ನಡ ಪ್ರಾದೇಶಿಕತೆಯನ್ನು ಬಲಪಡಿಸುವುದು ಸಹ ನಮ್ಮ ರಾಷ್ಟ್ರವನ್ನು ಬಲಪಡಿಸಿದಂತೆ ಎಂಬುದನ್ನು ಅರಿಯಬೇಕಿದೆ. ಒಂದು ಹಿಂದಿ ಪದ ಮಾತನಾಡದೇ ತಮ್ಮ ಯಾವುದೇ ಕೆಲಸ ಮಾಡಿಕೊಳ್ಳಲು, ಮಾಡಿಸಿಕೊಳ್ಳಲು, ಕೇಂದ್ರದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲು, ತಾವು ಸಬಲರಾಗಿ ಈ ದೇಶದ ಆರ್ಥಿಕತೆಗೆ ಬೆನ್ನೆಲುಬಾಗಲು ಈ ಮೂಲಕ ತಮ್ಮ ಅಧಮ್ಯ ದೈವ ಭಕ್ತಿ, ರಾಷ್ಟ್ರ ಭಕ್ತಿಯನ್ನು ಕಟ್ಟಿಕೊಳ್ಳಲು ಸಮರ್ಥವಾಗಿರುವ ನಮ್ಮ ಪಕ್ಕದ ತಮಿಳುನಾಡನ್ನು ನಾವು ಗಮನಿಸಬೇಕಿದೆ. ಅಂತೆಯೇ ಕನ್ನಡಿಗನ ರಾಷ್ಟ್ರೀಯತ್ವಕ್ಕೆ ಹಿಂದಿ ಬೇಕಿಲ್ಲ, ಕನ್ನಡ ಮಾತ್ರ ಸಾಕು. ಈ ಹಿನ್ನಲೆಯಲ್ಲಿ ಇಂದು ಕರ್ನಾಟಕದಲ್ಲಿ ಹಿಂದಿ ಸೇವಾ ಸಂಸ್ಥೆಗಳಿಗೆ ಯಾವುದೇ ವಾಸ್ತವಿಕ ಮೌಲ್ಯ ಮತ್ತು ಅರ್ಥ ಇಲ್ಲ. ಅವು ಕನ್ನಡ ಸೇವಾ ಸಂಸ್ಥೆಗಳಾಗಿ ಮಾರ್ಪಾಡಾಗಬೇಕಾಗಿರುವುದು ಸಹಜ, ಸ್ವಾಭಾವಿಕವಾದುದಾಗಿದೆ.

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

*****

Thursday, November 4, 2010

ಕನ್ನಡ ಅನುಷ್ಠಾನಕ್ಕಾಗಿ ಲಭ್ಯವಿರುವ ಕಾನೂನು ಬಲ ಮರೆತ ಅಧಿಕಾರಿಗಳು!

*****




*****

ರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಬೆಂಗಳೂರಿನ ಮೇಯರ್ ಎಸ್.ಕೆ.ನಟರಾಜ್ ರವರು ಮೇರು ನಟ ರಾಜಕುಮಾರ್ ಪ್ರತಿಮೆ ಅನಾವರಣಕ್ಕೆ ಗಡುವು ನಿಗದಿಪಡಿಸಿರುವುದು, ಬೃ.ಬೆಂ.ಮ.ಪಾ. ಆಯುಕ್ತ ಸಿದ್ದಯ್ಯನವರು ರಾಜ್ಯೋತ್ಸವವನ್ನು ಮುಂದಿನ ವರ್ಷದಿಂದ ಬೃ.ಬೆಂ.ಮ.ಪಾ. ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲು ಉದ್ದೇಶಿಸಿದ್ದು ಹೀಗೆ ನಾಡು-ನುಡಿ ಸಂಸ್ಕೃತಿ ಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನು ಪ್ರಸರಿಸಲು ಇವರುಗಳು ತೊಟ್ಟ ಸಂಕಲ್ಪ ಶ್ಲಾಘನೀಯವೇ! ಆದರೆ ಇದಕ್ಕೂ ಮಿಗಿಲಾಗಿ ಬೆಂಗಳೂರಿನೆಲ್ಲೆಡೆ ಕನ್ನಡದ ಕಂಪನ್ನು ಪಸರಿಸಲು ಲಭ್ಯವಾದ ಉಪಯುಕ್ತ ಆದೇಶದ ಬಲವೊಂದನ್ನು ಇವರುಗಳು ಕಡೆಗಣಿಸಿ ಮರೆತುಬಿಟ್ಟಿರುವುದು ವಿಷಾದನೀಯವೇ ಸರಿ.

ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಕಾರ್ಯ ಸಂಸ್ಥೆಗಳ (ತಿದ್ದುಪಡಿ) ನಿಯಮ ಕಲಂ ೨೬ಎ - ೨೦೦೮ ರ ಅಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಅಂಗಡಿ, ಹೋಟಲ್, ಇತರ ಉದ್ಯಮಗಳ ಮಾಲೀಕರು, ಪೆಟ್ರೋಲ್ ಬಂಕ್, ಪ್ರದರ್ಶನ ಮಳಿಗೆ, ಬಸ್ ತಂಗುದಾಣ, ಮಾಹಿತಿ ತಂತ್ರಜ್ಣಾನ ಮತ್ತು ಜೈವಿಕ ತಂತ್ರಜ್ಣಾನ ಕಚೇರಿ, ಸರ್ಕಾರಿ, ಅರೆ ಸರ್ಕಾರಿ ಮತ್ತು ಎಲ್ಲಾ ಖಾಸಗಿ ಜಾಹೀರಾತು ಸಂಸ್ಥೆಯವರು ತಮ್ಮ ವ್ಯಾಪಾರ ಮಳಿಗೆ, ಕಚೇರಿ ಮತ್ತು ಸಂಸ್ಥೆಗೆ ಸಂಬಂಧಿಸಿದ ಹೊರಾಂಗಣ ಮತ್ತು ಒಳಾಂಗಣದಲ್ಲಿ ಹಾಕುವ ನಾಮಫಲಕ, ಜಾಹೀರಾತು ಫಲಕಗಳಲ್ಲಿ ( ಸಾರ್ವಜನಿಕರು ಹೊರಡಿಸುವ ಯಾವುದೇ ರೀತಿಯ ಪ್ರದರ್ಶನ ಜಾಹೀರಾತು ಒಳಗೊಂಡಂತೆ) ಕಡ್ಡಾಯವಾಗಿ ಮೊದಲ ಆಧ್ಯತೆಯಾಗಿ ಕನ್ನಡ ಭಾಷೆಯನ್ನು ಬಳಸಬೇಕು ಎಂಬ ಆದೇಶವಿದೆ. ಇದನ್ನು ಯಾರೇ ಉಲ್ಲಂಘಿಸಿದಲ್ಲಿ ರೂ ೧೦,೦೦೦/- ಗಳ ದಂಡ ವಿಧಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅಧಿಕಾರವಿದೆ.

ಈ ರೀತಿ ಕಾನೂನು-ಆದೇಶಗಳು ಇದ್ದರೂ ಬೆಂಗಳೂರಿನಲ್ಲಿ ಅಂಗಡಿ-ಮುಗ್ಗಟ್ಟುಗಳ-ಮಾಲ್ ಗಳ ನಾಮಫಲಕ, ವಾಣಿಜ್ಯೋದ್ಯಮಿಗಳು ಹೊರಡಿಸುವ ಜಾಹೀರಾತುಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ದೊರಕಿಲ್ಲ. ಬೆಂಗಳೂರಿನ ಬಹುತೇಕ ಹೋಟಲ್ ಗಳ ತಿಂಡಿ-ದರ ಪಟ್ಟಿಯಲ್ಲಿ ಕನ್ನಡ ಮೂಡಿಬಂದಿಲ್ಲ. ಯಾವುದೇ ಮಾಲ್ ಗಳ ಒಳಭಾಗದಲ್ಲಿ ಅಂಗಡಿಗಳಲ್ಲಿ ಮಾರಾಟ ಮಾಡುವ ವಸ್ತುಗಳ ವಿವರಣೆ ಕನ್ನಡದಲ್ಲಿ ಲಭ್ಯವಿಲ್ಲ. ಇನ್ನು ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಾಂಗಣ-ಒಳಾಂಗಣ ಎಲ್ಲೆಡೆ ಜಾಹೀರಾತುಗಳಲ್ಲಿ ಕನ್ನಡದ ಗಂಧವಿಲ್ಲ. ವಿಮಾನ ನಿಲ್ದಾಣದಲ್ಲಿ ವ್ಯವಹರಿಸುವ ಎಲ್ಲಾ ರೀತಿಯ ಸಂಸ್ಥೆಗಳು ಸಾಸಿವೆ ಕಾಳಿನ ಗಾತ್ರದ ಅಕ್ಷರದಲ್ಲಿ ಕನ್ನಡದಲ್ಲಿ ತಮ್ಮ ಸಂಸ್ಥೆಯ ಹೆಸರುಗಳನ್ನು ನಮೂದಿಸಿಕೊಂಡಿದ್ದಾರೆ. ಕನ್ನಡಿಗರು ಭೂತು ಗಾಜು ಹಿಡಿದು ಕನ್ನಡದ ಅಕ್ಷರವನ್ನು ಕಂಡು ಕೊಳ್ಳಬೇಕಿದೆ. ಇದು ಈ ಸಂಸ್ಥೆಗಳು ಅಲ್ಲಿ ಕನ್ನಡಕ್ಕೆ ಕೊಟ್ಟಿರುವ ಗೌರವ. ಇನ್ನು ಅಲ್ಲಿ ಇತರ ಮಾಹಿತಿಗಳು ಕನ್ನಡದಲ್ಲಿ ದೊರಕುವುದು- ಕನ್ನಡದ ಪತ್ರಿಕೆಗಳು-ನಿಯತಕಾಲಿಕೆಗಳು ಲಭಿಸುವುದು ದೂರದ ಮಾತೆ ಸರಿ.

ಹೀಗೆ ಜಾಹೀರಾತು-ನಾಮಫಲಕ ಇನ್ನಿತರೆಡೆ ಕಡ್ಡಾಯವಾಗಿ ಅನುಷ್ಠಾನವಾಗಬೇಕಾಗಿದ್ದ ಕನ್ನಡ ಹೇಳುವವರು-ಕೇಳುವವರು ಇಲ್ಲದೆ ವಿಫಲವಾಗಿರುವುದು ಸತ್ಯ. ನೆನ್ನೆ ರಾಜ್ಯೋತ್ಸವದ ದಿನ ನಾಮಫಲಕ-ಜಾಹೀರಾತುಗಳಲ್ಲಿ ಕನ್ನಡ ಅನುಷ್ಠಾನಕ್ಕಾಗಿ ನೆನಪಿಸಿ, ಆಗ್ರಹಿಸಿದ ಕನ್ನಡಪರ ಸಂಘಟನೆಯ ಕಾರ್ಯಕರ್ತರನ್ನು ಬಂದಿಸಿ ಎಳೆದೊಯ್ದ ಘಟನೆ ನಡೆಯಿತು. ಕಾನೂನು ಮುರಿದು ಕನ್ನಡ ಜಾಹೀರಾತು-ನಾಮಫಲಕ ಹಾಕದವರನ್ನು ಮುಟ್ಟದ ಸರಕಾರ ಬದಲಿಗೆ ಕಾನೂನು ಮುರಿಯುವಿಕೆ ಹೇಗೆ ನಡೆಯುತ್ತಿದೆ ಎಂಬುದನ್ನು ತೋರಿಸಿಕೊಟ್ಟ ಜನರನ್ನೇ ಜೈಲಿಗೆ ಹಾಕುತ್ತಿರುವುದು ವಿಪರ್ಯಾಸ. ಬೆಂಗಳೂರು ಮೇಯರ್ ಮತ್ತು ಬೃ.ಬೆಂ.ಮ.ಪಾ. ಆಯುಕ್ತರು ತಮ್ಮ ಇತರ ಕೆಲಸಗಳ ಜತೆಗೆ ಲಭ್ಯವಿರುವ ಕಾನೂನು ಬಳಸಿ ನಾಮಫಲಕ-ಜಾಹೀರಾತುಗಳಲ್ಲಿ ಕನ್ನಡ ಅನುಷ್ಠಾನದ ಕೆಲಸಕ್ಕೆ ಚಾಲನೆ ನೀಡಿದಲ್ಲಿ ಬಹುಮಟ್ಟಿಗೆ ಕನ್ನಡ ಬೆಂಗಳೂರಿನಲ್ಲಿ ಜಗಮಗಿಸುವುದರಲ್ಲಿ ಸಂದೇಹವಿಲ್ಲ. ಇಚ್ಛಾ ಶಕ್ತಿ ತೋರಬೇಕಿದೆ ಅಷ್ಟೇ!

*****

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ


*****

Tuesday, October 5, 2010

"ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳು ಹೊಸ ಕನ್ನಡ ಸಂಸ್ಕೃತಿಯ ತಾಣವಾಗಲಿ"

*****



*****

ಬೆಂ.ಮೆ.ರೈ.ನಿ.ನಿ. ವ್ಯವಸ್ಥಾಪಕ ನಿರ್ದೇಶಕ ಶ್ರೀಯುತ ಶಿವಶೈಲಂ ರವರು ಬೆಂಗಳೂರಿನ ಮೆಟ್ರೋ ರೈಲು ನಿಲ್ದಾಣಗಳಿಗೆ ಸಾಧಕರ ಹೆಸರಿಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಿರ್ಧರಿಸಲಾಗಿರುವ ಹೆಸರುಗಳಾದ ಮಹಾತ್ಮಗಾಂಧಿ, ವಿವೇಕಾನಂದ ಪೂಜನೀಯರೆ, ಆದರೆ ಈಗಾಗಲೇ ಈ ಮಹನೀಯರ ಹೆಸರುಗಳಲ್ಲಿ ರಸ್ತೆ, ಪ್ರತಿಮೆ ಹಾಗು ಇನ್ನೂ ಇತರ ಸ್ಮಾರಕಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ. ಇವರ ಜೀವನ ಚರಿತ್ರೆಗಳು ನಮ್ಮ ಶಾಲಾ-ಕಾಲೇಜುಗಳಲ್ಲಿ ಪಠ್ಯಪುಸ್ತಕಗಳಾಗಿವೆ. ಇವರ ನೆನಪು ಶಾಶ್ವತವಾಗಿರಲು ಅವರ ಸ್ವಂತ ಸ್ಥಳಗಳನ್ನೂ ಒಳಗೊಂಡಂತೆ ಅಖಿಲ ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹ ಅನೇಕ ಸ್ಮಾರಕಗಳು ಇವೆ. ಆದರೆ ಬೆಂಗಳೂರಿನ ಮೆಟ್ರೋ ರೈಲು ನಿಲ್ದಾಣಗಳಿಗೆ ಮತ್ತೆ ಇವರ ಹೆಸರುಗಳನ್ನು ಇಟ್ಟರೆ ನಮ್ಮ ಕರ್ನಾಟಕದ ಸಾಧಕರನ್ನು ಯಾರು? ಯಾವಾಗ? ಎಲ್ಲಿ? ಹೇಗೆ? ನೆನೆಸಿಕೊಳ್ಳುವುದು ಎಂಬುದು ಪ್ರಶ್ನೆಯಾಗಿದೆ.

ಈ ಮೆಟ್ರೋ ರೈಲು ಓಡಾಡುವುದು ಬೆಂಗಳೂರಿನ ರಸ್ತೆಗಳಲ್ಲಿ. ಇದರಲ್ಲಿ ಓಡಾಡುವವರು ಕಾಣಬೇಕಾದ್ದು ಬೆಂಗಳೂರು -ಕರ್ನಾಟಕದ ಬೆಳವಣಿಗೆಯ ಇತಿಹಾಸ ಮತ್ತು ನಾಡು-ನುಡಿಯ ಪರಂಪರೆ ಹಾಗು ಸಂಸ್ಕೃತಿ. ಹಾಗಾಗಿ ಇದಕ್ಕಾಗಿ ಹಗಲಿರುಳು ಶ್ರಮಿಸಿದ ನಮ್ಮದೇ ಸಾಧಕರ ಪರಿಚಯಿಸುವ ಕೆಲಸವಾಗಬೇಕಾಗಿರುವುದು ಸಹಜವಾದದ್ದು. ನಮ್ಮದೇ ಊರುಗಳಲ್ಲಿ ನಮ್ಮ ಸಾಧಕರನ್ನು ನಾವು ನೆನಪಿಸಿಕೊಳ್ಳಲಾಗದಿದ್ದರೆ ಇನ್ಯಾರು ನಮಗೆ ಮಾನ್ಯತೆ ನೀಡುತ್ತಾರೆ?

ಕದಂಬ, ಚಾಲುಕ್ಯ, ಹೊಯ್ಸಳ, ವಿಜಯನಗರದ ಅರಸರು, ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ, ಮೈಸೂರು ಹುಲಿ ಟಿಪ್ಪು ಸುಲ್ತಾನ್, ಕಿತ್ತೂರು ಚೆನ್ನಮ್ಮ - ಕ್ರಾಂತಿಯೋಗಿ ಬಸವಣ್ಣ, ಶಿವಶರಣೆ ಅಕ್ಕಮಹಾದೇವಿ, ಸಿದ್ದಗಂಗಾ ಶಿವಕುಮಾರ ಸ್ವಾಮಿಗಳು, ಕರ್ನಾಟಕ ಏಕೀಕರಣದ ರೂವಾರಿಗಳಾದ ಆಲೂರು ವೆಂಕಟರಾಯರು, ಅನಕೃ - ನಮ್ಮ ಮೇರು ಸಿನಿಮಾ ನಟರಾದ ರಾಜಕುಮಾರ, ವಿಷ್ಣುವರ್ಧನ, ಶಂಕರ ನಾಗ್ - ಖ್ಯಾತ ಕ್ರಿಕೆಟಿಗರಾದ ಚಂದ್ರಶೇಖರ್, ವಿಶ್ವನಾಥ್, ಕುಂಬ್ಳೆ - ನಮ್ಮ ರಾಜಕೀಯ ಧುರೀಣರಾದ ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ದೇವೇಗೌಡ - ತಮ್ಮ ಉದ್ಯಮಗಳ ಮೂಲಕ ವಿಶ್ವಖ್ಯಾತರಾಗಿರುವ ಐಟಿ ದಿಗ್ಗಜ ನಾರಾಯಣ ಮೂರ್ತಿ, ಕ್ಯಾಪ್ಟನ್ ಗೋಪಿನಾಥ್ - ಜ್ಣಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು - ಕನ್ನಡದ ವಿಜ್ಞಾನಿಗಳಾದ ಸಿ.ಎನ್.ಆರ್ ರಾವ್, ಯು.ಆರ್. ರಾವ್ ಹೀಗೆ ಇನ್ನಿತರ ಕನ್ನಡ ಸಾಧಕರು ಮೆಟ್ರೋ ಅಧಿಕಾರಿಗಳ ಗಮನಕ್ಕೆ ಬರಲಿಲ್ಲವೇ?

ಗಾಂಧೀಜಿ, ವಿವೇಕಾನಂದರಂತೆ ಈ ಮೇಲಿನವರು ಸಹ ತಮ್ಮದೇ ಕ್ಷೇತ್ರಗಳಲ್ಲಿ ಸಹಸ್ರಾರು ಕನ್ನಡಿಗರಲ್ಲಿ ಕಠಿಣ ಪರಿಶ್ರಮ ಮತ್ತು ಅದಕ್ಕಿರುವ ಬೆಲೆಯನ್ನು ಶಾಶ್ವತ ವಾಗಿ ನೆಲೆಯೂರುವಂತೆ ಮಾಡಿರುವ ಹಾಗು ಪ್ರೇರೇಪಿಸುತ್ತಿರುವ ಸಾಧಕರು. ಮೊದಲು ನಮ್ಮ ಕನ್ನಡಿಗ ಸಾಧಕರ (ಕನ್ನಡಿಗರೂ ಭಾರತೀಯರೇ) ಹೆಸರು ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಾಗಲಿ. ಮೆಟ್ರೋ ನಿಲ್ದಾಣಗಳು ಎಲ್ಲಾ ರೀತಿಯಲ್ಲೂ ಕನ್ನಡತನವನ್ನು ಬಿಂಬಿಸುವ ತಾಣವಾಗಲಿ. ಮಾನ್ಯ ಮುಖ್ಯಮಂತ್ರಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗು ನಗರಾಡಳಿತ ಸಂಸ್ಥೆಗಳು ಮೆಟ್ರೋ ಅಧಿಕಾರಿಗಳ ಜತೆ ಚರ್ಚಿಸಿ ಮೆಟ್ರೋ ಕನ್ನಡದ ಹೊಸ ಸಂಸ್ಕೃತಿಯಾಗಿ ಬೆಳೆಯುವತ್ತ ಸೂಕ್ತ ಸಲಹೆ - ಸೂಚನೆಗಳನ್ನು ನೀಡಲಿ

*****




ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

*****

Saturday, September 25, 2010

ನೋಂದಣಿ ಮತ್ತು ಕನ್ನಡ ಅನುಷ್ಠಾನ...

*****





ಮೇಲಿನ ಚಿತ್ರದಲ್ಲಿನ ಬರವಣಿಗೆ ಸ್ವವಿವರಣಾತ್ಮಕ.

*****

ಹೇಗೆ ಪುಣೆಯಲ್ಲಿ ಮರಾಠಿ ಇದೆಯೋ, ಗೋವಾದಲ್ಲಿ ಕೊಂಕಣಿ ಬೇಕು ಎನ್ನುತ್ತಿದ್ದಾರೆಯೋ ಅಂತೆಯೇ ಬೆಂಗಳೂರು-ಕರ್ನಾಟಕದಲ್ಲಿನ ನೋಂದಣಾದಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸುವ ಯಾವುದೇ ದಾಖಲೆಗಳಿರಲಿ ಅವುಗಳನ್ನು ಕನ್ನಡದಲ್ಲೇ ನೋಂದಣಿ ಮಾಡಿಸಲು "ನಾವು" ಮುಂದಾದಾಗ ಮಾತ್ರ ಆಡಳಿತದಲ್ಲಿ ಕನ್ನಡದ ಅನುಷ್ಠಾನ 'ನಮಗೆ'ಕಾಣಲು ಸಾಧ್ಯ.

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

*****

Friday, September 17, 2010

ಗಣೇಶೋತ್ಸವಗಳಿಗೆ ಕಾರ್ಪೊರೇಟ್ ಕಳೆ.... ಕನ್ನಡಕ್ಕೆ ಗುಳೆ...

*****


*****
೧೯೬೦ ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ರಾಮನವಮಿ, ಗಣೇಶೋತ್ಸವ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಗೆ, ಕನ್ನಡ ಕಲಾವಿದರಿಗೆ ಅವಕಾಶಗಳು ದುರ್ಲಭವಾಗಿದ್ದವು. ಕನ್ನಡಿಗರೇ ಆಯೋಜಕರಾಗಿದ್ದ ಈ ಸಭೆ ಸಮಾರಂಭಗಳಲ್ಲಿ ಕನ್ನಡೇತರ ಹಾಡುಗಾರರು-ಕಲಾವಿದರಿಗೆ ಹೆಚ್ಚಿನ ಅವಕಾಶ ಮಾಡಿಕೊಡಲಾಗುತ್ತಿತ್ತು! . ಕನ್ನಡನಾಡಿನ ಪ್ರತಿಭಾವಂತ ಕಲಾವಿದರು ಸಾಕಷ್ಟು ಮಂದಿ ಇದ್ದರೂ ಅವರು ಪ್ರಸಿದ್ಧರಲ್ಲ ಎಂಬ ಕಾರಣಕ್ಕೆ ಅವಕಾಶ ವಂಚಿತರಾಗುತ್ತಿದ್ದರು. ಅಂದು ಕನ್ನಡದ ನೆಲದಲ್ಲಿ ಕನ್ನಡಿಗ ಕಲಾವಿದನಿಗೆ ನ್ಯಾಯ ಸಿಗಬೇಕು ಮತ್ತು ಕನ್ನಡ-ಕನ್ನಡಿಗನಿಗೆ ಈ ನೆಲದಲ್ಲಿ ಸಾರ್ವಭೌಮತ್ವ ದೊರಕಿಸಿಕೊಡಲು ಬೆಂಗಳೂರಿನ ಚಾಮರಾಜಪೇಟೆಯ ರಾಮನವಮಿ ಉತ್ಸವದಲ್ಲಿ ಅನಕೃ-ರಾಮಮೂರ್ತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯೇ ಮಂದಿನ ಕನ್ನಡ ಚಳವಳಿಯ ಉದಯಕ್ಕೆ ನಾಂದಿಯಾಯಿತು. ಚಳವಳಿಯಿಂದ ಪ್ರೇರಿತರಾದ ಹಲವಾರು ಉತ್ಸಾಹಿಗಳು ನಂತರದಲ್ಲಿ ಕನ್ನಡ ಸಂಘಟನೆಗಳು, ಯುವಕ ಸಂಘಗಳು, ಗಣೇಶ ಮತ್ತು ರಾಮಸೇವಾ ಮಂಡಳಿಗಳನ್ನು ಸ್ಥಾಪಿಸಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ, ಕನ್ನಡ ಕಲೆ-ಕಲಾವಿದರ ಪೋಷಣೆಗೆ ಮುಂದಾದರು.

ಇಂದು ಬೆಂಗಳೂರಿನಲ್ಲಿ ಗಣೇಶನ ಹಬ್ಬ ಮುಕ್ತಾಯಗೊಂಡ ಕೆಲದಿನ-ವಾರದವರೆಗೂ, ರಸ್ತೆ-ಬೀದಿ-ಬಡಾವಣೆಗಳಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವುದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಗಣೇಶೋತ್ಸವಗಳಲ್ಲಿ ನಾಟ್ಯ-ಹಾಡು-ಹರಿಕತೆ-ನಾಟಕ-ಸಂಗೀತ ಕಾರ್ಯಕ್ರಮಗಳನ್ನೇರ್ಪಡಿಸುವುದು ವಾಡಿಕೆ. ಉದಯೋನ್ಮುಖ ಕಲಾವಿದರ ಪ್ರತಿಭೆ ಪ್ರದರ್ಶನಕ್ಕೆ ಇದು ಅವಕಾಶ ಒದಗಿಸುವ ವೇದಿಕೆಯಾಗಿ ಹಲವಾರು ಸ್ಥಳೀಯ ಪ್ರತಿಭೆಗಳು ಬೆಳಕಿಗೆ ಬರಲು ಸಹ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಹಣವುಳ್ಳ ಕಾರ್ಪೊರೆಟ್ ಸಂಸ್ಥೆಗಳು, ಬಡಾವಣೆ ಅಂಗಡಿ ಮಾಲೀಕರ ಸಂಘದವರು, ರೇಡಿಯೋ ವಾಹಿನಿಗಳು ತಮ್ಮ ಉತ್ಪನ್ನ-ವಸ್ತುಗಳ ಪ್ರಚಾರಕ್ಕಾಗಿ ಪ್ರಾಯೋಜಕತ್ವ ನೀಡುವ ಮೂಲಕ ಗಣೇಶೋತ್ಸವಗಳಿಗೆ ಕಾರ್ಪೊರೆಟ್ ಕಳೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ! ಆದರೆ ಮೆಲ್ಲಗೆ ಇಲ್ಲಿ ಕನ್ನಡತನ ಮತ್ತು ಸ್ಥಳೀಯತೆ ಮಾಯವಾಗುತ್ತಿರುವುದು ಸತ್ಯ. ಬೆಂಗಳೂರಿನ ಅಚ್ಚ ಕನ್ನಡದ ಪ್ರದೇಶ, ಬಸವನಗುಡಿಯ ನರಸಿಂಹರಾಜ ಕಾಲೋನಿಯಲ್ಲಿ ಕಳೆದ ನಾಲ್ಕು ದಶಕಗಳಿಗೂ ಹೆಚ್ಚಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗು ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವ ಸಂಘವೊಂದರ ಕಾರ್ಯಕ್ರಮ ಪಟ್ಟಿ ನೋಡಿದರೆ ನಮಗೆ ಇದು ಸಾಬೀತಾಗುತ್ತದೆ. ಈ ಸಲದ ಕಾರ್ಯಕ್ರಮಗಳಲ್ಲಿ ಶೇಕಡ ೫೦ಕ್ಕೂ ಹೆಚ್ಚಿನವರು ಕನ್ನಡೇತರ ಖ್ಯಾತನಾಮರು! ಇನ್ನು ಈ ಕಾರ್ಯಕ್ರಮಕ್ಕಾಗಿ ಬಸವನಗುಡಿ, ಡಿವಿಜಿ ರಸ್ತೆ, ನರಸಿಂಹ ರಾಜ ಕಾಲೋನಿ ಸುತ್ತ ಮುತ್ತ ಹಾಕಿರುವ ಫಲಕಗಳು, ಪ್ರಾಯೋಜಕರು ಮಾಡಿಸಿರುವ ಜಾಹೀರಾತುಗಳು ಮತ್ತು ಅವರ ಉಡುಗೊರೆ ಚೀಟಿಗಳು ನೂರಕ್ಕೆ ನೂರು ಕನ್ನಡೇತರವಾಗಿವೆ! ಬೆಂಗಳೂರಿನ ಇತರ ಬಡಾವಣೆಗಳ ಗಣೇಶೋತ್ಸವ ಆಚರಣೆಗಳಲ್ಲೂ ಬಹುಷಃ ಇದೇ ಪರಿಸ್ಥಿತಿ ಇರಬಹುದು.

