Sunday, October 4, 2009

ದಿವಾಳಿಯಾಗು ಅನ್ನಿಸಿಕೊಳ್ಳಬೇಡಿ! "ದೀಪಾವಳಿಗೆ ಶುಭಾಶಯ" ತಿಳಿಸಲು ಹೇಳಿ......

*****
ಆಗಲೆ " ದಿವಾಳಿ " (DIVALI, DEEWALI, DEEVAALI) ಆಗೆಂದು ಒಂದೊಂದಾಗಿ ಹಾರೈಕೆಗಳು ಬರುತ್ತಿವೆ. ಟಿವಿಗಳಲ್ಲಿ, ಪತ್ರಿಕೆಗಳಲ್ಲಿ (ಕನ್ನಡದವು ಸೇರಿದಂತೆ) ಮಾರಾಟಗಾರರು ತಮ್ಮ ಅಂಗಡಿ, ಮಳಿಗೆಗಳಲ್ಲಿ ಬಂದು ವಸ್ತುಗಳನ್ನು ಕೊಂಡು 'ದಿವಾಳಿ'ಯಾಗಲು ಜಾಹೀರಾತು (ಈ ವರ್ಷದ ನಿಮ್ಮ "ದಿವಾಳಿ" ಆಚರಿಸಲು ನಮ್ಮ ಅಂಗಡಿಯಲ್ಲಿ ಸಾಮಾನು ಖರೀದಿಸಿ ಎನ್ನುತ್ತ) ಮೂಲಕ ಕರೆ ನೀಡುತ್ತಿದ್ದಾರೆ.

ಹೌದು ನಾವು ದೀಪ ಬೆಳಗಿಸಿ ನಮ್ಮೂರಲ್ಲಿ ಆಚರಿಸುವ ದೀಪಾವಳಿಯ ಹೆಸರು ನಿಧಾನವಾಗಿ ಬದಲಾಗುತ್ತಿದೆ. ಎಲ್ಲೆಡೆ ಅದು ದಿವಾಲಿ, ದಿವಾಳಿ ಯಾಗಿ ಭಿತ್ತರವಾಗುತ್ತಿದೆ. ಭಾರತದ ಇತರೆಡೆಗಳಲ್ಲಿ ಮುಖ್ಯವಾಗಿ ಉತ್ತರಭಾರತದಲ್ಲಿ ದೀಪಾವಳಿಗೆ ದಿವಾಲಿ ಎಂದು ಕರೆಯುವ ಪದ್ಧತಿ ಇರಬಹುದು! ಅಥವ ಅಲ್ಲಿಯೂ ದೀಪಾವಳಿ ಇದ್ದದ್ದು ದಿವಾಳಿ ಎಂದು ಬದಲಾಗಿದೆಯ? ಗೊತ್ತಿಲ್ಲ! ಇನ್ಯಾರೋ ಹಾಗೆ ಕರೆಯಲು ಹೊರಟಿದ್ದಾರೆ, ಅದು ಸರಿಯ? ತಪ್ಪ ? ಹಾಗೆ ಕರೆಯುತ್ತಿರುವ ಪದದ ಅರ್ಥ ಏನಾಗಿರಬಹುದು ಅಂತ ಯೋಚಿಚದೆ, ನಾವು ಸಹ ಇತರರಂತೆ ಹಾಗೆಯೆ ಶುಭಾಶಯ ವಿನಿಮಯ ಮಾಡಿಕೊಳ್ಳಲು ಮುಂದಾಗಿದ್ದೇವೆ.

ಇದರಂತೆಯೆ ನಮ್ಮ ಸಂಕ್ರಾಂತಿ ಸಹ. ಸಂಕ್ರಾಂತಿ ಅಂದ್ರೆ ಇವತ್ತು ಅನೇಕರು ಅದೇನೆಂದು ಕೇಳುವ ಪರಿಸ್ಥಿತಿ ಇದೆ. ಅದು ಪೊಂಗಲ್ ಆಗಿ ಹೆಚ್ಚಾಗಿ ಪ್ರಚಲಿತವಾಗುತ್ತಿದೆ. ನಮ್ಮ 'ದಸರಾ' ಸಹ 'ದುಶಿರಾ' ಅಂತ ಕಣ್ಣ ಮುಂದೆಯೇ ಬದಲಾವಣೆ ಆಗುತ್ತಿದೆ. ನಿಧಾನವಾಗಿ-ಒಂದೊಂದಾಗಿ ನಮ್ಮ ತನವನ್ನು, ನಮ್ಮ ಆಚರಣೆಯನ್ನು ಇತರರಿಗೆ ಬಿಟ್ಟುಕೊಟ್ಟು , ತಾನೂ ಅವರ ಜತೆ ಸೇರಿ ಕುಣಿದು-ತಿಪ್ಪರಲಾಗ ಹಾಕಿ ಶ್ರೀಮಂತವಾದ ನಮ್ಮ ಸಂಸ್ಕೃತಿಯನ್ನು ನಾವೆ ಬರಿದು ಮಾಡಿಕೊಂಡು ಮೂಲೆಗುಂಪಾಗುತ್ತಿದ್ದೇವೆ ಅನ್ನಿಸುತ್ತಿಲ್ಲವೆ? ಈ ಅನಿಸಿಕೆಯನ್ನು ಸಮರ್ಥಿಸುವವರಿಗಿಂತ ಯಾಕಪ್ಪ ಹೀಗೆ ಸಂಕುಚಿತವಾಗಿ ಬರೆದಿದ್ದೀಯ ಅಂತ ಹೇಳುವವರೆ ಬಹುಷ: ಹೆಚ್ಚಾಗಿ ಪ್ರತಿಕ್ರಿಯಿಸಬಹುದೇನೊ. ನಾವು ಎಲ್ಲರಲ್ಲೂ-ಎಲ್ಲದರಲ್ಲೂ ಬೆರೆತು (ನಮ್ಮದು ಮಾತ್ರ ಪಕ್ಕಕ್ಕಿಟ್ಟು) ಭಾವಕ್ಯತೆ ಪ್ರದರ್ಶಿಸುವುದರಲ್ಲಿ ಮೊದಲಿಗರಲ್ಲವೇ?

ಕಳೆದ ೨೭ ವರ್ಷಗಳಿಂದ ಬೆಂಗಳೂರಿನ ಅಚ್ಚ ಕನ್ನಡಿಗರೆ ಹೆಚ್ಚಾಗಿ ನೆಲಸಿರುವ ಪ್ರದೇಶವೊಂದರಲ್ಲಿ ನಮ್ಮನೆಯಿರೋದು. ನಾನು ಅಲ್ಲಿ ನಿರಂತರವಾಗಿ ನೆಲಸಿರದಿದ್ದರೂ ಅಲ್ಲಿನ ಆಗುಹೋಗುಗಳನ್ನು ಗಮನಿಸಿದ್ದೇನೆ - ಕಿವಿಗೊಟ್ಟಿದ್ದೇನೆ. ಇಷ್ಟು ವರ್ಷಗಳಲ್ಲಿ ಇಲ್ಲಿನ ಅಕ್ಕ-ಪಕ್ಕ , ಸುತ್ತ -ಮುತ್ತ ಒಂದು ಹನುಮಂತನ, ಒಂದು ಗಣೇಷ ಅಥವ ಒಂದು ಅಣ್ಣಮ್ಮ ದೇವಸ್ಥಾನ ಪ್ರಾರಂಭವಾದದ್ದು ನನ್ನ ಕಣ್ಣಿಗೆ ಬಿದ್ದಿಲ್ಲ. ಎಲ್ಲರಿಗೂ ಎದ್ದು ಕಾಣುವಂತೆ ಇಲ್ಲಿ ಮೊದಲಿಗೆ ಹುಟ್ಟುಕೊಂಡಿದ್ದು ಅಯ್ಯಪ್ಪ ದೇವಸ್ಥಾನ, ನಂತರ ಪಕ್ಕದಲ್ಲಿ ಓಂ ಶಕ್ತಿ ದೇವಸ್ಥಾನ. ನಾನು ಕಂಡ ಹಾಗೆ ನಮ್ಮ ಬಡಾವಣೆಯಲ್ಲಿ ದಸರ ಸಮಯದಲ್ಲಿ ಮನೆಗಳಲ್ಲಿ ಗೊಂಬೆಗಳನ್ನು ಇಟ್ಟು ಹಬ್ಬ ಆಚರಿಸಿಕೊಳ್ಳುವುದು ಇವರೆಗೂ ನಡೆದು ಬಂದಿರುವ ಪದ್ಧತಿ. ಆದರೆ ಈ ವರ್ಷ ಹೊಸ ಪಿಡುಗೊಂದು ಈ ಪ್ರದೇಶದಲ್ಲಿ ಹೆಡೆಯೊಡೆದಿತ್ತು.



