Wednesday, September 16, 2009

ಹಿಂದಿ ರಾಜ್ಯದವರಿಗಿಲ್ಲದ ಮೂರು ಭಾಷೆ ಸೂತ್ರ ನಮಗೆ ಮಾತ್ರ ಏಕೆ?

ಪ್ರತಿವರ್ಷ ಸೆಪ್ಟಂಬರ್ ೧೪ ರಂದು ಭಾರತದಾದ್ಯಂತ ಕೇಂದ್ರ ಸರ್ಕಾರದ ಬೆಂಬಲದಲ್ಲಿ "ಹಿಂದಿ ದಿವಸ್" ಆಚರಿಸಲಾಗುತ್ತದೆ. ಈ ಹಿಂದಿ ದಿವಸ್ ಬರುವ ಕೆಲದಿನಗಳಿಗೆ ಮೊದಲು, ಹಿಂದಿ ಕಾರ್ಯಾಗರಗಳು, ಪರೀಕ್ಷೆಗಳು, ಸ್ಪರ್ಧೆಗಳು ಮತ್ತು ಮನರಂಜನೆಗಳನ್ನು ಆಯೋಜಿಸುವ ಮೂಲಕ ವ್ಯಾಪಕವಾಗಿ ಎಲ್ಲೆಡೆ ಹಿಂದಿ ಪ್ರಚಾರಗಳನ್ನು ಕೈಗೊಳ್ಳಲಾಗುತ್ತದೆ. ಇದಕ್ಕೆಪೂರಕವಾಗಿ ಎಲ್ಲಾ ಕೇಂದ್ರ ಸರ್ಕಾರದ ಕಚೇರಿಗಳು, ಉದ್ದಿಮೆಗಳು, ನಿಗಮ ಮಂಡಳಿಗಳು,ಬ್ಯಾಂಕುಗಳು, ವಿಮಾ ಕಚೇರಿಗಳು ವರ್ಷವಿಡೀ ಹಿಂದಿ ಪ್ರಚಾರದ ಕಾರ್ಯಗಳಲ್ಲಿ ಕಟ್ಟುನಿಟ್ಟಾಗಿ ತೊಡಗಿಸಿಕೊಳ್ಳಲು ನಾನ ರೀತಿಯ ವ್ಯವಸ್ಥೆಗಳನ್ನು ಆದೇಶಗೊಳಿಸಲಾಗಿದೆ. ಒಂದುಸಣ್ಣ ಉದಾಹರಣೆ ನೀಡಬೇಕೆಂದರೆ, ನಾವು ಈ ಮೇಲಿನ ಯಾವುದೇ ಕಚೇರಿಗಳಿಗೆ ಯಾವುದೇ ದಿನಹೋದಲ್ಲಿ, ಅಲ್ಲಿನ ಒಳಭಾಗದ ಸೂಚನಾ ಫಲಕದಲ್ಲಿ ಅವರು ದಿನಕ್ಕೊಂದು ಹಿಂದಿ ಪದವನ್ನುಪರಚಯಿಸುವ ಪದ್ಧತಿಯನ್ನು ಕಾಣಬಹುದಾಗಿದೆ. ಈ ರೀತಿ ಹಿಂದಿ ಪ್ರಚಾರಕ್ಕಾಗಿ ಸಮಯಮೀಸಲಿಡಲು ಇಲ್ಲಿ ಅವಕಾಶಗಳಿವೆ, ಈ ರೀತಿ ಹಿಂದಿ ಪ್ರಚಾರವನ್ನು ಅಚ್ಚು ಕಟ್ಟಾಗಿಮಾಡಿದವರಿಗೆ ಭಡ್ತಿಯಲ್ಲಿ ಸಹ ಮೀಸಲಿದೆ. ಕೇಂದ್ರ ಸರ್ಕಾರ ಹಲವಾರು ಕೋಟಿ ರೂಗಳನ್ನು ಈಕಾರ್ಯಕ್ಕೆ ಪ್ರತಿ ವರ್ಷ ಮೀಸಲಿಟ್ಟು ವ್ಯಯಿಸುತ್ತದೆ.

