*****
ರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಬೆಂಗಳೂರಿನ ಮೇಯರ್ ಎಸ್.ಕೆ.ನಟರಾಜ್ ರವರು ಮೇರು ನಟ ರಾಜಕುಮಾರ್ ಪ್ರತಿಮೆ ಅನಾವರಣಕ್ಕೆ ಗಡುವು ನಿಗದಿಪಡಿಸಿರುವುದು, ಬೃ.ಬೆಂ.ಮ.ಪಾ. ಆಯುಕ್ತ ಸಿದ್ದಯ್ಯನವರು ರಾಜ್ಯೋತ್ಸವವನ್ನು ಮುಂದಿನ ವರ್ಷದಿಂದ ಬೃ.ಬೆಂ.ಮ.ಪಾ. ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲು ಉದ್ದೇಶಿಸಿದ್ದು ಹೀಗೆ ನಾಡು-ನುಡಿ ಸಂಸ್ಕೃತಿ ಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನು ಪ್ರಸರಿಸಲು ಇವರುಗಳು ತೊಟ್ಟ ಸಂಕಲ್ಪ ಶ್ಲಾಘನೀಯವೇ! ಆದರೆ ಇದಕ್ಕೂ ಮಿಗಿಲಾಗಿ ಬೆಂಗಳೂರಿನೆಲ್ಲೆಡೆ ಕನ್ನಡದ ಕಂಪನ್ನು ಪಸರಿಸಲು ಲಭ್ಯವಾದ ಉಪಯುಕ್ತ ಆದೇಶದ ಬಲವೊಂದನ್ನು ಇವರುಗಳು ಕಡೆಗಣಿಸಿ ಮರೆತುಬಿಟ್ಟಿರುವುದು ವಿಷಾದನೀಯವೇ ಸರಿ.
ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಕಾರ್ಯ ಸಂಸ್ಥೆಗಳ (ತಿದ್ದುಪಡಿ) ನಿಯಮ ಕಲಂ ೨೬ಎ - ೨೦೦೮ ರ ಅಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಅಂಗಡಿ, ಹೋಟಲ್, ಇತರ ಉದ್ಯಮಗಳ ಮಾಲೀಕರು, ಪೆಟ್ರೋಲ್ ಬಂಕ್, ಪ್ರದರ್ಶನ ಮಳಿಗೆ, ಬಸ್ ತಂಗುದಾಣ, ಮಾಹಿತಿ ತಂತ್ರಜ್ಣಾನ ಮತ್ತು ಜೈವಿಕ ತಂತ್ರಜ್ಣಾನ ಕಚೇರಿ, ಸರ್ಕಾರಿ, ಅರೆ ಸರ್ಕಾರಿ ಮತ್ತು ಎಲ್ಲಾ ಖಾಸಗಿ ಜಾಹೀರಾತು ಸಂಸ್ಥೆಯವರು ತಮ್ಮ ವ್ಯಾಪಾರ ಮಳಿಗೆ, ಕಚೇರಿ ಮತ್ತು ಸಂಸ್ಥೆಗೆ ಸಂಬಂಧಿಸಿದ ಹೊರಾಂಗಣ ಮತ್ತು ಒಳಾಂಗಣದಲ್ಲಿ ಹಾಕುವ ನಾಮಫಲಕ, ಜಾಹೀರಾತು ಫಲಕಗಳಲ್ಲಿ ( ಸಾರ್ವಜನಿಕರು ಹೊರಡಿಸುವ ಯಾವುದೇ ರೀತಿಯ ಪ್ರದರ್ಶನ ಜಾಹೀರಾತು ಒಳಗೊಂಡಂತೆ) ಕಡ್ಡಾಯವಾಗಿ ಮೊದಲ ಆಧ್ಯತೆಯಾಗಿ ಕನ್ನಡ ಭಾಷೆಯನ್ನು ಬಳಸಬೇಕು ಎಂಬ ಆದೇಶವಿದೆ. ಇದನ್ನು ಯಾರೇ ಉಲ್ಲಂಘಿಸಿದಲ್ಲಿ ರೂ ೧೦,೦೦೦/- ಗಳ ದಂಡ ವಿಧಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅಧಿಕಾರವಿದೆ.
ಈ ರೀತಿ ಕಾನೂನು-ಆದೇಶಗಳು ಇದ್ದರೂ ಬೆಂಗಳೂರಿನಲ್ಲಿ ಅಂಗಡಿ-ಮುಗ್ಗಟ್ಟುಗಳ-ಮಾಲ್ ಗಳ ನಾಮಫಲಕ, ವಾಣಿಜ್ಯೋದ್ಯಮಿಗಳು ಹೊರಡಿಸುವ ಜಾಹೀರಾತುಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ದೊರಕಿಲ್ಲ. ಬೆಂಗಳೂರಿನ ಬಹುತೇಕ ಹೋಟಲ್ ಗಳ ತಿಂಡಿ-ದರ ಪಟ್ಟಿಯಲ್ಲಿ ಕನ್ನಡ ಮೂಡಿಬಂದಿಲ್ಲ. ಯಾವುದೇ ಮಾಲ್ ಗಳ ಒಳಭಾಗದಲ್ಲಿ ಅಂಗಡಿಗಳಲ್ಲಿ ಮಾರಾಟ ಮಾಡುವ ವಸ್ತುಗಳ ವಿವರಣೆ ಕನ್ನಡದಲ್ಲಿ ಲಭ್ಯವಿಲ್ಲ. ಇನ್ನು ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಾಂಗಣ-ಒಳಾಂಗಣ ಎಲ್ಲೆಡೆ ಜಾಹೀರಾತುಗಳಲ್ಲಿ ಕನ್ನಡದ ಗಂಧವಿಲ್ಲ. ವಿಮಾನ ನಿಲ್ದಾಣದಲ್ಲಿ ವ್ಯವಹರಿಸುವ ಎಲ್ಲಾ ರೀತಿಯ ಸಂಸ್ಥೆಗಳು ಸಾಸಿವೆ ಕಾಳಿನ ಗಾತ್ರದ ಅಕ್ಷರದಲ್ಲಿ ಕನ್ನಡದಲ್ಲಿ ತಮ್ಮ ಸಂಸ್ಥೆಯ ಹೆಸರುಗಳನ್ನು ನಮೂದಿಸಿಕೊಂಡಿದ್ದಾರೆ. ಕನ್ನಡಿಗರು ಭೂತು ಗಾಜು ಹಿಡಿದು ಕನ್ನಡದ ಅಕ್ಷರವನ್ನು ಕಂಡು ಕೊಳ್ಳಬೇಕಿದೆ. ಇದು ಈ ಸಂಸ್ಥೆಗಳು ಅಲ್ಲಿ ಕನ್ನಡಕ್ಕೆ ಕೊಟ್ಟಿರುವ ಗೌರವ. ಇನ್ನು ಅಲ್ಲಿ ಇತರ ಮಾಹಿತಿಗಳು ಕನ್ನಡದಲ್ಲಿ ದೊರಕುವುದು- ಕನ್ನಡದ ಪತ್ರಿಕೆಗಳು-ನಿಯತಕಾಲಿಕೆಗಳು ಲಭಿಸುವುದು ದೂರದ ಮಾತೆ ಸರಿ.
ಹೀಗೆ ಜಾಹೀರಾತು-ನಾಮಫಲಕ ಇನ್ನಿತರೆಡೆ ಕಡ್ಡಾಯವಾಗಿ ಅನುಷ್ಠಾನವಾಗಬೇಕಾಗಿದ್ದ ಕನ್ನಡ ಹೇಳುವವರು-ಕೇಳುವವರು ಇಲ್ಲದೆ ವಿಫಲವಾಗಿರುವುದು ಸತ್ಯ. ನೆನ್ನೆ ರಾಜ್ಯೋತ್ಸವದ ದಿನ ನಾಮಫಲಕ-ಜಾಹೀರಾತುಗಳಲ್ಲಿ ಕನ್ನಡ ಅನುಷ್ಠಾನಕ್ಕಾಗಿ ನೆನಪಿಸಿ, ಆಗ್ರಹಿಸಿದ ಕನ್ನಡಪರ ಸಂಘಟನೆಯ ಕಾರ್ಯಕರ್ತರನ್ನು ಬಂದಿಸಿ ಎಳೆದೊಯ್ದ ಘಟನೆ ನಡೆಯಿತು. ಕಾನೂನು ಮುರಿದು ಕನ್ನಡ ಜಾಹೀರಾತು-ನಾಮಫಲಕ ಹಾಕದವರನ್ನು ಮುಟ್ಟದ ಸರಕಾರ ಬದಲಿಗೆ ಕಾನೂನು ಮುರಿಯುವಿಕೆ ಹೇಗೆ ನಡೆಯುತ್ತಿದೆ ಎಂಬುದನ್ನು ತೋರಿಸಿಕೊಟ್ಟ ಜನರನ್ನೇ ಜೈಲಿಗೆ ಹಾಕುತ್ತಿರುವುದು ವಿಪರ್ಯಾಸ. ಬೆಂಗಳೂರು ಮೇಯರ್ ಮತ್ತು ಬೃ.ಬೆಂ.ಮ.ಪಾ. ಆಯುಕ್ತರು ತಮ್ಮ ಇತರ ಕೆಲಸಗಳ ಜತೆಗೆ ಲಭ್ಯವಿರುವ ಕಾನೂನು ಬಳಸಿ ನಾಮಫಲಕ-ಜಾಹೀರಾತುಗಳಲ್ಲಿ ಕನ್ನಡ ಅನುಷ್ಠಾನದ ಕೆಲಸಕ್ಕೆ ಚಾಲನೆ ನೀಡಿದಲ್ಲಿ ಬಹುಮಟ್ಟಿಗೆ ಕನ್ನಡ ಬೆಂಗಳೂರಿನಲ್ಲಿ ಜಗಮಗಿಸುವುದರಲ್ಲಿ ಸಂದೇಹವಿಲ್ಲ. ಇಚ್ಛಾ ಶಕ್ತಿ ತೋರಬೇಕಿದೆ ಅಷ್ಟೇ!
*****
ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ
*****
2 comments:
ಸಂದರ್ಭಸೂಕ್ತ ಬರಹ!
ವರ್ಷಕ್ಕೊಮ್ಮೆ ಹಾರಾಡಿ ಆಮೇಲೆ ಕುಂಭಕರ್ಣನ ಸೋದರರಂತೆ ನಿದ್ದೆಗೆ ಜಾರುವ ಇವರನ್ನು ಎದ್ದೇಳಿಸುವುದು ಹೀಗೆ ? ಸರ್ಕಾರವು ಈ ನಿಟ್ಟಿನಲ್ಲಿ ಒಲವು ತೋರಿಸದಿರುವುದು ನಮ್ಮ ದುರಾದೃಷ್ಟ.
Post a Comment