೨೦೦೯ ವರ್ಷವನ್ನು ಕನ್ನಡ ಅನುಷ್ಠಾನ ವರ್ಷವನ್ನಾಗಿ ಘೋಷಿಸಿ! ಬೆಂಗಳೂರಿನ ಹಲಸೂರು ಕೆರೆ ಅಂಗಳದಲ್ಲಿ ತಿರುವಳ್ಳುವರ್ ಪ್ರತೆಮೆ ಅನಾವರಣಕ್ಕೆ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ಪಣ ತೊಟ್ಟು ನಿಂತಿದೆ. ಕಳೆದೆರಡು ವಾರಗಳಿಂದ ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ನಮ್ಮ ಸಾಹಿತಿ ಬುದ್ದಿ ಜೀವಿಗಳು! ಕನ್ನಡ ಪರ ಚಿಂತಕರು! ಕರ್ನಾಟಕದ ಬಹುತೇಕ ಎಲ್ಲಾ ಕನ್ನಡ ಪತ್ರಿಕೆಗಳವರು,ನ್ಯಾಯವಾದಿಗಳು ಸರ್ಕಾರದ ಈ ಯೋಚನೆಗೆ ಬೆಂಬಲ ಸೂಚಿಸಿ ಹೇಳಿಕೆಗಳನ್ನು ನೀಡುತ್ತ, ಸಮಸ್ತ ಕನ್ನಡಿಗರು ತಮ್ಮ ಸಣ್ಣತನ, ಅಸಹನೆ, ಸಂಕುಚಿತತೆ, ವಿರೋಧ, ವೈಮನಸ್ಯ ತೊರೆದು ಸರಕಾರದ ಈ ನಿಲುವಿಗೆ ಬೆಂಬಲ ತೋರಬೇಕೆಂದು ಕರೆ ನೀಡುತ್ತಿದ್ದಾರೆ.
ಈ ನಿಟ್ಟಿನಲ್ಲಿ ನಾವೆಲ್ಲ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣವನ್ನು ಏಕೆ ತಡೆ ಹಿಡಿಯಲಾಗಿದೆ ಎಂಬುದನ್ನು ಒಮ್ಮೆ ಹಿಂತಿರುಗಿ ನೋಡಬೇಕಿದೆ:
೧೯೯೧ರಲ್ಲಿ ಬೆಂಗಳೂರಿನ ಹಲಸೂರು ಕೆರೆ ಅಂಗಳದಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಕೆಲವು ತಮಿಳು ಹಿತಾಸಕ್ತಿದಾರರು ಮುಂದಾಗಿದ್ದಾಗ, ಕನ್ನಡಪರ ಸಂಘಟನೆಗಳ ಒಗ್ಗೂಡಿದ ಪ್ರತಿಭಟನೆಯಿಂದಾಗಿ ಅನಾವರಣ ಸ್ಥಗಿತಗೊಂಡಿತ್ತು.
ಈ ೧೮ ವರ್ಷಗಳಲ್ಲಿ ತಮಿಳರ ಪರವಾದ (ಸಂಕೇತವಾದ!) ಈ ಪ್ರತಿಮೆ ಅನಾವರಣದ ವಿರೋಧಕ್ಕೆ ಕಾಲಾನುಕಾಲವಾಗಿ ಪಟ್ಟಿ ಮಾಡಬಹುದಾದ ಕಾರಣಗಳು: ತಮಿಳರು ನಾವು ಬೆಂಗಳೂರಿನವರು ಆದರೆ ಕರ್ನಾಟಕಕ್ಕೆ ಸೇರಿದವರಲ್ಲ ಎಂಬ ಭಾವನೆ ಇಟ್ಟುಕೊಂಡಿರುವುದು, ಇಲ್ಲಿ ನೆಲೆಸಿರುವ ತಮಿಳರ ಉದ್ದೇಶ ಬೆಂಗಳೂರನ್ನು ಕೇಂದ್ರಾಡಳಿತಕ್ಕೆ ಒಳಪಡಿಸುವುದಾಗಿರುವುದು , ತಿರುವಳ್ಳುವರ್ "ರಾಷ್ಟ್ರ ಕವಿ" ಅವರ ಪ್ರತಿಮೆ ಸ್ಥಾಪನೆ ಬೇಡ ಎನ್ನುವ ಕನ್ನಡಿಗರು ಎಂತಹ ದೇಶ ಭಕ್ತರು ಎಂದು ಸಹೃದಯಿಗಳಾದ ಕನ್ನಡಿಗರನ್ನೇ ಪ್ರಶ್ನಿಸಿದ್ದು, ಅಂದು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಿ ಎಂದು ಬರಹಗಳನ್ನು