ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ ಎ ಎಲ್) ತನ್ನ ಬೆಂಗಳೂರು ಸಂಕೀರ್ಣದಲ್ಲಿ ನೂರಕ್ಕೂ ಹೆಚ್ಚಾಗಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ವಿವಿಧ ಮಾಧ್ಯಮಗಳ ಮೂಲಕ ಜಾಹೀರಾತು ನೀಡಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇವರ ಅಂತರ್ಜಾಲ ತಾಣ (www.hal-india.com)ದಲ್ಲಿ ಲಭ್ಯವಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ೨೩.೯.೨೦೦೯ ಎಂದು ತಿಳಿಸಲಾಗಿದೆ. ಯಾವುದೇ ಹೊಸ ಯೋಜನೆಗಳು ಒಂದು ಪ್ರದೇಶದಲ್ಲಿ ಕಾರ್ಯರೂಪಗೊಂಡಾಗ ಅಲ್ಲಿ ದೊರಕಬಹುದಾದಂತ ಕೆಲಸ-ಅವಕಾಶಗಳಿಗಾಗಿ ಸ್ಥಳೀಯ ಉದ್ಯೋಗಾಕಾಂಕ್ಷಿ ಕಾತರ ಮತ್ತು ನೀರೀಕ್ಷೆಗಳಿಂದ ಎದುರು ನೋಡುವುದು ಸಹಜವಾದದ್ದು. ಒಂದು ರಾಜ್ಯದ ಜನರ ಏಳಿಗೆ ಆಗುವುದು, ಅಲ್ಲಿನ ನಿರುದ್ಯೋಗ ಸಮಸ್ಯೆ ಕಡಿಮೆ ಆಗುವುದರಿಂದ ಮತ್ತು ಅಲ್ಲಿನ ಜನ ದುಡಿಮೆ ಮಾಡಲು ತೊಡಗಿದಾಗ. ಇಂಥ ಏಳಿಗೆಗೆ ಸಾಧನವಾಗಿ ಪ್ರತಿ ರಾಜ್ಯಗಳಲ್ಲೂ ಉಂಟಾಗುವ ಹೊಸ ಉದ್ದಿಮೆಗಳಲ್ಲಿ ಮತ್ತು ಹಾಲಿ ಇರುವ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಕೆಲಸದವಕಾಶ ಹೆಚ್ಚಿಸಿಸುವುದು ಅತ್ಯಗತ್ಯವಾದದ್ದು. ಸರ್ಕಾರಗಳು ಉದ್ದಿಮೆಗಾರಿಕೆಗೆ ಉತ್ತೇಜನ ನೀಡುವ ಬಹು ಪ್ರಮುಖ ಕಾರಣ ಜನಗಳಿಗೆ ಉದ್ಯೋಗ ಸೃಷ್ಟಿ ಆಗುವ ಕಾರಣಕ್ಕಾಗಿಯೇ ಮತ್ತು ಅದು ಆಯಾ ರಾಜ್ಯದ ಜನರ ಅನುಕೂಲಗಳಿಗೆ ಪರಿವರ್ತನೆಯಾಗಬೇಕಾದ್ದು ಬಹು ಮುಖ್ಯವಾದದ್ದು. ಇವು ರಾಜ್ಯಗಳನ್ನು ಸುಭದ್ರಗೊಳಿಸಿ ಒಕ್ಕೂಟವನ್ನು ಬಲಪಡಿಸುವ ಬಹುದೊಡ್ಡ ಸಾಧನ.
ಆದರೆ ಹೆಚ್ ಎ ಎಲ್ ತನ್ನ ಬೆಂಗಳೂರು ಸಂಕೀರ್ಣಕ್ಕಾಗಿ ಈಗ ಬಿಡುಗಡೆ ಮಾಡಿರುವ ನೇಮಕಾತಿ ಅರ್ಹತೆಯ ಸೂಚನೆಗಳಲ್ಲಿ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ರಾಜ್ಯದವರಾಗಿರಬೇಕು, ಕಡ್ಡಾಯ ಕನ್ನಡ ಭಾಷೆಯ ಅರಿವಿರಬೇಕು ಎಂದು ಎಲ್ಲೂ ನಮೂದಾಗಿಲ್ಲದಿರುವುದನ್ನು ಕಾಣಬಹುದಾಗಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಹೆಚ್ ಎ ಎಲ್ ಸಂಸ್ಥೆಯ ಬೆಂಗಳೂರಿನ ಇದೇ ಸಂಕೀರ್ಣದಲ್ಲಿ ಆಗಿರುವ ೮೦೦ ಕ್ಕೂ ಹೆಚ್ಚಿನ ಇಂಜಿನಿಯರ್ ಹುದ್ದೆಗಳ ನೇಮಕಾತಿಯಲ್ಲಿ ಕೆಲಸ ಪಡೆದ ಕನ್ನಡಿಗರ ಸಂಖ್ಯೆ ಬೆರಳಣಿಕೆಯಷ್ಟಿರಿವುದು ನಮ್ಮದೇ ಊರುಗಳಲ್ಲಿ ಕನ್ನಡಿಗನಿಗೆ ಉದ್ಯೋಗದಲ್ಲಿ ಆಧ್ಯತೆ ಇಲ್ಲದಿರುವುದು ಕಂಡು ಬರುತ್ತದೆ. ಈ ಸಮಸ್ಯೆ ಕೇವಲ ಕರ್ನಾಟಕ್ಕ ಮಾತ್ರ ಸೀಮಿತವಾಗಿರುವುದನ್ನು ಸಹ ಹೆಚ್ ಎ ಎಲ್ ನ ಅಂತರ್ಜಾಲ ತಾಣವೇ ನಮಗೆ ತಿಳಿಸುತ್ತದೆ! ಇತ್ತೀಚೆಗೆ ಒರಿಸ್ಸಾದ ಕೊರಪುಟ್ ನಲ್ಲಿರುವ ಹೆಚ್ ಎ ಎಲ್ ಘಟಕದಲ್ಲಿನ ಖಾಲಿ ಹುದ್ದೆಗೆ ನಡೆದ ನೇಮಕಾತಿಯಲ್ಲಿ ಬಹುತೇಕ ಸ್ಥಳೀಯರೆ ಆಯ್ಕೆಯಾಗಿರುವುದು ಈ ಮೂಲಕ ಮನವರಿಕೆಯಾಗುತ್ತದೆ.
ಕೆಲದಿನಗಳ ಹಿಂದೆ ಕೇಂದ್ರ ರೈಲ್ವೇ ಸಚಿವರು ಸ್ಥಳೀಯರಿಗೆ ಇಂತಿಷ್ಟು ಹುದ್ದೆಗಳನ್ನು ಮೀಸಲು ನೀಡುವುದನ್ನು ಇಲಾಖೆ ಪರಿಶೀಲಿಸುತ್ತಿದೆ ಎಂದು ತಿಳಿಸಿದ್ದಾರೆ ಮತ್ತು ಲಿಖಿತ ಪರೀಕ್ಷೆಗಳನ್ನು ಸ್ಥಳೀಯ ಭಾಷೆಗಳಲ್ಲಿ ನಡೆಸುವುದರ ಬಗ್ಗೆ ತೀರ್ಮಾನಿಸಲಾಗುವುದರ ಬಗ್ಗೆ ವರದಿಯಾಗಿದೆ. ಹೆಚ್ ಎ ಎಲ್ ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರದ ಸಾರ್ವಜನಿಕ ಸಂಸ್ಥೆಗಳು ಸಹ ಈ ಮೇಲ್ಪಂಕ್ತಿಯನ್ನು ಅನುಸರಿರಿಸುವುದು ಭಾಷಾವಾರು ಒಕ್ಕೂಟದ ಆಧಾರದಲ್ಲಿ ರಚಿತವಾಗಿರುವ ಭಾರತದ ಸಂವಿಧಾನಾವನ್ನು ಗೌರವಿಸುವ ಜವಾಬ್ದಾರಿಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರದ ಆಯಾ ರಾಜ್ಯದ ಘಟಕಗಳಿಗೆ ಬೇಕಾದ ಮಾನವ ಸಂಪನ್ಮೂಲಗಳನ್ನು ಆಯಾ ರಾಜ್ಯಗಳಿಂದಲೇ ಪೂರೈಕೆ ಮಾಡಿಕೊಳ್ಳುವಂತಹ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೊಳಿಸುವುದರಿಂದ ಅನವಶ್ಯಕ ವಲಸೆಯಿಂದ ಉಂಟಾಗುವ ಸಾಮಾಜಿಕ ಸಮಸ್ಯೆಗಳನ್ನು ನಿಯಂತ್ರಿಸಬಹುದಾಗಿದೆ.
ಕರ್ನಾಟಕ ಸರ್ಕಾರ, ಕಾರ್ಮಿಕ ಇಲಾಖೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕದಲ್ಲಿನ (ಮುಖ್ಯವಾಗಿ ಬೆಂಗಳೂರು ನಗರದಲ್ಲಿ) ಕೇಂದ್ರ ಸರ್ಕಾರದ ಸಾವರ್ಜನಿಕ ಸಂಸ್ಥಗಳಲ್ಲಿ, ಖಾಸಗೀ ಕ್ಶೇತ್ರಗಳಲ್ಲಿ ನೇಮಕವಾಗಿರುವ ಉದ್ಯೋಗಿಗಳ ಸಂಖ್ಯೆ ಮತ್ತು ಇದರಲ್ಲಿ ಕನ್ನಡಿಗರು ಎಷ್ಟು ಎಂಬ ಮಾಹಿತಿ ಹೆಕ್ಕಿ ತೆಗೆದು ಕನ್ನಡಿಗರ ಮುಂದಿರಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಸ್ಥಳೀಯರಿಗೇ ಉದ್ಯೋಗ ದೊರಕಿಸಿಕೊಡುವ "ಉದ್ಯೋಗ ನೀತಿಯನ್ನು" ಜಾರಿಗೊಳಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ. ಮತ್ತೊಂದು ವಿಷಯವೆಂದರೆ, ಕನ್ನಡ ನಿರುದ್ಯೋಗಿಗಳ ಹಿತ ಕಾಯಲು ಜಾರಿಯಾಗಬೇಕಾಗಿರುವ ಮಹಿಷಿ ವರದಿಯನ್ನು ತುಕ್ಕು ಹಿಡಿಸಿ ಮಲಗಿಸಿಡಲಾಗಿದೆ. ಅದಕ್ಕೆ ಸಾಣಿ ಹಿಡಿದು ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯಿರುವ ನಾಯಕ ಯಾರೆಂದು ಕನ್ನಡಿಗ ಆಸೆಯ ಕಣ್ಣುಗಳಿಂದ ಇನ್ನೂ ಎದುರು ನೋಡುತ್ತಿದ್ದಾನೆ.
******************************************
ಈ ಅಹವಾಲು ಬೆಂಗಳೂರಿನ 'ಹೊಸದಿಗಂತ' ಮತ್ತು 'ಉದಯವಾಣಿ' ಯಲ್ಲಿ ಪ್ರಕಟವಾಗಿದೆ.
***
0 comments:
Post a Comment