ಗರ್ಬಾ (ಗರ್ಭ=ಬಸುರಿ ಅಲ್ಲ) / ಧಾಂಡಿಯ ಎಂಬ ಅರ್ಥವಿಲ್ಲದ ನೃತ್ಯ ದಸರಾದ ಮೊದಲ ದಿನ ಪ್ರಾರಂಭವಾಗಿ ಮುಗಿದದ್ದು ವಿಜಯದಶಮಿಯ ಹಿಂದಿನ ದಿನ. ಇದನ್ನು ಆಯೋಜಿಸಿದ್ದವರಿಗೆ ಕನ್ನಡಿಗರ ಸಹಯೋಗವೂ ಇತ್ತು ಎಂದು ಹೇಳಲೇಬೇಕಾಗಿಲ್ಲ! ಬಹುಷ: ಒಮ್ಮೆಯಾದರೂ ಈ ಪರಿ ಖರ್ಚು ಮಾಡಿ ಇವರು ಇಲ್ಲಿ ನಮ್ಮ ರಾಜ್ಯೋತ್ಸವ ಆಚರಿಸಿದ್ದು ನೆನಪಿಲ್ಲ. ರಾತ್ರಿ ೮ ಘಂಟೆಗೆ ಶುರುವಾಗುತ್ತಿದ್ದ ಇದು ಮುಗಿಯುತ್ತಿದ್ದುದು ರಾತ್ರಿ ೧೨ ರ ನಂತರವೇ. ರಾತ್ರಿ ೮ -೯ ರ ಒಳಗೆ ನಿರ್ಜನವಾಗುವ, ಸರಿಸುಮಾರು ಅದೆ ಸಮಯಕ್ಕೆ ನಿದ್ರೆಗೆ ಜಾರುತ್ತಿದ್ದ, ಬಹುತೇಕ ಹಿರಿಯ ನಾಗರೀಕರೆ ವಾಸಿಸುವ ಸುತ್ತಮುತ್ತಲಿನ ಈ ಪ್ರದೇಶದಲ್ಲಿ ಆ ದಿನಗಳಲ್ಲಿ ಕರ್ಕಷವಾದ ಧ್ವನಿಯೊಂದು ಎಡಬಿಡದೆ ಹಿಂದಿ ಹಾಡುಗಳನ್ನು ಒರಲುತ್ತಿತ್ತು. ಆ ಧ್ವನಿ ಮೈಕಾಸುರನ ಸಹಾಯದಿಂದ ೧೦೦ ಪಟ್ಟು ದ್ವಿಗುಣಗೊಂಡು, ಆರ್ಭಟ ತಡೆಯಲಾಗದೆ ಇಡೀ ಬಡಾವಣೆಯೇ ಬೆಚ್ಚಿ ಬಿದ್ದಿತ್ತು. ವಿಚಾರಿಸಿದಾಗ ತಿಳಿದು ಬಂದದ್ದು ಇವರು ನಡೆಸುತ್ತಿರುವುದು ಗರ್ಭಾ ಅಥವ ದಾಂಡಿಯ ಎಂಬ "ಗುಜರಾತಿಗಳ ಹಬ್ಬ"

ಗರ್ಬಾ ಅಥವ ದಾಂಡಿಯ ದಸರಾ ಸಮಯದಲ್ಲಿ ಗುಜರಾತಿಗಳು (ನಾವು ಮನೆಯಲ್ಲಿ ಗೊಂಬೆ ಪ್ರದರ್ಶನ ಮಾಡುವಂತೆ) ಪ್ರತಿ ರಾತ್ರಿ ತಮ್ಮ ತಮ್ಮ ಬಡಾವಣೆಗಳಲ್ಲಿ ಆಚರಿಸುವ ಒಂದು ನೃತ್ಯದ ಸ್ನೇಹಕೂಟ. ಆ ಸಮಯದಲ್ಲಿ ಅವರ ಮನೆಗಳಲ್ಲಿ ಮಕ್ಕಳು-ದೊಡ್ಡವರು-ಅಜ್ಜ-ಅಜ್ಜಿಯರಾದಿಯಾಗಿ ಎಲ್ಲರೂ ಇದರಲ್ಲಿ ಭಾಗವಹಿಸುತ್ತಿದ್ದರು. ಅಲ್ಲಿ ಅದು ಯಾರಿಗೂ ಕಿರಿಕಿರಿ ಮಾಡುವುದಿಲ್ಲ. ಏಕೆಂದ್ರೆ ಅಲ್ಲಿ ಎಲ್ಲರೂ ಭಾಗವಹಿಸುತ್ತಾರೆ. ಬೆಳಿಗ್ಗೆ ತಮ್ಮ ಕೆಲಸಗಳನ್ನು ಮುಗಿಸಿ, ರಾತ್ರಿ ಊಟ ಮುಗಿಸಿ, ಸಾಮೂಹಿಕವಾಗಿ ಆಚರಿಸಿಕೊಳ್ಳುತ್ತಾರೆ. ಅದು ಅವರ ಸಂಪ್ರದಾಯ ಅವರು ಅಲ್ಲಿ ಆಚರಿಸಿಕೊಳ್ಳಲಿ ನಮ್ಮ ಅಭ್ಯಂತರವಿಲ್ಲ. ಅದನ್ನು ಇಲ್ಲಿ ಕೇವಲ ಒಬ್ಬಿಬ್ಬರ ಶೋಕಿಗಾಗಿ ಬಡಾವಣೆ-ಬಡಾವಣೆಗೆ ಚಿತ್ರಹಿಂಸೆ ನೀಡಿ ನಿದ್ರೆಗೆಡಿಸಿದ್ದು ಯಾಕೆ ಎಂಬುದೇ ಪ್ರಶ್ನೆ.

