Thursday, March 25, 2010

ಬಿಬಿಎಂಪಿ ಗೆ ಆಭಿವೃದ್ಧಿಯ ಕನಸಿನ ಜತೆಗೆ ಕನ್ನಡದ ಬದ್ಧತೆಯಿರುವವರು ಮಾತ್ರ ಆಯ್ಕೆಯಾಗಲಿ..

ಬರುವ ಮಾರ್ಚ್ ೨೮ ರ ದೊಡ್ಡ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಕಾವೇರಿದೆ, ಕನ್ನಡೇತರ ಮತದಾರರನ್ನು ಓಲೈಸುವ ನಿಟ್ಟಿನಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾರೆ ೧೫೦ ಕ್ಕೂ ಮಿಗಿಲಾಗಿ ಕನ್ನಡೇತರ ಅಭ್ಯರ್ಥಿಗಳಿಗೆ ಸ್ಪರ್ಧಿಸಿಲು ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ಜತೆಗೆ ನೆರೆ ರಾಜ್ಯದ ದ್ರಾವಿಡ ಪಕ್ಷಗಳೂ ಸಹ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಕನ್ನಡ-ಕನ್ನಡಿಗ-ಕರ್ನಾಟಕದ ಹಿತದೃಷ್ಟಿಯನ್ನು ಖಾಯಂ ಆಗಿ ಕಡೆಗಣಿಸಿರುವ ಇಲ್ಲಿನ ರಾಷ್ಟ್ರೀಯ ಪಕ್ಷಗಳು ಕನ್ನಡದ ಸಲುವಾಗಿ ಎಂದೂ ಸಹ ತಮ್ಮಗಳ ನಡುವೆ ಹೊಂದಾಣಿಕೆಗೆ ಮಾಡಿಕೊಂಡ ಉದಾಹರಣೆ ನಮ್ಮ ಮುಂದೆ ಇಲ್ಲ. ರಾಜ್ಯದ ಉತ್ತರದ ಗಡಿಯಲ್ಲಿ ಎಂಇಎಸ್, ಶಿವಸೇನೆಗೆ ಪಾರುಪತ್ಯ ವಹಿಸಿ ಕೊಟ್ಟಿರುವ ಇವರು, ಬೆಂಗಳೂರಿನ ಸುತ್ತ ಮುತ್ತ ಕನ್ನಡೇತರ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿ ಜತೆಗೆ ದ್ರಾವಿಡ ಪಕ್ಷಗಳೊಡನೆ ಚುನಾವಣೆ ಹೊಂದಾಣಿಕೆ ಮಾಡಿಕೊಂಡು ಪರೋಕ್ಷವಾಗಿ ಅವರನ್ನು ಇಲ್ಲಿ ಬೆಳೆಸಲು ಸಹಕರಿಸಿವೆ. ಅಧಿಕಾರದ ಹವಣಿಕೆಗೆ ಮುಂದೊಮ್ಮೆ ಬಳ್ಳಾರಿ ಮುಂತಾದೆಡೆ ತೆಲುಗು ಪಕ್ಷಗಳಿಗೆ ಮಣೆ, ಕೇರಳದ ಗಡಿಯೆಡೆಗೆ ಮಲಯಾಳಿಗಳಿಗೆ ನಿಷ್ಟೆ, ಪಶ್ಚಿಮದಲ್ಲಿ ಕೊಂಕಣಿ ಪಕ್ಷಗಳಿಗೆ ಕೊರಳೊಡ್ಡಲು ಸಹ ಇವರುಗಳು ಈಗಾಗಲೇ ತಯಾರಿ ನಡೆಸುವ ಕಸರತ್ತನ್ನು ಪ್ರಾರಂಭಿಸಿರಲೂಬಹುದು.