ಕರ್ನಾಟಕದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವವರು ಪ್ರಧಾನವಾಗಿ ಕನ್ನಡದಲ್ಲಿ ಜಾಹೀರಾತು ಹೊರಡಿಸಬೇಕು ಎಂಬ ಸರ್ಕಾರದ ಆದೇಶವನ್ನು ಕನ್ನಡಿಗರೆ ಆದ ಇಲ್ಲಿನ ಪ್ರಾಯೋಜಕರು ಗಾಳಿಗೆ ತೂರಿದರೆ, ಕನ್ನಡಿಗರೇ ಆಯೋಜಕರಾಗಿರುವೆಡೆ ಕನ್ನಡತನ ಪ್ರದರ್ಶನಕ್ಕೆ-ಕನ್ನಡಿಗರ ಕಾರ್ಯಕ್ರಮಗಳಿಗೆ ಅವಕಾಶವಿಲ್ಲವಾದರೆ, ಹೊಸ ಹೊಸ ಕನ್ನಡ ಪ್ರತಿಭೆಗಳು ಬೆಳಕಿಗೆ ಬರುವುದು ಮತ್ತು ಅವರಿಗೆ ಸೂಕ್ತ ಅವಕಾಶಗಳು ದೊರೆಯುವುದು ಹೇಗೆ?. ನಮ್ಮಲ್ಲಿ ಇತರ ಭಾಷೆ-ಭಾಷಿಕರ ಕಾರ್ಯಕ್ರಮಗಳಿಗೆ ಅವಕಾಶ ನೀಡುವ ಆಯೋಜಕರು, ಇತರ ರಾಜ್ಯಗಳಲ್ಲಿ ಕನ್ನಡ-ಕನ್ನಡಿಗರ ಕಾರ್ಯಕ್ರಮಗಳಿಗೆ ಅವಕಾಶ ದೊರಕುತ್ತದೆಯೆ ಎಂದು ಯೋಚಿಸಿದ್ದಾರೆಯೆ? ಅವಕಾಶ ದೊರಕದೆ ಕಣ್ಮರೆಯಾಗುತ್ತಿರುವ ನಮ್ಮದೆ ನೆಲದ ಕಲೆ-ನಿಪುಣತೆ-ಜಾನಪದ ಕೌಶಲ್ಯ ಪ್ರದರ್ಶನಕ್ಕೆ, ದೊಡ್ಡಮಟ್ಟದ ಪ್ರಾಯೋಜಕತ್ವ-ಪ್ರಚಾರದಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳಲ್ಲಿ ಅನುವು ಮಾಡಿಕೊಟ್ಟ ಅವುಗಳನ್ನು ಉಳಿಸಿ ಬೆಳೆಸುವುದು ಇಂತಹ ಸಂಘಟನೆಗಳ ಮುಖ್ಯ ಕರ್ತವ್ಯವಾಗಬೇಕು ಅಲ್ಲವೇ? ಮುಂದಿನ ದಿನಗಳಲ್ಲಾದರೂ ಇಂತಹ ಕಾರ್ಯಕ್ರಮಗಳ ಆಯೋಜನೆಗಳ ಹಿಂದಿರುವ, ಪೋಷಿಸುವ, ಬಡಾವಣೆಗಳನ್ನು ಪ್ರತಿನಿಧಿಸುವ ಪಾಲಿಕೆ ಸದಸ್ಯರು, ಶಾಸಕರು ಮತ್ತು ಇತರ ಜನಪ್ರತಿನಿಧಿಗಳು ಕಾರ್ಯಕ್ರಮ ಆಯೋಜಕರ ಚಿತ್ತ ಇತ್ತ ಹರಿಯುವಂತೆ ಗಮನ ಸೆಳೆದು ನಮ್ಮತನವನ್ನು ಉಳಿಸಿ-ಬೆಳೆಸಿ-ಮುನ್ನಡೆಸಬೇಕಾದ ಅವರ ಜವಾಬ್ದಾರಿಗಳಲ್ಲೊಂದಾಗಿದೆ.

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

*****

Tuesday, September 14, 2010

ಹಿಂದಿಯೇತರ ಭಾಷಿಕರ ಮೇಲೆ ಹಿಂದಿ ಹೇರಿಕೆ ಏಕೆ?

*****



*****
ನಮ್ಮ ಸಂವಿಧಾನದಲ್ಲಿನ ಉಲ್ಲೇಖವೊಂದರಂತೆ ದೆಹಲಿ, ಮದ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಹೀಗೆ ಭಾರತ ಒಕ್ಕೂಟದ 'ಹಿಂದಿ' ರಾಜ್ಯಗಳೆಂದು ಗುರುತಿಸಲ್ಪಡುವ ಪ್ರದೇಶಗಳಿಂದ ಭಾರತದ ಸಂಸತ್ತಿಗೆ ಮಂತ್ರಿಗಳಾಗಿ ಹೋಗುವ ಸಂಸದರು ತಮ್ಮ ಮಾತೃಭಾಷೆ ಹಿಂದಿಯಲ್ಲಿ ಮಾತನಾಡಲು ಮತ್ತು ವಿಷಯ ಮಂಡನೆ ಮಾಡಲು ಅವಕಾಶವಿದೆ. ಆದರೆ ಹಿಂದಿಯೇತರ ರಾಜ್ಯಗಳಿಂದ ಸಂಸತ್ತಿಗೆ ಆರಿಸಿಬಂದು ಮಂತ್ರಿಗಳಾಗುವವರಿಗೆ ತಮ್ಮ ತಮ್ಮ ಮಾತೃ ಭಾಷೆಯಲ್ಲಿ ಮಂಡನೆಗಳನ್ನು ಮಾಡಲು ಅವಕಾಶವಿಲ್ಲ. ಈ ಹಿನ್ನಲೆಯಲ್ಲಿ ಕೆಲ ಹಿಂದಿ ಪರ ಸಂಸದರು, "ಹಿಂದಿ ಭಾರತದ ರಾಷ್ಟ್ರಭಾಷೆ", ಹಿಂದಿ ಮಾತನಾಡದವನು ರಾಷ್ಟ್ರದ್ರೋಹಿ ಎಂದು ಆಗಾಗ್ಗೆ ಲೋಕಸಭೆಯಲ್ಲಿ ಗೊಂದಲ-ಗದ್ದಲವೆಬ್ಬಿಸಿರುವುದನ್ನು ನಾವು ಕಂಡಿದ್ದೇವೆ. ಅಂತೆಯೇ ಹಿಂದಿ ರಾಜ್ಯಗಳ ಶಾಲೆಗಳಲ್ಲಿ ಭಾಷೆಗೆ ಸಂಬಂಧಿಸಿದಂತೆ ಮಕ್ಕಳು ಕಲಿಯುವುದು ಎರಡು ಭಾಷೆ, ಒಂದು ಅಲ್ಲಿನ ಪ್ರದೇಶದ ಭಾಷೆ ಹಿಂದಿ ಮತ್ತೊಂದು ಇಂಗ್ಲೀಷು. ಆದರೆ ಭಾರತ ಒಕ್ಕೂಟದ ಹಿಂದಿಯೇತರ ರಾಜ್ಯಗಳಲ್ಲಿ ಮಕ್ಕಳು ತಮ್ಮ ರಾಜ್ಯ ಭಾಷೆ (ಮಾತೃ ಭಾಷೆ) ಎರಡನೆಯದಾಗಿ ಇಂಗ್ಲೀಷು ಮತ್ತು ಮೂರನೇ ಭಾಷೆಯಾಗಿ ಹಿಂದಿಯನ್ನು ಸಹ ಕಡ್ಡಾಯವಾಗಿ ಕಲಿಯಲೇಬೇಕಾದ ಅನಿವಾರ್ಯತೆಯ ಹೊರೆಗೆ ಒಳಗಾಗಿದ್ದಾರೆ. ಇನ್ನು ಕೇಂದ್ರ ಸರ್ಕಾರದ ಕಚೇರಿಗಳ ಕೆಲಸದ ನೇಮಕಾತಿಯ ಪರೀಕ್ಷೆ-ಸಂದರ್ಶನ-ಬಡತಿಗೆ ಹಿಂದಿ ಅರಿವು ಕಡ್ಡಾಯ. ಇವು ಭಾರತದಲ್ಲಿ ಹಿಂದಿ ಭಾಷೆ-ಭಾಷಿಕರಿಗಿರುವ ಸವಲತ್ತಿನ ಕೆಲ ನಿದರ್ಶನಗಳು.

ಮುಂದುವರೆದಂತೆ ಮೂರು ಭಾಷೆ ಸೂತ್ರವನ್ನು ಪಾಲಿಸಬೇಕಾದ ಹಿಂದಿಯೇತರ ರಾಜ್ಯಗಳ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಇಂದು ವ್ಯವಸ್ಥಿತವಾಗಿ ಆಯಾ ರಾಜ್ಯಗಳ ಭಾಷೆಗಳನ್ನು ಕಡೆಗಣಿಸಲಾಗುತ್ತಿದೆ. ಇದನ್ನು ಸಾರ್ವಜನಿಕ ಸಂಸ್ಥೆಗಳಾದ ಬ್ಯಾಂಕುಗಳು, ವಿಮಾ ಕಚೇರಿ, ಅಂಚೆ ಮತ್ತು ರೈಲ್ವೇ ಇಲಾಖೆ ಹೀಗೆ ಇನ್ನಿತರ ಸಂಸ್ಥೆಗಳು ಸಹ ಅನುಸರಿಸಿಕೊಂಡು ಬರುತ್ತಿವೆ. ಉದಾಹರಣೆಯಾಗಿ ಭಾರತದಾದ್ಯಂತ ಇರುವ ಅಂಚೆ ಕಚೇರಿಗಳ ಸಂಕೇತದಲ್ಲಿನ ಹೊಸ ವಿನ್ಯಾಸದಲ್ಲಿ ಇತರ ರಾಜ್ಯ ಭಾಷೆಗಳನ್ನು ಕೈ ಬಿಟ್ಟಿರುವುದು, ವಿಮಾ ಕಚೇರಿ ಮತ್ತು ಬ್ಯಾಂಕುಗಳ ಅರ್ಜಿ, ಚೆಕ್ ಮತ್ತು ಪಾಸ್ ಪುಸ್ತಕಗಳಲ್ಲಿ ಸೂಚನೆ ಕೇವಲ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಇರುವುದು, ರೈಲ್ವೇ ಇಲಾಖೆ ಹಿಂದಿಯೇತರ ಪತ್ರಿಕೆಗಳಲ್ಲಿ ಹಿಂದಿಯಲ್ಲೇ ಹೊರಡಿಸುವ ಜಾಹೀರಾತು ನಮ್ಮ ನಿತ್ಯ ವ್ಯವಹಾರಗಳಲ್ಲಿ ಕಣ್ಣಿಗೆ ಕಾಣುತ್ತಿವೆ. ಇನ್ನು ದೇಶದೆಲ್ಲೆಡೆ, ತರಕಾರಿಯನ್ನೂ ಸಹ ಬಿಡದೆ, ಚಿಲ್ಲರೆ ವಸ್ತು (retail) ಬಿಕರಿ ಮಾಡಲು ದೊಡ್ಡ ಮಾಲ್ ಗಳನ್ನು ತೆರೆದಿರುವ ಖಾಸಗಿ ಬಂಡವಾಳದಾರರು ಸಹ ಇಡೀ ದೇಶಕ್ಕೆ ಹಿಂದಿ ಹೇಳಿಕೊಡಲು ಮುಂದಾಗುತ್ತ ಆಯಾ ರಾಜ್ಯಗಳಲ್ಲಿ ಬಳಕೆಯಲ್ಲಿರುವ ವಸ್ತುಗಳ ಹೆಸರುಗಳನ್ನು ಸಹ ಕ್ರಮೇಣವಾಗಿ ಮರೆಸಲು ಮುಂದಾಗಿದ್ದಾರೆ. ಇಂದು ಇವರ ಮಾಲ್ ಗಳಿಗೆ ಹೋದರೆ ತೊಗರಿ ಬೇಳೆ - ಹುಣಿಸೆ ಬದಲು ನಮಗೆ ಸಿಗುವುದು ತೂರ್ ದಾಲ್ - ಇಮ್ಲಿ. ಕೇಂದ್ರ ಸರ್ಕಾರ ಮತ್ತು ಖಾಸಗಿ ಬಂಡವಾಳದಾರರ ಈ ರೀತಿಯ ನೀತಿ-ವ್ಯವಸ್ಥೆ, ಭಾರತ ಒಕ್ಕೂಟ ದೇಶದ, ಹಿಂದಿ ಭಾಷಿಕರಿಗೆ ಮಾತ್ರ ವರದಾನವಾಗಿ ಪರಿಣಮಿಸಿ ಅವರು ಎಲ್ಲೆಡೆ ಮೇಲುಗೈ ಸಾಧಿಸಲು ಸಹಕಾರಿಯಾಗಿದೆ.

ಇನ್ನು ಪ್ರತಿವರ್ಷ ಸೆಪ್ಟಂಬರ್ ಮೊದಲೆರಡು ವಾರದಲ್ಲಿ ಕೇಂದ್ರ ಸರ್ಕಾರವು ಭಾರತದೆಲ್ಲೆಡೆ ಹಿಂದಿ ಪಸರಿಸಲು "ಹಿಂದಿ ಪಾಕ್ಷಿಕ" ಆಚರಣೆ ಸಂಯೋಜಿಸಿ ಕೋಟ್ಯಂತರ ರೂಪಾಯಿಗಳ ಕೃಪಾಕಟಾಕ್ಷದ ಅನುಧಾನ ನೀಡುತ್ತಿದೆ. ಇದು ದೇಶವಾಸಿಗಳಲ್ಲಿ ಹಿಂದಿ ನಮ್ಮ ರಾಷ್ಟ್ರಭಾಷೆ, ಹಿಂದಿ ಬಲ್ಲವ ಮಾತ್ರ ರಾಷ್ಟ್ರ ಭಕ್ತಿ ಹೊಂದಿರಲು ಸಾಧ್ಯ, ಇಡೀ ಭಾರತದ ಸಂಸ್ಕೃತಿಯೆಂದರೆ ಹಿಂದಿ ಸಂಸ್ಕೃತಿ, ಹಿಂದಿಯನ್ನು ಬಿಟ್ಟು ಅನ್ಯವೆಲ್ಲವೂ ಕೀಳು ಎಂಬ ಸಂದೇಶವನ್ನು ಸಾರುತ್ತ ಸರ್ವತ್ರವಾಗಿ ಹಿಂದಿಯನ್ನು ಭಾರತದೆಲ್ಲೆಡೆ ಬೇರೂರಲು ಪ್ರಯತ್ನಿಸುತ್ತಿರುವಂತಿದೆ. ಭಾಷೆ ಕೇವಲ ಸಂಪರ್ಕ ಸಾಧನ ಮಾತ್ರವಲ್ಲ. ಅದು ಒಂದು ಪ್ರದೇಶದ ಆಚಾರ, ವಿಚಾರ, ನಡೆ, ನುಡಿ ಮತ್ತು ಆಗು-ಹೋಗುಗಳ ಸಂಕೇತ. ದೇಶದ ಎಲ್ಲ ಭಾಷೆ, ವೈಶಿಷ್ಟ್ಯ ಮತ್ತು ಸಂಸ್ಕೃತಿಯನ್ನು ಸಮಾನವಾಗಿ ಮನ್ನಿಸಿ, ಉಳಿಸಿ, ಬೆಳಸಿಕೊಂಡು ಮುನ್ನಡೆಯುವುದೇ ಭಾರತದಂತ ಹಲವು ಪ್ರಾಂತ್ಯಗಳ-ಹಲವು ಸಂಸ್ಕೃತಿಗಳ, ಹಲವು ರಾಜ್ಯಗಳ ಒಕ್ಕೂಟದ ಒಗ್ಗಟ್ಟಿಗೆ ಕ್ಷೇಮ. ಹಾಗಾಗಿ ಭಾರತದ ಆಯಾ ರಾಜ್ಯಗಳ ಕೇಂದ್ರ ಸರ್ಕಾರಿ ಕಚೇರಿ ಕೆಲಸಗಳಲ್ಲಿ ಆಯಾ ರಾಜ್ಯಗಳ ಭಾಷೆಯ ಅನುಷ್ಠಾನ, ತಮ್ಮ ರಾಜ್ಯಗಳಿಂದ ನೆರೆ ರಾಜ್ಯಗಳಲ್ಲಿ ಹೋಗಿ ನೆಲಸುವವರಿಗೆ ಆಯಾ ರಾಜ್ಯಗಳ ಭಾಷೆಯ ಕಲಿಕೆಗೆ ಪ್ರೋತ್ಸಾಹ ಮತ್ತು ದೇಶದೆಲ್ಲೆಡೆ ಉದ್ಯಮ ಸ್ಥಾಪಿಸುವ ಖಾಸಗಿ ಬಂಡವಾಳದಾರರು ಸ್ಥಳಿಯ ಭಾಷೆ-ಭಾಷಿಕರಿಗೆ ಅನುಕೂಲ ಕಲ್ಪಿಸುವಂತಹ ಕೆಲಸಗಳಿಗೆ ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳೊಡಗೂಡಿ ಯೋಜನೆ ರೂಪಿಸಿ ಕಾರ್ಯಗತಗೊಳಿಸುವುದು ಸಹಜವಾದದ್ದು. ಇಲ್ಲದಿದ್ದಲ್ಲಿ ಈ "ಹಿಂದಿ ಹೇರಿಕೆ" ಮುಂದೊಂದು ದಿನ ದೇಶವನ್ನು ಒಡೆಯುವ ದೊಡ್ಡ ವಿಷ[ಯ]ವಾಗಿ ಪರಿಣಮಿಸುವುದು ನಿಸ್ಸಂದೇಹ. ಕರ್ನಾಟಕವನ್ನು ಪ್ರತಿನಿಧಿಸುವ ನಮ್ಮ ಸಂಸದರು, ಶಾಸಕರು, ಆಡಳಿತಗಾರರು ಇತ್ತೆಡೆ ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದು ಅವರ ಆಧ್ಯತೆಗಳಲ್ಲೊಂದಾಗಿದೆ..

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

*****

Friday, August 6, 2010

ಡಬ್ಬಿಂಗ್ ಮತ್ತು ಕನ್ನಡ ಚಿತ್ರರಂಗ

*****



*****

'ಡಬ್ಬಿಂಗ್ ನಿಷೇದ' ಕುರಿತಾದ ಬರವಣಿಗೆಯೊಂದಕ್ಕೆ ಕನ್ನಡ ಚಿತ್ರರಂಗದ ಕೆಲವರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹೊರಡಿಸಿದ್ದ, 'ಕನ್ನಡ ಚಿತ್ರರಂಗದ ಸಮೀಕ್ಷಾ ವರದಿ' ಯನ್ನು ಹಿಂಪಡೆದಿದೆ. ೧೯೬೦ ರವರೆಗೂ ಕನ್ನಡ ಸಿನಿಮಾಗಳ ನಿರ್ಮಾಣವೇ ವಿರಳವಾಗಿತ್ತು. ಅಂದಿನ ಚಲನಚಿತ್ರ ನಿರ್ಮಾಣ ಸಂಸ್ಥೆಗಳೂ ಪರಭಾಷೆಯವರದೇ ಆಗಿದ್ದುದರಿಂದ ಜನಪ್ರಿಯವಾದ ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆಗೊಳಿಸುತ್ತಿದ್ದರು. ಸ್ವಂತ ನೆಲೆಯಿರದಿದ್ದ ಕನ್ನಡ ಚಲನಚಿತ್ರರಂಗಕ್ಕೆ, ಬೇಕಾದ ಸ್ಟೂಡಿಯೋ, ತಂತ್ರಜ್ಞಾನ-ತಂತ್ರಜ್ಞರು ಅಂದು ಕನ್ನಡ ನಾಡಿನಲ್ಲಿ ಲಭ್ಯವಿರಲಿಲ್ಲ. ಎಲ್ಲದಕ್ಕೂ ನೆರೆಯ ಚೆನ್ನೈಯನ್ನು (ಮದ್ರಾಸನ್ನು) ಅವಲಂಬಿಸಬೇಕಾಗಿತ್ತು. ಆದ್ದರಿಂದ ಕನ್ನಡ ಚಿತ್ರೋದ್ಯಮ ಸಂಪೂರ್ಣವಾಗಿ ಚೆನ್ನೈ ನಗರದಲ್ಲಿ ಬೀಡು ಬಿಟ್ಟಿತ್ತು. ಜತೆಗೆ ಡಬ್ಬಿಂಗಿನ ಕಾರಣದಿಂದಾಗಿ ಕನ್ನಡ ಚಿತ್ರನಿರ್ಮಾಣ ಮತ್ತಷ್ಟು ವಿರಳಗೊಂಡು ಕನ್ನಡ ಕಲಾವಿದರು ಮತ್ತು ಕನ್ನಡ ಚಿತ್ರರಂಗ ಅಸ್ತಿತ್ವಕ್ಕಾಗಿ ಚಡಪಡಿಸುತ್ತಿದ್ದವು. ವರುಷಕ್ಕೆ ಕೇವಲ ನಾಲ್ಕೈದು ಮೂಲ ಕನ್ನಡ ಚಿತ್ರಗಳು ತೆರೆಕಾಣುತ್ತಿದ್ದವು. ಇದರಿಂದ ಡಬ್ಬಿಂಗ್ ಚಿತ್ರಗಳ ಹಾವಳಿ ಕನ್ನಡ ಚಿತ್ರರಂಗಕ್ಕೆ ದೊಡ್ಡಸಮಸ್ಯೆಯಾಗಿ ಕಾಡುತ್ತಿತ್ತು. ಡಬ್ಬಿಂಗ್ ನಿಂದಾಗಿ ಕನ್ನಡದ ಕಲಾವಿದರಿಗೆ, ತೆರೆಯಹಿಂದೆ ಕೆಲಸ ಮಾಡುವ ಚಲನಚಿತ್ರ ಕಾರ್ಮಿಕರ ಕೆಲಸಕ್ಕೆ ಹೊಡೆತ ಬಿತ್ತು. ಅಂದು ಕನ್ನಡದ ಕಟ್ಟಾಳು 'ಅನಕೃ' ಮುಂದಾಳತ್ವದಲ್ಲಿ, ಮೇರುನಟ ರಾಜ್ ಕುಮಾರ್ ಮತ್ತು ಇತರ ಹಿರಿಯರ ಡಬ್ಬಿಂಗ್ ವಿರುದ್ಧದ ಚಳವಳಿಯ ಕಾರಣದಿಂದಾಗಿ ಕನ್ನಡ ಚಿತ್ರರಂಗದ ಉತ್ಥಾನಕ್ಕೆ ನಾಂದಿಯಾಯಿತು. ಹಾಗಾಗಿ ೧೯೬೦ ರ ಆ ಸನ್ನಿವೇಶದಲ್ಲಿ ಡಬ್ಬಿಂಗ್ ಬೇಡ ಎನ್ನುವ ನಿಲುವು ಸರಿಯಾದುದೇ ಆಗಿತ್ತು.