ಹೋಗಿ ವಿಚಾರಿಸಿದಾಗ ಯಾರೂ ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿರಲಿಲ್ಲ? ಎಲ್ಲರೂ ದೇವಿ 'ತೀರ್ಥ' ವನ್ನು ಸೇವಿಸಿ ಪಾವನವಾಗಿದ್ದರು. ಹಾಡುಗಾರ "ಛೋಲಿ ಕೆ ಪೀಚೆ ಕ್ಯಾ ಹೈ" ಅಂತ ವಿಚಾರಿಸ್ತಿದ್ದ. "ಮೈ ಹೂ ಡಾನ್ ಮೈ ಹೂ ಡಾನ್", "ಮೆ ಕಲನಾಯಕ್ ಹೂ" ಅಂತ ಹೂಂಕರಿಸುತ್ತಿದ್ದ. ಕೊನೆಗೂ ಅದೆಲ್ಲಿದ್ದರೋ! ಪೋಲಿಸಣ್ಣರು ಬಂದ ಮೇಲೆಯೇ (ಯಾರೋ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು) ಇವರ ಆಟಕ್ಕೆ ಕಡಿವಾಣ ಬಿದ್ದದ್ದು. ಈ ಸಲದ ವ್ಯವಹಾರ ಮುಗಿಸಿ ಹೋಗುವ ಮುನ್ನ ಮತ್ತೆ ಮುಂದಿನ ವರ್ಷ ಬರ್ತೀವಿ ಅಂತ ಸಹ ಅವರು ಕಿರುಚಿ ಹೋಗಿದ್ದಾರೆ. ಇಲ್ಲಿಗೆ ಬಂದು ಗಮನಿಸಿ-ಭಾಗವಹಿಸಿ ಹೋದ ಸಾಂಸ್ಕೃತಿಕ ಸಹೃದಯರು! 'ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಅನ್ನುವಂತೆ' ಇಂತಹ 'ಸಾಂಸ್ಕೃತಿಕ' ಹಾವಳಿಗಳನ್ನು ನಿಧಾನವಾಗಿ ಬೆಂಗಳೂರಿನಲ್ಲೆಲ್ಲಾ ಹರಡಿಸುವುದರಲ್ಲಿ ಸಂದೇಹವೇ ಇಲ್ಲ.

ಮತ್ತೊಮ್ಮೆ ಇದು ಮರುಕಳಿಸಲು ವರ್ಷದ ಸಮಯವಿದೆ. ಹೇಗೆ ನಿಯಂತ್ರಿಸಬಹುದು ಯೋಚಿಸಲು ಸಮಯವಿದೆ. ಆದರೆ ದೀಪಾವಳಿ ಮಾತ್ರ ಇನ್ನೇನು ಹತ್ತಿರದಲ್ಲೆ ಇದೆ. ಯಾರಿಗೂ 'ದಿವಾಳಿ' ಯಾಗುವ ಶುಭಾಶಯ! ತಿಳಿಸದಿರೋಣ. "ದೀಪ ಬೆಳಗಿಸಿ ದೀಪಾವಳಿ ಆಚರಿಸಿ" ಎಂದು ಹೇಳೋಣವೆ?

ಚಂದ್ರಶೇಖರನ್ ಕಲ್ಯಾಣ ರಾಮನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!

*****

7 comments:

Anonymous said...