ಕನ್ನಡಿಗ ಈ ವಿಷಯವನ್ನು ಬಹಳ ಸೂಕ್ಷ್ಮವಾಗಿ ಗಮನಿಸಬೇಕಿದೆ. ಕರ್ನಾಟಕದಲ್ಲಿ ಈ ವರೆಗೆ ರಾಷ್ಟ್ರೀಯ ಪಕ್ಷಗಳ ಹೆಸರಿನಲ್ಲಿ ನಮ್ಮನ್ನು ಆಳ್ವೆಕೆ ನಡೆಸಿರುವವರು ಕೇವಲ ಅಧಿಕಾರದ ಆಸೆಗಾಗಿ ಮಾತ್ರ ಒಬ್ಬರಿಗೊಬ್ಬರು ಆಗಿರುವುದನ್ನು ನಾವು ಅರಿಯಬೇಕಿದೆ. ಬಗೆಹರಿಯದ ಕಾವೇರಿ-ಕೃಷ್ಣ-ಮಹದಾಯಿ ನೀರಿನ ಸಮಸ್ಯೆ, ಬಾಯಿಗೆ ಬಂದರೂ ಹಲ್ಲಿಗೆ ಸಿಗದ ಶಾಸ್ತ್ರೀಯ ಭಾಷೆ ಸ್ಥಾನಮಾನ,ಅನುಷ್ಠಾನವಾಗದ ಮಹಾಜನ್ ವರದಿ, ಕನ್ನಡಿಗನಿಗೆ ಉದ್ಯೋಗ ಮೀಸಲಿಡಲು ಮಹಿಷಿ ವರದಿ ಮಾಡಿಸಿ ಇನ್ನೂ ಮಲಗಿರುವುದು, ಪ್ರಾದೇಶಿಕ ಸಮತೋಲನಕ್ಕಾಗಿ ನಂಜುಡಪ್ಪ ವರದಿಯನ್ನು ವ್ಯಾಪಕವಾಗಿ ಜಾರಿಗೆ ತರದಿರುವುದು, ಇದನ್ನೆಲ್ಲಾ ಬಿಡಿ, ಸುಲಭ ಸಾಧ್ಯವಾದ ನಾಮಫಲಕ-ಜಾಹೀರಾತುಗಳಲ್ಲಿ ಕನ್ನಡ ಇನ್ನೂ ಅನುಷ್ಠಾನಗೊಂಡಿಲ್ಲದಿರುವುದು ಇವರ ಕನ್ನಡಪರ ಆಡಳಿತದ ವಿಫಲತೆಯನ್ನು ಪ್ರಕರವಾಗಿ ಬಿಂಬಿಸಿ ತೋರಿಸುತ್ತಿದೆ.

ಈ ಬಾರಿ ೫೦ ಕ್ಕೂ ಹೆಚ್ಚಾಗಿ ಕನ್ನಡೇತರ ಅಭ್ಯರ್ಥಿಗಳು ನಮ್ಮ ಮಹಾನಗರ ಪಾಲಿಕೆಗೆ ಆರಿಸಿ ಬರುವ ಸಾಧ್ಯತೆಗಳ ಬಗ್ಗೆ ಮಾಧ್ಯಮದಲ್ಲಿ ವರದಿಗಳು ಬಂದಿದೆ. ಹೀಗಾದಲ್ಲಿ ಮುಂದೆ ನಮ್ಮದೇ ಪಾಲಿಕೆಯಲ್ಲಿ ಕನ್ನಡ ಪರವಾದ ನಿಲುವುಗಳಿಗೆ ಮನ್ನಣೆ ಸಿಗುವುದು ಸಾಧ್ಯವೆ? ರಾಷ್ಟ್ರೀಯ ಪಕ್ಷಗಳನ್ನು ಸದಾ ಬೆನ್ನು ತಟ್ಟಿ ಪ್ರೋತ್ಸಾಹಿಸಿರುವ ಕನ್ನಡಿಗರಿಗೆ ಇವರುಗಳು ಕೊಡ ಬಯಸಿರುವ ಉಡುಗೊರೆ ಇದೇನೆ? ಇವರು ಈ ನಾಡಿನ ಹಿತಕಾಯುವ ಕಾಯಕವೇ ಇಲ್ಲಿ ಅಧಿಕಾರ ವಹಿಸಿಕೊಂಡು ಆಡಳಿತ ನಡೆಸುವವರ ಆಧ್ಯ ಕರ್ತವ್ಯ ಎಂದು ಮನಗಾಣದೆ, ಪೊಳ್ಳು ರಾಷ್ಟ್ರೀಯತೆಯ ಸೋಗಿನಲ್ಲಿ ಮುಳುಗಿ ಹೋಗಿ, ತಮ್ಮತನ ಮತ್ತು ಬದ್ಧತೆಯನ್ನು ಮರೆತು ಸಮಗ್ರ, ಕನ್ನಡ-ಕನ್ನಡಿಗ-ಕರ್ನಾಟಕ ದ ಅಭಿವೃದ್ಧಿ ಯನ್ನು ನಿರ್ಲಕ್ಷಿಸಿರುವುದು ಕಂಡುಬರುತ್ತದೆ.ಇನ್ನಾದರು ಕನ್ನಡಿಗರು ಎಚ್ಚತ್ತುಕೊಂಡು, ಹೈಕಮಾಂಡ್ ಗಳ ಗುಲಾಮಗಿರಿಗೆ ಸಿಲುಕಿ ನಲುಗಿರುವವರನ್ನು ಪಕ್ಕಕ್ಕಿಸಿರಿ, ನಮ್ಮ ರಾಜ್ಯದ ಒಳಿತಿಗಾಗಿ ಶ್ರಮಿಸುವ, ನಮಗೆ ನ್ಯಾಯಯುತವಾಗಿ ದೊರಕಬೇಕಾದ ಎಲ್ಲಾ ಹಕ್ಕುಗಳ ಅನುಷ್ಠಾನಕ್ಕಾಗಿ ಕಾಳಜಿ ಹೊಂದಿರುವ, ನೈಜ ಕನ್ನಡತ್ವದ ಸಿದ್ದಾಂತದ ಪ್ರತಿಪಾದನೆಯೊಂದಿಗೆ ಪ್ರಾದೇಶಿಕ ಚಿಂತನೆಯನ್ನು ಬಲಪಡಿಸುತ್ತ , ರಾಷ್ಟ್ರೀಯತೆಯನ್ನು ಎತ್ತಿ ಹಿಡಿಯುವವರಿಗೆ ಮಾತ್ರ ಬೆಂಬಲ ಕೊಟ್ಟು ಬೆಳೆಸುವತ್ತ ಚಿಂತನೆ ನಡೆಸಬೇಕಿದೆ.

ಸಧ್ಯಕ್ಕೆಬೆಂಗಳೂರು ಮಹಾನಗರ ಪಾಲಿಕೆಗೆ ಅಭ್ಯರ್ಥಿಗಳು ಯಾವುದೇ ಪಕ್ಷದವರಾಗಿರಲಿ, ನಗರದ ಅಭಿವೃದ್ಧಿಯ ಕನಸನ್ನು ಹೊಂದಿರುವ ಜತೆಗೆ ಕನ್ನಡ ಬದ್ಧತೆಯಿರುವವರನ್ನು ಮಾತ್ರ ಆರಿಸಿ ಕಳುಹಿಸುವ ಜವಾಬ್ದಾರಿ ನಮ್ಮ ಮೇಲಿದೆ.

