Wednesday, October 28, 2009

ಯಾರು "ಗ್ರಾಹಕ ಕೈಪಿಡಿ" ಕನ್ನಡದಲ್ಲಿ ಮಾಡಿಸಿದ್ದಾರೆ?

***

ಕೆಲ ದಿನಗಳ ಹಿಂದೆ ಬಜಾಜ್ ಸಂಸ್ಥೆಯ "ಇಸ್ತ್ರಿ ಪೆಟ್ಟಿಗೆ ಖರೀದಿಸಿದೆ". ಮನೆಗೆ ಬಂದು ಡಬ್ಬ ತೆರೆದಾಗ ಅದರಲ್ಲಿ ಕೈಪಿಡಿಯೊಂದಿತ್ತು. ತೆರೆದು ನೋಡಿದಾಗ ಬೇಜಾರಾಯ್ತು. ಮಾಹಿತಿ ಕನ್ನಡೇತರ ಭಾಷೆಯಲ್ಲಿದೆ.
ಹಾಗೆಯೆ ಕೈಪಿಡಿ ಗಮನಿಸಿದಾಗ, ಬಜಾಜ್ ಸಂಸ್ಥೆಯ ಬೆಂಗಳೂರು ಶಾಖೆಯ ಮಿಂಚೆ ವಿಳಾಸ ಕಂಡು ಬಂತು.
ಮೊನ್ನೆ ೨೬ ನೆ ತಾರೀಖು ಅವರಿಗೆ ಈ ರೀತಿ ಮಿಂಚಿಸಿದೆ.
*****
ನಾನು 18/10/2009 ರಂದು ಬೆಂಗಳೂರಿನ ಪೈ ಇಂಟರ್ ನ್ಯಾಷನಲ್ ಅಂಗಡಿಯಲ್ಲಿ ಬಜಾಜ್ಎಲೆಕ್ಟ್ರಿಕಲ್ಸ್ ತಯಾರಿಕೆಯ ಪಾಪ್ಯುಲರ್ "ಇಸ್ತ್ರಿ ಪೆಟ್ಟಿಗೆ" ಖರೀದಿಸಿದೆ. ವಿಪರ್ಯಾಸವೆಂದರೆ ಇಸ್ತ್ರಿ ಪೆಟ್ಟಿಗೆಯ ಜತೆಗೆ ವಿತರಿಸಿರುವ "ಉಪಯೋಗ ಮತ್ತುಸುರಕ್ಷತೆ" ಯ ಕೈಪಿಡಿ ಕನ್ನಡೇತರ ಭಾಷೆಯಲ್ಲಿದೆ. (ಲಗತ್ತಿಸಿರುವ ಚಿತ್ರ ನೋಡಿ)

ಬೆಂಗಳೂರು ಮತ್ತು ಕರ್ನಾಟಕ ದೇಶದ ನಾಡ ಭಾಷೆ ಕನ್ನಡ. ಇಲ್ಲಿ ನಿಮ್ಮ ಸಂಸ್ಥೆಯ ಮೂಲಕತಯಾರಿಸಿ ವಿತರಿಸುವ ಎಲ್ಲಾ ಗ್ರಾಹಕ ಉಪಯೋಗಿ ವಸ್ತುಗಳ ಬಗೆಗಿನ ಮಾಹಿತಿ, ವಿವರಣೆ,ಜಾಹೀರಾತು ಆಧ್ಯತೆಯಾಗಿ ಕನ್ನಡ ಭಾಷೆಯಲ್ಲಿರುವಂತೆ ಗಮನಿಸಬೇಕಾದ್ದು ನಿಮ್ಮ ಮೂಲಕರ್ತವ್ಯ.