ಡಬ್ಬಿಂಗ್ ಚಾಲ್ತಿಯಲ್ಲಿದ್ದ ಸಮಯದಲ್ಲಿ ಕನ್ನಡಿಗ ಸಿನಿಮಾ ವೀಕ್ಷಕರ ಜತೆಗೆ, ಪರಭಾಷಿಗಳು ಸಹ ಕನ್ನಡಕ್ಕೆ ಡಬ್ ಆದ ಪರಭಾಷಾ ಚಿತ್ರಗಳನ್ನು (ಕನ್ನಡ ಭಾಷೆಯಲ್ಲೆ) ವೀಕ್ಷಿಸುತ್ತಿದ್ದರು. ಡಬ್ಬಿಂಗ್ ನಿಷೇದದನಂತರದ ಈ ೫೦ ವರ್ಷದಲ್ಲಿ ಡಬ್ಬಿಂಗ್ ಗೆ ಪರ್ಯಾಯವಾಗಿ ಪರಭಾಷ ಚಿತ್ರಗಳು ನೇರವಾಗಿ ಆಯಾ ಭಾಷೆಗಳಲ್ಲಿ ಬಿಡುಗಡೆಯಾಗುವ ಪರಂಪರೆ ನಮ್ಮಲ್ಲಿ ಮುಂದುವರೆದದ್ದು ಕಾಲಾನುಕಾಲಕ್ಕೆ ಕರ್ನಾಟಕಕ್ಕೆ ಬಂದು ನೆಲೆಸುವ ಪರಭಾಷಿಕರಿಗೆ ಅವರ ಭಾಷೆಯಲ್ಲೇ ಚಿತ್ರಗಳನ್ನು ವೀಕ್ಷಿಸುವ ಅವಕಾಶ ಮತ್ತು ಪರಭಾಷಿಕ ಚಿತ್ರನಿರ್ಮಾಪಕರಿಗೆ ಕರ್ನಾಟಕ ಹೆಚ್ಚುವರಿ ಮಾರುಕಟ್ಟೆಯಾಗಿ ವರಾದಾನವಾಗಿ ಪರಿಣಮಿಸಿದೆ. ಆದರೆ ಹೊರ ರಾಜ್ಯದಲ್ಲಿ ವಾಸಿಸುತ್ತಿರುವ ಕನ್ನಡಿಗರು ತಮ್ಮ ಭಾಷೆಯಲ್ಲೇ ಕನ್ನಡ ಚಿತ್ರ ವೀಕ್ಷಿಸುವ ಅವಕಾಶದಿಂದ ವಂಚಿತರಾಗಿದ್ದಾರೆ.
ಮತ್ತೊಂದು ವಿಪರ್ಯಾಸವೆಂದರೆ

ಕನ್ನಡ ಚಿತ್ರರಂಗ ನೆಲೆಯೂರಿ ಎಪ್ಪತ್ತೈದನೆ ವರ್ಷದ ಸಂಭ್ರಮಾಚರಣೆ ಮುಗಿಸಿಕೊಂಡು ಮುನ್ನಡಿಯಿಟ್ಟಿದ್ದರೂ (ಡಬ್ಬಿಂಗ್ ನಿಷೇದದ ಈ ೫೦ ವರ್ಷದಲ್ಲಿ) ಕನ್ನಡ ಚಿತ್ರಗಳ ಮಾರುಕಟ್ಟೆ ಇನ್ನೂ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆ. ಇಂಗ್ಲೀಷ್ ಮತ್ತು ಹಿಂದಿ ಚಿತ್ರಗಳು (ತೆಲುಗು-ತಮಿಳು ಸಹ) ಹೇಗೆ ವಿಶ್ವವ್ಯಾಪಿಯಾಗಿ ಬಿಡುಗಡೆಗೊಳ್ಳುತ್ತದೆ ಎಂದು ಕನ್ನಡ ಚಿತ್ರರಂಗ ತಲೆಕೆಡಿಸಿಕೊಂಡಂತಿಲ್ಲ. ಆದರೆ ಡಬ್ಬಿಂಗಿನಿಂದಾಗಿ ಕನ್ನಡ ಸಂಸ್ಕೃತಿ - ನೈತಿಕತೆ ಹಾಳದೀತು ಎಂಬ ಕಾರಣ ನೀಡುತ್ತಾ ಪರಭಾಷೆಯಿಂದ ಕನ್ನಡಕ್ಕೆ ಡಬ್ಬಿಂಗ್ ಬೇಡ ಎನ್ನುವ ಮಾತುಗಳನ್ನು ದಾಖಲಿಸುವಲ್ಲಿ ಮಾತ್ರ ನಿಸ್ಸೀಮರಾಗಿದ್ದಾರೆ. ಬದಲಾದ ಕನ್ನಡ ಚಲನ ಚಿತ್ರ ವೀಕ್ಷಕರ ಅಭಿರುಚಿಗೆ ತಕ್ಕಂತಹ ಕನ್ನಡ ಚಿತ್ರಗಳು ತಯಾರಾಗದ ಕಾರಣ (ಅದ್ದೂರಿತನವಿರಬಹುದು, ಹೊಸತನ, ಅವಿಷ್ಕಾರ, ಕತೆಯ ವಸ್ತು, ವ್ಯಾಪ್ತಿ ಹೀಗೆ) ಹಾಗು ಡಬ್ಬಿಂಗ್ ನಿಷೇದ ಕನ್ನಡ ಚಿತ್ರ ವೀಕ್ಷಕರನ್ನು ಪರಭಾಷ ಚಿತ್ರಗಳನ್ನು ವೀಕ್ಷಿಸುವಂತೆ ಪ್ರೇರೇಪಿಸಿದೆ. ಡಬ್ಬಿಂಗ್ ಗೆ ಅವಕಾಶವಿದ್ದಿದ್ದಲ್ಲಿ ಯಡಿಯೂರಪ್ಪನವರು "ಪಾ" ಚಿತ್ರವನ್ನು ಕನ್ನಡದಲ್ಲೇ ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅವಕಾಶವಿರುತ್ತಿತ್ತು! ಜುರಾಸಿಕ್ ಪಾರ್ಕ್, ಹ್ಯಾರಿ ಪಾಟರ್, ಶಿವಾಜಿ, ಥ್ರೀ ಇಡಿಯಟ್ಸ್ ಗಳು ಕನ್ನಡ ಚಿತ್ರಗಳೇ ಆಗಿ ಕನ್ನಡಿಗರನ್ನು ರಂಜಿಸುವಂತೆ ಮಾಡಿರುತ್ತಿತ್ತು. ಕನ್ನಡ ಓದುಗರಿಗೆ ತೆಲುಗಿನ ಯೆಂಡಮೂರಿ, ಹಿಂದಿಯ ಪ್ರೇಮ್ ಚಂದ್, ಬೆಂಗಾಳಿಯ ಠಾಗೂರ್, ಶರಶ್ಚಂದ್ರರು ಅನುವಾದದ ಕಾರಣದಿಂದಲೇ ಹೆಚ್ಚು ಪರಿಚಯದವರಾಗಿದ್ದಾರಲ್ಲವೆ.

ಕನ್ನಡ ನಾಡು ಮತ್ತು ಜನಾಂಗದ ಅಳಿವು ಉಳಿವುಗಳು ಕನ್ನಡ ಭಾಷೆಯ ಅಳಿವು ಉಳಿವಿನ ಮೇಲೆ ತೀರ್ಮಾನವಾಗುತ್ತದೆ. ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳದ ಮತ್ತು ಕನ್ನಡಿಗರನ್ನೇ ಚಿತ್ರಮಂದಿರಕ್ಕೆ ಸೆಳೆಯಲು ವಿಫಲವಾಗಿರುವ ಕನ್ನಡ ಚಿತ್ರರಂಗವೇ, ಇಂದು ಕನ್ನಡ ಚಿತ್ರ ವೀಕ್ಷಕರು ಪರಭಾಷ ಚಿತ್ರಗಳ ವ್ಯಾಮೋಹಿಗಳಾಗಿರುವುದಕ್ಕೆ ಹೊಣೆಗಾರರಾಗಿದ್ದಾರಲ್ಲವೆ?

ಕನ್ನಡ ಉಳಿಯ ಬೇಕಾದರೆ ಕನ್ನಡವಲ್ಲದ ಮತ್ಯಾವ ಮನರಂಜನೆಗೂ ನಮ್ಮಲ್ಲಿ ಅವಕಾಶ ಇರಬಾರದು. ಆದರೆ ಒಕ್ಕೂಟದ ನಮ್ಮ ಈ ವ್ಯವಸ್ಥೆಯಲ್ಲಿ ಕನ್ನಡೇತರ ಚಿತ್ರಗಳನ್ನು ಕರ್ನಾಟಕದಲ್ಲಿ ನಿಷೇದಿಸುವುದು ಸಾಧ್ಯವಿಲ್ಲದ ಮಾತು. ಆ ದೃಷ್ಟಿಯಿಂದ ಡಬ್ಬಿಂಗ್ ಇಂದು ಮತ್ತೆ ಅನಿವಾರ್ಯವಾಗಿದೆ ಎಂದು ಅನ್ನಿಸದಿರದು. ಕನ್ನಡ ಭಾಷೆ ಉಳಿದರೆ ಮಾತ್ರವೇ ಕನ್ನಡಿಗ ಉಳಿದಾನು ಮತ್ತು ಕನ್ನಡ ಚಿತ್ರರಂಗ ಉಳಿದೀತು. ಬಹುಷಃ 'ಅನಕೃ' ಇಂದು ಇದ್ದಿದ್ರೆ, ಕನ್ನಡ ಚಿತ್ರರಂಗ ಕಾಲೂರಿರುವುದು ಕಂಡು, " ಕನ್ನಡ ಚಿತ್ರರಂಗದ ಕಾಯಿಲೆ ಈಗ ವಾಸಿಯಾಗಿರುವಾಗ ಡಬ್ಬಿಂಗ್ ಬೇಡವೆಂಬ ನೀತಿಯ ಔಷದಿ ಇನ್ನೂ ಏಕೆ?" ಎಂದು ಕನ್ನಡದ ಮತ್ತಷ್ಟು ಬೆಳವಣಿಗಾಗಿ, ಹೊಸ ತಂತ್ರ ರೂಪಿಸಲು ಇಂದು ಡಬ್ಬಿಂಗ್ ಅವಶ್ಯಕತೆಯಿರುವುದನ್ನು ಖಂಡಿತಾ ಸಾರಿ ಹೇಳುತ್ತಿದ್ದರು. ಡಬ್ಬಿಂಗ್ ವಿರೋಧಿಸುತ್ತಿರುವವರು ಈ ಬಗ್ಗೆ ಚಿಂತಿಸಿ ಕನ್ನಡದ ಉಳಿವಿಗೆ ಪೂರಕವಾಗುವಂತ ಹೇಳಿಕೆಗಳನ್ನು ನೀಡಲಿ- ಆ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುವಂತವರಾಗಲಿ. ಕನ್ನಡ ಚಿತ್ರರಂಗ ಇನ್ನೂ ಹೆಚ್ಚು ಹೆಚ್ಚು ಕ್ರೀಯಾಶೀಲತೆಯಿಂದ ಬೆಳಗಲು ಶ್ರಮಿಸಲಿ.

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

*****

Wednesday, June 16, 2010

ಬಸ್ಸುಗಳಲ್ಲಿ ಕನ್ನಡ ಹಾಡು ಮಾತ್ರ - ಬಿಎಂಟಿಸಿ ಸ್ಪಷ್ಟನೆ





ಹಿಂದಿನ "ಬೆಂ.ಮ.ಸಾ.ಸಂ. ಬಸ್ಸುಗಳಲ್ಲಿ ಕನ್ನಡ ಏಕೆ ಕೇಳಿಸುವುದಿಲ್ಲ?" ಲೇಖನಕ್ಕೆ ಪೂರಕವಾಗಿ ಈ ಬರಹ.

ಕಳೆದ ಕೆಲವು ವಾರಗಳಿಂದ ಜಾಗೃತ ಕನ್ನಡ ಗ್ರಾಹಕರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಕನ್ನಡ ಹಾಡನ್ನೇ ಪ್ರಸಾರ ಮಾಡಬೇಕು ಎಂಬ ನಿಟ್ಟಿನಲ್ಲಿ ಹಲವು ರೀತಿಯಲ್ಲಿ ಇದರ ಅನುಷ್ಠಾನಕ್ಕೆ ಮುಂದಾಗಿತ್ತು. ಬಸ್ಸಿನಲ್ಲಿ ಪ್ರಯಾಣಿಸುವ ಈ ಎಲ್ಲಾ ಕನ್ನಡ ಗ್ರಾಹಕರು ಬೆಂ.ಮ.ಸಾ.ಸಂ.ಯ ಮಿಂಚೆ ವಿಳಾಸಕ್ಕೆ ಪತ್ರ ಬರೆದು ಮನವರಿಕೆ ಸಲ್ಲಿಸಿ ಏಕೆ ಬಸ್ಸುಗಳಲ್ಲಿ ಕನ್ನದ ಹಾಡಿನ ಪ್ರಸಾರ ಪ್ರಸ್ತುತ ಎಂದು ತಿಳಿಹೇಳಿದ್ದರು. ಹಲವರ ಮಿಂಚೆಗೆ ಪ್ರತಿಕ್ರಿಯಿಸಿ ಉತ್ತರ ನೀಡಿದ್ದ ಬೆಂ.ಮ.ಸಾ.ಸಂ. ವ್ಯವಸ್ಥಾಪಕರು ಬಸ್ಸುಗಳಲ್ಲಿ ಕನ್ನಡ ಹಾಡನ್ನೇ ಹಾಕುವ ಕ್ರಮ ಜರುಗಿಸುವುದಾಗಿ ಸೂಚಿಸಿದ್ದರು.

ಜಾಗೃತ ಕನ್ನಡ ಗ್ರಾಹಕ ಗುಂಪಿನ ಚಟುವಟಿಕೆಯಿಂದ ನಗರ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುವ ಇನ್ನು ಕೆಲವರು ಸ್ವಯಂ ಪ್ರೇರಿತರಾಗಿ ತಮ್ಮ ತಮ್ಮ ಮನೆಗಳ ಬಳಿ ಇರುವ ಬಸ್ ಘಟಕಗಳಿಗೆ ತೆರಳಿ (ಡಿಪೋ), ಘಟಕದ ಮುಖ್ಯಸ್ಥರನ್ನು ಭೇಟಿ ಮಾಡಿ ಕನ್ನಡ ಹಾಡು ಹಾಕುವ ಬಗ್ಗೆ ಮನವಿ ಸಲ್ಲಿಸಿ ಬಂದಿದ್ದರು. ಇನ್ನು ಕೆಲವರು ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ, ಬ್ಲಾಗ್ ಗಳಲ್ಲಿ ಪತ್ರ ಬರೆದು ಬೆಂ.ಮ.ಸಾ.ಸಂ ಯ ಗಮನ ಸೆಳೆದಿದ್ದರು. ಸಂಯುಕ್ತ ಕರ್ನಾಟಕದ ೧೮ನೇ ಮೇ ೨೦೦೮ ರ ಪತ್ರಿಕೆಯಲ್ಲಿ ಈ ಕುರಿತಾಗಿ ಕೆಲವು ದೂರುಗಳು ದಾಖಲಾಗಿದ್ದವು.

ಬೆಂ.ಮ.ಸಾ.ಸಂ. ಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರು ಇಂದಿನ ಸಂ.ಕ.ದಲ್ಲಿ ಒಂದು ಸಾರ್ವಜನಿಕ ಸ್ಪಷ್ಟನೆ ನೀಡಿ ಬಸ್ಸುಗಳಲ್ಲಿ ಕನ್ನಡ ಹಾಡು ಪ್ರಸಾರ ಮಾಡುವ ಆದೇಶ ಹೊರಡಿಸಿರುವುದಾಗಿ ತಿಳಿಸಿ ಕನ್ನಡ ಅನುಷ್ಠಾನದ ನಿಲುವಿಗೆ ಬದ್ಧರಾಗಿದ್ದಾರೆ. ಅವರಿಗೆ ಈ ಮೂಲಕ ಅಭಿನಂದನೆಗಳು.

ಇದು ನಗರ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ಜಾಗೃತ ಕನ್ನಡ ಪ್ರಯಾಣಿಕರ ಒತ್ತಡಕ್ಕೆ ಸಂದ ಪ್ರತಿಫಲ

*****

ಈ ಜಾಗೃತಿ ನಿರಂತರವಾದದ್ದು. ನಗರ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ನಾವು ಮುಂದೆ ಸಹ ಇದನ್ನು ಸದಾ ಗಮನಿಸುತ್ತಿರಬೇಕು. ಸಾರಿಗೆ ಸಂಸ್ಥೆಯ ಈ ಆದೇಶವನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೆ ಎಂದು ತಿಳಿದುಕೊಳ್ಳುವುದು ಬಹು ಮುಖ್ಯ. ಹಾಗೆ ತೊಂದರೆ ಕಂಡುಬಂದಲ್ಲಿ ಈ ಕೆಳಗಿನ ನಮೂನೆಯಲ್ಲಿ ಅವರಿಗೆ ಮಿಂಚಿಸಿ ಎಚ್ಚರಿಸಬೇಕಾದ್ದು ನಮ್ಮ ಕರ್ತವ್ಯ.

    • ಬಸ್ಸಿನಲ್ಲಿ ನಾವು ಎದುರಿಸಿದ ಸಮಸ್ಯೆ - (ಉದಾ: ಬಸ್ಸಿನ ಸಿಬ್ಬಂದಿ ಕನ್ನಡೇತರ ಹಾಡು ಹಾಕುತ್ತಿದ್ದರು,ಬಸ್ಸಿನೊಳಗಿನ ಡಿಜಿಟಲ್ ಬೋರ್ಡಿನಲ್ಲಿ ಇಂಗ್ಲಿಷ್ ಸೂಚನೆ ಮಾತ್ರ ಇತ್ತು, ಕನ್ನಡದಲ್ಲಿರಲಿಲ್ಲ, ಹೀಗೆ)
    • ನಾವು ಪ್ರಯಾಣ ಮಾಡಿದ ಬಸ್ಸಿನ ಮಾರ್ಗ ಸಂಖ್ಯೆ
    • ಬಸ್ಸಿನ ವಾಹನ ನೋಂದಣಿ ಸಂಖ್ಯೆ
    • ನಾವು ಬಸ್ಸು ಹತ್ತಿದ ಸಮಯ, ಜಾಗ ಮತ್ತು ಪ್ರಯಾಣಿಸಿ ತಲುಪಿದ ಜಾಗ
    • ಸಾಧ್ಯವಾದಲ್ಲಿ ಬಸ್ಸಿನ ಸಿಬ್ಬಂದಿಯ ಹೆಸರು

ಈ ರೀತಿಯಾಗಿ ತಿಳಿಸಿದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಭರವಸೆ ನೀಡಿರುತ್ತಾರೆ.
ಅವರ ಮಿಂಚೆ: bmtcmd@gmail.com, ctmobmtc@gmail.com ಅವರನ್ನೊಮ್ಮೆ ಅಭಿನಂದಿಸಲು ಎಲ್ಲರೂ ಮಿಂಚಿಸಿ..
ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

****

Wednesday, June 9, 2010

ಕನ್ನಡಿಗರ ಅಭಿವೃದ್ಧಿ ಉದ್ದಿಮೆದಾರರ ಹೊಣೆ

*****

ನಾಡೊಂದರ ಸಂಸ್ಕೃತಿದತ್ತವಾದ ನೆಲ-ಜಲ-ಖನಿಜ-ಕೃಷಿ-ನಿಸರ್ಗ ಸಂಪತ್ತುಗಳ ಸದ್ಬಳಕೆ, ಅಲ್ಲಿನ ಕುಶಲಕರ್ಮಿಗಳು ತಮ್ಮ ಕುಲಕಸುಬುಗಳ ಅನುಭವದೊಂದಿಗೆ ಹೊಸ ಅವಿಷ್ಕಾರಗಳೆಡೆಗಿನ ದುಡಿಮೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಮತ್ತು ಆ ನಿಟ್ಟಿನಲ್ಲಿ ಅಲ್ಲಿನ ಆಡಳಿತಗಾರರು ನಾಡು-ನುಡಿ-ನಾಡಿಗರ ಪರವಾಗಿ ನಿಸ್ವಾರ್ಥತೆಯಿಂದ ಶ್ರಮಿಸುವುದು ಒಂದು ನಾಡಿನ ಏಳಿಗೆಯ ಪ್ರಮುಖ ಕಾರಣಗಳಾಗಿವೆ.

ಒಕ್ಕೂಟ (Federal) ವ್ಯವಸ್ಥೆಯ ಭಾರತ ದೇಶದಲ್ಲಿ, ಏಳಿಗೆಗೆ ಸಾಧನವಾಗಿ ಪ್ರತಿ ರಾಜ್ಯಗಳಲ್ಲೂ ಹೊಸ ಉದ್ದಿಮೆಗಳು ಪ್ರಾರಂಭವಾಗಬೇಕಾದ್ದು ಅತ್ಯಗತ್ಯ . ಯಾವುದೇ ಹೊಸ ಯೋಜನೆಗಳು ಒಂದು ಪ್ರದೇಶದಲ್ಲಿ ಕಾರ್ಯರೂಪಗೊಂಡಾಗ ಅಲ್ಲಿ ದೊರಕಬಹುದಾದಂತ ಕೆಲಸ ಅವಕಾಶಗಳಿಗಾಗಿ ಸ್ಥಳೀಯ ಉದ್ಯೋಗಾಕಾಂಕ್ಷಿ ಕಾತರ ಮತ್ತು ನೀರೀಕ್ಷೆಗಳಿಂದ ಎದುರು ನೋಡುವುದು ಸಹ ಸಹಜವಾದದ್ದು. ಹಾಗಾಗಿ ರಾಜ್ಯ ಸರ್ಕಾರಗಳು ಉದ್ದಿಮೆಗಾರಿಕೆಗೆ ಉತ್ತೇಜನ ನೀಡುವ ಬಹು ಪ್ರಮುಖ ಕಾರಣ ತನ್ನ ಜನಗಳಿಗೆ ಉದ್ಯೋಗ ಸೃಷ್ಟಿ ಆಗುವ ಕಾರಣಕ್ಕಾಗಿಯೇ ಮತ್ತು ಅದು ಆಯಾ ರಾಜ್ಯದ ಜನರ ಅನುಕೂಲಗಳಿಗೆ ಪರಿವರ್ತನೆಯಾಗಬೇಕಾಗಿರುವುದು.

ಕಳೆದ ಜೂನ್ ೩ ಮತ್ತು ೪ ರಂದು ಕರ್ನಾಟಕ ಸರ್ಕಾರ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ, ಕೋಟ್ಯಾಂತರ ರೂ ಬಂಡವಾಳವನ್ನು ಕರ್ನಾಟಕದಲ್ಲಿ ತೊಡಗಿಸಲು ವಿವಿಧ ಉದ್ದಿಮೆದಾರರೊಡನೆ ಮಾತುಕತೆ-ಒಪ್ಪಂದ ಮಾಡಿಕೊಂಡಿದೆ. ಹೀಗೆ ಕರ್ನಾಟಕ ರಾಜ್ಯ ಸರ್ಕಾರ, ಭಾರತದ ಇತರ ರಾಜ್ಯಗಳಿಗೆ ಮಾದರಿಯಾಗಲು ಒಂದು ಹೆಜ್ಜೆ ಮುಂದಿರಿಸಿದೆ. ಒಕ್ಕೂಟ ವ್ಯವಸ್ಥೆಯಲ್ಲಿನ ಒಂದು ರಾಜ್ಯದ ಈ ಕರ್ತೃತ್ವ ಶಕ್ತಿ, ಕಾರ್ಯತತ್ಪರತೆ, ಉದ್ಯಮಶೀಲತೆಯನ್ನು ಕೇಂದ್ರ ಸರ್ಕಾರ ಗಮನಿಸಿ ಹುರಿದುಂಬಿಸುವುದು ಅತ್ಯಗತ್ಯವಾದದ್ದು. ಇದು ಒಕ್ಕೂಟದ ಇತರ ರಾಜ್ಯಗಳನ್ನು ಅತ್ತೆಡೆ ಗಮನಿಸುವಂತೆ ಅವರಲ್ಲೂ ತನ್ನ ನಾಡಿಗರ ಅಭಿವೃದ್ಧಿಗೆ ಉದ್ಯಮಶೀಲತೆಯನ್ನು ಅಳವಡಿಸಿಕೊಳ್ಳಬೇಕೆನ್ನುವೆಡೆಗೆ ಕಣ್ಣು ತೆರೆಸುವ ಪ್ರಯತ್ನವಾಗಿಸಬೇಕು. ಇದು ಎಲ್ಲಾ ರಾಜ್ಯಗಳನ್ನು ಸುಭದ್ರಗೊಳಿಸಿ ಒಕ್ಕೂಟವನ್ನು ಬಲಪಡಿಸುವ ಬಹುದೊಡ್ಡ ಸಾಧನ. .

ಇಡೀ ಪ್ರಪಂಚದಲ್ಲಿ ಅಲ್ಲಲ್ಲಿಯ ಸ್ಥಳೀಯ ಭಾಷೆ, ಜನಾಂಗಕ್ಕೆ ಆಧ್ಯತೆ ಎಂಬುದು ಪ್ರಚಲಿತದಲ್ಲಿರುವಂತೆ, ಕನ್ನಡ ನಾಡಿನ ನೆಲ, ಜಲ, ಸಂಪನ್ಮೂಲ, ಉದ್ದಿಮೆಗಳು, ಉದ್ಯೋಗಗಳು, ವ್ಯವಸ್ಥೆಗಳು... ಇರುವುದು ಕನ್ನಡಿಗರ ಏಳಿಗೆಗಾಗಿ ಮತ್ತು ಸೌಕರ್ಯಕ್ಕಾಗಿ, ಹಾಗಾಗಿ ಕರ್ನಾಟಕದಲ್ಲಿ ಉದ್ಯಮ ಸ್ಥಾಪಿಸಲು ಮುಂದಾಗಿರುವವರೆಲ್ಲರೂ ತಮ್ಮ ವ್ಯವಹಾರದ ಎಲ್ಲೆಡೆಗಳಲ್ಲಿ ಕನ್ನಡ-ಕನ್ನಡಿಗರ ಅಭಿವೃದ್ಧಿಗೆ ಶ್ರಮಿಸುವುದು ಸಹ ಉದ್ದಿಮೆದಾರರ ಸಹಜ ಹೊಣೆಗಾರಿಕೆಯಾಗಬೇಕಿದೆ. ನಮ್ಮನ್ನಾಳುವವರು ಈ ಜವಾಬ್ದಾರಿಯ ಅರಿವನ್ನು, ಇಲ್ಲಿಗೆ ಬರುವ ಎಲ್ಲಾ ಉದ್ದಿಮೆದಾರರಲ್ಲಿ ಸದಾ ಜಾಗೃತಿಯಾಗಿರಿಸಿದಾಗ ಮಾತ್ರ ಕರ್ನಾಟಕ ಸರ್ಕಾರದ ಈ ಸಾಧನೆಗೆ ಸಾರ್ಥಕತೆ ಸಿಗುತ್ತದೆ.

*****




ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

Friday, May 7, 2010

ಬೆಂ.ಮ.ಸಾ.ಸಂ. ಬಸ್ಸುಗಳಲ್ಲಿ ಕನ್ನಡ ಏಕೆ ಕೇಳಿಸುವುದಿಲ್ಲ?

****



ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರು ನಗರದ ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ, ದಿನನಿತ್ಯ ಸ್ವಂತ ವಾಹನದಲ್ಲಿ ಪ್ರಯಾಣಿಸುವವರು ತಮ್ಮ ವಾಹನಕ್ಕೆ ಬಿಡುವು ನೀಡಿ - ಸಾರ್ವಜನಿಕ ವಾಹನ ಬಳಸುವಂತೆ ಉತ್ತೇಜಿಸಲು "ಬಸ್ ದಿನ" ಎಂಬ ಪ್ರಯೋಗಕ್ಕೆ ಚಾಲನೆ ನೀಡಿದೆ.

ಮೊನ್ನೆ ಮೇ ೪ ರಂದು ಬಸ್ ದಿನದ ಆಚರಣೆ ಸಲುವಾಗಿ ಬೆಂ.ಮ.ನ.ಸಾ. ಸಂಸ್ಥೆ, ಬೆಂಗಳೂರಿನ ಖಾಸಗಿ ಎಫ್.ಎಂ. ವಾಹಿನಿಯೊಂದಕ್ಕೆ ಪ್ರಾಯೋಜಕತ್ವ ನೀಡಿ ಆ ಮೂಲಕ ಸಾರ್ವಜನಿಕರನ್ನು ಬಸ್ ಪ್ರಯಾಣದೆಡೆಗೆ ಸೆಳೆಯುವ ತಂತ್ರವನ್ನು ಸಹ ಪ್ರದರ್ಶಿಸಿತು. ಪ್ರಾಯೋಜಕತ್ವ ಪಡೆದಿದ್ದ ಆ ವಾಹಿನಿ ಕನ್ನಡೇತರ ಕಾರ್ಯಕ್ರಮಗಳನ್ನು ಮಾತ್ರ ಪ್ರಸಾರ ಮಾಡುವ ಎಫ್.ಎಂ. ವಾಹಿನಿಯಾಗಿದ್ದದ್ದು ಮಾತ್ರ ವಿಪರ್ಯಾಸವಾದದ್ದು. ಬೆಂ.ಮ.ನ.ಸಾ. ಸಂಸ್ಥೆ ಅಧಿಕಾರಿಗಳು ಅಂದು ಈ ವಾಹಿನಿಯನ್ನು ಮಾತ್ರ ಬಸ್ ಗಳಲ್ಲಿ ಪ್ರಸಾರ ಮಾಡಬೇಕು ಎಂಬ ಆದೇಶ ಹೊರಡಿಸಿದ್ದರೋ ಏನೋ? ಅಂದು ನಾನು ಪ್ರಯಾಣಿಸಿದ ಮೂರು ಬಸ್ ಗಳಲ್ಲಿ ಈ ವಾಹಿನಿಯ "ಕನ್ನಡೇತರ ಕಾರ್ಯಕ್ರಮದ" ಪ್ರಸಾರ ಮಾತ್ರ ಕೇಳಿಬಂತು.

ಬೆಂ.ಮ.ನ.ಸಾ.ಸಂಸ್ಥೆ ಹಲವು ಸಂದರ್ಭಗಳಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ನೀಡಿ ಕನ್ನಡತನವನ್ನು ಎತ್ತಿ ಹಿಡಿದಿರುವ ಸಂಸ್ಥೆ. ಈ ಹಿಂದೆ ಪ್ರಯಾಣಿಕರ ಅನುಕೂಲಕ್ಕಾಗಿ ಸಂಸ್ಥೆಯ ವಾಹನಗಳಲ್ಲಿ ಹಾಡುಗಳ ಪ್ರಸರಣ ಆರಂಭಗೊಂಡಾಗ ಅಂದು ಸಾರಿಗೆ ಸಚಿವರಾಗಿದ್ದ ಚೆಲುವರಾಯ ಸ್ವಾಮಿಯವರು ಕನ್ನಡ ಹಾಡುಗಳನ್ನು ಪ್ರಸಾರ ಮಾಡುವ ವಾಹಿನಿಗಳನ್ನು ಮಾತ್ರ ಬಸ್ ಗಳಲ್ಲಿ ಕೇಳಿಸಬೇಕು ಎಂಬ ಆದೇಶ ಹೊರಡಿಸಿದ್ದರು.

ಆದರೆ ಇಂದು ಬೆಂಗಳೂರು ಬಸ್ ನಲ್ಲಿನ ಮನರಂಜನೆ ಕನ್ನಡವಾಗಿರಬೇಕು ಎಂಬ ನಿಯಮ ಸಂಸ್ಥೆಯಲ್ಲಿ ಯಾರಿಗೂ ನೆನಪಿದ್ದಂತಿಲ್ಲ. ಹಲವಾರು ಬಾರಿ ನಾನು ಕೇಳಿದಂತೆ ಪೂರ್ವನಿಯೋಜಿತವಾಗಿ ಕನ್ನಡೇತರ ಹಾಡುಗಳ ಪ್ರಸಾರವಾಗುತ್ತಿರುತ್ತದೆ. ಬಸ್ ದಿನಾಚರಣೆಯ ಸಲುವಾಗಿ, ಅಂದು ಮಾತ್ರ ಬಸ್ ನಲ್ಲಿ ಪ್ರಯಾಣ ಮಾಡುವ! ಮಾತೆತ್ತಿದರೆ ಕನ್ನಡ-ಕೆಂಪೇಗೌಡರ ಬಗ್ಗೆ ಮಾತನಾಡುವ ಸಾರಿಗೆ ಸಚಿವ ಅಶೋಕ್ ರವರ ಕಿವಿಯ ಗಮನಕ್ಕೆ ಇದು ಬಂದ ಹಾಗೆ ಕಾಣಲಿಲ್ಲ.

ಮಾನ್ಯ ಸಾರಿಗೆ ಸಚಿವರೆ, ಕರ್ನಾಟಕದ ಬಸ್ಸುಗಳಲ್ಲಿ ಕನ್ನಡ ಮನರಂಜನೆ ನಮಗೆ ಸಹಜವಾಗಿ ದೊರಕದಿದ್ದರೆ ತಮಿಳುನಾಡು / ಉತ್ತರ ಪ್ರದೇಶ ಬಸ್ಸುಗಳಲ್ಲಿ ದೊರಕುವುದೇ?. ಬಸ್ಸಿನ ಮನರಂಜನೆಯಲ್ಲಿ ಕನ್ನಡದ ಕಡಗಣನೆ ಇತರ ರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿ ಈ ಬಸ್ಸುಗಳಲ್ಲಿ ಪ್ರಯಾಣಿಸುವವರಿಗೆ "ಕನ್ನಡ ಕಲಿಯದಿದ್ದರೂ ನಡೆಯತ್ತೆ", "ಇಲ್ಲಿನವರಿಗೆ ಕನ್ನಡ ಬೇಕಿಲ್ಲ ನಮಗೇಕೆ ಕನ್ನಡ ಬೇಕು" "ಕನ್ನಡಿಗರಿಗೆ ಕನ್ನಡಕ್ಕಿಂತ ಕನ್ನಡೇತರದವೇ ಇಷ್ಟ" ಎಂಬ ತಪ್ಪು ಕಲ್ಪನೆ ಹುಟ್ಟುಹಾಕುತ್ತದೆಯಲ್ಲವೇ?. ಸಾರಿಗೆ ಸಂಸ್ಥೆಯ ಬೆಂಗಳೂರು-ಕರ್ನಾಟಕದ ಎಲ್ಲಾ ಬಸ್ಸುಗಳಲ್ಲಿ ಕನ್ನಡ ಮನರಂಜನೆ ಮಾತ್ರ ಪ್ರಸರಿಸಬೇಕು ಎಂಬ ಆದೇಶ ಹೊರಡಿಸಲಾಗದಿದ್ದರೆ, ಕನಿಷ್ಟ ಸಂಸ್ಥೆಯ ಬಸ್ಸುಗಳಲ್ಲಿ ಅಳವಡಿಸಿರುವ ರೇಡಿಯೋ - ಟೀವಿ ಗಳನ್ನು ತೆಗೆದುಹಾಕುವಂತೆ ತಿಳಿಸಬಹುದಲ್ಲವೇ?.

ಮೇ ೪ ರಂದು ನಮ್ಮ ಸಾರಿಗೆ ಸಂಸ್ಥೆ ಬಸ್ ದಿನಾಚರಣೆ ಆಚರಿಸ್ತೋ ಅಥವ "ಹಿಂದಿ ದಿವಸ್" ಏನಾದ್ರೂ ಸಂಭ್ರಮಿಸಲ್ಪಟ್ಟಿತೋ ಎಂದು ನಾವೆಲ್ಲರೂ ಪ್ರಶ್ನಿಸಬೇಕಲ್ಲವೇ. ಇದನ್ನ ಪ್ರಶ್ನಿಸಿ, ಸಾರಿಗೆ ಸಚಿವರಿಗೆ / ಬಿ.ಎಂ.ಟಿ.ಸಿಯ ಅಧಿಕಾರಿಗಳಿಗೆ ಪತ್ರ ಬರೆಯಬೇಕಾದ್ದು ನಮ್ಮ ಹಕ್ಕು. ಅವರ ಮಿಂಚೆ: bmtcmd@gmail.com, ctmobmtc@gmail.com ಎಲ್ಲರೂ ಮಿಂಚಿಸಿ.

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

Thursday, March 25, 2010

ಬಿಬಿಎಂಪಿ ಗೆ ಆಭಿವೃದ್ಧಿಯ ಕನಸಿನ ಜತೆಗೆ ಕನ್ನಡದ ಬದ್ಧತೆಯಿರುವವರು ಮಾತ್ರ ಆಯ್ಕೆಯಾಗಲಿ..

ಬರುವ ಮಾರ್ಚ್ ೨೮ ರ ದೊಡ್ಡ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಕಾವೇರಿದೆ, ಕನ್ನಡೇತರ ಮತದಾರರನ್ನು ಓಲೈಸುವ ನಿಟ್ಟಿನಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾರೆ ೧೫೦ ಕ್ಕೂ ಮಿಗಿಲಾಗಿ ಕನ್ನಡೇತರ ಅಭ್ಯರ್ಥಿಗಳಿಗೆ ಸ್ಪರ್ಧಿಸಿಲು ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ಜತೆಗೆ ನೆರೆ ರಾಜ್ಯದ ದ್ರಾವಿಡ ಪಕ್ಷಗಳೂ ಸಹ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಕನ್ನಡ-ಕನ್ನಡಿಗ-ಕರ್ನಾಟಕದ ಹಿತದೃಷ್ಟಿಯನ್ನು ಖಾಯಂ ಆಗಿ ಕಡೆಗಣಿಸಿರುವ ಇಲ್ಲಿನ ರಾಷ್ಟ್ರೀಯ ಪಕ್ಷಗಳು ಕನ್ನಡದ ಸಲುವಾಗಿ ಎಂದೂ ಸಹ ತಮ್ಮಗಳ ನಡುವೆ ಹೊಂದಾಣಿಕೆಗೆ ಮಾಡಿಕೊಂಡ ಉದಾಹರಣೆ ನಮ್ಮ ಮುಂದೆ ಇಲ್ಲ. ರಾಜ್ಯದ ಉತ್ತರದ ಗಡಿಯಲ್ಲಿ ಎಂಇಎಸ್, ಶಿವಸೇನೆಗೆ ಪಾರುಪತ್ಯ ವಹಿಸಿ ಕೊಟ್ಟಿರುವ ಇವರು, ಬೆಂಗಳೂರಿನ ಸುತ್ತ ಮುತ್ತ ಕನ್ನಡೇತರ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿ ಜತೆಗೆ ದ್ರಾವಿಡ ಪಕ್ಷಗಳೊಡನೆ ಚುನಾವಣೆ ಹೊಂದಾಣಿಕೆ ಮಾಡಿಕೊಂಡು ಪರೋಕ್ಷವಾಗಿ ಅವರನ್ನು ಇಲ್ಲಿ ಬೆಳೆಸಲು ಸಹಕರಿಸಿವೆ. ಅಧಿಕಾರದ ಹವಣಿಕೆಗೆ ಮುಂದೊಮ್ಮೆ ಬಳ್ಳಾರಿ ಮುಂತಾದೆಡೆ ತೆಲುಗು ಪಕ್ಷಗಳಿಗೆ ಮಣೆ, ಕೇರಳದ ಗಡಿಯೆಡೆಗೆ ಮಲಯಾಳಿಗಳಿಗೆ ನಿಷ್ಟೆ, ಪಶ್ಚಿಮದಲ್ಲಿ ಕೊಂಕಣಿ ಪಕ್ಷಗಳಿಗೆ ಕೊರಳೊಡ್ಡಲು ಸಹ ಇವರುಗಳು ಈಗಾಗಲೇ ತಯಾರಿ ನಡೆಸುವ ಕಸರತ್ತನ್ನು ಪ್ರಾರಂಭಿಸಿರಲೂಬಹುದು.

ಕನ್ನಡಿಗ ಈ ವಿಷಯವನ್ನು ಬಹಳ ಸೂಕ್ಷ್ಮವಾಗಿ ಗಮನಿಸಬೇಕಿದೆ. ಕರ್ನಾಟಕದಲ್ಲಿ ಈ ವರೆಗೆ ರಾಷ್ಟ್ರೀಯ ಪಕ್ಷಗಳ ಹೆಸರಿನಲ್ಲಿ ನಮ್ಮನ್ನು ಆಳ್ವೆಕೆ ನಡೆಸಿರುವವರು ಕೇವಲ ಅಧಿಕಾರದ ಆಸೆಗಾಗಿ ಮಾತ್ರ ಒಬ್ಬರಿಗೊಬ್ಬರು ಆಗಿರುವುದನ್ನು ನಾವು ಅರಿಯಬೇಕಿದೆ. ಬಗೆಹರಿಯದ ಕಾವೇರಿ-ಕೃಷ್ಣ-ಮಹದಾಯಿ ನೀರಿನ ಸಮಸ್ಯೆ, ಬಾಯಿಗೆ ಬಂದರೂ ಹಲ್ಲಿಗೆ ಸಿಗದ ಶಾಸ್ತ್ರೀಯ ಭಾಷೆ ಸ್ಥಾನಮಾನ,ಅನುಷ್ಠಾನವಾಗದ ಮಹಾಜನ್ ವರದಿ, ಕನ್ನಡಿಗನಿಗೆ ಉದ್ಯೋಗ ಮೀಸಲಿಡಲು ಮಹಿಷಿ ವರದಿ ಮಾಡಿಸಿ ಇನ್ನೂ ಮಲಗಿರುವುದು, ಪ್ರಾದೇಶಿಕ ಸಮತೋಲನಕ್ಕಾಗಿ ನಂಜುಡಪ್ಪ ವರದಿಯನ್ನು ವ್ಯಾಪಕವಾಗಿ ಜಾರಿಗೆ ತರದಿರುವುದು, ಇದನ್ನೆಲ್ಲಾ ಬಿಡಿ, ಸುಲಭ ಸಾಧ್ಯವಾದ ನಾಮಫಲಕ-ಜಾಹೀರಾತುಗಳಲ್ಲಿ ಕನ್ನಡ ಇನ್ನೂ ಅನುಷ್ಠಾನಗೊಂಡಿಲ್ಲದಿರುವುದು ಇವರ ಕನ್ನಡಪರ ಆಡಳಿತದ ವಿಫಲತೆಯನ್ನು ಪ್ರಕರವಾಗಿ ಬಿಂಬಿಸಿ ತೋರಿಸುತ್ತಿದೆ.

ಈ ಬಾರಿ ೫೦ ಕ್ಕೂ ಹೆಚ್ಚಾಗಿ ಕನ್ನಡೇತರ ಅಭ್ಯರ್ಥಿಗಳು ನಮ್ಮ ಮಹಾನಗರ ಪಾಲಿಕೆಗೆ ಆರಿಸಿ ಬರುವ ಸಾಧ್ಯತೆಗಳ ಬಗ್ಗೆ ಮಾಧ್ಯಮದಲ್ಲಿ ವರದಿಗಳು ಬಂದಿದೆ. ಹೀಗಾದಲ್ಲಿ ಮುಂದೆ ನಮ್ಮದೇ ಪಾಲಿಕೆಯಲ್ಲಿ ಕನ್ನಡ ಪರವಾದ ನಿಲುವುಗಳಿಗೆ ಮನ್ನಣೆ ಸಿಗುವುದು ಸಾಧ್ಯವೆ? ರಾಷ್ಟ್ರೀಯ ಪಕ್ಷಗಳನ್ನು ಸದಾ ಬೆನ್ನು ತಟ್ಟಿ ಪ್ರೋತ್ಸಾಹಿಸಿರುವ ಕನ್ನಡಿಗರಿಗೆ ಇವರುಗಳು ಕೊಡ ಬಯಸಿರುವ ಉಡುಗೊರೆ ಇದೇನೆ? ಇವರು ಈ ನಾಡಿನ ಹಿತಕಾಯುವ ಕಾಯಕವೇ ಇಲ್ಲಿ ಅಧಿಕಾರ ವಹಿಸಿಕೊಂಡು ಆಡಳಿತ ನಡೆಸುವವರ ಆಧ್ಯ ಕರ್ತವ್ಯ ಎಂದು ಮನಗಾಣದೆ, ಪೊಳ್ಳು ರಾಷ್ಟ್ರೀಯತೆಯ ಸೋಗಿನಲ್ಲಿ ಮುಳುಗಿ ಹೋಗಿ, ತಮ್ಮತನ ಮತ್ತು ಬದ್ಧತೆಯನ್ನು ಮರೆತು ಸಮಗ್ರ, ಕನ್ನಡ-ಕನ್ನಡಿಗ-ಕರ್ನಾಟಕ ದ ಅಭಿವೃದ್ಧಿ ಯನ್ನು ನಿರ್ಲಕ್ಷಿಸಿರುವುದು ಕಂಡುಬರುತ್ತದೆ.ಇನ್ನಾದರು ಕನ್ನಡಿಗರು ಎಚ್ಚತ್ತುಕೊಂಡು, ಹೈಕಮಾಂಡ್ ಗಳ ಗುಲಾಮಗಿರಿಗೆ ಸಿಲುಕಿ ನಲುಗಿರುವವರನ್ನು ಪಕ್ಕಕ್ಕಿಸಿರಿ, ನಮ್ಮ ರಾಜ್ಯದ ಒಳಿತಿಗಾಗಿ ಶ್ರಮಿಸುವ, ನಮಗೆ ನ್ಯಾಯಯುತವಾಗಿ ದೊರಕಬೇಕಾದ ಎಲ್ಲಾ ಹಕ್ಕುಗಳ ಅನುಷ್ಠಾನಕ್ಕಾಗಿ ಕಾಳಜಿ ಹೊಂದಿರುವ, ನೈಜ ಕನ್ನಡತ್ವದ ಸಿದ್ದಾಂತದ ಪ್ರತಿಪಾದನೆಯೊಂದಿಗೆ ಪ್ರಾದೇಶಿಕ ಚಿಂತನೆಯನ್ನು ಬಲಪಡಿಸುತ್ತ , ರಾಷ್ಟ್ರೀಯತೆಯನ್ನು ಎತ್ತಿ ಹಿಡಿಯುವವರಿಗೆ ಮಾತ್ರ ಬೆಂಬಲ ಕೊಟ್ಟು ಬೆಳೆಸುವತ್ತ ಚಿಂತನೆ ನಡೆಸಬೇಕಿದೆ.

ಸಧ್ಯಕ್ಕೆಬೆಂಗಳೂರು ಮಹಾನಗರ ಪಾಲಿಕೆಗೆ ಅಭ್ಯರ್ಥಿಗಳು ಯಾವುದೇ ಪಕ್ಷದವರಾಗಿರಲಿ, ನಗರದ ಅಭಿವೃದ್ಧಿಯ ಕನಸನ್ನು ಹೊಂದಿರುವ ಜತೆಗೆ ಕನ್ನಡ ಬದ್ಧತೆಯಿರುವವರನ್ನು ಮಾತ್ರ ಆರಿಸಿ ಕಳುಹಿಸುವ ಜವಾಬ್ದಾರಿ ನಮ್ಮ ಮೇಲಿದೆ.

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

****

Sunday, March 14, 2010

ವಿಶ್ವ ಗ್ರಾಹಕ ಹಕ್ಕು ಸಂರಕ್ಷಣಾ ದಿನ ಮತ್ತು ಭಾಷಾ ಆಯಾಮ

*****

ಇಂದಿನ ಆಧುನಿಕ ಸಮಾಜದಲ್ಲಿ ವಿನಿಮಯಗಳು ಅವಶ್ಯಕ. ಯಾವುದೇ ವಸ್ತು ಅಥವಾ ಎಂತಹುದೇ ಸೇವೆಯನ್ನು ಹಣ ಕೊಟ್ಟು ಪಡೆಯುವವ ಗ್ರಾಹಕ ಅಥವ ಬಳಕೆದಾರ ಎನಿಸುತ್ತಾನೆ. ಗ್ರಾಹಕ ತಾನು ಹಣ ಕೊಟ್ಟು ಖರೀದಿಸುವ ಯಾವುದೇ ವಸ್ತು ಅಥವ ಸೇವೆಯ ಬಗ್ಗೆ ಅದರ ಉತ್ಪಾದಕ-ಮಾರಾಟಗಾರನಿಂದ, ಸಂಪೂರ್ಣ ಮಾಹಿತಿ ಪಡೆಯಲು ಅರ್ಹನಾಗಿದ್ದಾನೆ. ಗ್ರಾಹಕನ ಈ ಸಾರ್ವಭೌಮ ಅಧಿಕಾರಕ್ಕೆ ರಾಜ್ಯ ಗ್ರಾಹಕ ನ್ಯಾಯಾಲಯ ಮತ್ತು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯಗಳ ನೆರವು ಸಹ ಲಭ್ಯವಿದೆ. ಪ್ರತಿವರ್ಷ ಮಾರ್ಚ್ ೧೫ರಂದು ಗ್ರಾಹಕ ಹಕ್ಕು ಸಂರಕ್ಷಣಾ ದಿನವೆಂದು ಆಚರಿಸಿ ಅದರ ಮಹತ್ವ ವಿವರಿಸುವ ಕೆಲಸಗಳು ಸಹ ಆಚರಣೆಯಲ್ಲಿದೆ.

ವಿಪರ್ಯಾಸವೆಂದರೆ ಇವು ಕೇವಲ ತೂಕ, ಅಳತೆಯಲ್ಲಿ ಮೋಸ, ಗುಣಮಟ್ಟದಲ್ಲಿ ನ್ಯೂನತೆ, ವಸ್ತುವಿನಲ್ಲಿ ಅಡಕ ವಾಗಿರುವ ಅಂಶಗಳ ಅಸಮರ್ಪಕ ಮಾಹಿತಿಗಳಿಗೆ ಮಾತ್ರ ಸೀಮಿತ ಮಾಡಿ ಗ್ರಾಹಕ ಸೇವೆಯ ಮೂಲಕ ಭಾಷೆ-ಸಂಸ್ಕೃತಿಯನ್ನು ಸಂರಕ್ಷಿಸುವ, ಬೆಳೆಸುವ ಬಹುದೊಡ್ಡ ಆಯಾಮವನ್ನು ಎಲ್ಲೆಡೆ ಕಡೆಗಣಿಸಿರುವುದು ಕಂಡು ಬರುತ್ತದೆ. ಯಾವುದೇ ವಸ್ತುವನ್ನು ಎಲ್ಲಿಯೇ ಉತ್ಪಾದಿಸುವವ ಅದನ್ನು ಕರ್ನಾಟಕದಲ್ಲಿ ವಿತರಿಸುವವ ಅಥವ ಮಾರಾಟ ಮಾಡುವವನಿಗೆ ಕರ್ನಾಟಕದಲ್ಲಿ ಬಹುಜನ ಬಳಸುವ ಭಾಷೆ ಕನ್ನಡ, ಕನ್ನಡ ಗ್ರಾಹಕನೇ ಇಲ್ಲಿ ಸಾರ್ವಭೌಮ ಎಂಬ ತಿಳುವಳಿಕೆ ಹೊಂದಿ ತನ್ನ ಉತ್ಪನ್ನದ ಎಲ್ಲಾ ಜಾಹೀರಾತುಗಳನ್ನು - ವಿವರಗಳನ್ನು-ಮಾಹಿತಿಯನ್ನು-ಸೇವೆಯನ್ನು ಕನ್ನಡದಲ್ಲಿ ನೀಡಬೇಕಾಗಿರುವುದು ಸಹಜವಲ್ಲವೇ? [ಇದು ಭಾರತದ ಇತರ ರಾಜ್ಯಗಳಲ್ಲಿ ಆಯಾ ಭಾಷೆಗಳಿಗೆ ಪ್ರಾಮುಖ್ಯ ದೊರಕಬೇಕು ಎನ್ನುವುದು ಸಹ ಸತ್ಯವಾದದ್ದು] ಹಾಗಾಗಿ ಕರ್ನಾಟಕದ ಅಧಿಕೃತ ಭಾಷೆ ಕನ್ನಡವಾಗಿದ್ದು, ನಮ್ಮ ಸಂವಿಧಾನದ ಭಾಷ ಸೂತ್ರದ ನಿಲುವಿನಂತೆ ದೇಶೀಯ ಭಾಷೆಗಳಲ್ಲೇ ಆದಳಿತ-ವ್ಯವಹಾರ ನಡೆಸಬೇಕೆಂಬುದರ ಅದೇಶದಂತೆ ಕರ್ನಾಟಕದಲ್ಲಿ ಕನ್ನಡಕ್ಕೆ ಆಧ್ಯತೆ ನೀಡಿ ಎನ್ನುವುದು ನಿರ್ವಿವಾದವಾದವಾಗಿರುವಾಗ ಗ್ರಾಹಕ ಸೇವೆಯಲ್ಲಿ ಕನ್ನಡಿಗ ಕನ್ನಡತನದಿಂದ ವಂಚಿತನಾಗಿರುವುದನ್ನು ನಾವು ಎಲ್ಲೆಡೆ ಕಾಣಬಹುದಾಗಿದೆ.

ನಮ್ಮ ಮನೆಗಳಲ್ಲಿ ಬಹು ಜಾಗರೂಕತೆಯಿಂದ ಉಪಯೋಗಿಸಬೇಕಾದ ಅನಿಲ ಸಿಲಿಂಡರಿನ ಮೇಲಿನ ಸುರಕ್ಷಿತ ಉಪಯೋಗದ ವಿವರ ಕನ್ನಡದಲ್ಲಿಲ್ಲದಿರುವುದನ್ನು, ನಮ್ಮ ಆರೋಗ್ಯ-ಜೀವ ರಕ್ಷಣೆಗೆ ಉಪಯೋಗಿಸುವ ಔಷದಿ-ಮಾತ್ರೆ-ಚುಚ್ಚುಮದ್ದಿನ ಬಗ್ಗೆ ಮಾಹಿತಿ ಸಹ ಕನ್ನಡದಲ್ಲಿ ಇಲ್ಲದಿರುವುದನ್ನು, ಇವುಗಳ ಕುರಿತು ನಾವು ಸುರಕ್ಷತೆಯಿಂದಿರಬೇಕಾದ ಸೂಕ್ಷ್ಮವನ್ನು ಗಂಭೀರವಾಗಿ ಪರಿಗಣಿಸದೆ ಬಹಳ ಹಗುರವಾಗಿದ್ದು ಬಿಟ್ಟಿದ್ದೇವೆ. ದೂರವಾಣಿಯಲ್ಲಿ ನಮ್ಮನ್ನು ಸಂಪರ್ಕಿಸಿ, ನಾವು ಅವರಿಗೆ ಗ್ರಾಹಕರಾಗಬಯಸುವ ಬ್ಯಾಂಕುಗಳು, ವಾಣಿಜ್ಯ ಮಳಿಗೆಗಳವರು, ಮನೆ-ನಿವೇಶನ ದೊರಕಿಸುವವರು, ಸಾಲ ನೀಡುವವರು, ಕಾರು-ಮೋಟಾರು ಮಾರುವವರು, ಗ್ರಾಹಕನಾದವನು ವ್ಯಾಪಾರಸ್ಥನ ಭಾಷೆಯಲ್ಲಿ ಮಾತನಾಡಲು ಒತ್ತಾಯಿಸುವುದು ಸರ್ವೇ ಸಾಮಾನ್ಯವಾಗಿದ್ದು ನಾವ್ಯಾರೂ ಅಲ್ಲಿ ಸಹಜವಾಗಿರಬೇಕಾಗಿದ್ದ ಕನ್ನಡಕ್ಕಾಗಿ, ಆಗ್ರಹಿಸುವುದು ಸಂಕೋಚವೋ-ಸಂಕುಚಿತವೆನ್ನಿಸಿಯೋ ಸುಮ್ಮನಿದ್ದುಬಿಟ್ಟಿದ್ದೇವೆ. ನಮ್ಮ ಕನ್ನಡದ ಸ್ವಾಭಿಮಾನವನ್ನು ವ್ಯಕ್ತಪಡಿಸುವುದು ಸಹ ಅವಮಾನವೆಂದು ತೆಪ್ಪಗಾಗಿದ್ದೇವೆ. ಹೀಗೆ ಉತ್ಪತ್ತಿಯಾಗುತ್ತಿರುವ ಎಲ್ಲಾ ರೀತಿಯ ಸಲಕರಣೆಗಳು, ಟಿವಿ-ಫ್ರಿಡ್ಜು-ನೀರು-ಬೀರು-ಸಾಬೂನು-ಕೀಟನಾಷಕ-ತಲೆಗೆ ಬಳಿದುಕೊಳ್ಳುವ ಬಣ್ಣ-ಹಚ್ಚಿಕೊಳ್ಳುವ ಎಣ್ಣೆ ಇವೆಲ್ಲವನ್ನು ಉಪಯೋಗಿಸುವ ವಿವರಗಳು-ಇದರ ಬಗ್ಗೆ ಮಾಹಿತಿ ನಮ್ಮ ಕನ್ನಡ ಭಾಷೆಯಲ್ಲಿ ನೀಡದೆ, ಆದರೂ ನೀವಿದನ್ನು ಖರೀದಿಸಬೇಕು ಎಂದು ಹೆಮ್ಮೆಯಿಂದ ಅವರು ಜಾಹೀರಾತು ನೀಡುವುದನ್ನು ಕಣ್ಣು ಮುಚ್ಚಿ ನೋಡಿ! ಕಿವಿ ಮುಚ್ಚಿ ಆಲಿಸಿ!! ಕಿಸೆಯಿಂದ ಕಾಸು ತೆಗೆದು ನಾವೆಲ್ಲರೂ ಖರೀದಿಸುತ್ತಿದ್ದೇವೆ!

