Wednesday, October 28, 2009

ಯಾರು "ಗ್ರಾಹಕ ಕೈಪಿಡಿ" ಕನ್ನಡದಲ್ಲಿ ಮಾಡಿಸಿದ್ದಾರೆ?

***

ಕೆಲ ದಿನಗಳ ಹಿಂದೆ ಬಜಾಜ್ ಸಂಸ್ಥೆಯ "ಇಸ್ತ್ರಿ ಪೆಟ್ಟಿಗೆ ಖರೀದಿಸಿದೆ". ಮನೆಗೆ ಬಂದು ಡಬ್ಬ ತೆರೆದಾಗ ಅದರಲ್ಲಿ ಕೈಪಿಡಿಯೊಂದಿತ್ತು. ತೆರೆದು ನೋಡಿದಾಗ ಬೇಜಾರಾಯ್ತು. ಮಾಹಿತಿ ಕನ್ನಡೇತರ ಭಾಷೆಯಲ್ಲಿದೆ.
ಹಾಗೆಯೆ ಕೈಪಿಡಿ ಗಮನಿಸಿದಾಗ, ಬಜಾಜ್ ಸಂಸ್ಥೆಯ ಬೆಂಗಳೂರು ಶಾಖೆಯ ಮಿಂಚೆ ವಿಳಾಸ ಕಂಡು ಬಂತು.
ಮೊನ್ನೆ ೨೬ ನೆ ತಾರೀಖು ಅವರಿಗೆ ಈ ರೀತಿ ಮಿಂಚಿಸಿದೆ.
*****
ನಾನು 18/10/2009 ರಂದು ಬೆಂಗಳೂರಿನ ಪೈ ಇಂಟರ್ ನ್ಯಾಷನಲ್ ಅಂಗಡಿಯಲ್ಲಿ ಬಜಾಜ್ಎಲೆಕ್ಟ್ರಿಕಲ್ಸ್ ತಯಾರಿಕೆಯ ಪಾಪ್ಯುಲರ್ "ಇಸ್ತ್ರಿ ಪೆಟ್ಟಿಗೆ" ಖರೀದಿಸಿದೆ. ವಿಪರ್ಯಾಸವೆಂದರೆ ಇಸ್ತ್ರಿ ಪೆಟ್ಟಿಗೆಯ ಜತೆಗೆ ವಿತರಿಸಿರುವ "ಉಪಯೋಗ ಮತ್ತುಸುರಕ್ಷತೆ" ಯ ಕೈಪಿಡಿ ಕನ್ನಡೇತರ ಭಾಷೆಯಲ್ಲಿದೆ. (ಲಗತ್ತಿಸಿರುವ ಚಿತ್ರ ನೋಡಿ)

ಬೆಂಗಳೂರು ಮತ್ತು ಕರ್ನಾಟಕ ದೇಶದ ನಾಡ ಭಾಷೆ ಕನ್ನಡ. ಇಲ್ಲಿ ನಿಮ್ಮ ಸಂಸ್ಥೆಯ ಮೂಲಕತಯಾರಿಸಿ ವಿತರಿಸುವ ಎಲ್ಲಾ ಗ್ರಾಹಕ ಉಪಯೋಗಿ ವಸ್ತುಗಳ ಬಗೆಗಿನ ಮಾಹಿತಿ, ವಿವರಣೆ,ಜಾಹೀರಾತು ಆಧ್ಯತೆಯಾಗಿ ಕನ್ನಡ ಭಾಷೆಯಲ್ಲಿರುವಂತೆ ಗಮನಿಸಬೇಕಾದ್ದು ನಿಮ್ಮ ಮೂಲಕರ್ತವ್ಯ.

ಕೂಡಲೇ ಕೆಳಗಿನ ವಿಳಾಸಕ್ಕೆ ಇಸ್ತ್ರಿ ಪೆಟ್ಟಿಗೆ "ಉಪಯೋಗ ಮತ್ತು ಸುರಕ್ಷೆ" ಕನ್ನಡಕೈಪಿಡಿ ಕಳುಹಿಸಿಕೊಡಬೇಕಾಗಿ ವಿನಂತಿ.
*****
ನಂತರ ೦೮೦-೪೨೬೬೨೨೩೧ ದೂರವಾಣಿಯಿಂದ ನನಗೆ ಕರೆಯೊಂದು ಬಂತು. ಕರೆ ಮಾಡಿದಾತ "ನನ್ನ ಹೆಸರು ವಿಜಯ್, ಬಜಾಜ್ ಬೆಂಗಳೂರು ಅಫೀಸ್ ನಿಂದ ಕರೆ ಮಾಡ್ತಿದ್ದೀನಿ" ಎಂದು ಪರಿಚಯಿಸಿಕೊಂಡು, ನನ್ನ ಮಿಂಚೆ ಕುರಿತು ಸಮಜಾಯಿಷಿ ಕೊಡಲು ಪ್ರಯತ್ನಿಸಿದರು. ಮಾತನಾಡುತ್ತ ವಿಜಯ್ ಹೇಳಿದ್ದು "ಕನ್ನಡದಲ್ಲಿ ಕೈಪಿಡಿ ಮಾಡಿಸಿಲ್ಲ, ಪೂರ್ತಿ ಭಾರತ! ಗಮನದಿಲ್ಲಿಟ್ಟುಕೊಂಡು ಎರಡು ಭಾಷೆಯಲ್ಲಿ ಕೈಪಿಡಿ ಮಾಡಿದ್ದೇವೆ......

ನಾನು "ನಮ್ಮ ಮನೆಯಲ್ಲಿ ಬಜಾಜ್ ಸಂಸ್ಥೆ ಇಸ್ತ್ರಿ ಪೆಟ್ಟಿಗೆಯ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಲು ನಮಗೆ ಅವಶ್ಯವಿರುವ ಭಾಷೆ ಕನ್ನಡ" ಕನ್ನಡೇತರ ಭಾಷೆಯ ಕೈಪಿಡಿ ನಮಗೆ ಉಪಯೋಗವಿಲ್ಲ. ಇಡೀ ಭಾರತ! ಗಮನದಲ್ಲಿರಿಸಿ ನೀವು ಕೈಪಿಡಿ ತಯಾರಿಸಿರುವುದಾದರೆ ೨೦ಕ್ಕೂ ಹೆಚ್ಚಿನ ಭಾಷೆ ನಿಮ್ಮ ಕೈಪಿಡಿಯಲ್ಲಿ ಅಳವಡಿಸಬೇಕಿತ್ತು... ಹೀಗೆ ಕರ್ನಾಟಕದಲ್ಲಿ ಅವರ ವ್ಯವಹಾರದಲ್ಲಿ ಕನ್ನಡದ ಅವಶ್ಯಕತೆ ಏಕೀರಬೇಕು. ಅಂತೆಯೆ ತಮಿಳುನಾಡಿನಲ್ಲಿ ಬಜಾಜ್ ತಮಿಳನ್ನೇ ಏಕೆ ಉಪಯೋಗಿಸಬೇಕು ಎಂದು ಮನವರಿಕೆ ಮಾಡಿಸಲು ಪ್ರಯತ್ನಿಸಿದೆ! ಕೊನೆಗೆ ವಿಜಯ್, ಈ ಕುರಿತಾಗಿ ಬಜಾಜ್ ಮುಖ್ಯ ಕಚೇರಿಗೆ ತಿಳಿಸಿ ಕನ್ನಡದಲ್ಲಿ ಕೈಪಿಡಿ ಮಾಡಿಸಿ ಕೊಡುವಬಗ್ಗೆ ಭರವಸೆ ನೀಡಿದ್ದಾರೆ!

ವಿಜಯ್ ಕೊನೆಯದಾಗಿ ಒಂದು ಪ್ರಶ್ನೆ ನನ್ನನ್ನೇ ಕೇಳಿದರು. ಈ ರೀತಿ ವಸ್ತುಗಳನ್ನು ತಯಾರಿಸಿರುವವರು ಯಾರು ಕೈಪಿಡಿ ಕನ್ನಡದಲ್ಲಿ ಮಾಡಿಸಿದ್ದಾರೆ ಎಂದು? "ಯಾರು ಮಾಡಿಸಿದ್ದಾರೆ ಎಂಬ ಮಾಹಿತಿ ನನ್ನಲ್ಲಿಲ್ಲ, ಯಾರ್ಯಾರು ಮಾಡಿಸಿಲ್ಲ ಎಂದು ನನಗೆ ಕಂಡು ಬಂದಾಗ ಕನ್ನಡದಲ್ಲಿ ಮಾಡಿಸಿ ಎಂದು ನಾನು ಕೇಳುತ್ತೇನೆ. ನೀವು ಮಾಡಿಸಿಲ್ಲ ಈಗ ನೀವು ಮಾಡಿಕೊಡಿ ಎಂದೆ.

ಇದನ್ನೂ ಓದುತ್ತಿರುವವರೆಲ್ಲಾ ಇನ್ನು ಮುಂದೆ ತಾವು ಖರೀದಿಸುವ ಯಾವುದೇ ವಸ್ತು ಇರಲಿ (ಟಾಟಾ ಸ್ಕೈ, ಸಾಮ್ಸಂಗ್ ಟೀವಿ, ಓನಿಡಾ ಒಗೆಯೋ ಯಂತ್ರ, ಫಿಲಿಪ್ಸ್ ರೇಡಿಯೋ...............ಹೀಗೆ) ಕನ್ನಡದಲ್ಲಿ ಇದರ ಮಾಹಿತಿ, ವಿವರಣೆ, ಕೈಪಿಡಿ ವಿತರಿಸಿ ಎಂದು ಕೇಳಲೇ ಬೇಕಲ್ಲವೆ?

ಕೆಳಗಿನ ಚಿತ್ರ ನೋಡಿ.

ಯೂರೋಪ್ ನಲ್ಲಿ ತಯಾರಾದ ಜೀವ ಕವಚವೊಂದರ ಕುರಿತಾದ ವಿವರಣೆ. ಇಡೀ ಪ್ರಪಂಚಕ್ಕೆ ತಿಳಿಯತ್ತಲ್ಲ ಅಂತ ಅವರು ಒಂದು ಭಾಷೆಯಲ್ಲಿ ಅದರ ವಿವರಣೆ ನೀಡಿ ಸುಮ್ಮನಿರಬಹುದಿತ್ತು. ಆದರೆ ಜೀವದ ಬೆಲೆ ಅವರಿಗೆ ಏನೆಂದು ಗೊತ್ತು ಮತ್ತು ವಸ್ತುವಿನ ಬಳಕೆ ಸಮರ್ಪಕವಾಗಿ ಆಗಬೇಕೆಂಬ ಕಾಳಜಿ ಅವರಿಗಿದ್ದುದರಂದ ಅವರು ತಮ್ಮ ಉತ್ಪನ್ನ ವಿತರಿಸುವೆಡೆಯಲ್ಲಿ ಬಳಕೆಯಲ್ಲಿರುವ ಭಾಷೆಗಳಲ್ಲಿ ವಿವರಣೆ ನೀಡಿದ್ದಾರೆ.

ತಮ್ಮ ಉತ್ಪನ್ನಗಳ ಹೆಚ್ಚಿನ ಬಿಕರಿಗೆ ಇದೊಂದು ದಾರಿ ಸಹ ಅಂತ ಇವರು ತಿಳಿದುಕೊಂಡಿದ್ದಾರೆ. ನಮ್ಮ ಭಾರತದ ಸಂಸ್ಥೆಗಳು ಇಲ್ಲದ್ದನ್ನು ನಮ್ಮ ಮೇಲೆ ಹೇರಲು ಮುಂದಾಗಿದ್ದಾರೆ.

ಚಂದ್ರಶೇಖರನ್ ಕಲ್ಯಾಣ ರಾಮನ್,
ಹಳದಿ - ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

***

Thursday, October 15, 2009

ಇತರ ಭಾಷಿಕರಿಗೆ ದೀಪಾವಳಿ ಶುಭಾಶಯ, ಕನ್ನಡಿಗರಿಗೆ ಮಾತ್ರ "ದಿವಾಳಿ" ಯ ಶಾಪ!

*****
ಇವತ್ತಿನ 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆ ಭಾರತೀಯರೆಲ್ಲರಿಗೂ ದೀಪಾವಳಿ ಶುಭಾಶಯ ತಿಳಿಸಿದೆ. ಲಗತ್ತಿಸಿರುವ ಚಿತ್ರ ಗಮನಿಸಿ.


ಲಕ್ಷ್ಮಿಯ ಬಲಗೈ ಯಿಂದ ಭಾರತೀಯ ಭಾಷೆಗಳಲ್ಲಿ ಶುಭಾಶಯದ ಹೊಳೆ ಹರಿದಿದೆ. ತಮಿಳಿನಲ್ಲಿ ದೀಪಾವಳಿ ವಾಳ್ತುಕ್ಕಳ್, ತೆಲುಗಿನಲ್ಲಿ ಹ್ಯಾಪಿ ದೀಪಾವಳಿ, ಗುಜರಾತಿ, ಬಂಗಾಳಿ, ಹಿಂದಿ ಹೀಗೆ ಇನ್ನಿತರ ಭಾಷೆಗಳಲ್ಲಿ ಶುಭ ದೀಪಾವಳಿ ಎಂದು ಶುಭಾಶಯ ತಿಳಿಸುತ್ತಿದೆ.

ಕನ್ನಡಿಗರಿಗೆ ಕೊಟ್ಟಿರುವ ಶಾಪ ಏನು ಗೊತ್ತ! ಲಕ್ಷ್ಮಿಯ ಎಡಕ್ಕಿರುವ ಆನೆ ಸೊಂಡಿಲ ಪಕ್ಕ ನೋಡಿ. "ಹಾ ಪಿ ದಿವಾಳಿ".
ಹ್ಯಾಪಿಗೇನೋ ಅರ್ಥ ಗೊತ್ತಿರುವುದೆ (ಆ 'ಹ್ಯಾಪಿ' ನೂ ಸಹ ಇವರು ಸರಿಯಾಗಿ ನಮೂದಿಸಿಲ್ಲ. 'ಹಾ' ಕೆಳಗಿನ 'ಯ' ಕಾರ ಎಗರಿ ಹೋಗಿದೆ).

"ದಿವಾಳಿ" ಅಂದ್ರೆ ಏನು ಅಂತ ನಿಮಗೆ ಗೊತ್ತಿರಬಹುದು! ಒಮ್ಮೆ ಪದಕೋಶದ ಪುಟ ಸಹ ನೋಡಿ.


ಈ ಜಾಹೀರಾತಿನಿಂದ ಸಾಬೀತಾಗುತ್ತದೆ. "ದೀಪಾವಳಿ" ನ "ದೀಪಾವಳಿ" ಅಂತಾನೆ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲಿ ಹೇಳೋದು ಅಂತ. ಕನ್ನಡದಲ್ಲೂ ನಾವು "ದೀಪಾವಳಿ" ಅಂತಾನೆ ಹೇಳ್ತಿದ್ದಿದ್ದು. ಈ "ದಿವಾಳಿ" ಹಾವಳಿ ಕನ್ನಡಿಗರ ಮೇಲೆ ಹೇಗೆ ಯಾವಾಗ ಎಲ್ಲಿಂದ ಶುರು ಆಯ್ತು ಅನ್ನುವುದೆ ಪ್ರಶ್ನೆ?

ರಾಜ್ಯಾದ್ಯಂತ ನೆರೆ ಉಂಟಾಗಿ ಬೀದಿಗೆ ಬಿದ್ದಿರುವ ಕನ್ನಡಿಗರಿಗೆ ಈ ರೀತಿಯಾಗಿ "ದಿವಾಳಿ" ಪಟ್ಟ ಕಟ್ಟುತ್ತಿದ್ದಾರೆಯೆ?
ಖಂಡಿತಾ ನಾವು ದಿವಾಳಿಯಾಗುವುದು ಬೇಡ. ದೀಪವನ್ನು ಬೆಳಗಿಸಿ ದೀಪಾವಳಿ ಆಚರಿಸೋಣ. ಸಮಸ್ತ ಕನ್ನಡಿಗರ ಬಾಳಿನಲ್ಲಿ ಈ ದೀಪಾವಳಿ ಹೊಸ ಬೆಳಕನ್ನು ಮೂಡಿಸುವಂತಾಗಲಿ...
**
ಚಂದ್ರಶೇಖರನ್ ಕಲ್ಯಾಣ ರಾಮನ್
*****

Sunday, October 4, 2009

ದಿವಾಳಿಯಾಗು ಅನ್ನಿಸಿಕೊಳ್ಳಬೇಡಿ! "ದೀಪಾವಳಿಗೆ ಶುಭಾಶಯ" ತಿಳಿಸಲು ಹೇಳಿ......

*****
ಆಗಲೆ " ದಿವಾಳಿ " (DIVALI, DEEWALI, DEEVAALI) ಆಗೆಂದು ಒಂದೊಂದಾಗಿ ಹಾರೈಕೆಗಳು ಬರುತ್ತಿವೆ. ಟಿವಿಗಳಲ್ಲಿ, ಪತ್ರಿಕೆಗಳಲ್ಲಿ (ಕನ್ನಡದವು ಸೇರಿದಂತೆ) ಮಾರಾಟಗಾರರು ತಮ್ಮ ಅಂಗಡಿ, ಮಳಿಗೆಗಳಲ್ಲಿ ಬಂದು ವಸ್ತುಗಳನ್ನು ಕೊಂಡು 'ದಿವಾಳಿ'ಯಾಗಲು ಜಾಹೀರಾತು (ಈ ವರ್ಷದ ನಿಮ್ಮ "ದಿವಾಳಿ" ಆಚರಿಸಲು ನಮ್ಮ ಅಂಗಡಿಯಲ್ಲಿ ಸಾಮಾನು ಖರೀದಿಸಿ ಎನ್ನುತ್ತ) ಮೂಲಕ ಕರೆ ನೀಡುತ್ತಿದ್ದಾರೆ.

ಹೌದು ನಾವು ದೀಪ ಬೆಳಗಿಸಿ ನಮ್ಮೂರಲ್ಲಿ ಆಚರಿಸುವ ದೀಪಾವಳಿಯ ಹೆಸರು ನಿಧಾನವಾಗಿ ಬದಲಾಗುತ್ತಿದೆ. ಎಲ್ಲೆಡೆ ಅದು ದಿವಾಲಿ, ದಿವಾಳಿ ಯಾಗಿ ಭಿತ್ತರವಾಗುತ್ತಿದೆ. ಭಾರತದ ಇತರೆಡೆಗಳಲ್ಲಿ ಮುಖ್ಯವಾಗಿ ಉತ್ತರಭಾರತದಲ್ಲಿ ದೀಪಾವಳಿಗೆ ದಿವಾಲಿ ಎಂದು ಕರೆಯುವ ಪದ್ಧತಿ ಇರಬಹುದು! ಅಥವ ಅಲ್ಲಿಯೂ ದೀಪಾವಳಿ ಇದ್ದದ್ದು ದಿವಾಳಿ ಎಂದು ಬದಲಾಗಿದೆಯ? ಗೊತ್ತಿಲ್ಲ! ಇನ್ಯಾರೋ ಹಾಗೆ ಕರೆಯಲು ಹೊರಟಿದ್ದಾರೆ, ಅದು ಸರಿಯ? ತಪ್ಪ ? ಹಾಗೆ ಕರೆಯುತ್ತಿರುವ ಪದದ ಅರ್ಥ ಏನಾಗಿರಬಹುದು ಅಂತ ಯೋಚಿಚದೆ, ನಾವು ಸಹ ಇತರರಂತೆ ಹಾಗೆಯೆ ಶುಭಾಶಯ ವಿನಿಮಯ ಮಾಡಿಕೊಳ್ಳಲು ಮುಂದಾಗಿದ್ದೇವೆ.

ಇದರಂತೆಯೆ ನಮ್ಮ ಸಂಕ್ರಾಂತಿ ಸಹ. ಸಂಕ್ರಾಂತಿ ಅಂದ್ರೆ ಇವತ್ತು ಅನೇಕರು ಅದೇನೆಂದು ಕೇಳುವ ಪರಿಸ್ಥಿತಿ ಇದೆ. ಅದು ಪೊಂಗಲ್ ಆಗಿ ಹೆಚ್ಚಾಗಿ ಪ್ರಚಲಿತವಾಗುತ್ತಿದೆ. ನಮ್ಮ 'ದಸರಾ' ಸಹ 'ದುಶಿರಾ' ಅಂತ ಕಣ್ಣ ಮುಂದೆಯೇ ಬದಲಾವಣೆ ಆಗುತ್ತಿದೆ. ನಿಧಾನವಾಗಿ-ಒಂದೊಂದಾಗಿ ನಮ್ಮ ತನವನ್ನು, ನಮ್ಮ ಆಚರಣೆಯನ್ನು ಇತರರಿಗೆ ಬಿಟ್ಟುಕೊಟ್ಟು , ತಾನೂ ಅವರ ಜತೆ ಸೇರಿ ಕುಣಿದು-ತಿಪ್ಪರಲಾಗ ಹಾಕಿ ಶ್ರೀಮಂತವಾದ ನಮ್ಮ ಸಂಸ್ಕೃತಿಯನ್ನು ನಾವೆ ಬರಿದು ಮಾಡಿಕೊಂಡು ಮೂಲೆಗುಂಪಾಗುತ್ತಿದ್ದೇವೆ ಅನ್ನಿಸುತ್ತಿಲ್ಲವೆ? ಈ ಅನಿಸಿಕೆಯನ್ನು ಸಮರ್ಥಿಸುವವರಿಗಿಂತ ಯಾಕಪ್ಪ ಹೀಗೆ ಸಂಕುಚಿತವಾಗಿ ಬರೆದಿದ್ದೀಯ ಅಂತ ಹೇಳುವವರೆ ಬಹುಷ: ಹೆಚ್ಚಾಗಿ ಪ್ರತಿಕ್ರಿಯಿಸಬಹುದೇನೊ. ನಾವು ಎಲ್ಲರಲ್ಲೂ-ಎಲ್ಲದರಲ್ಲೂ ಬೆರೆತು (ನಮ್ಮದು ಮಾತ್ರ ಪಕ್ಕಕ್ಕಿಟ್ಟು) ಭಾವಕ್ಯತೆ ಪ್ರದರ್ಶಿಸುವುದರಲ್ಲಿ ಮೊದಲಿಗರಲ್ಲವೇ?

ಕಳೆದ ೨೭ ವರ್ಷಗಳಿಂದ ಬೆಂಗಳೂರಿನ ಅಚ್ಚ ಕನ್ನಡಿಗರೆ ಹೆಚ್ಚಾಗಿ ನೆಲಸಿರುವ ಪ್ರದೇಶವೊಂದರಲ್ಲಿ ನಮ್ಮನೆಯಿರೋದು. ನಾನು ಅಲ್ಲಿ ನಿರಂತರವಾಗಿ ನೆಲಸಿರದಿದ್ದರೂ ಅಲ್ಲಿನ ಆಗುಹೋಗುಗಳನ್ನು ಗಮನಿಸಿದ್ದೇನೆ - ಕಿವಿಗೊಟ್ಟಿದ್ದೇನೆ. ಇಷ್ಟು ವರ್ಷಗಳಲ್ಲಿ ಇಲ್ಲಿನ ಅಕ್ಕ-ಪಕ್ಕ , ಸುತ್ತ -ಮುತ್ತ ಒಂದು ಹನುಮಂತನ, ಒಂದು ಗಣೇಷ ಅಥವ ಒಂದು ಅಣ್ಣಮ್ಮ ದೇವಸ್ಥಾನ ಪ್ರಾರಂಭವಾದದ್ದು ನನ್ನ ಕಣ್ಣಿಗೆ ಬಿದ್ದಿಲ್ಲ. ಎಲ್ಲರಿಗೂ ಎದ್ದು ಕಾಣುವಂತೆ ಇಲ್ಲಿ ಮೊದಲಿಗೆ ಹುಟ್ಟುಕೊಂಡಿದ್ದು ಅಯ್ಯಪ್ಪ ದೇವಸ್ಥಾನ, ನಂತರ ಪಕ್ಕದಲ್ಲಿ ಓಂ ಶಕ್ತಿ ದೇವಸ್ಥಾನ. ನಾನು ಕಂಡ ಹಾಗೆ ನಮ್ಮ ಬಡಾವಣೆಯಲ್ಲಿ ದಸರ ಸಮಯದಲ್ಲಿ ಮನೆಗಳಲ್ಲಿ ಗೊಂಬೆಗಳನ್ನು ಇಟ್ಟು ಹಬ್ಬ ಆಚರಿಸಿಕೊಳ್ಳುವುದು ಇವರೆಗೂ ನಡೆದು ಬಂದಿರುವ ಪದ್ಧತಿ. ಆದರೆ ಈ ವರ್ಷ ಹೊಸ ಪಿಡುಗೊಂದು ಈ ಪ್ರದೇಶದಲ್ಲಿ ಹೆಡೆಯೊಡೆದಿತ್ತು.



ಗರ್ಬಾ (ಗರ್ಭ=ಬಸುರಿ ಅಲ್ಲ) / ಧಾಂಡಿಯ ಎಂಬ ಅರ್ಥವಿಲ್ಲದ ನೃತ್ಯ ದಸರಾದ ಮೊದಲ ದಿನ ಪ್ರಾರಂಭವಾಗಿ ಮುಗಿದದ್ದು ವಿಜಯದಶಮಿಯ ಹಿಂದಿನ ದಿನ. ಇದನ್ನು ಆಯೋಜಿಸಿದ್ದವರಿಗೆ ಕನ್ನಡಿಗರ ಸಹಯೋಗವೂ ಇತ್ತು ಎಂದು ಹೇಳಲೇಬೇಕಾಗಿಲ್ಲ! ಬಹುಷ: ಒಮ್ಮೆಯಾದರೂ ಈ ಪರಿ ಖರ್ಚು ಮಾಡಿ ಇವರು ಇಲ್ಲಿ ನಮ್ಮ ರಾಜ್ಯೋತ್ಸವ ಆಚರಿಸಿದ್ದು ನೆನಪಿಲ್ಲ. ರಾತ್ರಿ ೮ ಘಂಟೆಗೆ ಶುರುವಾಗುತ್ತಿದ್ದ ಇದು ಮುಗಿಯುತ್ತಿದ್ದುದು ರಾತ್ರಿ ೧೨ ರ ನಂತರವೇ. ರಾತ್ರಿ ೮ -೯ ರ ಒಳಗೆ ನಿರ್ಜನವಾಗುವ, ಸರಿಸುಮಾರು ಅದೆ ಸಮಯಕ್ಕೆ ನಿದ್ರೆಗೆ ಜಾರುತ್ತಿದ್ದ, ಬಹುತೇಕ ಹಿರಿಯ ನಾಗರೀಕರೆ ವಾಸಿಸುವ ಸುತ್ತಮುತ್ತಲಿನ ಈ ಪ್ರದೇಶದಲ್ಲಿ ಆ ದಿನಗಳಲ್ಲಿ ಕರ್ಕಷವಾದ ಧ್ವನಿಯೊಂದು ಎಡಬಿಡದೆ ಹಿಂದಿ ಹಾಡುಗಳನ್ನು ಒರಲುತ್ತಿತ್ತು. ಆ ಧ್ವನಿ ಮೈಕಾಸುರನ ಸಹಾಯದಿಂದ ೧೦೦ ಪಟ್ಟು ದ್ವಿಗುಣಗೊಂಡು, ಆರ್ಭಟ ತಡೆಯಲಾಗದೆ ಇಡೀ ಬಡಾವಣೆಯೇ ಬೆಚ್ಚಿ ಬಿದ್ದಿತ್ತು. ವಿಚಾರಿಸಿದಾಗ ತಿಳಿದು ಬಂದದ್ದು ಇವರು ನಡೆಸುತ್ತಿರುವುದು ಗರ್ಭಾ ಅಥವ ದಾಂಡಿಯ ಎಂಬ "ಗುಜರಾತಿಗಳ ಹಬ್ಬ"

ಗರ್ಬಾ ಅಥವ ದಾಂಡಿಯ ದಸರಾ ಸಮಯದಲ್ಲಿ ಗುಜರಾತಿಗಳು (ನಾವು ಮನೆಯಲ್ಲಿ ಗೊಂಬೆ ಪ್ರದರ್ಶನ ಮಾಡುವಂತೆ) ಪ್ರತಿ ರಾತ್ರಿ ತಮ್ಮ ತಮ್ಮ ಬಡಾವಣೆಗಳಲ್ಲಿ ಆಚರಿಸುವ ಒಂದು ನೃತ್ಯದ ಸ್ನೇಹಕೂಟ. ಆ ಸಮಯದಲ್ಲಿ ಅವರ ಮನೆಗಳಲ್ಲಿ ಮಕ್ಕಳು-ದೊಡ್ಡವರು-ಅಜ್ಜ-ಅಜ್ಜಿಯರಾದಿಯಾಗಿ ಎಲ್ಲರೂ ಇದರಲ್ಲಿ ಭಾಗವಹಿಸುತ್ತಿದ್ದರು. ಅಲ್ಲಿ ಅದು ಯಾರಿಗೂ ಕಿರಿಕಿರಿ ಮಾಡುವುದಿಲ್ಲ. ಏಕೆಂದ್ರೆ ಅಲ್ಲಿ ಎಲ್ಲರೂ ಭಾಗವಹಿಸುತ್ತಾರೆ. ಬೆಳಿಗ್ಗೆ ತಮ್ಮ ಕೆಲಸಗಳನ್ನು ಮುಗಿಸಿ, ರಾತ್ರಿ ಊಟ ಮುಗಿಸಿ, ಸಾಮೂಹಿಕವಾಗಿ ಆಚರಿಸಿಕೊಳ್ಳುತ್ತಾರೆ. ಅದು ಅವರ ಸಂಪ್ರದಾಯ ಅವರು ಅಲ್ಲಿ ಆಚರಿಸಿಕೊಳ್ಳಲಿ ನಮ್ಮ ಅಭ್ಯಂತರವಿಲ್ಲ. ಅದನ್ನು ಇಲ್ಲಿ ಕೇವಲ ಒಬ್ಬಿಬ್ಬರ ಶೋಕಿಗಾಗಿ ಬಡಾವಣೆ-ಬಡಾವಣೆಗೆ ಚಿತ್ರಹಿಂಸೆ ನೀಡಿ ನಿದ್ರೆಗೆಡಿಸಿದ್ದು ಯಾಕೆ ಎಂಬುದೇ ಪ್ರಶ್ನೆ.

ಹೋಗಿ ವಿಚಾರಿಸಿದಾಗ ಯಾರೂ ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿರಲಿಲ್ಲ? ಎಲ್ಲರೂ ದೇವಿ 'ತೀರ್ಥ' ವನ್ನು ಸೇವಿಸಿ ಪಾವನವಾಗಿದ್ದರು. ಹಾಡುಗಾರ "ಛೋಲಿ ಕೆ ಪೀಚೆ ಕ್ಯಾ ಹೈ" ಅಂತ ವಿಚಾರಿಸ್ತಿದ್ದ. "ಮೈ ಹೂ ಡಾನ್ ಮೈ ಹೂ ಡಾನ್", "ಮೆ ಕಲನಾಯಕ್ ಹೂ" ಅಂತ ಹೂಂಕರಿಸುತ್ತಿದ್ದ. ಕೊನೆಗೂ ಅದೆಲ್ಲಿದ್ದರೋ! ಪೋಲಿಸಣ್ಣರು ಬಂದ ಮೇಲೆಯೇ (ಯಾರೋ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು) ಇವರ ಆಟಕ್ಕೆ ಕಡಿವಾಣ ಬಿದ್ದದ್ದು. ಈ ಸಲದ ವ್ಯವಹಾರ ಮುಗಿಸಿ ಹೋಗುವ ಮುನ್ನ ಮತ್ತೆ ಮುಂದಿನ ವರ್ಷ ಬರ್ತೀವಿ ಅಂತ ಸಹ ಅವರು ಕಿರುಚಿ ಹೋಗಿದ್ದಾರೆ. ಇಲ್ಲಿಗೆ ಬಂದು ಗಮನಿಸಿ-ಭಾಗವಹಿಸಿ ಹೋದ ಸಾಂಸ್ಕೃತಿಕ ಸಹೃದಯರು! 'ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಅನ್ನುವಂತೆ' ಇಂತಹ 'ಸಾಂಸ್ಕೃತಿಕ' ಹಾವಳಿಗಳನ್ನು ನಿಧಾನವಾಗಿ ಬೆಂಗಳೂರಿನಲ್ಲೆಲ್ಲಾ ಹರಡಿಸುವುದರಲ್ಲಿ ಸಂದೇಹವೇ ಇಲ್ಲ.

ಮತ್ತೊಮ್ಮೆ ಇದು ಮರುಕಳಿಸಲು ವರ್ಷದ ಸಮಯವಿದೆ. ಹೇಗೆ ನಿಯಂತ್ರಿಸಬಹುದು ಯೋಚಿಸಲು ಸಮಯವಿದೆ. ಆದರೆ ದೀಪಾವಳಿ ಮಾತ್ರ ಇನ್ನೇನು ಹತ್ತಿರದಲ್ಲೆ ಇದೆ. ಯಾರಿಗೂ 'ದಿವಾಳಿ' ಯಾಗುವ ಶುಭಾಶಯ! ತಿಳಿಸದಿರೋಣ. "ದೀಪ ಬೆಳಗಿಸಿ ದೀಪಾವಳಿ ಆಚರಿಸಿ" ಎಂದು ಹೇಳೋಣವೆ?

ಚಂದ್ರಶೇಖರನ್ ಕಲ್ಯಾಣ ರಾಮನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!

*****