ಭಾರತ ಗಣತಂತ್ರದ ಒಕ್ಕೂಟ ವ್ಯವಸ್ಥೆಯ ಇತರ ಅಧಿಕೃತ ಭಾಷೆಗಳಿಗಿರುವ ಸ್ಥಾನಮಾನವೇಹಿಂದಿಗೂ ಸಹ ಇರುವುದು ಎಂಬುದನ್ನು ನಾವೆಲ್ಲರೂ ಗಮನಿಸಬೇಕಿದೆ. ಆದರೆ "ಹಿಂದಿ ಕೇಂದ್ರಸರ್ಕಾರದ ಆಡಳಿತ ಭಾಷೆ, ಅದು ನಮ್ಮೆಲ್ಲರ ರಾಷ್ಟ್ರ ಭಾಷೆ ಮತ್ತು ಹಿಂದಿ ಬಲ್ಲವ ಮಾತ್ರರಾಷ್ಟ್ರ ಪ್ರೇಮಿ" ಎಂಬ ಪೊಳ್ಳು ಪ್ರಚಾರವನ್ನು ಮಾಡುವುದರ ಮೂಲಕ, ಹಿಂದಿಗಿಂತಲೂ ಪ್ರಾಚೀನವೂ, ವೈವಿಧ್ಯಮಯವೂ ಆದ ಭಾರತದ ಇತರ ಭಾಷೆ ಮತ್ತು ಸಂಸ್ಕೃತಿಯನ್ನು ಕಡೆಗಣಿಸಿಕೇವಲ ಹಿಂದಿ ಭಾಷೆಗೆ ಮಾತ್ರ ಪ್ರಾಧಾನ್ಯತೆ ನೀಡಿ, ಬಲವಂತವಾಗಿ ಆ ಭಾಷೆಯದಿನಾಚರಣೆಯನ್ನು ಭಾರತದೆಲ್ಲೆಡೆ ಅಚರಿಸುತ್ತಿರುವುದು ಎಷ್ಟು ಸಮಂಜಸ?

ನಾವು ಇಂಗ್ಲೀಷನ್ನು ಇನ್ನೂ ಅಪ್ಪಿಕೊಂಡು, ಒಪ್ಪಿಕೊಂಡಿರುವುದು, ಗುಲಾಮಗಿರಿಯೆಷ್ಟೋ ಅಷ್ಟೇ ಗುಲಾಮಗಿರಿ ಹಿಂದಿಯೇತರರು ಹಿಂದಿ ಸಾಮ್ರಾಜ್ಯವಾದವನ್ನು ಬೆಳಸಲು, ಪಸರಿಸಲುಬಿಟ್ಟು ಬಿಡುವುದು. ಇಂಗ್ಲೀಷಿಗೆ ಸಧ್ಯಕ್ಕಿರುವ ಜ್ಞಾನ-ವಿಜ್ಞಾನಗಳ ಭಾಷೆ ಎಂಬಸ್ಥಾನವನ್ನು ಕನ್ನಡಿಗರು ಮಾತ್ರ ಏನೂ ನಂಬಿಲ್ಲ, ನಮ್ಮಷ್ಟೇ ಇಂಗ್ಲೀಷ್-ದಾಸರು ಹಿಂದಿಯವರೂ ಸಹ ಆಗಿದ್ದಾರೆ. ನಾವು ಹಿಂದಿ ಕಲಿತು ಉತ್ತರ ಭಾರತಕ್ಕೆ ವಲಸೆ ಹೋಗಿ ಹಿಂದಿ ರಾಜ್ಯಗಳಲ್ಲಿ, ಹಿಂದಿಯವರಾಗುತ್ತೇವೆ ಎನ್ನುವುದು ಸರಿಯಾದುದೆ. ಅದೇ ತಮಿಳುನಾಡು, ಆಂದ್ರಾ, ಓರಿಸ್ಸಾ, ಗುಜರಾತ, ಬಂಗಾಳಗಳಿಗೆ ನಾವು ವಲಸೆ ಹೋಗಿನೆಲಸಬೇಕಾಗಿ ಬಂದಾಗ ಆಯಾ ರಾಜ್ಯಗಳ ಭಾಷೆ ಕಲಿತು, ಅಲ್ಲಿಯ ಸಂಸ್ಸೃತಿಯನ್ನು ಅರಿತು ಆ ಜನರೊಡನೆ ಬೆರೆತು ಮುಖ್ಯವಾಹಿನಿಯಲ್ಲಿ ಮುನ್ನಡೆಯುವುದು ಮಾತ್ರ ಸರಿಯಾದಮಾರ್ಗವಲ್ಲವೇ? ಹಿಂದಿ ಜತೆಗೆ ನಮಗೆ ಇಂಗ್ಲೀಷ್ ಸಾಕು, ಕನ್ನಡ ಭಾಷೆ ನಮಗೆ ಬೇಡ ಎನ್ನುವ ಹಿಂದಿಯವರಿಂದ ಕನ್ನಡಿಗರ ಮೇಲೇಕೆ ಹಿಂದಿ ಹೇರಿಕೆಯಾಗುತ್ತಿದೆ? ಹಿಂದಿಭಾಷಿಕರಿಗೆ ಬೇಡದ ಈ ತ್ರಿಭಾಷ ಸೂತ್ರ ನಮಗೆ ಮಾತ್ರ ಏಕೆ ಎಂದು ನಮ್ಮೆಲ್ಲರ ಮನದಲ್ಲಿ ಸಹಜವಾಗಿ ಮೂಡಬೇಕಾಗಿರುವ ಪ್ರಶ್ನೆಯಿದಲ್ಲವೆ? ಹಿಂದಿ ಭಾಷೆಯ ಅಭಿವೃದ್ಧಿ ಮಾಡಲು,ಅದನ್ನು ಬೆಳೆಸಲು ಹಿಂದಿ ರಾಜ್ಯಗಳಾದ ದೆಹಲಿ, ಮದ್ಯಪ್ರದೇಶ, ಉತ್ತರ ಮತ್ತು ಇತರ ಪ್ರದೇಶಗಳಿವೆ. ಅವುಗಳು ಅಲ್ಲಿ ಬೆಳವಣಿಗೆಯಾಗಬೇಕಾಗಿರುವುದು ಸಹಜವೇ. ಅದರಂತೆ ಕನ್ನಡನಾಡಿನ ಸಂಸ್ಕೃತಿ, ಧರ್ಮ ಕನ್ನಡ ಭಾಷೆಯನ್ನು ಅನುವರ್ತಿಸುವಂತದ್ದು, ಕೇಂದ್ರ ಸರ್ಕಾರ ಹಿಂದಿಯನ್ನು ಪ್ರಚಾರ ಮಾಡುವುದು ಬೆಳೆಸುವುದನ್ನು ಹಿಂದಿ ರಾಜ್ಯಗಳಿಗೆ ಮಾತ್ರಮೀಸಲಿರಿಸಿ ಅದರಂತೆಯೇ ಕರ್ನಾಟಕದಲ್ಲಿ ಕನ್ನಡ, ಕೇರಳದಲ್ಲಿ ಮಲಯಾಳಂ ಗೆ ಪ್ರಚಾರನೀಡಲು ಮಾತ್ರ ಮುಂದಾಗಬೇಕಿದೆ.