ಇಲ್ಲಿ ಗಮನಿಸಬೇಕಾಗಿರುವ ಬಹಳ ಸುಲಭವಾದ ಅಂಶವೆಂದರೆ, ನಾವು ಗ್ರಾಹಕರಾಗಿ ಎಲ್ಲೆಡೆ ಕನ್ನಡಕ್ಕಾಗಿ ಆಗ್ರಹಿಸಿದರೆ. ಕನ್ನಡದಲ್ಲಿ ಸೇವೆ ನೀಡಲು ಕನ್ನಡಿಗನಿಗೆ ಕೆಲಸ ದೊರೆಯುತ್ತದೆ. ಹಾಗು ಉತ್ಪನ್ನಗಳ ವಿವರ ಕನ್ನಡದಲ್ಲಿ ದೊರೆಯುವುದು ಎಂದರೆ ಕನ್ನಡದಲ್ಲಿ ವಿವರಣೆ ಬರೆಯುವವನಿಗೆ, ಕನ್ನಡ ಮುದ್ರಿಸುವವನಿಗೆ ಕೆಲಸ ದೊರೆಯುತ್ತದೆಯಲ್ಲವೇ? ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇದು ಕನ್ನಡವನ್ನು ಬೆಳೆಸುವ-ಸಂರಕ್ಷಿಸುವ, ಬಹುದೊಡ್ಡ ಸಾಧಕವೆನಿಸುತ್ತದ್ದಲ್ಲವೇ? ಕನ್ನಡ ಬಾರದವನು ಕನ್ನಡ ಕಲಿಯುವ ಅನಿವಾರ್ಯತೆಯನ್ನು ಸಹ ಇದು ಹುಟ್ಟುಹಾಕುತ್ತದೆ. ಎಲ್ಲಿಯವರೆಗೆ ಬಳಕೆದಾರರಾದ ನಾವು ಸೇವೆಯನ್ನು ಕನ್ನಡದಲ್ಲಿ ಕೇಳುವುದಿಲ್ಲವೋ ಉತ್ಪಾದಕ ಅಥವ ಮಾರಾಟಗಾರ ಸಹಜವಾಗಿರಬೇಕಾಗಿದ್ದ ನಮ್ಮ ಹಕ್ಕನ್ನು ಕಡೆಗಣಿಸುವುದು ಸಾಮಾನ್ಯ. ಸಹಜವಾಗಿ ನಮಗೆ ದೊರಕಬೇಕಾದದ್ದ ಕನ್ನಡದಲ್ಲಿನ ಗ್ರಾಹಕ ಸೇವೆಯನ್ನು ಇಂದು ನಾವು ಆಗ್ರಹ ಮಾಡಿ ಪಡೆಯಬೇಕಾದ ಸ್ಥಿತಿ ತಂದುಕೊಂಡಿದ್ದೇವೆ.

ಇಂದು ಬ್ಯಾಂಕು ಗಳಲ್ಲಿ ಸಾಲ ಪಡೆಯುವ - ಜೀವವಿಮೆ ಮಾಡಿಸುವ ಅರ್ಜಿಯನ್ನು ನಾವು ಕನ್ನಡದಲ್ಲಿ [ನಿಗಮದ ಪ್ರಕಾರ ಇದು ವರ್ನ್ಯಾಕುಲರ್ ಭಾಷೆ] ಭರ್ತಿ ಮಾಡಿ ಸಹಿ ಮಾಡಿದರೆ "ನನ್ನ ಹೆಸರು ಇಂಥದ್ದು, ನನಗೆ ಕನ್ನಡ ಭಾಷೆ ಒಂದೇ ಬರೋದು, ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ, ನೀವು ಇಂಗ್ಲಿಷ್-ಹಿಂದಿ ಭಾಷೇಲಿ ಬರೆದಿರುವುದೆಲ್ಲವನ್ನೂ, ಓದಿಸಿ ಕೇಳಿ ಅರ್ಥ ಮಾಡಿಕೊಂಡಿದ್ದೇನೆ" ಎಂದು ಷರಾ ಬೇರೆ ಬರೆದುಕೊಡಬೇಕಾದಂತ ದುಸ್ಥಿತಿ ಕನ್ನಡ ಗ್ರಾಹಕನಿಗೆ ಬಂದೊದಗಿದೆ.

ಹಲವು ಭಾಷೆ, ಸಂಸ್ಕೃತಿಗಳಿಂದ ಮೇಳೈಸುತ್ತಿರುವ ವಿವಿಧತೆಯಲ್ಲಿ ಏಕತೆ ಸಾರುವ ರಾಷ್ಟ್ರ ನಮ್ಮದು. ಇವುಗಳೆಲ್ಲವನ್ನು ಪ್ರೀತಿಸುವ ಮತ್ತು ಗೌರವಿಸುವ ಔದಾರ್ಯ ಸಾಮೂಹಿಕವಾಗಿ ಇದ್ದಾಗ ಸಾಮರಸ್ಯ ತನ್ನಿಂತಾನೆ ಮೂಡುತ್ತದೆ. ಹೇಗೆ ಜಾಗೃತ ಗ್ರಾಹಕ ಜವಾಬ್ದಾರಿ ಯುತ ಉತ್ಪಾದಕನಿಗೆ ಕಾರಣಕರ್ತನಾಗುತ್ತಾನೋ, ಜಾಗೃತ ಕನ್ನಡ ಗ್ರಾಹಕ ಕರ್ನಾಟಕದಲ್ಲಿ ಕನ್ನಡತನವನ್ನು ಉಳಿಸುವ ಮೂಲಕ, ಇತರ ಭಾಷಿಕರಿಗೆ ಅವರವರ ರಾಜ್ಯಗಳಲ್ಲಿ ಅವರ ಭಾಷೆ ಉಳಿಸಿಕೊಳ್ಳಲು ಸ್ಪೂರ್ತಿಯಾಗುತ್ತ, ಅನೇಕತೆಯಲ್ಲಿರುವ ಈ ದೇಶದ ಏಕತೆಯನ್ನು ಸಾರುತ್ತ ಸಮಗ್ರ ದೇಶದ ಬೆಳವಣಿಗೆ, ಅಭಿವೃದ್ಧಿಗೆ ಪೂರಕನಾಗಬಹುದಲ್ಲವೇ?

ಕೇವಲ ವ್ಯಾಪಾರಿ ಸಂಸ್ಥೆಗಳ ನಾಮಫಲಕಗಳಲ್ಲಿ ಮಾತ್ರ ಕನ್ನಡ ಕಾಣುವಂತಾಗುವ ಕಾನೂನಿನಿಂದ ಏನೂ ಪ್ರಯೋಜನವಿಲ್ಲ! ಕನ್ನಡ ನಾಡಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ನಿರಾಕರಿಸುವುದು 'ಶಿಕ್ಷಾರ್ಹ ಅಪರಾಧ' ಎಂಬ ಕಾನೂನನ್ನು ನಮ್ಮ ಸರ್ಕಾರ ಜಾರಿಗೆ ತರಬೇಕಿದೆ. ಹೀಗೆ ಕಾನೂನು ಜಾರಿಯಾದಲ್ಲಿ ಕನ್ನಡ ಅನುಷ್ಠಾನದ ಎಲ್ಲಾ ರೀತಿಯ ವ್ಯಾಪಾರಿ ಸಂಸ್ಥೆಗಳು ಎಚ್ಚರಿಕೆ ವಹಿಸುತ್ತವೆ ಮತ್ತು ಗ್ರಾಹಕನೇ ದೇವರು ಎನ್ನುವ ಮಾತಿಗೆ ಬೆಲೆ ಸಿಗುವಂತಾಗುತ್ತದೆ. ಆದರೆ ಭಾರತದಲ್ಲಿ ಗ್ರಾಹಕನ ಹಕ್ಕುಗಳಿಗಾಗಿರೋ ಮಾರ್ಗದರ್ಶಿ/ ನಿಯಮಗಳ ದೊಡ್ಡ ಪಟ್ಟಿಯಲ್ಲಿ ಭಾಷಾ ಆಯಾಮವೇ ಇಲ್ಲದಿರುವುದು ಮತ್ತೊಂದು ವಿಪರ್ಯಾಸವೇ ಸರಿ!

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ - ಕೆಂಪಿನ ಚಿಂತನೆ ಕಪ್ಪು

****

Tuesday, March 2, 2010

ಕರ್ನಾಟಕ ಬ್ಯಾಂಕ್ ನಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ!

*****

ಸ್ವಲ್ಪ ಸಮಯದ ಹಿಂದೆ ಜಾಗೃತ ಕನ್ನಡ ಗ್ರಾಹಕರು, "ಕರ್ನಾಟಕ ಬ್ಯಾಂಕ್" ತನ್ನ ದೈನಂದಿನ ವ್ಯವಹಾರದಲ್ಲಿ ಕನ್ನಡ ಕಡೆಗಣಿಸಿರುವ ಬಗ್ಗೆ ಮನವರಿಕೆ ಮಾಡಿಸಿ ಕರ್ನಾಟಕದ ಅವರ ಎಲ್ಲ ಶಾಖೆಗಳಲ್ಲಿ ಗ್ರಾಹಕ ಸೇವೆಯಲ್ಲಿ ಕನ್ನಡ ಬಳಕೆಗೆ ತರುವಂತೆ ಒತ್ತಾಯಿಸಿತ್ತು.ಬ್ಯಾಂಕ್ ನಲ್ಲೇ ಕನ್ನಡಲ್ಲಿ ಗ್ರಾಹಕ ಸೇವೆ ಇಲ್ಲ ಅಂದ್ರೆ ನಾವು ಇನ್ಯಾವ ಬ್ಯಾಂಕ್ ನಲ್ಲಿ ಕನ್ನಡ ಗ್ರಾಹಕ ಸೇವೆ ಅಪೇಕ್ಷಿಸಲು ಸಾಧ್ಯ ಎಂಬುದು ಜಾಗೃತ ಗ್ರಾಹಕರ ಪ್ರಶ್ನೆಯಾಗಿತ್ತು.

ಮೊನ್ನೆ ಕರ್ನಾಟಕ ಬ್ಯಾಂಕ್ , ಬಸವನಗುಡಿ ಶಾಖೆಗೆ ಹೋದಾಗ ಅಚ್ಚರಿಯೊಡನೆ ಸಂತೋಷವಾಯಿತು. ಹಣ - ಚೆಕ್ಕು ತುಂಬುವ ಕನ್ನಡ ನಮೂನೆ (ಚಲನ್) ಲಭ್ಯವಿತ್ತು. ಲಗತ್ತಿಸಿರುವ ಚಿತ್ರ ಗಮನಿಸಿ.

ಸಂತೋಷದ ಸಂಗತಿಯೆಂದರೆ ನಮೂನೆಯ ಒಂದು ಬದಿಯಲ್ಲಿ ಕನ್ನಡವನ್ನು ಪೂರ್ತಿಯಾಗಿ ಬಳಸಿ ಹಿಂಬಾಗದಲ್ಲಿ ಹಿಂದಿ-ಇಂಗ್ಲೀಷ್ ನ್ನು ಒಟ್ಟಗೆ ಬಳಸಿದ್ದಾರೆ.

ಕನ್ನಡದ ಈ ನಮೂನೆಯನ್ನು ನಾವು ಇಲ್ಲಿ ನಿರಂತರವಾಗಿ ಕಾಣಬೇಕಾದರೆ, ಈ ನಮೂನೆಯಲ್ಲಿ ನಾವು ಕನ್ನಡದಲ್ಲೇ ಭರ್ತಿ ಮಾಡಬೇಕಾಗಿರುವುದು ಅಗತ್ಯವಾದದ್ದು. ಕರ್ನಾಟಕ ಬ್ಯಾಂಕ್ ಇರಬಹುದು, ಆಂಧ್ರ ಬ್ಯಾಂಕ್ ಅಥವ ತಮಿಳುನಾಡು ಮರ್ಕಂಟೈಲ್ ಬ್ಯಾಂಕ್ ಇರಬಹುದು ಇವೆಲ್ಲವೂ ಕರ್ನಾಟಕದಲ್ಲಿದ್ದರೆ ಕನ್ನಡಿಗರಾದ ನಾವು ಇಲ್ಲಿ ವ್ಯವಹಾರ ನಡೆಸುತ್ತಿದ್ದರೆ ಹಣ-ಚೆಕ್ಕು ತುಂಬುವ, ಖಾತೆ ತೆರೆಯಲು ಅರ್ಜಿ ತುಂಬುವ, ವ್ಯವಹಾರದ ಸಲುವಾಗಿ ಪತ್ರ ಬರೆಯಬೇಕಾದಲ್ಲಿ ಹೀಗೆ ಎಲ್ಲಾ ವಿವರಗಳನ್ನು ಕನ್ನಡದಲ್ಲೇ ಭರ್ತಿ ಮಾಡಲು, ಸಿಬ್ಬಂಧಿಯೊಡನೆ ಕನ್ನಡದಲ್ಲಿ ವ್ಯವಹರಿಸಲು ಮುಂದಾದಲ್ಲಿ ಗ್ರಾಹಕ ಸೇವೆಯಲ್ಲಿ ಕನ್ನಡ ತಂತಾನೆ ಮುನ್ನುಗ್ಗುತ್ತದೆ. ಬ್ಯಾಂಕಿಗ್ ಕಾನೂನು (ಒಂಬಡ್ಸ್ ಮನ್) ನಮಗೆ ಒದಗಿಸಿರುವ ಈ ಸವಲತ್ತಿಗೆ ಕಿಮ್ಮತ್ತು ಬರುತ್ತದೆ.

ಮುಂದಿನ ಸಲ ಯಾವುದೇ ಬ್ಯಾಂಕಿಗೆ ಹೋಗಿ, ಅಲ್ಲಿ ಕನ್ನಡದಲ್ಲೇ ವ್ಯವಹರಿಸಿ. ನಿಮ್ಮ ಕನ್ನಡ ಸ್ನೇಹಿತರಿಗೂ ಹಾಗೆ ಮಾಡಲು ತಿಳಿಸಿ.

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!

*****

Sunday, February 21, 2010

ಎಕೂಷೆ ಫೆಬ್ರವರಿ, ಲೋಕ ತಾಯಿ ನುಡಿ ದಿನ........

*****

"೨೧ನೇ ಫೆಬ್ರವರಿ ೧೯೫೨" ನಮ್ಮ ಪಕ್ಕದ ಬಾಂಗ್ಲಾದೇಶಿಗರ ಚರಿತ್ರೆಯಲ್ಲಿನ ಒಂದು ಐತಿಹಾಸಿಕ ದಿನ. ೧೯೪೭ ರಲ್ಲಿ ಭಾರತ ಮತ್ತು ಪಾಕಿಸ್ತಾನವೆಂಬ ಎರಡು ಹೊಸ ದೇಶಗಳು ಉದಯವಾದಾಗ, ಪೂರ್ವ ಬಂಗಾಳಿಗಳು ಪಾಕಿಸ್ತಾನದಲ್ಲಿ ಸೇರಿದ್ದರು. ಪೂರ್ವ ಬಂಗಾಳಿಗಳ ಈಗಿನ 'ಬಾಂಗ್ಲಾದೇಶ'ಅಂದು ಪೂರ್ವ ಪಾಕಿಸ್ತಾನವೆನಿಸಿಕೊಂಡಿತ್ತು. ಪಾಕಿಸ್ತಾನ ಸರ್ಕಾರದ ಆಡಳಿತಗಾರರು, 'ಉರ್ದು' ಪಾಕಿಸ್ತಾನದ ಅಧಿಕೃತ ಭಾಷೆ ಎಂದು ಘೋಶಿಸಿದರು.

ಭಾಷಾ ಸ್ವಾಭಿಮಾನಿಗಳಾದ ಪೂರ್ವ ಬಂಗಾಳಿಗರನ್ನು ಇದು ಸಹಜವಾಗಿ ಕೆರಳಿಸಿತ್ತು. ಅಲ್ಲಿನವರೆಗೆ ಬಂಗಾಳಿಗಳಿಗೆ, ಉರ್ದುವಿನ ತಲೆ-ಬುಡ ಸಹ ತಿಳಿದಿರಲಿಲ್ಲ. ಅವರ ಭಾಷೆ-ಸಂಸ್ಕೃತಿಯೇನಿದ್ದರೂ ಅದು ಕೇವಲ ಬಂಗಾಳಿ ಮಾತ್ರವಾಗಿತ್ತು. ಪಾಕಿಸ್ತಾನ ಉದಯವಾದ ಕೇವಲ ಆರು ತಿಂಗಳಿನಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಬಂಗಾಳಿ ಭಾಷ ಚಳುವಳಿ ಪ್ರಾರಂಭವಾಯ್ತು. ಆದರೆ ಪಾಕಿಸ್ತಾನದ ಆಡಳಿತಗಾರರು ಇದಕ್ಕೆ ಪೂರಕವಾಗಿ ಸ್ಪಂದಿಸದೆ ಉರ್ದುವನ್ನು ಬಂಗಾಳಿಗಳ ಮೇಲೆ ಹೇರಲು ಮುಂದಾದರು. ಆಗಿನ ಪಾಕಿಸ್ತಾನದ ಗವರ್ನರ್ ಜನರಲ್ ಜಿನ್ನಾ "ಪೂರ್ವ ಪಾಕಿಸ್ತಾನದ ಬಂಗಾಳಿಗಳ 'ಬಂಗಾಳಿ' ಭಾಷೆ ಕೇವಲ ಆ ಪ್ರಾಂತ್ಯದ ಭಾಷೆ, ಪಾಕಿಸ್ತಾನದ ಅಧಿಕೃತ, ಆಡಳಿತ, ರಾಷ್ಟ್ರ ಭಾಷೆ ಕೇವಲ ಉರ್ದು ಎಂದು ಘೋಶಿಸಿ, ಇದಕ್ಕೆ ವಿರೋಧ ವ್ಯಕ್ತಪಡಿಸುವವರು ಪಾಕಿಸ್ತಾನದ ಶತ್ರುಗಳು ಎಂಬ ಹೇಳಿಕೆ ನೀಡಿದಾಗ ಪೂರ್ವ ಬಂಗಾಳ ಹೊತ್ತಿ ಉರಿಯಿತು. ಅಲ್ಲಿಂದ ಬಂಗಾಳಿ ಭಾಷಾ ಚಳುವಳಿ ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಾ ಮುಂದುವರೆಯಿತು.

೨೧ ನೇ ಫೆಬ್ರವರಿ ೧೯೫೨ ರಂದು ಡಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಚಳುವಳಿಯನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ಯುವ ತವಕದಲ್ಲಿ ಅಲ್ಲಿನ ವಿಧಾನ ಸಭೆಗೆ ನುಗ್ಗಲು ಯತ್ನಿಸಿದರು. ಅಂದು ಚಳುವಳಿಗಾರರು-ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕಲು ಪೋಲಿಸರು ಡಾಕಾ ವಿಶ್ವವಿದ್ಯಾನಿಲಯದಲ್ಲಿ ಲಾಠಿ ಪ್ರಯೋಗ, ಅಶ್ರುವಾಯು ಸಿಡಿಸಿ ಕೊನೆಗೆ ಗುಂಡಿನ ಮಳೆಗೆರೆದರು. ಅಬ್ದುಲ್ ಬರಕತ್, ರಫೀಕುದ್ದೀನ್ ಅಹ್ಮದ್, ಶಫಿಯುರ್ ರಹಮಾನ್.. ಹೀಗೆ ಇನ್ನಿತರರು ಬಂಗಾಳಿ ಭಾಷೆಗೆ ಸಾರ್ವಭೌಮತೆ ದೊರಕಿಸಿಕೊಡಲು ಗುಂಡಿಗೆ ಎದೆಯೊಡ್ಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು. ಈ ಪ್ರಾಣತ್ಯಾಗ ಬಂಗಾಳಿಗಳ ಭಾಷಾ ಚಳುವಳಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದು ಇನ್ನೂ ತೀವ್ರತರವಾದ ಹೋರಾಟಗಳಿಗೆ ನಾಂದಿಯಾಯಿತು. ಕೊನೆಗೂ ಪಾಕಿಸ್ತಾನ ಆಡಳಿತ ೧೯೫೪ ರ ಮೇ ನಲ್ಲಿ ಉರ್ದುವಿನ ಜತೆಗೆ ಬಂಗಾಳಿಯನ್ನು ಸಹ ಅಧಿಕೃತ ಆಡಳಿತ ಭಾಷೆಯಾಗಿ ಘೋಷಿಸಿತು.

ನಂತರದಲ್ಲಿ ೧೯೭೧ ರ ಮಾರ್ಚ್ ನಲ್ಲಿ ಪೂರ್ವ ಬಂಗಾಳಿಗಳು, ಪಾಕಿಸ್ತಾನದ ಆಡಳಿತದಿಂದ ಹೊರಬಂದು "ಬಾಂಗ್ಲಾದೇಶ" ವೆಂಬ ಹೆಸರಿನಲ್ಲಿ ಸ್ವತಂತ್ರ ದೇಶವನ್ನು ಸ್ಥಾಪಿಸಿಕೊಂಡದ್ದು ಸಹ ಇತಿಹಾಸ. ೧೯೯೯ ರಲ್ಲಿ ಯುನೆಸ್ಕೋ, ಬಂಗಾಳಿಗಳ ಭಾಷಾ ಚಳವಳಿಯಲ್ಲಿ ಹುತಾತ್ಮರಾದವರನ್ನು ನೆನೆಯುವ ಸಲುವಾಗಿ ಹಾಗು ತಾಯಿನುಡಿಯ ಮಹತ್ವದ ಅರಿವನ್ನು ಪಸರಿಸಲು "ಫೆಬ್ರವರಿ ೨೧ನ್ನು" ಲೋಕ ತಾಯ್ನುಡಿಯ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.

*****


ತಮ್ಮ ತಾಯಿನುಡಿ ಬಂಗಾಳಿ ಕುರಿತಾದ ಬಂಗಾಳಿಗಳ ಸ್ವಾಭಿಮಾನದ ಹೋರಾಟ, ಪ್ರತಿವರ್ಷ ಫೆಬ್ರವರಿ ೨೧ ನ್ನು ಲೋಕ ತಾಯ್ನುಡಿ ದಿನವನ್ನಾಗಿ ಆಚರಿಸಲು ಯುನೆಸ್ಕೋ ನಿರ್ಧರಿಸಿದ ಹಿನ್ನಲೆ, ನುಡಿ ಹಬ್ಬ, ಹೀಗೆ ಭಾಷೆ ಕುರಿತಾದ ಹಲವು ಮಹತ್ವದ ವಿಷಯಗಳನ್ನು ಶ್ರೀ ಸುಗತ ಶ್ರೀನಿವಾಸ ರಾಜು ರವರು "ಏಕೂಷೆ ಫೆಭ್ರವರಿ ಲೋಕ ತಾಯ್ನುಡಿ ದಿನ" ಎಂಬ ತಮ್ಮ ಪುಟ್ಟ ಗ್ರಂಥದಲ್ಲಿ ಹಿಡಿದಿಟ್ಟಿದ್ದಾರೆ.

****

ಭಾಷೆಯೆಂಬುದು ಪ್ರದೇಶವೊಂದರಲ್ಲಿ ಬಳಸುವ ಸಂಪರ್ಕ ಸಾಧನ ಮಾತ್ರವಲ್ಲ. ಆದು ಆ ಪ್ರದೇಶದ ನಡೆ-ನುಡಿ, ಆಚಾರ-ವಿಚಾರ, ಸಂಸ್ಕೃತಿ-ಜೀವನ ಶೈಲಿಯ ಪ್ರತಿಬಿಂಬ. ಮನುಷ್ಯ ಅಭಿಮಾನ ಜೀವಿ,ಅವನ ಜೀವನದಲ್ಲಿ ಉಂಟಾಗುವ ಮುಖ್ಯವಾದ ಪ್ರಗತಿ ಅಭಿಮಾನದಿಂದಲೇ ಸಾಧನೆಯಾಗಬೇಕು. ದೇಶಾಭಿಮಾನ, ಕಲಾಭಿಮಾನ, ಆತ್ಮಾಭಿಮಾನದ ಜತೆಗೆ ಭಾಷಾಭಿಮಾನವೂ ಸಹ ಮನುಷ್ಯನ ಜೀವನದ ಉಸಿರಾಗಬೇಕು.

ಅ.ನ.ಕೃಷ್ಣರಾಯ

****

ಇವತ್ತು ಫೆಬ್ರವರಿ ೨೧, ಒಂದು ಭಾಷೆಯ ಉಳಿವಿಗಾಗಿ, ಬೆಳವಣಿಗೆಗಾಗಿ ಸರ್ವಸ್ವವನ್ನೂ ತ್ಯಾಗಮಾಡಿದ, ಜೀವ ತೆತ್ತ ಆ ಎಲ್ಲಾ ಹುತಾತ್ಮರನ್ನು ಒಮ್ಮೆ ನೆನೆಪಿಸಿಕೊಳ್ಳೋಣವೆ.......

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!

*****

Tuesday, February 2, 2010

ವಿನಯ್ ಕುಮಾರ್ ಮತ್ತು ಮನೀಶ್ ಪಾಂಡೆ ಯಾಕೆ ಹೊರಗುಳಿದರು........

*****

ಕಳೆದ ಕೆಲದಿನಗಳು ಹಜೀರಾ-ಸೂರತ್ (ಗುಜರಾತ್) ನಲ್ಲಿ ಇದ್ದೆ. ಹೋಟಲ್ ರೂಮಿನಲ್ಲಿ "ಟೈಮ್ಸ್ ಆಫ್ ಇಂಡಿಯಾ" ಅಹಮದಾಬಾದ್ - ಸೂರತ್ ಆವೃತ್ತಿಯ ಪತ್ರಿಕೆ ಸಿಗ್ತಿತ್ತು. ಟೈಮ್ಸ್ ಆಫ್ ಇಂಡಿಯಾದ ಈ ಆವೃತ್ತಿಯನ್ನು ಪ್ರತಿದಿನ ತಿರುವಿ ಹಾಕುವಾಗ ಗಮನಕ್ಕೆ ಬಂದದ್ದು ಗುಜರಾತಿಗಳಿಗೆ ಸಂಬಂಧಿಸಿದ ಸುದ್ದಿಗಳಿಗೆ ಇವರು ಕೊಡುತ್ತಿದ್ದ ಪ್ರಾಮುಖ್ಯತೆ! ಇಲ್ಲಿ ಲಗತ್ತಿಸಿರುವ ಮುಖ ಪುಟದ ಕೆಲವು ಅಗ್ರ ಸುದ್ದಿಗಳನ್ನು (Leading News) ಗಮನಿಸಿ..
**



**



**



**

ಯಾವುದೇ ರಾಜ್ಯದ ಯಾವುದೇ ಮಾಧ್ಯಮಗಳು ಅಲ್ಲಿನ ಸ್ಥಳೀಯ ಸುದ್ದಿಗಳಿಗೆ, ಅಲ್ಲಿನ ಒಳಿತನ್ನು ಬಿಂಬಿಸುವುದಕ್ಕೆ, ಅವರಿಗಾದ ಅನ್ಯಾಯದ ಪ್ರತಿಭಟನೆಗೆ ವೇದಿಕೆ ಒದಗಿಸುವುದಕ್ಕೆ ಒಟ್ಟಾರೆ ಆ ರಾಜ್ಯದ ಆಗು-ಹೋಗುಗಳಿಗೆ ಸ್ಪಂಧಿಸಿ ಬದ್ಧವಾಗಿರಬೇಕಾದದ್ದು ಸಹಜವಾದದ್ದೆ.

ಆದರೆ ಇದಕ್ಕೆ ವಿರುದ್ಧವಾಗಿರುವುದು ನಮ್ಮ ಕರ್ನಾಟಕದ ಇಂಗ್ಲೀಷ್ ಮಾಧ್ಯಮಗಳು. "ಅಪ್ಪಟ ಪ್ರತಿಭೆಗಳಾದ ವಿನಯ್ ಕುಮಾರ್ ಮತ್ತು ಮನೀಷ್ ಪಾಂಡೆ ಯಾಕೆ ಹೊರಗುಳಿದರು", "ವಿಜಯನಗರದ ಕೃಷ್ಣದೇವರಾಯರ ೫೦೦ ನೇ ವರ್ಷಾಚರಣೆ" ಹೀಗೆ ಕರ್ನಾಟಕದ ಯಾವುದೇ ಪ್ರಮುಖ ವಿಷಯಗಳು "ಯಾವುದೇ ಟೈಮ್ಸ್ " ನಲ್ಲಿ ಮುಖಪುಟದ ಸುದ್ಧಿಯಾಗಲಿಲ್ಲ.

ಆದರೆ ಕೃಷ್ಣದೇವರಾಯ ಕುರಿತಾದ ಬಣ್ಣ ಬಣ್ಣದ "ಜಾಹೀರಾತು" ಮಾತ್ರ ಈ ಪತ್ರಿಕೆಗಳಲ್ಲಿ ಕಂಡು ಬಂದದ್ದು ಸತ್ಯ!

ಬೆಂಗಳೂರಿನ ಇಂಗ್ಲೀಷ್ ಪತ್ರಿಕೆಗಳಿಗೂ ಕನ್ನಡಕ್ಕೂ ಒಂದು ರೀತಿಯ ಎಣ್ಣೆ - ಸಿಗೇಕಾಯಿ ಬಾಂಧವ್ಯವೆ! ಬೆಂಗಳೂರಿನಲ್ಲಿ ಕನ್ನಡ ಮಾತ್ರ ಏಕಿದೆ? ಬೆಂಗಳೂರಿನಲ್ಲಿ ಕನ್ನಡಿಗರಿರುವುದೇ ಶೇಕಡ ೩೦ ಮಂದಿ, ವಲಸಿಗರು ಕನ್ನಡ ಕಲಿಯಬೇಕಾದ ಅವಶ್ಯಕತೆಯಿಲ್ಲ ಎಂಬ ಸುದ್ಧಿಗಳಿಗೆ ಪ್ರಚಾರ ನೀಡುವುದಕ್ಕೆ ಮರೆಯುವುದಿಲ್ಲ.

ಇದು ಹೀಗ್ಯಾಕೆ ಎಂದು ನಮ್ಮ ಇಂಗ್ಲೀಷ್ ಮಾಧ್ಯಮದವರನ್ನು ವಿಚಾರಿಸಿ. "ಸಂಕುಚಿತರಾಗಬೇಡಿ" "ವಿಶ್ವ ಮಾನವರಾಗಿ" ಎಂದು ಬುದ್ಧಿವಾದ! ಸಿಗುವುದು ಗ್ಯಾರಂಟಿ.

ಇವರ ಬುದ್ಧಿವಾದವನ್ನು ನಾವು ಒಪ್ಪಿಕೊಳ್ಳುವುದಾದರೆ ಗುಜರಾತ್ ನ ಇಂಗ್ಲೀಷ್ ಮಾಧ್ಯಮದವರು ಸಂಕುಚಿತರೆ?

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!

*****

Monday, December 21, 2009

ಕನ್ನಡದ ಬದ್ಧತೆಯಿರುವವರನ್ನು ಆರಿಸಿ ಪಾಲಿಕೆಗೆ ಕಳಿಸಿ....

*****

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಪತ್ರಿಕೆ-ನಿಯತಕಾಲಿಕೆ-ಪುಸ್ತಕಗಳ ಮಾರಾಟ ಸ್ಥಗಿತಗೊಂಡಿರುವ ಬಗ್ಗೆ ಹಿಂದೆ ಹೇಳಿದ್ದೆ.

ಕೆಲ ದಿನಗಳ ಹಿಂದೆ, ನಿಲ್ದಾಣದ ಒಳಾಂಗಣದಲ್ಲಿ (ಸುರಕ್ಷೆ ತಪಾಸಣೆಯ ನಂತರ) ವಿಮಾನ ನಿಲ್ದಾಣ ಪ್ರಾಧಿಕಾರ ಉಚಿತವಾಗಿ ಪ್ರಯಾಣಿಕರ ಓದಿಗಾಗಿ ಇರಿಸಿದ್ದ ಪತ್ರಿಕೆಗಳ ಅಡ್ಡಣಿಗೆಯಲ್ಲಿ, ಇಂಗ್ಲೀಷ್ ಪತ್ರಿಕೆಗಳ ನಡುವೆ "ವಿಜಯ ಕರ್ನಾಟಕ" ಕಾಣಿಸಿಕೊಂಡಿತ್ತು. ಬೆಂಗಳೂರಿನಿಂದ ಪ್ರಕಟವಾಗುವ ಎಲ್ಲಾ ಇಂಗ್ಲೀಷ್ ಪತ್ರಿಕೆಗಳೂ ಇಲ್ಲಿ ಉಚಿತವಾಗಿ ಲಭ್ಯವಾಗುವಂತೆ ಮಾಡಿರುವ ನಿಲ್ದಾಣ ಪ್ರಾಧಿಕಾರ ಕನ್ನಡದ್ದು ಮಾತ್ರ ಏಕೆ ಒಂದೇ ಪತ್ರಿಕೆ ಮಾತ್ರ ಇರಿಸಿದೆ ಎಂದು ಅವರನ್ನು ಪ್ರಶ್ನಿಸಿದ್ದೆ. ಇವತ್ತು ಇದೇ ಜಾಗದಲ್ಲಿ ವಿ.ಕ ಪಕ್ಕ "ಪ್ರಜಾವಾಣಿ" ಸಹ ಕಂಡು ಬಂತು.



ಆದಷ್ಟು ಬೇಗ ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ಹೊಸದಿಗಂತ, ಸಂಜೆವಾಣಿ, ಈಸಂಜೆ ಹೀಗೆ ಎಲ್ಲಾ ಕನ್ನಡ ಪತ್ರಿಕೆಗಳು ಅಲ್ಲಿ ದೊರೆಯುವಂತಾಗಬೇಕು. ಇಲ್ಲಿಂದ ಪ್ರಯಾಣಿಸುವ ಕನ್ನಡ ಗ್ರಾಹಕರು ಜಾಗೃತರಾಗಿ ಕನ್ನಡ ಪತ್ರಿಕೆಗಳಿಗೆ ಬೇಡಿಕೆ-ಆಗ್ರಹ ಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ

*****

ಮತ್ತೊಂದು ವಿಪರ್ಯಾಸವೆಂದರೆ ಇಲ್ಲಿ ಪ್ರಕಟವಾಗುವ ಜಾಹೀರಾತುಗಳು. ಇದು ಜಾಹೀರಾತು ಹೊರಡಿಸಬಯಸುವವರು ಮತ್ತು ಅವರನ್ನು ದಾರಿ ತಪ್ಪಿಸುವ ಜಾಹೀರಾತು ಸಂಸ್ಥೆಗಳ ಧಾರ್ಷ್ಟ್ಯ ಪ್ರದರ್ಷನ ಎಂದು ಹೇಳಬಹುದಾಗಿದೆ.



ಹೇಳಿ ಈ ಜಾಹೀರಾತು ಇಂಗ್ಲೀಷ್ ಲಿಪಿ ಬಲ್ಲ ಹಿಂದಿಯವರಿಗ, ಅಥವ ಕನ್ನಡಿಗರು ಹಿಂದಿಯನ್ನು ಇಂಗ್ಲೀಷ್ ನಲ್ಲಿ ಓದಿ ನಮ್ಮ ಬಗ್ಗೆ ತಿಳಿದುಕೊಳ್ಳಲಿ ಎಂಬ ಇವರ ಉದ್ಧಟತನವ? ನಾರ್ವೇ ದೇಶದ ಮೂಲದ "ಯೂನಿನಾರ್" ಎಂಬ ಈ ಮೊಬೈಲ್ ಸಂಸ್ಥೆ ತನ್ನ ದೇಶದ ವಿಮಾನ ನಿಲ್ದಾಣದಲ್ಲಿ ಇದೇ ರೀತಿ ಜಾಹೀರಾತು ಹೊರಡಿಸಲು ಈ ಜಾಹೀರಾತು ಸಂಸ್ಥೆಗಳಿಗೆ ಅವಕಾಶ ಕೊಡುತ್ತದೆಯ? ಬೆಂಗಳೂರಿಗೆ ಬಂದು ಹೋಗುವ ಪರಭಾಷಿಕರಿಗಿಂತ ನಾರ್ವೇ ವಿಮಾನ ನಿಲ್ದಾಣಗಳಲ್ಲಿ ಬಂದು ಹೋಗುವ ಹೆಚ್ಚಿನ ನಾರ್ವೇತರರನ್ನು ನಾನು ನೋಡಿದ್ದೇನೆ!

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯಾರೇ ಜಾಹೀರಾತು ಹೊರಡಿಸಲಿ ಅದು ಕನ್ನಡಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಬೇಕಾಗಿರುವ ಜಾಹೀರಾತಾಗಿರಬೇಕು. ಇವರ ಜಾಹೀರಾತನ್ನು ಕನ್ನಡದಲ್ಲಿ "ಇದು ನನ್ನ ನಂಬರ್" ಅಂತ ಮುಂಬೈನ 'ಛತ್ರಪತಿ ಶಿವಾಜಿ' ಅಥವ ಚೆನ್ನೈ ನ 'ಅಣ್ಣಾ' ವಿಮಾನ ನಿಲ್ದಾಣದಲ್ಲಿ ಮಾಡಿಸಿ ಅಂತ ಹೇಳ್ತಿಲ್ಲ. ಅಲ್ಲಿ ಕ್ರಮವಾಗಿ ಮರಾಠಿ ಮತ್ತು ತಮಿಳನಲ್ಲಿ ಮಾಡಿಸಬೇಕಾದ್ದು ಜಾಹೀರಾತು ಸಂಸ್ಥೆಗಳ ಹೊಣೆಗಾರಿಕೆ.

ಅಲ್ಲಲ್ಲಿಯ ಸ್ಥಳೀಯ ಭಾಷೆ, ಜನಾಂಗಕ್ಕೆ ಆಧ್ಯತೆ ಎಂಬುದು ಪ್ರಚಲಿದಲ್ಲಿರುವಂತೆ, ಕನ್ನಡ ನಾಡಿನ ನೆಲ, ಜಲ, ಸಂಪನ್ಮೂಲ, ಉದ್ದಿಮೆಗಳು, ಉದ್ಯೋಗಗಳು, ವ್ಯವಸ್ಥೆಗಳು... ಇರುವುದು ಕನ್ನಡಿಗರ ಏಳಿಗೆಗಾಗಿ ಮತ್ತು ಸೌಕರ್ಯಕ್ಕಾಗಿ, ಹಾಗಾಗಿ ಕರ್ನಾಟಕದಲ್ಲಿನ ಯಾವುದೇ ಹೊಸ ವ್ಯವಹಾರದಲ್ಲಿ ಕನ್ನಡ ಅನುಷ್ಠಾನವಾಗಬೇಕೆಂಬುದು ಕನ್ನಡಿಗನ ಸಹಜ ಬೇಡಿಕೆಗೆ ಪೂರಕವಾಗುತ್ತದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಆಧ್ಯತೆ ಒದಗಿಸುವ ಮೂಲಕ, ವ್ಯವಹಾರಸ್ಥರು ಕನ್ನಡಿಗನ ಮನ್ನಣೆಗೆ ಪಾತ್ರವಾಗುತ್ತಾರೆ. (ಹಾಗೆಯೆ ಇತರ ರಾಜ್ಯಗಳಲ್ಲಿ ಆಯಾ ರಾಜ್ಯ ಭಾಷೆಗಳಿಗೆ ಪ್ರಧಾನತೆ ಒದಗಿಸಿ ಅಲ್ಲಿನ ಸ್ಥಳೀಯರ ಮನ ಗೆಲ್ಲುವುದು ವ್ಯವಹಾರದ ಒಂದು ದಾರಿ).

ಜಾಹೀರಾತುಗಳಲ್ಲಿ ಕನ್ನಡ ಕಡ್ಡಾಯಗೊಳಿಸಿರುವ ಬಗ್ಗೆ ನಮ್ಮ ಸರ್ಕಾರದ ಆದೇಶವಿದೆ. ನಮ್ಮ ಸರ್ಕಾರದ ಎಲ್ಲಾ ಮಂತ್ರಿವರೇಣ್ಯರು, ಆಡಳಿತಗಾರರು ಇಲ್ಲಿ ಓಡಾಡುತ್ತಾರೆ. ಇಲ್ಲಿನ ಒಳಾಂಗಣದಲ್ಲಿನ ಒಂದೇ ಒಂದು ಜಾಹೀರಾತಿನಲ್ಲಿ ಕನ್ನಡವಿಲ್ಲ!. ತಲೆಯೆತ್ತಿ ಒಮ್ಮೆ ಇಂತಹುವುಗಳನ್ನು ಅವರು ನೋಡಿ ಕ್ರಮ ಎಂದು ತೆಗೆದುಕೊಳ್ಳುವರೋ ಎಂಬುದೆ ಪ್ರಶ್ನೆಯಾಗಿದೆ. ಅಥವ ಇಂತಹುವಗಳನ್ನು ನೋಡಿ ಸರಿಪಡಿಸುವಂತಹವರನ್ನು ಮಾತ್ರ ಆರಿಸಿ ಕಳುಹಿಸುವ ಜವಾಬ್ದಾರಿ ಸಹ ನಮ್ಮ ಮೇಲಿದೆ.

ಇನ್ನೇನು ದೊಡ್ಡ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹತ್ತಿರದಲ್ಲಿದೆ. ಬೆಂಗಳೂರಿನಲ್ಲಿ ಇರುವ ಎಲ್ಲಾ ಜಾಹೀರಾತುಗಳಲ್ಲಿ, ನಾಮಫಲಕಗಳಲ್ಲಿ, ಎಲ್ಲಾ ರೀತಿಯಲ್ಲಿ ಕನ್ನಡಕ್ಕೆ ಮಾನ್ಯತೆ ದೊರಕಬೇಕೆ? ಹಾಗಾದ್ರೆ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಬದ್ಧತೆಯಿರುವವರನ್ನು ಆರಿಸಿ ಪಾಲಿಕೆಗೆ ಕಳಿಸಿ.

*****

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!

*****

Monday, December 7, 2009

ಹೈದರಾಬಾದು ರಾಜ್ಯ ನೋಟಿನಲ್ಲಿ ಕನ್ನಡ, ಈಗಿನ ಆಡಳಿತದಲ್ಲಿ!

*****

ಗಮನಿಸಿ, "ಹಳೆಯ ಒಂದು ರೂಪಾಯಿಯ ಚಿತ್ರ".




ಆದರೆ ಇದು ಭಾರತ ಸರ್ಕಾರ ಹೊರಡಿಸಿದ್ದಲ್ಲ! ಕನ್ನಡದಲ್ಲಿ ಒಂದು ರೂಪಾಯಿ ಎಂದು ಬರೆದಿರುವುದರಿಂದ ನಮ್ಮ ಸರ್ಕಾರ ಏನಾದ್ರೂ ಮಾಡಿಸಿರಬಹುದು ಎಂದು ಎಲ್ಲರಿಗೂ ಅನ್ನಿಸಿರಬಹುದು. ಅಲ್ಲ, ಆಗಿನ ನಿಜಾಮರ ಹೈದರಾಬಾದು ರಾಜ್ಯದ ಆಡಳಿತದಲ್ಲಿ ಚಲಾವಣೆಯಲ್ಲಿದ್ದ ಒಂದು ರೂಪಾಯಿಯ ಚಿತ್ರ. ಹೌದು ಆ ಪ್ರದೇಶದಲ್ಲಿ ವ್ಯವಹರಿಸುವವ ಅನುಕೂಲಕ್ಕಾಗಿ ಅಂದು ಆ ಪ್ರದೇಶದಲ್ಲಿ ಪ್ರಚಲಿತವಿದ್ದ ಭಾಷೆಗಳಲ್ಲೇ ನೋಟಿನ ಮೇಲೆ ಬರೆಸಿದ್ದರು. ರಾಯಚೂರು, ಗುಲ್ಬರ್ಗ, ಬೀದರ್ ಹೀಗೆ ಅಚ್ಚ ಕನ್ನಡದ ಪ್ರದೇಶಗಳು ಆಗ ಹೈದರಾಬಾದು ರಾಜ್ಯದ ಆಳ್ವಿಕೆಯಲ್ಲಿದ್ದು ಅಲ್ಲಿ ನೆಲೆಸಿದ್ದ ಕನ್ನಡಿಗರ ಅನುಕೂಲಕ್ಕಾಗಿ ನೋಟಿನ ಮೇಲೆ ಕನ್ನಡವನ್ನು ಸಹ ಬಳಸಿದ್ದರು.

ಮತ್ತೊಂದು ಚಿತ್ರ ಗಮನಿಸಿ.




ಇದು ೧೯೩೦, ಮೈಸೂರು ಸಂಸ್ಥಾನದಲ್ಲಿನ ಪ್ರದೇಶಗಳಲ್ಲಿನ ನೋಂದಣಿ ಕೆಲಸಗಳಿಗಾಗಿ ಪ್ರಚಲಿತದಲ್ಲಿದ್ದ ಛಾಪಾ ಕಾಗದ. ಆಗ ಛಾಪಾ ಕಾಗದದ ಮೇಲಿನ ಬರಹ, ನೋಂದಣಿ ಕಚೇರಿಗಳಲ್ಲಿನ ಮೊಹರು ಎಲ್ಲೆಡೆ ಕನ್ನಡ ವ್ಯಾಪಕವಾಗಿ ಬಳಸಲ್ಪಡುತ್ತಿತ್ತು.

ಇವೆಲ್ಲಾ ಮುಗಿದು ಭಾರತ ದೇಶ ಸ್ಥಾಪನೆಯಾಯ್ತು. ಭಾಷಾವಾರು ಪ್ರಾಂತ್ಯಗಳಾಗಿ ಪ್ರದೇಶಗಳನ್ನು ವಿಂಗಡಿಸಲಾಯ್ತು. ಬಹುತೇಕ ಕನ್ನಡ ಮಾತನಾಡುವವರೆಲ್ಲ ಮೈಸೂರು ರಾಜ್ಯ ಹೆಸರಿನಲ್ಲಿ ಒಂದಾದರು. ಆಮೇಲೆ ಮೈಸೂರು ಕರ್ನಾಟಕವೂ ಆಯ್ತು. ಇಲ್ಲಿನ ಆಡಳಿತದ ಎಲ್ಲಾ ಹಂತಗಳಲ್ಲಿ ಕಡ್ಡಾಯ ಕನ್ನಡ ಬಳಕೆಯ ಕಾನೂನು, ಮತ್ತೊಂದು ಮಗದೊಂದು ಆಯ್ತು. ಆದರೆ ನಂತರದಲ್ಲಿ ಕನ್ನಡಿಗರು ಉಪಯೋಗಿಸಬೇಕಾಗಿ ಬಂದ ಛಾಪಾ ಪತ್ರದ ಕಥೆ ಏನಾಯ್ತು?



ನಂತರ ಅದು ಇದೂ ಹಗರಣಗಳು ನಡೆದು ಇದನ್ನು ಈಗ ಬ್ಯಾಂಕುಗಳ ಮೂಲಕ ವಿತರಿಸುವ ಕೆಲಸ ಶುರುವಾಗಿದೆ.

ಮೊನ್ನೆ ಗೆಳೆಯ ವಿವೇಕ್ ತಮ್ಮ ನೋಂದಣಿ ಕೆಲಸವೊಂದರ ಸಲುವಾಗಿ ಪಡೆದ ಛಾಪಾ ಕಾಗದದಲ್ಲಿ ಬಂದೊದಗಿರುವ ಪರಸ್ಥಿತಿ ಬಗ್ಗೆ ಗಮನಿಸಲು ಅದರ ಪ್ರತಿ ಕಳುಹಿಸಿದ್ದರು.




ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮೂಲಕ ವಿತರಿಸಲ್ಪಟ್ಟ, ಕರ್ನಾಟಕ ಸರ್ಕಾರದ ಹೆಸರಿರುವ, ಆದರೆ ಒಂದೇ ಒಂದು ಕನ್ನಡ ಅಕ್ಷರವಿಲ್ಲದ ಛಾಪಾ ಪತ್ರ ಇದಾಗಿದೆ.


ಇದು ಕೇವಲ ಛಾಪಾ ಕಾಗದದ ಕಥೆ ಮಾತ್ರವಲ್ಲ. ಕನ್ನಡಿಗ ಜನ ಸಾಮಾನ್ಯರು ಇವತ್ತು ಬ್ಯಾಂಕು, ವಿಮಾ ಸಂಸ್ಥೆ, ಹೋದರೆ ಅರ್ಜಿ, ನಮೂನೆ ಕನ್ನಡದಲ್ಲಿರುವುದಿಲ್ಲ. ಕನ್ನಡದಲ್ಲಿ ಮಾತನಾಡಿದರೆ ಸೇವೆ ನಿರಾಕರಣೆಯಾಗುತ್ತದೆ. {ಇಂತಹ ಕಡೆ ಹೋದರೆ ಕೇವಲ ಇಂಗ್ಲೀಷ್-ಹಿಂದಿಯಲ್ಲಿ ಮಾತನಾಡಬೇಕಾಗುವ ವಾತಾವರಣ ಅಲ್ಲಿರುತ್ತೆ).

ಇವತ್ತು ಕನ್ನಡದ "ಭಾರತೀಯ ಅಂಚೆ" ಹೆಸರು ಮಾಯವಾಗಿ ಅದು 'INDIA POST', ಹಿಂದಿಯ 'ಭಾರತೀಯ ಡಾಕ್' ಆಗಿ ಪರಿವರ್ತನೆಯಾಗಿದೆ.




ಬೆಂಗಳೂರಿನ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಹೆಸರಿನ ಲಾಂಛನದಿಂದ ನಿಧಾನವಾಗಿ ಕನ್ನಡ ಮಾಯವಾಗಿದೆ. ನಮ್ಮ ಕರ್ನಾಟಕ ಸರ್ಕಾರ ಕನ್ನಡ ಅನುಷ್ಠಾನ ವರ್ಷ ಅಂತ ಘೋಷಣೆ ಮಾಡತ್ತೆ! ಇದರ ಜತೆಗೆ ಕನ್ನಡ ಅಭಿವೃದ್ಢಿ ಎಂಬ ಪ್ರಾಧಿಕಾರವೊಂದು ಕನ್ನಡಿಗರ ರಕ್ಷಣೆಗಿದೆ! ಆದರೆ ಎಲ್ಲೆಡೆ ಕನ್ನಡ ಅನುಷ್ಠಾನ ಮಾಡುವ ಇಚ್ಛಾಶಕ್ತಿ ಮಾತ್ರ ಇವರ್ಯಾರಲ್ಲೂ ಕಂಡು ಬರುತ್ತಿಲ್ಲ.

*****

ಜಿ. ಎಸ್. ಮೇಲ್ಕೋಟೆ: ಮೇಲಿನ ಒಂದು ರೂಪಾಯಿ ಚಿತ್ರದಲ್ಲಿನ ಸಹಿ ನೋಡಿ. ನಿಜಾಮರ ಹೈದರಾಬಾದು ರಾಜ್ಯ ಆಡಳಿತದಲ್ಲಿ ತೊಡಗಿಸಿಕೊಂಡಿದ್ದ ಒಬ್ಬ ಕನ್ನಡಿಗ. ಆ ಸಮಯದಲ್ಲಿ ಅಲ್ಲಿ ಪ್ರಚಲಿತವಿದ್ದ (ಕನ್ನಡವನ್ನೂ ಸೇರಿ) ಭಾಷೆಗಳನ್ನು ನೋಟಿನಲ್ಲಿ ಸೇರಿಸಲು ಬಹುಷ: ಸಲಹೆ ನೀಡಿದ್ದು ಇವರೆ ಇರಬಹುದು! ಹೈದರಾಬಾದಿನ ಕನ್ನಡ ಸಾಹಿತ್ಯ ಕೂಟವನ್ನು ಕಟ್ಟಿ ಬೆಳೆಸಿದವರು. ನಂತರದಲ್ಲಿ ಇವರು ಹೈದರಾಬಾದ್ನಿಂದ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿ ಭಾರತ ಸರ್ಕಾರದಲ್ಲೂ ಸೇವೆ ಸಲ್ಲಿಸಿದ್ದವರು.

*****

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!

****

Sunday, November 29, 2009

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಪತ್ರಿಕೆ!

*****

*****
೨೦೦೮ರ ಮೇ ತಿಂಗಳಿನಲ್ಲಿ ಬೆಂಗಳೂರಿನ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶುರುವಾದಾಗ ಅಲ್ಲಿನ ಕನ್ನಡ ವಾತಾವರಣದಲ್ಲಿನ ಕೊರತೆಗಳಲ್ಲಿ, ನಿಲ್ದಾಣದಲ್ಲಿ ಕನ್ನಡ ಪತ್ರಿಕೆಗಳು ಅಲಭ್ಯವಾದದ್ದು ಸಹ ಒಂದು. ನಿಲ್ದಾಣದಲ್ಲಿ ಚೆಕ್ ಇನ್ ಸಮಯದಲ್ಲಿ ವಿಮಾನ ಸಂಸ್ಥೆಯವರು (ಜೆಟ್, ಕಿಂಗ್ ಫಿಷರ್, ಎಮಿರೇಟ್ಸ್, ಸಿಂಗಪೂರ್ ಏರ್ ಲೈನ್ಸ್ ... ಹೀಗೆ) ಉಚಿತವಾಗಿ ಆ ದಿನದ ವಾರ್ತಾ ಪತ್ರಿಕೆ ಒದಗಿಸುವ ಪರಿಪಾಠವಿದೆ. ಎರಡು ಮಾತಿಲ್ಲ ಇವರು ಒದಗಿಸುವ ಪತ್ರಿಕೆಗಳೆಲ್ಲ ಆ ದಿನದ ಇಂಗ್ಲೀಷ್ ದೈನಿಕಗಳು. ಹಾಗೆಯೆ ಒಳಾಂಗಣದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದವರು ಪತ್ರಿಕೆಗಳನ್ನು ಅಲ್ಲಲ್ಲಿ ಉಚಿತವಾಗಿ ದೊರಕುವ ವ್ಯವಸ್ಥೆ ಮಾಡಿದ್ದಾರೆ. ವಿಮಾನ ಸಂಸ್ಥೆಯವರು ಹಾಗು ವಿಮಾನ ನಿಲ್ದಾಣ ಪ್ರಾಧಿಕಾರ ಈ ಪತ್ರಿಕೆಗಳನ್ನು ಕೊಂಡು ಪ್ರಯಾಣಿಕರಿಗೆ ಒದಗಿಸುತ್ತಿದ್ದಾರೋ ಅಥವ ವಾರ್ತಾ ದೈನಿಕ ಸಂಸ್ಥೆಗಳವರು ಮಾರಾಟ ಉತ್ತೇಜಕ ಯೋಜನೆಯಡಿಯಲ್ಲಿ ಉಚಿತವಾಗಿ ಇದನ್ನು ವಿಮಾನ ಸಂಸ್ಥೆಗಳಿಗೆ ಒದಗಿಸುತ್ತಿದ್ದಾರೋ ವಿವರಗಳು ಗೊತ್ತಿಲ್ಲ. ಹಾಗೊಂದು ವೇಳೆ ವಿಮಾನ ಯಾನ ಸಂಸ್ಥೆಯವರು ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರ ಕೇವಲ ಇಂಗ್ಲೀಷ್ ಪತ್ರಿಕೆಗಳನ್ನು ಕೊಂಡು ಪ್ರಯಾಣಿಕರಿಗೆ ಉಚಿತವಾಗಿ ಕೊಡುತ್ತಿದ್ದರೆ ಇವರು ಕನ್ನಡ ಗ್ರಾಹಕರನ್ನು ಕಡೆಗಣಿಸುತ್ತಿದ್ದಾರೆ ಎಂಬ ಅಭಿಪ್ರಾಯಕ್ಕೆ ಬರಬಹುದಾಗಿದೆ.

****

ಬೆಂಗಳೂರಿನಿಂದ ಇತರ ರಾಜ್ಯದ ನಗರಗಳಿಗೆ-ಹೊರದೇಶಕ್ಕೆ ಹೋಗುವ ವಿಮಾನಗಳು ಹಾಗಿರಲಿ, ಇವತ್ತಿಗೂ ಬೆಂಗಳೂರು-ಮಂಗಳೂರು, ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚರಿಸುವ ವಿಮಾನದಲ್ಲಿ ಕನ್ನಡ ಪತ್ರಿಕೆಗಳು, ಕನ್ನಡದಲ್ಲಿ ಗ್ರಾಹಕ ಸೇವೆ (ವಿಮಾನದಲ್ಲಿನ ಘೋಷಣೆ, ಸುರಕ್ಷತೆ ಮಾಹಿತಿ, ಇತ್ಯಾದಿ) ದೊರಕುದಿರುವುದು ವಿಪರ್ಯಾಸವಾಗಿದೆ. ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರ ೨೦೦೮-೨೦೦೯ನೇ ಸಾಲಿನಲ್ಲಿ ಕೈಗೊಂಡ ಕಾರ್ಯಕ್ರಮದ ಪ್ರಗತಿಯಲ್ಲಿ! ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವಂತೆ ಕೋರಿ ಪತ್ರ ಬರೆಯಲಾಗಿದೆ ಎಂದಿದೆ. ಆದರೆ ಯಾವ ರೀತಿ ಇಲ್ಲಿ ಕನ್ನಡ ಅನುಷ್ಠಾನವಾಗಿದೆ ಎಂಬ ಮಾಹಿತಿ ತರಿಸಿಕೊಂಡು ವರದಿ ಮಾಡುವ ಬಗ್ಗೆ ಯೋಚಿಸಿದಂತೆ ಕಂಡು ಬಂದಿಲ್ಲ.

****

ಮೊಟ್ಟ ಮೊದಲಿಗೆ ಇಲ್ಲಿ ಕನ್ನಡ ಪತ್ರಿಕೆ ದೊರೆಯುವಂತೆ ಮಾಡಿದ್ದು ಕನ್ನಡಪ್ರಭ ಬಳಗ. ನಿಲ್ದಾಣದ ಒಳಾಂಗಣದಲ್ಲಿ "ಲೈಪ್ ಸ್ಟೈಲ್" ಎಂಬ ಪುಸ್ತಕಗಳ ಮಳಿಗೆಯಲ್ಲಿ ಕನ್ನಡಪ್ರಭ ಮಾರಾಟವಾಗುತ್ತಿತ್ತು.




ನಂತರದಲ್ಲಿ ಪ್ರಜಾವಾಣಿ, ಉದಯವಾಣಿ, ಸುಧಾ, ಮಯೂರ, ಚಂಪಕ, ಗೃಹಶೋಭ ಹೀಗೆ ಕನ್ನಡ ಪತ್ರಿಕೆಗಳು ಅಲ್ಲಿನ ಸ್ಟಾಂಡ್ ನಲ್ಲಿ ಕಂಡು ಬಂದವು. ಈ ವರ್ಷದ ಅಕ್ಟೋಬರ್ ನವರೆಗೆ ನಾನು ಕಂಡಂತೆ ಈ ಪತ್ರಿಕೆಗಳು ಅಲ್ಲಿ ಲಭ್ಯವಿದ್ದವು. ಈ ನವಂಬರ್ ನಲ್ಲಿ ನಾಲ್ಕೈದು ಸಲ ನಾನು ಇಲ್ಲಿಂದ ಪ್ರಯಾಣಿಸುವಾಗ ಕಂಡದ್ದು ಕನ್ನಡ ಪತ್ರಿಕೆಗಳ ಮಾರಾಟ ಇಲ್ಲಿ ಮಾಯವಾಗಿರುವುದು. ಕೇಳಿದಾಗ ತಿಳಿದದ್ದು ಅಂಗಡಿಯವರು ಕನ್ನಡ ಪತ್ರಿಕೆ ಮಾರಾಟ ಮಾಡುವುದನ್ನು ನಿಲ್ಲಿಸಿದ್ದಾರಂತೆ. ಇದು ಈ ವರ್ಷದ ರಾಜ್ಯೋತ್ಸವಕ್ಕೆ ಕನ್ನಡ ಪ್ರಯಾಣಿಕರಿಗೆ ದೊರೆತಿರುವ ಕೊಡುಗೆ! ಅದರೆ ಇಂಗ್ಲೀಷ ಜತೆಗೆ ಈಗಲೂ ಇಲ್ಲಿ ತಮಿಳು, ತೆಲುಗು, ಮಲಯಾಳಿ, ಹಿಂದಿ ಪತ್ರಿಕೆಗಳು ಮಾರಾಟಕ್ಕೆ ಲಭ್ಯವಿದೆ.

****

ಮತ್ತೊಮ್ಮೆ ಮೊನ್ನೆ ೧೭ ನೇ ನವಂಬರ್ ೨೦೦೯ ರಂದು ಇಲ್ಲಿಂದ ಪ್ರಯಾಣಿಸುವಾಗ ನಿಲ್ದಾಣದ ಒಳಾಂಗಣದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರ ಉಚಿತವಾಗಿ ಪ್ರಯಾಣಿಕರ ಓದಿಗಾಗಿ ಇರಿಸಿದ್ದ ಪತ್ರಿಕೆಗಳ ಅಡ್ಡಣಿಗೆಯಲ್ಲಿ, ಇಂಗ್ಲೀಷ್ ಪತ್ರಿಕೆಗಳ ನಡುವೆ ಮತ್ತೊಮ್ಮೆ ಕನ್ನಡ ಪತ್ರಿಕೆಯೊಂದು ಕಂಡು ಬಂದದ್ದು "ಲವಲVK"! ಮೂಡಿಸಿತು. ಸುಮಾರು ಪ್ರಯಾಣಿಕರು ವಿ.ಕ. ಕೈಲಿ ಹಿಡಿದು ಒದುತ್ತಿದ್ದುದು ಸಹ ಕಂಡು ಬಂತು. ಆದರೆ ಸಹಜವಾಗಿ ಮತ್ತೊಂದು ಪ್ರಶ್ನೆ ಎದ್ದಿತು. ಬೆಂಗಳೂರಿನಿಂದ ಪ್ರಕಟವಾಗುವ ಎಲ್ಲಾ ಇಂಗ್ಲೀಷ್ ಪತ್ರಿಕೆಗಳೂ ಇಲ್ಲಿ ಉಚಿತವಾಗಿ ಲಭ್ಯವಾಗುವಂತೆ ಮಾಡಿರುವ ನಿಲ್ದಾಣ ಪ್ರಾಧಿಕಾರ ಕನ್ನಡದ್ದು ಮಾತ್ರ ಏಕೆ ಒಂದೇ ಪತ್ರಿಕೆ ಮಾತ್ರ ಇರಿಸಿದೆ?

****

ಪ್ರತಿನಿತ್ಯ ಅನೇಕ ಕನ್ನಡಿಗರು ಸಹ ಈ ನಿಲ್ದಾಣದಿಂದ ಪ್ರಯಾಣ ಮಾಡುತ್ತಾರೆ. ಅವರೆಲ್ಲರೂ ಈ ಕುರಿತು ಕನ್ನಡ ಗ್ರಾಹಕ ಸೇವೆ ದೃಷ್ಟಿಯಿಂದ ಯೋಚಿಸಬೇಕಾದ್ದು ಅಗತ್ಯವಿದೆ. ಯಾವುದೇ ವಿಮಾನದಲ್ಲಿ ನಾವು ಪ್ರಯಾಣಿಸಿದಾಗ [ಬೆಂಗಳೂರಿನಿಂದ ಹೊರಡುವ / ಬೆಂಗಳೂರಿಗೆ ಬರುವ]ಕನ್ನಡ ಪತ್ರಿಕೆ ಕೇಳಬೇಕು. ಅವರ ಗ್ರಾಹಕ ಮರುಮಾಹಿತಿ ಪತ್ರದಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ದೊರಕದಿರುವ ಬಗ್ಗೆ ದೂರು ದಾಖಲಿಸಬೇಕು. ಈ ರೀತಿ ಕನ್ನಡ ಪ್ರಯಾಣಿಕರಿಂದ ಸಹ ನಿಲ್ದಾಣದಲ್ಲಿ / ವಿಮಾನದಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ದನಿಗೂಡಬೇಕಿದೆ . ಆಗ್ರಹಿಸುವುದರ ಮೂಲಕ ಕನ್ನಡ ಪತ್ರಿಕೆಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸುವ ಅಗತ್ಯದ ಜವಾಬ್ದಾರಿಯೂ ನಮ್ಮ ಮೇಲೆ ಇದೆ!


ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!

Tuesday, November 24, 2009

ನಾವು ಮೊದಲಿಗೆ ಕನ್ನಡಿಗರೋ! ಅಥವ ಭಾರತೀಯರೋ!

****

"ನಾನು ಮೊದಲು ಭಾರತೀಯ, ಆನಂತರ ಮರಾಠಿಗ, ನಾನು ಮರಾಠಿಗನಾಗಿರುವುದಕ್ಕೆ ಹೆಮ್ಮೆಯಿದೆ, ಜತೆಗೆ ಮುಂಬೈ ಕೇವಲ ಮರಾಠಿಗರದು ಮಾತ್ರವಲ್ಲ ಎಲ್ಲರಿಗೂ ಸೇರಿದ್ದು". ಇತ್ತೀಚೆಗೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತನ್ನ ಕ್ರಿಕೆಟ್ ಜೀವನದ ೨೦ನೇ ವರ್ಷ ಪೂರೈಸಿದ ಸಂದರ್ಭದಲ್ಲಿ ನೀಡಿದ ಹೇಳಿಕೆ!

ಶಿವಸೇನೆಯ ಪ್ರಮುಖ ಬಾಳ ಠಾಕ್ರೆ "ಸಚಿನ್ ನ ಮೇಲಿನ ಹೇಳಿಕೆ ಮರಾಠಿಗರ ಮನಸ್ಸು ನೋಯಿಸಿದೆ, ಈ ರೀತಿಯ ಹೇಳಿಕೆಯ ಮೂಲಕ ಸಚಿನ್ ಮರಾಠಿ ಪಿಚ್ ನಲ್ಲಿ ರನ್ ಔಟ್ ಆಗಿದ್ದಾರೆ" ಎಂಬ ವ್ಯಂಗ್ಯಭರಿತ-ತೀಕ್ಷ್ಣ ಪ್ರತಿಕ್ರಿಯೆ ಇಡೀ ದೇಶಭಕ್ತರ! ಕೆಂಗಣ್ಣಿಗೆ ಗುರಿಯಾಗಿ 'ಠಾಕ್ರೆಗೆ ದೇಶಪ್ರೇಮಕ್ಕಿಂತ ಭಾಷಾ ಪ್ರೇಮ ಮುಖ್ಯವಾಗಿದೆ', 'ಠಾಕ್ರೆಯ ಭಾಷಾಂದತೆಯಿಂದ ರಾಷ್ಟ್ರೀಯತೆಗೆ ಅಪಾಯ', ಠಾಕ್ರೆ ಅಧಿಕ ಪ್ರಸಂಗಿ, ರಾಜಕೀಯ ಮರುಹುಟ್ಟಿಗಾಗಿ ಠಾಕ್ರೆಯ ಹುಚ್ಚು ಕುತಂತ್ರ.......ಹೀಗೆ ಇನ್ನೂ ಹಲವಾರು ರೀತಿಯಲ್ಲಿ ಠಾಕ್ರೆ ಎಲ್ಲರಿಂದಲೂ ಇನ್ನೂ ಬೈಸಿಕೊಳ್ತಾನೆ ಇದಾರೆ.

ಸಚಿನ್ ತೆಂಡೂಲ್ಕರ್ ಹುಟ್ಟಿದ್ದು-ಬೆಳೆದದ್ದು ಕ್ರಿಕೆಟ್ ಆಟ ಪ್ರಾರಂಭಿಸಿದ್ದು ಮುಂಬೈನಲ್ಲಿ, ನಂತರ ಪಶ್ಚಿಮ ಭಾರತ, ಶೇಷ ಭಾರತ, ಭಾರತ ನಂತರ "ಪ್ರಪಂಚದ ಇಲವೆನ್" ನಲ್ಲೂ ಆಡಿ, ಇಡೀ ಪ್ರಪಂಚದಲ್ಲೆ ಮನೆಮಾತಾಗಿರುವುದು ಗೊತ್ತಿರುವುದೆ. ತನ್ನ ೧೬ನೆಯ ವಯಸ್ಸಿನಲ್ಲಿಯೇ ಅವಕಾಶ ದೊರೆತದ್ದು ಮತ್ತು ತನ್ನ ಕ್ರಿಕೆಟ್ ಜೀವನದ ೨೦ ನೆಯ ವರ್ಷದ ನಂತರವೂ ಇನ್ನೂ 'ಚಿರಂಜೀವಿಯಾಗಿ' ಕ್ರಿಕೆಟ್ ಆಟ ಮುಂದುವರೆಸಲು ಸಚಿನ್ ಗೆ ಸಾಧ್ಯವಾಗಿರುವ ಕಾರಣಗಳಲ್ಲಿ, ಭಾರತ ಕ್ರಿಕೆಟ್ ನಲ್ಲಿ ಬೇರೂರಿರುವ "ಮರಾಠಿ" ಲಾಬಿ ಸಹ ಮುಖ್ಯವಾದದ್ದು. ಹಾಗಾಗಿ ಸಚಿನ್ ಮರಾಠಿಗನೆ. ಅದೇ ಅವನ ಬೇರು, ಅನನ್ಯತೆ, ಅಭಿನ್ನತೆ, ಸ್ವಸ್ವರೂಪ, ಗುರುತು ಮತ್ತು ಚಹರೆ ಎಲ್ಲಾ. ಅವನು ಮರಾಠಿಗ ಎಂದು ಹೇಳಿಕೊಳ್ಳುವುದೇ ತಾನೊಬ್ಬ ಭಾರತೀಯ ಎಂದು ಘೋಷಿಸಿಕೊಂಡಂತೆ. ಅದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿರಲಿಲ್ಲ. ಭಾರತದಲ್ಲೇ ನಾನು ಭಾರತೀಯ ಎಂದು ಹೇಳಿಕೊಳ್ಳುವುದು, ಎಲ್ಲಿಯವನು ಎಂಬ ಪ್ರಶ್ನೆ ಹುಟ್ಟುಹಾಕುತ್ತದೆಯಲ್ಲವೆ. ಮುಂಬೈಗೆ ಆಡಲು ಶುರುಮಾಡಿದ ಮೇಲಲ್ವೆ ಸಚಿನ್ ಭಾರತ ತಂಡಕ್ಕೆ ಬಂದದ್ದು. ಮಹಾರಾಷ್ಟ್ರ - ಮಂಬೈ ನಡುವೆ ರಣಜಿ ಪಂದ್ಯ ನಡೆಯುವಾಗ ಮುಂಬೈಯನ್ನು ಪ್ರತಿನಿಧಿಸುವ ಸಚಿನ್, ಮಹಾರಾಷ್ಟ್ರವನ್ನು ಸೋಲಿಸಲು ಆಟ ಆಡ್ತಾನೆ ಹೊರತು ನಾನು ಮರಾಠಿಗನಾಗಿ ಮಹಾರಾಷ್ಟ್ರಾನ ಸೋಲಿಸೋದು ಹೇಗೆ ಅಂತ ಸುಮ್ಮನೆ ವಿಕೆಟ್ ಬೀಸಿ ಹೊರಹೋಗುವುದಿಲ್ಲವಲ್ಲ. ಒಬ್ಬ ಆಟಗಾರನಾಗಿ ಸಚಿನ್, ಹೇಳಿಕೊಳ್ಳಬೇಕಾದ್ದು ಆಟಗಾರನಿಗಿರಬೇಕಾದ ಮನೋಭಾವ ಮಾತ್ರ. ಹಾಗಾಗಿ ತಾನು "ಮೊದಲು ಭಾರತೀಯ" ಅಂತ ಹೇಳಿಕೊಳ್ಳದೆ "ನಾನು ಇಡೀ ಪ್ರಪಂಚದ ಕ್ರಿಕೆಟ್ ಆಟದ ಸಮುದಾಯಕ್ಕೆ ಸೇರಿದವನು. ಪ್ರಪಂಚದ ಇಡೀ ಕ್ರಿಕೆಟ್ ಸಮುದಾಯ ಒಂದೇ" ಎಂಬ ಮಾತು ಸಚಿನ್ ಹೇಳಿದ್ದಿದ್ದರೆ, ಬಹುಷಃ ಠಾಕ್ರೆ ಸಾಮ್ನಾದಲ್ಲಿ ಸುಮ್ನೆ ಇದ್ದು ಬಿಡುತ್ತಿದ್ದರೇನೋ! ನಮ್ಮ ದೇಶಭಕ್ತರುಗಳು! ಸಹ, ದೇಶ ಕಟ್ಟುವ ತಮ್ಮ ಬಿಡುವಿಲ್ಲದ ಸಮಯವನ್ನು ಸುಮ್ಮನೆ ಠಾಕ್ರೆ ವಿರುದ್ಧ ಹರಿಹಾಯುವುದನ್ನು ತಪ್ಪಿಸುವಂತಾಗಿರುತ್ತಿತ್ತೇನೋ?

****
ಇನ್ನು ಸಚಿನ್ ನ ಮತ್ತೊಂದು ಹೇಳಿಕೆ 'ಮುಂಬೈ ಎಲ್ಲರಿಗೂ ಸೇರಿದ್ದು'. ಈ ರೀತಿಯ ಹೇಳಿಕೆ ಮರಾಠಿ ಪ್ರಿಯರಿಗೆ (ಭಾಷಾವಾರು ಪ್ರಾಂತ್ಯಗಳಿಂದ ಕೂಡಿ, ಒಂದು ಒಕ್ಕೂಟದ ದೇಶವಾದ ಭಾರತದಲ್ಲಿನ ಮಹಾರಾಷ್ಟ್ರದ ನೆಲದ ಮಕ್ಕಳಿಗೆ) ಖಂಡಿತ ಸಂತೋಷ ತರುವ ವಿಷಯವಲ್ಲ. ನಮ್ಮಲ್ಲಿ ಖ್ಯಾತಿವಂತರು ಈ ರೀತಿಯ ಅರ್ಥವಿಲ್ಲದ ಅರ್ಧ ಹೇಳಿಕೆ ಕೊಡುವಲ್ಲಿ ನಿಸ್ಸೀಮರಾಗಿಬಿಟ್ಟಿದ್ದಾರೆ. ಸಚಿನ್ ಮುಂದುವರೆದು "ಯಾರು ಎಲ್ಲಿ ಬೇಕಾದರೂ ಹೋಗಿ ನೆಲೆಸಿ, ಎಲ್ಲಿ ನೆಲೆಸುವಿರೋ (ನಿಮ್ಮ ಅಭಿವ್ಯಕ್ತಿಯನ್ನುಳಿಸಿಕೊಂಡು) ಅಲ್ಲಿನವರಾಗಿ. ಅಂದರೆ, "ಯಾರು ಬೇಕಾದರೂ ಮುಂಬೈಗೆ ಬನ್ನಿ, ಬಂದು ನಿಮ್ಮದೆ ದ್ವೀಪ ಸಮೂಹ ಮಾಡಿಕೊಳ್ಳಬೇಡಿ. ಮುಂಬೈಗೆ ಬಂದ ಮೇಲೆ ಮರಾಠಿ ಸಾಗರದಲ್ಲಿ ಬೆರೆತು ಮರಾಠಿ ಐಕ್ಯತೆಯಿಂದ ಭಾರತ ದೇಶದ ಒಕ್ಕೂಟದ ಒಗ್ಗಟ್ಟಿಗೆ ಶ್ರಮಿಸಿ" ಎಂಬ ಹೇಳಿಕೆ ಇತ್ತಿದ್ದರೆ ಸಚಿನ್ 'ಸೋಗಿನ ಬುದ್ದಿ ಜೀವಿಯಲ್ಲ' ಎಂಬ ನಿಲುವಿಗೆ ಬರಬಹುದಿತ್ತು.

****
ವಿಪರ್ಯಾಸ ನೋಡಿ ಹೀಗಿದೆ:

"ಹಲವು ಹಿರಿಯರು ಸ್ವಹಿತ ಲೆಕ್ಕಿಸದೆ, ತ್ಯಾಗ, ಹೋರಾಟದ ನಂತರವೇ ಭಾಷೆಯ ಆಧಾರದ ಮೇಲೆ ಭಾಷಾವಾರು ರಾಜ್ಯಗಳಾಗಿ ಭಾರತ ಒಕ್ಕೂಟ ಅಸ್ತಿತ್ವಕ್ಕೆ ಬಂದದ್ದು. ಹಾಗಾಗಿ ಭಾರತ ಹಲವು ವೈವಿಧ್ಯಗಳ-ವೈಶಿಶ್ಟ್ಯಗಳ ದೇಶ, ಇಲ್ಲಿನ ದೇಶವಾಸಿಗಳಿಗೆ, ಯಾರು ಎಲ್ಲಿ ಬೇಕಾದರು ಹೋಗಿ ನೆಲಸುವ ಅವಕಾಶ ಇದೆ. ಯಾರು ಬೇಕಾದ್ರೂ ಎಲ್ಲಿಗೇ ಹೋಗಿ ನೆಲೆಸಿ, ಎಲ್ಲಿ ಹೋಗಿ ನೆಲೆಸುತ್ತೀರೋ ಅಲ್ಲಿಯವರಾಗಿ, ಅಲ್ಲಿನ ಆಚಾರ-ವಿಚಾರ-ಭಾಷೆ-ಸಂಸ್ಕೃತಿಯಲ್ಲಿ ಬೆರೆಯಿರಿ. " ಎಂದು ಹೇಳುವವನು ಮತ್ತು ಅನಿಯಂತ್ರಿತ ವಲಸೆ ತಡೆ ಹಿಡಿದು ಸ್ಥಳೀಯ ವೈಶಿಷ್ಟ್ಯ ಕಾಪಾಡಿ, ಸ್ಥಳೀಯರಿಗೆ, ನೆಲದ ಮಕ್ಕಳಿಗೆ, ಪ್ರದೇಶದ ಭಾಷೆಗೆ ಹೆಚ್ಚಿನ ಅವಕಾಶ ದೊರಕಿಸಿ. ಆ ಮೂಲಕ ಆ ಪ್ರಾಂತ್ಯದ ಬಲಪಡಿಸುವಿಕೆ - ಒಗ್ಗಟ್ಟು ಸಾಧ್ಯ. ಇದು ಒಟ್ಟು ಭಾರತ ದೇಶದ ಒಗ್ಗಟ್ಟನ್ನು ಬಲಪಡಿಸಿದಂತೆ" ಎಂದು ಹೇಳುವವನು ಇವತ್ತು ಭಾಷಾಂಧ-ಪ್ರಾಂತ್ಯಾಂಧ ಮತ್ತು ದೇಶದ್ರೋಹಿಯೆನ್ನಿಸಿಕೊಳ್ಳುತ್ತಿದ್ದಾನೆ.

ಯಾವನು ಎಲ್ಲಿ ಬೇಕಾದ್ರೂ ಹೋಗಬಹುದು, ಅವನಿಗಿಷ್ಟ ಬಂದಂಗೆ ನಡಕೋಬಹುದು. ಇದು ಭಾರತ ದೇಶದ ಸಂವಿಧಾನ ಕೊಟ್ಟಿರೋ ಹಕ್ಕು . ವಲಸಿಗರ ಅನುಕೂಲಕ್ಕೆ, ಅವರ ಉದ್ಧಾರಕ್ಕೆ ಮುಂಬೈ, ಬೆಂಗಳೂರು ಹೀಗೆ ಇತರ ದೊಡ್ಡ ಪಟ್ಟಣಗಳನ್ನು ಪ್ರತ್ಯೇಕ ನಗರ ರಾಜ್ಯಗಳನ್ನಾಗಿ ಪರಿವರ್ತಿಸಿ ಬಿಡೋಣ ಇಲ್ಲವೇ ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಿ ಎಂದು ಕರೆ ನೀಡುವವನು ಇವತ್ತು ದೇಶಪ್ರೇಮಿಯಾಗಿ ಕಂಡು ಬರುತ್ತಿದ್ದಾರೆ.

****


ಕಿತಾಪತಿಯ ಜನ ಕರ್ಣಾಟಕತ್ವ, ಮಹಾರಾಷ್ಟ್ರತ್ವ, ಆಂದ್ರತ್ವಗಳಿಗೂ ನಮ್ಮ ಭಾರತೀಯತ್ವಕ್ಕೂ ವಿರೋಧ ಭಾವದ ಆರೋಪಣೆ ಮಾಡುತ್ತಾರೆ. "ನಮ್ಮ ಕರ್ನಾಟಕತ್ವ ಎಂದೆಂದಿಗೂ ಭಾರತೀಯತ್ವಕ್ಕೆ ವಿರುದ್ಧವಾದುದಲ್ಲ, ನಾವು ಕರ್ನಾಟಕಕ್ಕೆ ಜಯಘೋಷಮಾಡುವುದು ಭಾರತ ಮಾತೆಗೆ ಜಯಘೋಷ ಮಾಡಿದಂತೆ" ಎಂದು ಹೇಳಿದವರು ನಮ್ಮ ರಾಷ್ಟ್ರಕವಿ ಕುವೆಂಪು.


ನಾವೇ ಏರ್ಪಡಿಸಿಕೊಂಡ ಪ್ರದೇಶವೊಂದರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಾದ, ಸಂಘರ್ಷ, ಚಿಂತನೆ ಎಲ್ಲವೂ ಸಾಮಾನ್ಯ ಆದರೆ ಅದೆಲ್ಲವೂ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರಬೇಕು. ಎಲ್ಲಿ ಆ ಪ್ರದೇಶದ ಸ್ಥಳೀಯರ ಹಿತಚಿಂತನೆಗಳು ಕಡೆಗಣಿಸಲ್ಪಡುತ್ತವೋ, ಸ್ಥಳಿಯೇತರರ ಕೈ ಮೇಲಾಗುವುದಕ್ಕೆ ರೀತಿನಿಯಮಗಳು ಬದಲಾಗುತ್ತವೋ ಆಗ ಆ ಪ್ರದೇಶದ ಒಗ್ಗಟ್ಟು ಹೇಗೆ ಮುಂದುವರೆಯಲು ಸಾಧ್ಯ. ಈ ರೀತಿಯ ಒಗ್ಗಟ್ಟು ಮುರಿಯುವ ಘಟನೆಗಳು ನಾಳೆ ಆಯಾ ಪ್ರದೇಶಗಳ ಪ್ರತ್ಯೇಕ ರಾಷ್ಟ್ರಗಳ ನಿರ್ಮಾಣಕ್ಕೆ ಸಂಭವನೀಯ ಕಾರಣಗಾಳಾಗುವುದರಲ್ಲಿ ಸಂದೇಹಗಳಿಲ್ಲ ಎಂಬ ಮಾತುಗಳನ್ನು ಮೊನ್ನೆ ನಡೆದ ಕನ್ನಡ ಕಾರ್ಯಕ್ರಮವೊಂದರಲ್ಲಿ 'ಚಂಪಾ' ಹೇಳುತ್ತಿದ್ದರು.

ಪ್ರಾಂತೀಯತೆ ಎಂದರೆ ಪ್ರಾಂತದ ದುರಭಿಮಾನವಲ್ಲ. ಪ್ರಾಂತೀಯತೆಯೇ ಸರ್ವಸ್ವವಲ್ಲವೆಂಬುದು ಕರ್ನಾಟಕರಿಗೆ ಗೊತ್ತಿದೆ. ಅನ್ಯರು ಕಲಿಸುವದು ಬೇಡ. ಕರ್ನಾಟಕರು ಇಂದಿನ ವರೆಗೆ ಎಂದೂ ಅಧಿಕೃತವಾಗಿ ರಾಷ್ಟ್ರೀಯತ್ವಕ್ಕೆ ವಿರುದ್ಧವಾಗಿ ಹೋಗಿಲ್ಲ, ಹೋಗುವುದಿಲ್ಲ. ಪ್ರಾಂತೀಯತೆಯನ್ನು ಜಾತೀಯತೆಗೆ ಹೋಲಿಸುವುದು ತಪ್ಪು.ಕರ್ನಾಟಕಕ್ಕೆ ಭಾರತದಂತೆ ಸ್ವಾಧೀನ ಕರ್ತೃತ್ವವು ಬೇಡ. ಭಾರತಾಧೀನ ಕರ್ತೃತ್ವ ಬೇಕಿದೆ. ಸರ್ವತಂತ್ರತ್ವವು ಬೇಡ. ದತ್ತ ಸ್ವಾತಂತ್ರ್ಯವು ಬೇಕು. ನಾನು ಮೊದಲು ಭಾರತೀಯನು, ಆನಂತರ ಕರ್ನಾಟಕನು ಎಂಬುದು ಸರಿಯಲ್ಲ. ಇವುಗಳಲ್ಲಿ ಮೊದಲು, ಹಿಂದಗಡೆಗಳಿಲ್ಲ. ಎರಡೂ ಭಾವನೆಗಳು ಪರಸ್ಪರ ವಿರುದ್ಧಗಳಲ್ಲ. ವೃಷ್ಟಿತ್ವವೂ ಸಮಷ್ಟಿತ್ವವೂ ಏಕಸಮಯಾವಛೇದದಿಂದ ಬೇಕು. ಎಂಬ ನಿಲುವು ತಳೆದಿದ್ದವರು ಕರ್ನಾಟಕದ ಏಕೀಕರಣದ ರೂವಾರಿ ಆಲೂರು ವೆಂಕಟರಾಯರು



"ಬಲಿಷ್ಠ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಬಂಗಾಳ ತಮ್ಮ ಪ್ರಾಂತೀಯ ವೈಶಿಷ್ಟ್ಯವನ್ನುಳಿಸಿಕೊಂಡು ಏಕತ್ರವಾದ ರಾಷ್ಟ್ರೀಯ ಭಾವನೆಯನ್ನು ಬೆಳೆಸಿಕೊಳ್ಳಬೇಕು. ದುರ್ಬಲ ಪ್ರಾಂತ್ಯ ಯಾವಾಗಲೂ ರಾಷ್ಟ್ರೀಯತೆಯ ಶತ್ರು ವೆಂಬುದನ್ನು ಮರೆಯಬಾರದು. ಈ ದೃಷ್ಟಿಯಿಂದಲೇ ನಾವು ಕನ್ನಡ-ಕನ್ನಡ ಎಂದು ಹಲಬುವುದು. ಕೆಲವರ ಕಣ್ಣಿಗೆ ನಾವು ಸಂಕುಚಿತ ಮನೋಭಾವದವರಾಗಿ ಕಂಡುಬರಬಹುದು. ವಿಧಿಯಿಲ್ಲ, ಕಾಲ ಎಲ್ಲವನ್ನೂ ನಿರ್ಣಯಿಸುತ್ತದೆ" ಎಂದು ರಾಷ್ಟ್ರೀಯತೆಯ ಬಗ್ಗೆ ಪ್ರತಿಪಾದಿಸಿದವರು ಅ.ನ.ಕೃಷ್ಣರಾಯರು

****



ನಿಜವಾದ ರಾಷ್ಟ್ರೀಯತೆಯಂದರೆನೆಂದು ನೆನಪು ಮಾಡುವ ಕುವೆಂಪು-ಚಂಪಾ-ಆಲೂರು-ಅನಕೃ ರವರಂತಹ ಮಾತುಗಳಿಗೆ ಇಂದು ಬೆಲೆಯಿಲ್ಲದೆ ಸೋಗಿನ ರಾಷ್ಟ್ರೀಯ ಪ್ರತಿಪಾದನಾವಾದಿಗಳಿಗೆ ಎಲ್ಲೆಡೆ ಮನ್ನಣೆ ದೊರೆಯುತ್ತಿರುವುದು ವಿಷಾದದ ಸಂಗತಿಯಾಗಿದೆ.

ಚಂದ್ರಶೇಖರನ್ ಕಲ್ಯಾಣ ರಾಮನ್
****

Sunday, November 1, 2009

"ಸಹಿ"ಗನ್ನಡದಿಂದ ಗ್ರಾಹಕ ಸೇವೆಯಲ್ಲಿ ಕನ್ನಡ!

*****



ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸದಿಂದ, ಬ್ಯಾಂಕೊಂದರಲ್ಲಿ (ಕರ್ನಾಟಕದಲ್ಲಿ!) ವ್ಯವಹರಿಸುವಾಗ ಅನುಭವಿಸಿದ ಕಿರಿಕಿರಿಯ ಅನುಭವವನ್ನು "ಕನ್ನಡ, ಕನ್ನಡ ಹಾ ಸಹಿಗನ್ನಡ" ಲೇಖನದ ಮೂಲಕ ('ಹಾಯಿದೋಣಿ' ಅಂಕಣ, ಸಾಪ್ತಾಹಿಕ ಪುರವಣಿ, ಪ್ರಜಾವಾಣಿ, ೧ನೇ ನವಂಬರ್ ೨೦೦೯) ಶ್ರೀಯುತ ಲಕ್ಷ್ಮಣ ಕೊಡಸೆಯವರು ಕನ್ನಡಿಗರ ಹಕ್ಕಾಗಬೇಕಾಗಿರುವ "ಕನ್ನಡದಲ್ಲಿ ಗ್ರಾಹಕ ಸೇವೆ"ಯ ಬಗ್ಗೆ ಕನ್ನಡಿಗರು ತೋರಿರುವ ನಿರ್ಲಕ್ಷ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬ ಘೋಷಣೆಗೆ ಆಕರ್ಷಣೆಗೊಳ್ಳುವುದು, ಕನ್ನಡ ಭಾಷೆಯನ್ನುಳಿಸಲು ಸರ್ಕಾರವೇ ಕ್ರಮ ತೆಗೆದುಕೊಳ್ಳಬೇಕೆಂದುಕೊಳ್ಳುವುದು, ಇತರ ಭಾಷಿಕರಿಗೆ ಹೋಲಿಸಿಕೊಂಡು ನಾವು ನಿರಭಿಮಾನಿಗಳೆಂದುಕೊಳ್ಳುವ ಈ ಯಾವುದು ನಮ್ಮ ಕನ್ನಡ ಭಾಷೆಯ ಉನ್ನತಿಗೆ ಪರಿಹಾರವಲ್ಲ. ಕನ್ನಡಕ್ಕೆ ಶಕ್ತಿ ತುಂಬುವ ಕೆಲಸದಲ್ಲಿ ನಮ್ಮ-ನಿಮ್ಮಂತ ಶ್ರೀ ಸಾಮಾನ್ಯನ ಪಾತ್ರ ಬಹಳ ಹಿರಿದಾದದ್ದು ಎಂಬ ಮಾತುಗಳನ್ನು ಕೊಡಸೆಯವರು ಈ ಮೂಲಕ ತಿಳಿಹೇಳಿದ್ದಾರೆ.

ಸಹಿ ಎಂಬುದು ವ್ಯಕ್ತಿಯೊಬ್ಬನ ವೈಯುಕ್ತಿಕ ಸಂಕೇತ, ತನ್ನ ಅಭಿ ವ್ಯಕ್ತಿಯ ಲಾಂಛನ ಎಂಬುದು ನೂರಕ್ಕೆ ನೂರು ಸತ್ಯ. ಅಂತೆಯೇ ಭಾಷಾವಾರು ಪ್ರಾಂತ್ಯಗಳ ಒಕ್ಕೂಟವಾಗಿ ಹೊರ ಹೊಮ್ಮಿರುವ ಭಾರತದ, ಕರ್ನಾಟಕ ಪ್ರಾಂತ್ಯದ ಭಾಷೆ ಕನ್ನಡ ಎಂಬುದು ಸಹ ಅಷ್ಟೆ ಸತ್ಯವಾದದ್ದು. ಕರ್ನಾಟಕದಲ್ಲಿ ಕನ್ನಡದ ಬಳಕೆಗೆ, ಕನ್ನಡಿಗರ ಅಭಿವೃದ್ಧಿಗೆ ಸಂವಿಧಾನ ನಮಗೆ ಸವಲತ್ತು ಒದಗಿಸಿದೆ. ಇದರಂತೆ ಕರ್ನಾಟಕದಲ್ಲಿನ ಎಲ್ಲಾ ವ್ಯವಹಾರಸ್ಥರು ಕನ್ನಡ ಅರಿತವರಾಗಿ ತಮ್ಮ ಎಲ್ಲಾ ವ್ಯವಹಾರದಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳಬೇಕಾಗಿರುವುದು ಅವರ ಮೂಲ ಧರ್ಮವಾಗಬೇಕಾದದ್ದು ಸಹಜವಾದದ್ದು. ಮುಖ್ಯವಾಗಿ ನಾವು ಎಲ್ಲರೊಡನೆ ಕನ್ನಡದಲ್ಲಿ ವ್ಯವಹರಿಸುವಂತಾದರೆ ಮಾತ್ರ ನಮ್ಮ ಹಕ್ಕಿಗೂ ಬೆಲೆ ಬರುತ್ತದಲ್ಲವೆ? ಇಲ್ಲಿ ನಾವು ಗಮನಿಸಬೇಕಾಗಿರುವುದು, ನಮ್ಮ ದಿನ ನಿತ್ಯದ ವ್ಯವಹಾರಗಳಲ್ಲಿ ಕನ್ನಡದಲ್ಲೇ ವ್ಯವಹರಿಸುವುದರಿಂದ ಸಣ್ಣ ರೀತಿಯಲ್ಲಿ ನಾವು ಒಂದು ಆಂದೋಲವನ್ನೇ ಹುಟ್ಟು ಹಾಕಬಹುದಾಗಿದೆ.

ಹೌದು ಕರ್ನಾಟಕದಲ್ಲಿ, 'ಕನ್ನಡದಲ್ಲಿ ಗ್ರಾಹಕ ಸೇವೆ' ಕುರಿತಾಗಿ ನಾನು ಇಲ್ಲಿ ಹೇಳ್ತಾ ಇದೀನಿ. ಬ್ಯಾಂಕಿನಲ್ಲಿ ಕನ್ನಡ ಇಲ್ಲ ಅಂದ್ರೆ, ಅವರು ಕನ್ನಡದಲ್ಲಿ ಸೇವೆ ಕೊಡ್ದೆ ಇರೋದು ಒಂದು ಕಾರಣವಾದರೆ, ನಾವು ಕನ್ನಡ ಉಪಯೋಗಿಸದೆ ಇರೋದು ಇನ್ನೊಂದು ಕಾರಣ. ಅದಕ್ಕಗಿ ನಾವು ಹೀಗೆ ಮಾಡಬಹುದಲ್ಲವೇ.

೧] ಕೇವಲ ಸಹಿ ಮಾತ್ರವಲ್ಲ! ಇನ್ನು ಮುಂದೆ ನಾವು ನಮ್ಮ ಬ್ಯಾಂಕು ಚೆಕ್ಕುಗಳನ್ನು ಕನ್ನಡದಲ್ಲೇ ಬರೆಯೋಣ
೨] ಬ್ಯಾಂಕಿನ ಎಟಿಎಂ ಉಪಯೋಗಿಸುವಾಗ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳೋಣ
೩] ಬ್ಯಾಂಕಿನೊಡನೆ ಯಾವುದೇ ವ್ಯವಹಾರವಿರಲಿ ಪತ್ರ ವ್ಯವಹಾರ ಕನ್ನಡದಲ್ಲೇ ಮಾಡೋಣ
೪] ಬ್ಯಾಂಕಿನ ಕರೆ ಕೇಂದ್ರಗಳಿಂದ ಕರೆ ಬಂದಾಗ ಅಥವ ನಾವು ಅವರಿಗೆ ಕರೆ ಮಾಡಿದಾಗ ಕನ್ನಡದಲ್ಲಿ ಮಾತನಾಡಲು ಆಗ್ರಹಿಸೋಣ
೫] ಬ್ಯಾಂಕಿನಲ್ಲಿ ಖಾತೆ ತೆರೆಯುವಾಗ, ಬ್ಯಾಂಕಿಗೆ ಹಣ ತುಂಬುವಾಗ, ಹಣ ತೆಗೆಯುವಾಗ ಕನ್ನಡದ ಅರ್ಜಿ ನಮೂನೆಗಳಿಗೆ ಆಗ್ರಹಿಸೋಣ. ಅವರು ಕೊಡುವ ನಮೂನೆಗಳಲ್ಲಿ ಕನ್ನಡದಲ್ಲೇ ಎಲ್ಲ ವಿವರಗಳನ್ನು ನಮೂದಿಸೋಣ.
ಇದು ಬ್ಯಾಂಕಿನವರಿಗೆ ಕನ್ನಡದ ಅನಿವಾರ್ಯತೆಯನ್ನು ಹುಟ್ಟು ಹಾಕುತ್ತದೆ. ಕನ್ನಡಿಗರಿಗೆ ಕೆಲಸ ದೊರೆಯುತ್ತದೆ. ಕನ್ನಡ ಬರದ ಕೆಲಸಗಾರರು ಕನ್ನಡ ಕಲಿಯಬೇಕಾದ ಅನಿವಾರ್ಯತೆಯನ್ನು ಉಂಟು ಮಾಡುತ್ತದೆ.

ಇದು ಕೇವಲ ಬ್ಯಾಂಕ್ ಗೆ ಮಾತ್ರ ಸೀಮಿತವಲ್ಲ. ನಾವು ಗ್ರಾಹಕ ಸೇವೆ ಪಡೆಯೋ ಎಲ್ಲೆಡೆ (ರೈಲು, ಬಸ್ಸು ಟಿಕೆಟ್ಟು ಖರೀದಿಸುವಾಗ, ವಿಮಾ ಕಂಪನಿಗಳೊಡನೆ ವ್ಯವಹರಿಸುವಾಗ, ಮೊಬೈಲ್ ಕಂಪನಿಗಳ ಕರೆ ಕೇಂದ್ರದವರೊಡನೆ ಮಾತನಾಡುವಾಗ, ಅಂಗಡಿ-ಮುಂಗಟ್ಟು-ಮಾಲ್ ಗಳಲ್ಲಿ ವ್ಯವಹರಿಸುವಾಗ) ಕನ್ನಡವನ್ನು ಈ ರೀತಿ ನಾವು ಉಪಯೋಗಿಸುವ ಹಕ್ಕು ನಮಗಿದೆ.


ಇದು ಅಭಿಮಾನ ಮತ್ತು ನಮ್ಮ ಅಂತಂಗದ ಧ್ವನಿಯಾಗಿ ಹೊರಹೊಮ್ಮುವಂತಾಗಬೇಕು ಎಂಬುದು ಕೊಡಸೆಯವರ ಅಭಿಲಾಷೆ.

ಎಲ್ಲರಿಗೂ "ಕರ್ನಾಟಕ ರಾಜ್ಯೋತ್ಸವ" ಶುಭಾಶಯಗಳು.

ಚಂದ್ರಶೇಖರನ್ ಕಲ್ಯಾಣ ರಾಮನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

*****

Wednesday, October 28, 2009

ಯಾರು "ಗ್ರಾಹಕ ಕೈಪಿಡಿ" ಕನ್ನಡದಲ್ಲಿ ಮಾಡಿಸಿದ್ದಾರೆ?

***

ಕೆಲ ದಿನಗಳ ಹಿಂದೆ ಬಜಾಜ್ ಸಂಸ್ಥೆಯ "ಇಸ್ತ್ರಿ ಪೆಟ್ಟಿಗೆ ಖರೀದಿಸಿದೆ". ಮನೆಗೆ ಬಂದು ಡಬ್ಬ ತೆರೆದಾಗ ಅದರಲ್ಲಿ ಕೈಪಿಡಿಯೊಂದಿತ್ತು. ತೆರೆದು ನೋಡಿದಾಗ ಬೇಜಾರಾಯ್ತು. ಮಾಹಿತಿ ಕನ್ನಡೇತರ ಭಾಷೆಯಲ್ಲಿದೆ.
ಹಾಗೆಯೆ ಕೈಪಿಡಿ ಗಮನಿಸಿದಾಗ, ಬಜಾಜ್ ಸಂಸ್ಥೆಯ ಬೆಂಗಳೂರು ಶಾಖೆಯ ಮಿಂಚೆ ವಿಳಾಸ ಕಂಡು ಬಂತು.
ಮೊನ್ನೆ ೨೬ ನೆ ತಾರೀಖು ಅವರಿಗೆ ಈ ರೀತಿ ಮಿಂಚಿಸಿದೆ.
*****
ನಾನು 18/10/2009 ರಂದು ಬೆಂಗಳೂರಿನ ಪೈ ಇಂಟರ್ ನ್ಯಾಷನಲ್ ಅಂಗಡಿಯಲ್ಲಿ ಬಜಾಜ್ಎಲೆಕ್ಟ್ರಿಕಲ್ಸ್ ತಯಾರಿಕೆಯ ಪಾಪ್ಯುಲರ್ "ಇಸ್ತ್ರಿ ಪೆಟ್ಟಿಗೆ" ಖರೀದಿಸಿದೆ. ವಿಪರ್ಯಾಸವೆಂದರೆ ಇಸ್ತ್ರಿ ಪೆಟ್ಟಿಗೆಯ ಜತೆಗೆ ವಿತರಿಸಿರುವ "ಉಪಯೋಗ ಮತ್ತುಸುರಕ್ಷತೆ" ಯ ಕೈಪಿಡಿ ಕನ್ನಡೇತರ ಭಾಷೆಯಲ್ಲಿದೆ. (ಲಗತ್ತಿಸಿರುವ ಚಿತ್ರ ನೋಡಿ)

ಬೆಂಗಳೂರು ಮತ್ತು ಕರ್ನಾಟಕ ದೇಶದ ನಾಡ ಭಾಷೆ ಕನ್ನಡ. ಇಲ್ಲಿ ನಿಮ್ಮ ಸಂಸ್ಥೆಯ ಮೂಲಕತಯಾರಿಸಿ ವಿತರಿಸುವ ಎಲ್ಲಾ ಗ್ರಾಹಕ ಉಪಯೋಗಿ ವಸ್ತುಗಳ ಬಗೆಗಿನ ಮಾಹಿತಿ, ವಿವರಣೆ,ಜಾಹೀರಾತು ಆಧ್ಯತೆಯಾಗಿ ಕನ್ನಡ ಭಾಷೆಯಲ್ಲಿರುವಂತೆ ಗಮನಿಸಬೇಕಾದ್ದು ನಿಮ್ಮ ಮೂಲಕರ್ತವ್ಯ.

ಕೂಡಲೇ ಕೆಳಗಿನ ವಿಳಾಸಕ್ಕೆ ಇಸ್ತ್ರಿ ಪೆಟ್ಟಿಗೆ "ಉಪಯೋಗ ಮತ್ತು ಸುರಕ್ಷೆ" ಕನ್ನಡಕೈಪಿಡಿ ಕಳುಹಿಸಿಕೊಡಬೇಕಾಗಿ ವಿನಂತಿ.
*****
ನಂತರ ೦೮೦-೪೨೬೬೨೨೩೧ ದೂರವಾಣಿಯಿಂದ ನನಗೆ ಕರೆಯೊಂದು ಬಂತು. ಕರೆ ಮಾಡಿದಾತ "ನನ್ನ ಹೆಸರು ವಿಜಯ್, ಬಜಾಜ್ ಬೆಂಗಳೂರು ಅಫೀಸ್ ನಿಂದ ಕರೆ ಮಾಡ್ತಿದ್ದೀನಿ" ಎಂದು ಪರಿಚಯಿಸಿಕೊಂಡು, ನನ್ನ ಮಿಂಚೆ ಕುರಿತು ಸಮಜಾಯಿಷಿ ಕೊಡಲು ಪ್ರಯತ್ನಿಸಿದರು. ಮಾತನಾಡುತ್ತ ವಿಜಯ್ ಹೇಳಿದ್ದು "ಕನ್ನಡದಲ್ಲಿ ಕೈಪಿಡಿ ಮಾಡಿಸಿಲ್ಲ, ಪೂರ್ತಿ ಭಾರತ! ಗಮನದಿಲ್ಲಿಟ್ಟುಕೊಂಡು ಎರಡು ಭಾಷೆಯಲ್ಲಿ ಕೈಪಿಡಿ ಮಾಡಿದ್ದೇವೆ......

ನಾನು "ನಮ್ಮ ಮನೆಯಲ್ಲಿ ಬಜಾಜ್ ಸಂಸ್ಥೆ ಇಸ್ತ್ರಿ ಪೆಟ್ಟಿಗೆಯ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಲು ನಮಗೆ ಅವಶ್ಯವಿರುವ ಭಾಷೆ ಕನ್ನಡ" ಕನ್ನಡೇತರ ಭಾಷೆಯ ಕೈಪಿಡಿ ನಮಗೆ ಉಪಯೋಗವಿಲ್ಲ. ಇಡೀ ಭಾರತ! ಗಮನದಲ್ಲಿರಿಸಿ ನೀವು ಕೈಪಿಡಿ ತಯಾರಿಸಿರುವುದಾದರೆ ೨೦ಕ್ಕೂ ಹೆಚ್ಚಿನ ಭಾಷೆ ನಿಮ್ಮ ಕೈಪಿಡಿಯಲ್ಲಿ ಅಳವಡಿಸಬೇಕಿತ್ತು... ಹೀಗೆ ಕರ್ನಾಟಕದಲ್ಲಿ ಅವರ ವ್ಯವಹಾರದಲ್ಲಿ ಕನ್ನಡದ ಅವಶ್ಯಕತೆ ಏಕೀರಬೇಕು. ಅಂತೆಯೆ ತಮಿಳುನಾಡಿನಲ್ಲಿ ಬಜಾಜ್ ತಮಿಳನ್ನೇ ಏಕೆ ಉಪಯೋಗಿಸಬೇಕು ಎಂದು ಮನವರಿಕೆ ಮಾಡಿಸಲು ಪ್ರಯತ್ನಿಸಿದೆ! ಕೊನೆಗೆ ವಿಜಯ್, ಈ ಕುರಿತಾಗಿ ಬಜಾಜ್ ಮುಖ್ಯ ಕಚೇರಿಗೆ ತಿಳಿಸಿ ಕನ್ನಡದಲ್ಲಿ ಕೈಪಿಡಿ ಮಾಡಿಸಿ ಕೊಡುವಬಗ್ಗೆ ಭರವಸೆ ನೀಡಿದ್ದಾರೆ!

ವಿಜಯ್ ಕೊನೆಯದಾಗಿ ಒಂದು ಪ್ರಶ್ನೆ ನನ್ನನ್ನೇ ಕೇಳಿದರು. ಈ ರೀತಿ ವಸ್ತುಗಳನ್ನು ತಯಾರಿಸಿರುವವರು ಯಾರು ಕೈಪಿಡಿ ಕನ್ನಡದಲ್ಲಿ ಮಾಡಿಸಿದ್ದಾರೆ ಎಂದು? "ಯಾರು ಮಾಡಿಸಿದ್ದಾರೆ ಎಂಬ ಮಾಹಿತಿ ನನ್ನಲ್ಲಿಲ್ಲ, ಯಾರ್ಯಾರು ಮಾಡಿಸಿಲ್ಲ ಎಂದು ನನಗೆ ಕಂಡು ಬಂದಾಗ ಕನ್ನಡದಲ್ಲಿ ಮಾಡಿಸಿ ಎಂದು ನಾನು ಕೇಳುತ್ತೇನೆ. ನೀವು ಮಾಡಿಸಿಲ್ಲ ಈಗ ನೀವು ಮಾಡಿಕೊಡಿ ಎಂದೆ.

ಇದನ್ನೂ ಓದುತ್ತಿರುವವರೆಲ್ಲಾ ಇನ್ನು ಮುಂದೆ ತಾವು ಖರೀದಿಸುವ ಯಾವುದೇ ವಸ್ತು ಇರಲಿ (ಟಾಟಾ ಸ್ಕೈ, ಸಾಮ್ಸಂಗ್ ಟೀವಿ, ಓನಿಡಾ ಒಗೆಯೋ ಯಂತ್ರ, ಫಿಲಿಪ್ಸ್ ರೇಡಿಯೋ...............ಹೀಗೆ) ಕನ್ನಡದಲ್ಲಿ ಇದರ ಮಾಹಿತಿ, ವಿವರಣೆ, ಕೈಪಿಡಿ ವಿತರಿಸಿ ಎಂದು ಕೇಳಲೇ ಬೇಕಲ್ಲವೆ?

ಕೆಳಗಿನ ಚಿತ್ರ ನೋಡಿ.

ಯೂರೋಪ್ ನಲ್ಲಿ ತಯಾರಾದ ಜೀವ ಕವಚವೊಂದರ ಕುರಿತಾದ ವಿವರಣೆ. ಇಡೀ ಪ್ರಪಂಚಕ್ಕೆ ತಿಳಿಯತ್ತಲ್ಲ ಅಂತ ಅವರು ಒಂದು ಭಾಷೆಯಲ್ಲಿ ಅದರ ವಿವರಣೆ ನೀಡಿ ಸುಮ್ಮನಿರಬಹುದಿತ್ತು. ಆದರೆ ಜೀವದ ಬೆಲೆ ಅವರಿಗೆ ಏನೆಂದು ಗೊತ್ತು ಮತ್ತು ವಸ್ತುವಿನ ಬಳಕೆ ಸಮರ್ಪಕವಾಗಿ ಆಗಬೇಕೆಂಬ ಕಾಳಜಿ ಅವರಿಗಿದ್ದುದರಂದ ಅವರು ತಮ್ಮ ಉತ್ಪನ್ನ ವಿತರಿಸುವೆಡೆಯಲ್ಲಿ ಬಳಕೆಯಲ್ಲಿರುವ ಭಾಷೆಗಳಲ್ಲಿ ವಿವರಣೆ ನೀಡಿದ್ದಾರೆ.

ತಮ್ಮ ಉತ್ಪನ್ನಗಳ ಹೆಚ್ಚಿನ ಬಿಕರಿಗೆ ಇದೊಂದು ದಾರಿ ಸಹ ಅಂತ ಇವರು ತಿಳಿದುಕೊಂಡಿದ್ದಾರೆ. ನಮ್ಮ ಭಾರತದ ಸಂಸ್ಥೆಗಳು ಇಲ್ಲದ್ದನ್ನು ನಮ್ಮ ಮೇಲೆ ಹೇರಲು ಮುಂದಾಗಿದ್ದಾರೆ.

ಚಂದ್ರಶೇಖರನ್ ಕಲ್ಯಾಣ ರಾಮನ್,
ಹಳದಿ - ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

***