ಕಲ್ಯಾಣ್ ಅವರೆ,

ನಿಮ್ಮನ್ನು ಸಂಕುಚಿತ ಮನೋಭಾವದವರೆಂದು ಕರೆಯುವವರು ದಡ್ಡರು! ಅವರ ಮಾತಿಗೆ ಕವಡೇ ಕಾಸಿನ ಬೆಲೆಯಿಲ್ಲ. ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ. ಆದ್ದರಿಂದ ನಿಮ್ಮ ಲೇಖನಗಳನ್ನು ಹೀಗೇ ಮುಂದುವರೆಸಿ. ಈ ಸಲಾ ನನಗೇನಾದರೂ ಹ್ಯಾಪಿ ದೀವಾಳಿ ಅಂತ ಈಮೈಲ್ ಬಂದರೆ, “ದೀವಾಳಿ” ಅಲ್ಲ “ದೀಪಾವಳಿ” ಎಂದು ತಿಳಿಹೇಳುತ್ತೇನೆ.

=ವೆಂಕಿ

ನಿವೇಶ್ ಜೈನ್ said...

ಇದನ್ನು ತು೦ಬಾ ದಿನದಿ೦ದ ಕೇಳಬೇಕೆ೦ದುಕೊ೦ಡಿದ್ದೆ- ಹಾಗಿದ್ದರೆ ದೀಪಾವಳಿಗೆ ದೀಪಾವಳಿಯ ಹೆಸರು ಕೊಟ್ಟವರೇ ನಾವೆ? ಕನ್ನಡವನ್ನು ಬಿಟ್ಟು ಬೇರೆ ಭಾಷೆಗಳಲ್ಲಿ ಈ ದೀಪಾವಳಿಯೆ೦ಬ ಪದಕ್ಕೆ ಸಮ೦ಜಸವಾದ ಅರ್ಥ ಸಿಗಲ್ಲ. ದೀಪಗಳ ಹಾವಳಿ = ದೀಪಾವಳಿ ಎ೦ದಾಗಿರಬಹುದೆ.

Gautham said...

Raman avare,
Sariyagi heliddeera..
Naavu either Kannada/Karnatakada pada upayogisabeku athava English upayogisona.
Thanks for ur post again.

Anonymous said...

ಕಲ್ಯಾಣ್ ರಾಮನ್ ಅವರೇ.
ಅವರು ಹಾಕಿದ ಬೋರ್ಡ್nನಲ್ಲಿ ಕನ್ನಡದಲ್ಲಿ ಒಂದು ಪದನು ಇಲ್ಲ.. ನೋಡಿದ್ರೆ ತುಂಬಾ ಬೇಜಾರ ಅಗತೆ..
ನಾವು ಗಣೇಶ ಹಬ್ಬ ಮಾಡ ಬೇಕು ಅಂದ್ರೆ, ಎಷ್ಟು permission ತೊಗೋ ಬೇಕು..
ಇವರ ಹಬ್ಬ ಗೆ ರಾತ್ರಿ ೧೨ ಗಂಟೆ ಅದ್ರು loudspeaker ಹಾಕ ಬಹುದು .. ನಾವು ೧೦ ಗಂಟೆ ಅದ ಮೇಲೆ ಶಬ್ದ ಬಂದ್ರೆ , ಎಲ್ಲರೂ ಫೋನ್ ಮಾಡಿ police ಕರಿತಾರೆ.. ನಾವು ಇನ್ನ ಮೇಲೆ ಹಂಗೆ ಮಾಡ ಬೇಕು..
ಇಂತಿ,
ಹರ್ಷ ಘಟ
Regards,
Harsha Gatt

Mugali Bhimappa said...

Nimma chintane tumba madhuravagide adare ee ella prasnegalige uttara siguvadu birugaliyalli kasa goodisida age aguvadu namma rajakeeyadalli dhurinaru maduva upatala aduve ondu pataki eddante allvae? Tamilaralli eruva kalagi nammaliiruva political power satta nayiyante allvae? Thanks a lot for your beautifull thoughts.

Malini said...

raaman avare,
nimma article tumba arthagarbhitha vagide. navella modernization anta helikondu namma beranne mareyuttiddeve. kanndadalli diwali ya artha gottiddavaru bagashaha deepavali anta wish madabahudu.

ಸವಿತೃ said...

ಅಚ್ಚ ಕನ್ನಡದಲ್ಲಿ ದೀಪಾವಳಿಗೆ "ದೀವಳಿಗೆ" ಅಂತಾರೆ. ಈ ಪದವನ್ನು ಹೆಚ್ಚು ಬಳಸಲು ಉತ್ತೇಜಿಸಬಹುದು.