ಬರೆಸಿ, ಸರ್ಕಾರವನ್ನು ಆಗ್ರಹಿಸಿ, ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಭರವಸೆ ನೀಡುವ, ಅದಕ್ಕೆ ಪ್ರಯತ್ನಿಸುವ ಸದಸ್ಯನಿಗೆ ಮಾತ್ರ ಚುನಾವಣೆಗಳಲ್ಲಿ ಮತ ಹಾಕಿ ಎಂದು ಇಲ್ಲಿನ ತಮಿಳು ಸಮುದಾಯಕ್ಕೆ ಆದೇಶ ಹೊರಡಿಸಿದ್ದು, ವೀರಪ್ಪನ್ ಒತ್ತಾಸೆಯಿಂದ ರಾಜಕುಮಾರ್ ಬಿಡುಗಡೆ ಆಗಬೇಕಾದ್ರೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಆಗಬೇಕು ಎಂಬ ಹಠ ಮಾಡಿದ್ದು. ಇದರ ಜತೆಗೆ ಇತ್ತೀಚಿನ ದಿನಗಳಲ್ಲಿ ಕನ್ನಡಿಗರನ್ನು ಒದೆಯಬೇಕು ಎಂದು ಹೇಳಿಕೆ ನೀಡಿದ್ದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗದಂತೆ ತೊಡರುಗಾಲು ಹಾಕಿರುವುದು, ತಮ್ಮ ರಾಜ್ಯದ ಯೋಜನೆಗಳ ಅನುಷ್ಠಾನಕ್ಕಾಗಿ ಕರ್ನಾಟಕದ ಹಿತಾಸಕ್ತಿಯನ್ನು ಬಲಿಗೊಡುತ್ತಿರುವುದು.ಹೀಗೆ ಕನ್ನಡಿಗನ ಸ್ವಾಭಿಮಾನ ಮತ್ತು ಸಾರ್ವಭೌಮತ್ವವನ್ನು ಪದೆ ಪದೆ ಕೆಣಕಲು ಪ್ರಯತ್ನಿಸುತ್ತಿರುವುದೇ ಆಗಿದೆ.
ಮೇಲಿನ ತಮಿಳರ ಈ ಎಲ್ಲ ಸಣ್ಣತನಗಳನ್ನು ಸಹಿಸಿಕೊಂಡು ಅವರೊಡನೆ ಇನ್ನೂ ಸಹಬಾಳ್ವೆ ನಡೆಸುತ್ತಿರುವ ಕನ್ನಡಿಗನದು ಸಂಕುಚಿತ ಸ್ವಭಾವ ಎನ್ನುವುದಾದರೆ ಕನ್ನಡಿಗ ಸಣ್ಣವ, ಅಸಹನೆಯುಳ್ಳವ, ಭಾಷಾಂದ, ಕನ್ನಡೇತರರ ವಿರೋಧಿ, ಸದಾ ದ್ವೇಷ ಸಾಧನೆಯ ಗುರಿಯುಳ್ಳವ ಎಂದು ಒಪ್ಪಿಕೊಳ್ಳಬಹುದಾಗಿದೆ.
ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನ ಬೇಡವೇ ಬೇಡ ಎಂದು ಅಂದು - ಮತ್ತು ಎಂದೆಂದೂ ಕನ್ನಡಿಗರು ಹೇಳಿಲ್ಲ. ಪರ್ಯಾಯವಾಗಿ ಚೆನ್ನೈನ ಪ್ರಮುಖ ಸ್ಥಳದಲ್ಲಿ ನಮ್ಮ ಸರ್ವಜ್ಞ ಕವಿಯ ಪ್ರತಿಮೆಯಿರಿಸಿ ಎಂಬ ಬೇಡಿಕೆ ಮಾತ್ರ ಕನ್ನಡಿಗರದಾಗಿತ್ತು. ಇದನ್ನು ಅವರು ಇದುವರೆವಿಗೆ ಒಪ್ಪಿಕೊಳ್ಳದೆ ನೆರವೇರಿಸದಿದ್ದದ್ದು ಕನ್ನಡಿಗರ ತಪ್ಪೇ? ಈಗ ಅವರಲ್ಲಿಗೆ ಹೋಗಿ ಅವರನ್ನು ಒಪ್ಪಿಸಿ ಬಂದಿರುವುದು ಸಹ ಕನ್ನಡದ ಮುಖ್ಯಮಂತ್ರಿಯೇ ಅಲ್ಲವೇ. ಇದನ್ನು ಕನ್ನಡಿಗರ ಸಂಕುಚಿತ ಭಾವನೆ ಎಂದರೆ ಕನ್ನಡಿಗ ಪ್ರತಿಮೆ ಪ್ರತಿಷ್ಠಾಪನೆಗೆ ವಿರೋಧಿಸುತ್ತಿದ್ದಾನೆ ಎಂದು ಒಪ್ಪಿಕೊಳ್ಳಬಹುದಿತ್ತು.
ತಮಿಳರು ಸೇರಿದಂತೆ ಇತರ ಭಾಷಿಕರನ್ನು ಕನ್ನಡಿಗರು ಇಲ್ಲಿ ಸಹೋದರರಂತೆ ಬೆಳೆಸಿದ್ದಾರೆ. ಅವರ ಎಲ್ಲಾ ಆಗುಹೋಗುಗಳಿಗೆ ಸ್ಪಂದಿಸಿದ್ದಾರೆ. ಬೆಂಗಳೂರಿನಲ್ಲಿ "ರಾಜಾಜಿ" ನಗರವಿದೆ, "ಕಾಮರಾಜ್" ರಸ್ತೆಯಿದೆ, "ರವೀಂದ್ರ" ಕಲಾಕ್ಷೇತ್ರವಿದೆ. ಕನ್ನಡಿಗರಲ್ಲದ ಅನೇಕರನ್ನು ನಮ್ಮನ್ನಾಳಲು ಆಯ್ಕೆ ಮಾಡಿ ದೆಹಲಿಗೆ ಕಳುಹಿಸಿದ್ದೇವೆ. ಅಣ್ಣಮ್ಮ ಗುಡಿಗಿಂತ ಹೆಚ್ಚಾಗಿ ಅಯ್ಯಪ್ಪ ದೇವಸ್ಥಾನಕ್ಕೆ ಜಾಗ ಮಾಡಿಕೊಟ್ಟಿದ್ದೇವೆ. ಈ ದೇಶದ ಇನ್ಯಾವ ಊರಿನಲ್ಲೂ ಇರದಷ್ಟು ಪರಭಾಷ ಚಲನಚಿತ್ರಗಳು ಹಾಗು ಮನರಂಜನೆ ಬೆಂಗಳೂರು-ಕರ್ನಾಟಕದಲ್ಲಿ ಚಾಲನೆಯಲ್ಲಿದೆ. ಕನ್ನಡಿಗನ ಈ ಎಲ್ಲಾ ನಿಲುವುಗಳು ಸಂಕುಚಿತವೆನಿಸಿದರೆ ಕನ್ನಡಿಗ ಪ್ರತಿಮೆ ಸ್ಥಾಪನೆಗೆ ಸಂಕುಚಿತತೆ ವೈಮನಸ್ಯ, ಅಸಹನೆ ತೋರುತ್ತಿದ್ದಾನೆ ಎಂದು ಒಪ್ಪಿಕೊಳ್ಳಬಹುದಿತ್ತು.
ಕನ್ನಡಿಗರು ಬೆರೆಲ್ಲೋ ಹೋಗಿ ತಮ್ಮ ಅಸ್ಥಿತ್ವಕ್ಕಾಗಿ ದಬ್ಬಾಳಿಕೆ ತೋರಿದ ಕುರುಹಿಲ್ಲ. ಕೆಲವೊಮ್ಮೆ ಇಲ್ಲಿ ಶಿಷ್ಟತೆಯನ್ನು ಮೀರಿದ್ದರೂ ಅದು ಕನ್ನಡಕ್ಕೆ ಪ್ರಾಧಾನ್ಯತೆ ದೊರೆಯಲಿ ಎಂಬ ಕಳಕಳಿಯ ಭಾವನೆಯಿಂದ ಹೊರಹೊಮ್ಮಿರುವುದೇ ಆಗಿದೆ. ಇದುವರೆಗಿನ ಎಲ್ಲಾ ಕನ್ನಡಪರ ಚಳವಳಿ / ಕಾಳಜಿಯು ಸಾಮಾನ್ಯ ಕನ್ನಡಿಗನ ಜೀವನ ಶೈಲಿಗೆ ಮನ್ನಣೆ ದೊರಕಿಸಿಕೊಡುವ ಪ್ರಯತ್ನ ಮಾತ್ರ ಎಂಬುದು ಸ್ಪಷ್ಟ. ಸಹೃದಯಿಯಾದ ಕನ್ನಡಿಗರನ್ನು, ಕನ್ನಡಿಗರೆ ಆದ ಕೆಲವರು "ಸಂಕುಚಿತ ಸ್ವಭಾವದವ- ಸಣ್ಣವ - ಅಸಹನೆಯವ" ಎಂದು ಹಣೆ ಪಟ್ಟಿ ಕಟ್ಟುತ್ತಿರುವುದು ವಿಪರ್ಯಾಸವಾಗಿದೆ.
ತಿರುವಳ್ಳುವರ್ ತಮ್ಮ ಕವಿತೆಗಳಲ್ಲಿ ಹೇಳಿದ್ದಾರೆ : ತಮ್ಮ ಕರ್ತವ್ಯದಲ್ಲಿ ದೋಷವುಂಟಾಗದಂತೆ ಇನ್ನೊಬ್ಬರ ವಿಷಯದಲ್ಲಿ ಅನುಕಂಪವನ್ನು ತೋರಿಸುವವನಿಗೆ ಮತ್ತು ಕೊಟ್ಟು-ಪಡೆಯುವವನಿಗೆ ಈ ಜಗತ್ತೇ ಅಧೀನನಾಗುವುದು. ತಮಿಳು ನಾಯಕರು ತಿರುಕ್ಕುರಳ್ ಅನ್ನು ಮತ್ತೊಮ್ಮೆ ಅಧ್ಯಯನ ಮಾಡಿ ಪರರಾಜ್ಯಗಳವರೊಡನೆ ಹೇಗೆ ಅನ್ಯೋನ್ಯದಿಂದಿರಬೇಕು ಎಂಬುದನ್ನು ಇನ್ನೂ ಸರಿಯಾಗಿ ಅರಿಯಬೇಕಿದೆ. ಇಲ್ಲಿ ಕನ್ನಡಿಗರು "ಸಣ್ಣ ಮನಸ್ಸಿನವರು-ಅಸಹನೆಯವರು" ಎಂಬ ಮಾತುಗಳಿಗಿಂತ, ತಿರುವಳ್ಳುವರ್ ನ ಆರಾಧಕರಾದ ತಮಿಳರು ಮೊದಲು ಸರ್ವಜ್ಞ ಪ್ರತಿಮೆಯನ್ನು ತಮಿಳುನಾಡಿನಲ್ಲಿ ಸ್ಥಾಪಿಸಿ ಒಮ್ಮೆಯಾದರೂ ದೊಡ್ಡವರೆನಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದಾರೆ ಎನ್ನುವುದು ಮಾತ್ರ ಸತ್ಯವಾದದ್ದು. ಈ ವಿಷಯವನ್ನು ತಮಿಳುನಾಡಿನ ಬುದ್ದಿಜೀವಿಗಳು ತಮ್ಮ "ಮಕ್ಕಳ್" ಗಳಿಗೆ ತಿಳಿಸಿಕೊಡಬೇಕಾಗಿರುವುದು ಈಗ ಅಗತ್ಯವಾದದ್ದು.
ಕರ್ನಾಟಕದಲ್ಲಿ ತಿರುವಳ್ಳುವರ್ ಕುರಿತಾಗಿ ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿರುವಾಗ, ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಬೆಂಗಳೂರಿನಲ್ಲಿಯೇ ಆರಾಮವಾಗಿ ಕಾಲ ಕಳೆಯುತ್ತಿದ್ದು ನಮ್ಮ ನಮ್ಮವರೆ ಕಿತ್ತಾಡುವುದನ್ನು ನೋಡಿ ಪುಳಕಿತಗೊಂಡಿರುವುದು ಸತ್ಯ. ತಮಿಳರು ತಮ್ಮ ದೊಡ್ಡತನ ಮೆರೆಯುವ ಒಂದು ಹೇಳಿಕೆ ನೀಡುವ ಬಗ್ಗೆ ತಲೆಯೆ ಕೆಡಿಸಿಕೊಂಡಿಲ್ಲ.
ತಮಿಳರು ಎಂದಿಗೂ ಸ್ವಾಭಿಮಾನಿಗಳು, ದೊಡ್ಡತನ ಮೆರೆದು ದಡ್ಡರಾಗುವವರಲ್ಲ ಎಂದು ಮಾತ್ರ ಇದರಿಂದ ಸಾಬೀತಾಗುತ್ತಿದೆ.
ಯಾವ ಕಾರಣಕ್ಕಾಗಿ ನಮ್ಮನ್ನಾಳುತ್ತಿರುವವರು ಅವರ ಹಿಂಬಾಲಕರು ಈ ನಿಲುವಿಗೆ ತಲೆಬಾಗಿದ್ದಾರೆ? ಉತ್ತರವಿದೆಯೇ
*****