ಕೂಡಲೇ ಕೆಳಗಿನ ವಿಳಾಸಕ್ಕೆ ಇಸ್ತ್ರಿ ಪೆಟ್ಟಿಗೆ "ಉಪಯೋಗ ಮತ್ತು ಸುರಕ್ಷೆ" ಕನ್ನಡಕೈಪಿಡಿ ಕಳುಹಿಸಿಕೊಡಬೇಕಾಗಿ ವಿನಂತಿ.
*****
ನಂತರ ೦೮೦-೪೨೬೬೨೨೩೧ ದೂರವಾಣಿಯಿಂದ ನನಗೆ ಕರೆಯೊಂದು ಬಂತು. ಕರೆ ಮಾಡಿದಾತ "ನನ್ನ ಹೆಸರು ವಿಜಯ್, ಬಜಾಜ್ ಬೆಂಗಳೂರು ಅಫೀಸ್ ನಿಂದ ಕರೆ ಮಾಡ್ತಿದ್ದೀನಿ" ಎಂದು ಪರಿಚಯಿಸಿಕೊಂಡು, ನನ್ನ ಮಿಂಚೆ ಕುರಿತು ಸಮಜಾಯಿಷಿ ಕೊಡಲು ಪ್ರಯತ್ನಿಸಿದರು. ಮಾತನಾಡುತ್ತ ವಿಜಯ್ ಹೇಳಿದ್ದು "ಕನ್ನಡದಲ್ಲಿ ಕೈಪಿಡಿ ಮಾಡಿಸಿಲ್ಲ, ಪೂರ್ತಿ ಭಾರತ! ಗಮನದಿಲ್ಲಿಟ್ಟುಕೊಂಡು ಎರಡು ಭಾಷೆಯಲ್ಲಿ ಕೈಪಿಡಿ ಮಾಡಿದ್ದೇವೆ......

ನಾನು "ನಮ್ಮ ಮನೆಯಲ್ಲಿ ಬಜಾಜ್ ಸಂಸ್ಥೆ ಇಸ್ತ್ರಿ ಪೆಟ್ಟಿಗೆಯ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಲು ನಮಗೆ ಅವಶ್ಯವಿರುವ ಭಾಷೆ ಕನ್ನಡ" ಕನ್ನಡೇತರ ಭಾಷೆಯ ಕೈಪಿಡಿ ನಮಗೆ ಉಪಯೋಗವಿಲ್ಲ. ಇಡೀ ಭಾರತ! ಗಮನದಲ್ಲಿರಿಸಿ ನೀವು ಕೈಪಿಡಿ ತಯಾರಿಸಿರುವುದಾದರೆ ೨೦ಕ್ಕೂ ಹೆಚ್ಚಿನ ಭಾಷೆ ನಿಮ್ಮ ಕೈಪಿಡಿಯಲ್ಲಿ ಅಳವಡಿಸಬೇಕಿತ್ತು... ಹೀಗೆ ಕರ್ನಾಟಕದಲ್ಲಿ ಅವರ ವ್ಯವಹಾರದಲ್ಲಿ ಕನ್ನಡದ ಅವಶ್ಯಕತೆ ಏಕೀರಬೇಕು. ಅಂತೆಯೆ ತಮಿಳುನಾಡಿನಲ್ಲಿ ಬಜಾಜ್ ತಮಿಳನ್ನೇ ಏಕೆ ಉಪಯೋಗಿಸಬೇಕು ಎಂದು ಮನವರಿಕೆ ಮಾಡಿಸಲು ಪ್ರಯತ್ನಿಸಿದೆ! ಕೊನೆಗೆ ವಿಜಯ್, ಈ ಕುರಿತಾಗಿ ಬಜಾಜ್ ಮುಖ್ಯ ಕಚೇರಿಗೆ ತಿಳಿಸಿ ಕನ್ನಡದಲ್ಲಿ ಕೈಪಿಡಿ ಮಾಡಿಸಿ ಕೊಡುವಬಗ್ಗೆ ಭರವಸೆ ನೀಡಿದ್ದಾರೆ!

ವಿಜಯ್ ಕೊನೆಯದಾಗಿ ಒಂದು ಪ್ರಶ್ನೆ ನನ್ನನ್ನೇ ಕೇಳಿದರು. ಈ ರೀತಿ ವಸ್ತುಗಳನ್ನು ತಯಾರಿಸಿರುವವರು ಯಾರು ಕೈಪಿಡಿ ಕನ್ನಡದಲ್ಲಿ ಮಾಡಿಸಿದ್ದಾರೆ ಎಂದು? "ಯಾರು ಮಾಡಿಸಿದ್ದಾರೆ ಎಂಬ ಮಾಹಿತಿ ನನ್ನಲ್ಲಿಲ್ಲ, ಯಾರ್ಯಾರು ಮಾಡಿಸಿಲ್ಲ ಎಂದು ನನಗೆ ಕಂಡು ಬಂದಾಗ ಕನ್ನಡದಲ್ಲಿ ಮಾಡಿಸಿ ಎಂದು ನಾನು ಕೇಳುತ್ತೇನೆ. ನೀವು ಮಾಡಿಸಿಲ್ಲ ಈಗ ನೀವು ಮಾಡಿಕೊಡಿ ಎಂದೆ.

ಇದನ್ನೂ ಓದುತ್ತಿರುವವರೆಲ್ಲಾ ಇನ್ನು ಮುಂದೆ ತಾವು ಖರೀದಿಸುವ ಯಾವುದೇ ವಸ್ತು ಇರಲಿ (ಟಾಟಾ ಸ್ಕೈ, ಸಾಮ್ಸಂಗ್ ಟೀವಿ, ಓನಿಡಾ ಒಗೆಯೋ ಯಂತ್ರ, ಫಿಲಿಪ್ಸ್ ರೇಡಿಯೋ...............ಹೀಗೆ) ಕನ್ನಡದಲ್ಲಿ ಇದರ ಮಾಹಿತಿ, ವಿವರಣೆ, ಕೈಪಿಡಿ ವಿತರಿಸಿ ಎಂದು ಕೇಳಲೇ ಬೇಕಲ್ಲವೆ?

ಕೆಳಗಿನ ಚಿತ್ರ ನೋಡಿ.

ಯೂರೋಪ್ ನಲ್ಲಿ ತಯಾರಾದ ಜೀವ ಕವಚವೊಂದರ ಕುರಿತಾದ ವಿವರಣೆ. ಇಡೀ ಪ್ರಪಂಚಕ್ಕೆ ತಿಳಿಯತ್ತಲ್ಲ ಅಂತ ಅವರು ಒಂದು ಭಾಷೆಯಲ್ಲಿ ಅದರ ವಿವರಣೆ ನೀಡಿ ಸುಮ್ಮನಿರಬಹುದಿತ್ತು. ಆದರೆ ಜೀವದ ಬೆಲೆ ಅವರಿಗೆ ಏನೆಂದು ಗೊತ್ತು ಮತ್ತು ವಸ್ತುವಿನ ಬಳಕೆ ಸಮರ್ಪಕವಾಗಿ ಆಗಬೇಕೆಂಬ ಕಾಳಜಿ ಅವರಿಗಿದ್ದುದರಂದ ಅವರು ತಮ್ಮ ಉತ್ಪನ್ನ ವಿತರಿಸುವೆಡೆಯಲ್ಲಿ ಬಳಕೆಯಲ್ಲಿರುವ ಭಾಷೆಗಳಲ್ಲಿ ವಿವರಣೆ ನೀಡಿದ್ದಾರೆ.

ತಮ್ಮ ಉತ್ಪನ್ನಗಳ ಹೆಚ್ಚಿನ ಬಿಕರಿಗೆ ಇದೊಂದು ದಾರಿ ಸಹ ಅಂತ ಇವರು ತಿಳಿದುಕೊಂಡಿದ್ದಾರೆ. ನಮ್ಮ ಭಾರತದ ಸಂಸ್ಥೆಗಳು ಇಲ್ಲದ್ದನ್ನು ನಮ್ಮ ಮೇಲೆ ಹೇರಲು ಮುಂದಾಗಿದ್ದಾರೆ.

ಚಂದ್ರಶೇಖರನ್ ಕಲ್ಯಾಣ ರಾಮನ್,
ಹಳದಿ - ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

***

3 comments:

ಕವಿತ said...

ಹಾಗೇ ನೋಡಿದ್ರೆ... ಔಷಧಿ ಸೀಸೆಗಳ ಮೇಲೂ ಕನ್ನಡ ಕಾಣುವುದಿಲ್ಲ. ಹೀಗೆ ಹುಡುಕುತ್ತಾ ಹೋದರೆ ಸುಮಾರಿವೆ.

ವಿಚಾರಧಾರೆ said...

ಕಲ್ಯಾಣ ರಾಮನ್ ಅವರೇ,

ಒಂದು ಒಳ್ಳೆಯ ಲೇಖನವನ್ನು ಬರೆದಿದ್ದೀರ. ಎಲ್ಲೆಲ್ಲಿ ನಮಗೆ ಇಂತಹ ಸಂದರ್ಭಗಳು ಕಾಣಿಸುತ್ತೋ ಆಗ್ಲೇ ಪರಿಹಾರ ಕಂಡ್ಕೊಬೇಕು. ಯಾರು ದನಿ ಎತ್ತದಲೇನೇ ಈ ತರಹ ಸಮಸ್ಯೆ ಎದುರಾಗುತ್ತಿರುವುದು.

ಚಿತ್ರ

Anonymous said...

ನಾನು ಇತ್ತೀಚಿಗೆ ಟಾಟಾ ಡೊಕೊಮೊ ಸಿಮ್ (ಪ್ರಿಪೇಯ್ದ್) ಖರೀದಿಸಿದೆ. ಅದರ ಕೈಪಿಡಿ ಸಂಪೂರ್ಣ ಕನ್ನಡದಲ್ಲಿದೆ.