ಮನುಷ್ಯ ಆಭಿಮಾನ ಜೀವಿ, ಅವನ ಜೀವನದಲ್ಲಿ ಉಂಟಾಗುವ ಮುಖ್ಯವಾದ ಪ್ರಗತಿ ಅಭಿಮಾನದಿಂದಲೇ ಸಾಧನೆಯಾಗುತ್ತದೆ. ದೇಶಾಭಿಮಾನ, ಆತ್ಮಾಭಿಮಾನ, ಕಲಾಭಿಮಾನ, ಭಾಷಾಭಿಮಾನ ಇವುಗಳೇ ಮನುಷ್ಯನ ಜೀವನದ ಉಸಿರು. ಹೀಗಾಗಿ ನಮ್ಮ ಜೀವನ ಹಾಗು ರಾಷ್ಟ್ರದ ಸಂಸ್ಕೃತಿಯ ಉನ್ನತಿಗೆ ಆಯಾ ರಾಜ್ಯದ ಭಾಷೆಗಳಿಗೆ ಸಮನಾದ ಗೌರವವನ್ನು ಸಲ್ಲಿಸುವುದನ್ನು ಈ ರಾಷ್ಟ್ರದಲ್ಲಿರುವವರೆಲ್ಲರೂ ಮುಖ್ಯವಾಗಿ ಕೇಂದ್ರ ಸರ್ಕಾರದ ಹಿಂದಿ ಪ್ರಚಾರ ಪ್ರಿಯರುಅರಿಯಬೇಕಿದೆ. ಇದೇ ನಾವು ಈ ಒಕ್ಕೂಟ ವ್ಯವಸ್ಥೆಗೆ ತೋರುವ ಅತಿದೊಡ್ಡ ಗೌರವವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಿ ಕೃಪಾಪೋಷಿತ "ಹಿಂದಿದಿವಸ್" ಅನ್ನು ಕನ್ನಡಿಗರೆಲ್ಲರೂ ಸಾಂಕೇತಿಕವಾಗಿ ಪ್ರತಿಭಟಿಸಬೇಕಿದೆ. ನಮ್ಮ ಈ ಹಿಂದಿವಿರೋಧವನ್ನು ನಾವು ನಮ್ಮ ಕನ್ನಡ ಪ್ರೀತಿಗೆ ಸಮೀಕರಿಸಬೇಕಿದೆ. ಜತೆಗೆ ನಮ್ಮ ಭಾಷೆಯಬಗ್ಗೆ ಅಭಿಮಾನ ಮೂಡಿಸಿಕೊಳ್ಳಲು ಕನ್ನಡ ನಮ್ಮ ರಾಷ್ಟ್ರ ಭಾಷೆಎಂದು ಹೇಳುವಪರಿಪಾಠವನ್ನು ಬೆಳೆಸಿಕೊಳ್ಳಬೇಕಿದೆ.


***

0 comments: