Thursday, March 25, 2010

ಬಿಬಿಎಂಪಿ ಗೆ ಆಭಿವೃದ್ಧಿಯ ಕನಸಿನ ಜತೆಗೆ ಕನ್ನಡದ ಬದ್ಧತೆಯಿರುವವರು ಮಾತ್ರ ಆಯ್ಕೆಯಾಗಲಿ..

ಬರುವ ಮಾರ್ಚ್ ೨೮ ರ ದೊಡ್ಡ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಕಾವೇರಿದೆ, ಕನ್ನಡೇತರ ಮತದಾರರನ್ನು ಓಲೈಸುವ ನಿಟ್ಟಿನಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾರೆ ೧೫೦ ಕ್ಕೂ ಮಿಗಿಲಾಗಿ ಕನ್ನಡೇತರ ಅಭ್ಯರ್ಥಿಗಳಿಗೆ ಸ್ಪರ್ಧಿಸಿಲು ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ಜತೆಗೆ ನೆರೆ ರಾಜ್ಯದ ದ್ರಾವಿಡ ಪಕ್ಷಗಳೂ ಸಹ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಕನ್ನಡ-ಕನ್ನಡಿಗ-ಕರ್ನಾಟಕದ ಹಿತದೃಷ್ಟಿಯನ್ನು ಖಾಯಂ ಆಗಿ ಕಡೆಗಣಿಸಿರುವ ಇಲ್ಲಿನ ರಾಷ್ಟ್ರೀಯ ಪಕ್ಷಗಳು ಕನ್ನಡದ ಸಲುವಾಗಿ ಎಂದೂ ಸಹ ತಮ್ಮಗಳ ನಡುವೆ ಹೊಂದಾಣಿಕೆಗೆ ಮಾಡಿಕೊಂಡ ಉದಾಹರಣೆ ನಮ್ಮ ಮುಂದೆ ಇಲ್ಲ. ರಾಜ್ಯದ ಉತ್ತರದ ಗಡಿಯಲ್ಲಿ ಎಂಇಎಸ್, ಶಿವಸೇನೆಗೆ ಪಾರುಪತ್ಯ ವಹಿಸಿ ಕೊಟ್ಟಿರುವ ಇವರು, ಬೆಂಗಳೂರಿನ ಸುತ್ತ ಮುತ್ತ ಕನ್ನಡೇತರ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿ ಜತೆಗೆ ದ್ರಾವಿಡ ಪಕ್ಷಗಳೊಡನೆ ಚುನಾವಣೆ ಹೊಂದಾಣಿಕೆ ಮಾಡಿಕೊಂಡು ಪರೋಕ್ಷವಾಗಿ ಅವರನ್ನು ಇಲ್ಲಿ ಬೆಳೆಸಲು ಸಹಕರಿಸಿವೆ. ಅಧಿಕಾರದ ಹವಣಿಕೆಗೆ ಮುಂದೊಮ್ಮೆ ಬಳ್ಳಾರಿ ಮುಂತಾದೆಡೆ ತೆಲುಗು ಪಕ್ಷಗಳಿಗೆ ಮಣೆ, ಕೇರಳದ ಗಡಿಯೆಡೆಗೆ ಮಲಯಾಳಿಗಳಿಗೆ ನಿಷ್ಟೆ, ಪಶ್ಚಿಮದಲ್ಲಿ ಕೊಂಕಣಿ ಪಕ್ಷಗಳಿಗೆ ಕೊರಳೊಡ್ಡಲು ಸಹ ಇವರುಗಳು ಈಗಾಗಲೇ ತಯಾರಿ ನಡೆಸುವ ಕಸರತ್ತನ್ನು ಪ್ರಾರಂಭಿಸಿರಲೂಬಹುದು.

ಕನ್ನಡಿಗ ಈ ವಿಷಯವನ್ನು ಬಹಳ ಸೂಕ್ಷ್ಮವಾಗಿ ಗಮನಿಸಬೇಕಿದೆ. ಕರ್ನಾಟಕದಲ್ಲಿ ಈ ವರೆಗೆ ರಾಷ್ಟ್ರೀಯ ಪಕ್ಷಗಳ ಹೆಸರಿನಲ್ಲಿ ನಮ್ಮನ್ನು ಆಳ್ವೆಕೆ ನಡೆಸಿರುವವರು ಕೇವಲ ಅಧಿಕಾರದ ಆಸೆಗಾಗಿ ಮಾತ್ರ ಒಬ್ಬರಿಗೊಬ್ಬರು ಆಗಿರುವುದನ್ನು ನಾವು ಅರಿಯಬೇಕಿದೆ. ಬಗೆಹರಿಯದ ಕಾವೇರಿ-ಕೃಷ್ಣ-ಮಹದಾಯಿ ನೀರಿನ ಸಮಸ್ಯೆ, ಬಾಯಿಗೆ ಬಂದರೂ ಹಲ್ಲಿಗೆ ಸಿಗದ ಶಾಸ್ತ್ರೀಯ ಭಾಷೆ ಸ್ಥಾನಮಾನ,ಅನುಷ್ಠಾನವಾಗದ ಮಹಾಜನ್ ವರದಿ, ಕನ್ನಡಿಗನಿಗೆ ಉದ್ಯೋಗ ಮೀಸಲಿಡಲು ಮಹಿಷಿ ವರದಿ ಮಾಡಿಸಿ ಇನ್ನೂ ಮಲಗಿರುವುದು, ಪ್ರಾದೇಶಿಕ ಸಮತೋಲನಕ್ಕಾಗಿ ನಂಜುಡಪ್ಪ ವರದಿಯನ್ನು ವ್ಯಾಪಕವಾಗಿ ಜಾರಿಗೆ ತರದಿರುವುದು, ಇದನ್ನೆಲ್ಲಾ ಬಿಡಿ, ಸುಲಭ ಸಾಧ್ಯವಾದ ನಾಮಫಲಕ-ಜಾಹೀರಾತುಗಳಲ್ಲಿ ಕನ್ನಡ ಇನ್ನೂ ಅನುಷ್ಠಾನಗೊಂಡಿಲ್ಲದಿರುವುದು ಇವರ ಕನ್ನಡಪರ ಆಡಳಿತದ ವಿಫಲತೆಯನ್ನು ಪ್ರಕರವಾಗಿ ಬಿಂಬಿಸಿ ತೋರಿಸುತ್ತಿದೆ.

ಈ ಬಾರಿ ೫೦ ಕ್ಕೂ ಹೆಚ್ಚಾಗಿ ಕನ್ನಡೇತರ ಅಭ್ಯರ್ಥಿಗಳು ನಮ್ಮ ಮಹಾನಗರ ಪಾಲಿಕೆಗೆ ಆರಿಸಿ ಬರುವ ಸಾಧ್ಯತೆಗಳ ಬಗ್ಗೆ ಮಾಧ್ಯಮದಲ್ಲಿ ವರದಿಗಳು ಬಂದಿದೆ. ಹೀಗಾದಲ್ಲಿ ಮುಂದೆ ನಮ್ಮದೇ ಪಾಲಿಕೆಯಲ್ಲಿ ಕನ್ನಡ ಪರವಾದ ನಿಲುವುಗಳಿಗೆ ಮನ್ನಣೆ ಸಿಗುವುದು ಸಾಧ್ಯವೆ? ರಾಷ್ಟ್ರೀಯ ಪಕ್ಷಗಳನ್ನು ಸದಾ ಬೆನ್ನು ತಟ್ಟಿ ಪ್ರೋತ್ಸಾಹಿಸಿರುವ ಕನ್ನಡಿಗರಿಗೆ ಇವರುಗಳು ಕೊಡ ಬಯಸಿರುವ ಉಡುಗೊರೆ ಇದೇನೆ? ಇವರು ಈ ನಾಡಿನ ಹಿತಕಾಯುವ ಕಾಯಕವೇ ಇಲ್ಲಿ ಅಧಿಕಾರ ವಹಿಸಿಕೊಂಡು ಆಡಳಿತ ನಡೆಸುವವರ ಆಧ್ಯ ಕರ್ತವ್ಯ ಎಂದು ಮನಗಾಣದೆ, ಪೊಳ್ಳು ರಾಷ್ಟ್ರೀಯತೆಯ ಸೋಗಿನಲ್ಲಿ ಮುಳುಗಿ ಹೋಗಿ, ತಮ್ಮತನ ಮತ್ತು ಬದ್ಧತೆಯನ್ನು ಮರೆತು ಸಮಗ್ರ, ಕನ್ನಡ-ಕನ್ನಡಿಗ-ಕರ್ನಾಟಕ ದ ಅಭಿವೃದ್ಧಿ ಯನ್ನು ನಿರ್ಲಕ್ಷಿಸಿರುವುದು ಕಂಡುಬರುತ್ತದೆ.ಇನ್ನಾದರು ಕನ್ನಡಿಗರು ಎಚ್ಚತ್ತುಕೊಂಡು, ಹೈಕಮಾಂಡ್ ಗಳ ಗುಲಾಮಗಿರಿಗೆ ಸಿಲುಕಿ ನಲುಗಿರುವವರನ್ನು ಪಕ್ಕಕ್ಕಿಸಿರಿ, ನಮ್ಮ ರಾಜ್ಯದ ಒಳಿತಿಗಾಗಿ ಶ್ರಮಿಸುವ, ನಮಗೆ ನ್ಯಾಯಯುತವಾಗಿ ದೊರಕಬೇಕಾದ ಎಲ್ಲಾ ಹಕ್ಕುಗಳ ಅನುಷ್ಠಾನಕ್ಕಾಗಿ ಕಾಳಜಿ ಹೊಂದಿರುವ, ನೈಜ ಕನ್ನಡತ್ವದ ಸಿದ್ದಾಂತದ ಪ್ರತಿಪಾದನೆಯೊಂದಿಗೆ ಪ್ರಾದೇಶಿಕ ಚಿಂತನೆಯನ್ನು ಬಲಪಡಿಸುತ್ತ , ರಾಷ್ಟ್ರೀಯತೆಯನ್ನು ಎತ್ತಿ ಹಿಡಿಯುವವರಿಗೆ ಮಾತ್ರ ಬೆಂಬಲ ಕೊಟ್ಟು ಬೆಳೆಸುವತ್ತ ಚಿಂತನೆ ನಡೆಸಬೇಕಿದೆ.

ಸಧ್ಯಕ್ಕೆಬೆಂಗಳೂರು ಮಹಾನಗರ ಪಾಲಿಕೆಗೆ ಅಭ್ಯರ್ಥಿಗಳು ಯಾವುದೇ ಪಕ್ಷದವರಾಗಿರಲಿ, ನಗರದ ಅಭಿವೃದ್ಧಿಯ ಕನಸನ್ನು ಹೊಂದಿರುವ ಜತೆಗೆ ಕನ್ನಡ ಬದ್ಧತೆಯಿರುವವರನ್ನು ಮಾತ್ರ ಆರಿಸಿ ಕಳುಹಿಸುವ ಜವಾಬ್ದಾರಿ ನಮ್ಮ ಮೇಲಿದೆ.

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

****

3 comments:

Anonymous said...

ನಮಸ್ಕಾರ

ನಮ್ಮ NAL ಬಳಿ ಪ್ರಚಾರಕ್ಕಾಗಿ ಬಂದ ಜಾ.ಜನತಾ ದಳದವರು ಹಂಚುತಿದ್ದ pamphlet ಗಳಲ್ಲಿ ತಮಿಳಿನಲ್ಲಿ print ಆಗಿತ್ತು. ನಾನು ಹೋಗಿ ಜಗಳ ಮಾಡಿದೆ. election ನಡೀತಾ ಇರೋದು ಬೆಂಗಳೂರಿನಲ್ಲೋ, ತಮಿಳುನಾಡಿನಲ್ಲೋ? ಅಂತ. ಆದರೆ ಕಾನೂನು ಏನನ್ನುತ್ತದೆ?

ಕವಿತ

Anonymous said...

Namaskara Kalyana Raman ravare,

Thamma BBMP election & Kannadigara Javabhdari ,avara otina hakku hagu matha chalavane bagge nimma lekhana bahala chennagi mudi bandhide. Idannu ella kannadigaru hodi thamma javabhdaritha mathadanadha hakkannu sariyagi chalahisabekagide ..

Inthi
karegowda

ಸೀತಾರಾಮ. ಕೆ. said...

ತಮ್ಮ ಅನಿಸಿಕೆ ಎಲ್ಲ ಕನ್ನಡಿಗರದ್ದು ಸಹಾ. ಬೆ೦ಗಲುರಿನ ಕನ್ನಡಿಗರು ಜಗೃತರಾಗಬೇಕಿದೆ ಮತದಾನದ ಸ೦ಧರ್ಭದಲ್ಲಿ. ಧನ್ಯವಾದಗಳು.