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

****

Sunday, March 14, 2010

ವಿಶ್ವ ಗ್ರಾಹಕ ಹಕ್ಕು ಸಂರಕ್ಷಣಾ ದಿನ ಮತ್ತು ಭಾಷಾ ಆಯಾಮ

*****

ಇಂದಿನ ಆಧುನಿಕ ಸಮಾಜದಲ್ಲಿ ವಿನಿಮಯಗಳು ಅವಶ್ಯಕ. ಯಾವುದೇ ವಸ್ತು ಅಥವಾ ಎಂತಹುದೇ ಸೇವೆಯನ್ನು ಹಣ ಕೊಟ್ಟು ಪಡೆಯುವವ ಗ್ರಾಹಕ ಅಥವ ಬಳಕೆದಾರ ಎನಿಸುತ್ತಾನೆ. ಗ್ರಾಹಕ ತಾನು ಹಣ ಕೊಟ್ಟು ಖರೀದಿಸುವ ಯಾವುದೇ ವಸ್ತು ಅಥವ ಸೇವೆಯ ಬಗ್ಗೆ ಅದರ ಉತ್ಪಾದಕ-ಮಾರಾಟಗಾರನಿಂದ, ಸಂಪೂರ್ಣ ಮಾಹಿತಿ ಪಡೆಯಲು ಅರ್ಹನಾಗಿದ್ದಾನೆ. ಗ್ರಾಹಕನ ಈ ಸಾರ್ವಭೌಮ ಅಧಿಕಾರಕ್ಕೆ ರಾಜ್ಯ ಗ್ರಾಹಕ ನ್ಯಾಯಾಲಯ ಮತ್ತು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯಗಳ ನೆರವು ಸಹ ಲಭ್ಯವಿದೆ. ಪ್ರತಿವರ್ಷ ಮಾರ್ಚ್ ೧೫ರಂದು ಗ್ರಾಹಕ ಹಕ್ಕು ಸಂರಕ್ಷಣಾ ದಿನವೆಂದು ಆಚರಿಸಿ ಅದರ ಮಹತ್ವ ವಿವರಿಸುವ ಕೆಲಸಗಳು ಸಹ ಆಚರಣೆಯಲ್ಲಿದೆ.

ವಿಪರ್ಯಾಸವೆಂದರೆ ಇವು ಕೇವಲ ತೂಕ, ಅಳತೆಯಲ್ಲಿ ಮೋಸ, ಗುಣಮಟ್ಟದಲ್ಲಿ ನ್ಯೂನತೆ, ವಸ್ತುವಿನಲ್ಲಿ ಅಡಕ ವಾಗಿರುವ ಅಂಶಗಳ ಅಸಮರ್ಪಕ ಮಾಹಿತಿಗಳಿಗೆ ಮಾತ್ರ ಸೀಮಿತ ಮಾಡಿ ಗ್ರಾಹಕ ಸೇವೆಯ ಮೂಲಕ ಭಾಷೆ-ಸಂಸ್ಕೃತಿಯನ್ನು ಸಂರಕ್ಷಿಸುವ, ಬೆಳೆಸುವ ಬಹುದೊಡ್ಡ ಆಯಾಮವನ್ನು ಎಲ್ಲೆಡೆ ಕಡೆಗಣಿಸಿರುವುದು ಕಂಡು ಬರುತ್ತದೆ. ಯಾವುದೇ ವಸ್ತುವನ್ನು ಎಲ್ಲಿಯೇ ಉತ್ಪಾದಿಸುವವ ಅದನ್ನು ಕರ್ನಾಟಕದಲ್ಲಿ ವಿತರಿಸುವವ ಅಥವ ಮಾರಾಟ ಮಾಡುವವನಿಗೆ ಕರ್ನಾಟಕದಲ್ಲಿ ಬಹುಜನ ಬಳಸುವ ಭಾಷೆ ಕನ್ನಡ, ಕನ್ನಡ ಗ್ರಾಹಕನೇ ಇಲ್ಲಿ ಸಾರ್ವಭೌಮ ಎಂಬ ತಿಳುವಳಿಕೆ ಹೊಂದಿ ತನ್ನ ಉತ್ಪನ್ನದ ಎಲ್ಲಾ ಜಾಹೀರಾತುಗಳನ್ನು - ವಿವರಗಳನ್ನು-ಮಾಹಿತಿಯನ್ನು-ಸೇವೆಯನ್ನು ಕನ್ನಡದಲ್ಲಿ ನೀಡಬೇಕಾಗಿರುವುದು ಸಹಜವಲ್ಲವೇ? [ಇದು ಭಾರತದ ಇತರ ರಾಜ್ಯಗಳಲ್ಲಿ ಆಯಾ ಭಾಷೆಗಳಿಗೆ ಪ್ರಾಮುಖ್ಯ ದೊರಕಬೇಕು ಎನ್ನುವುದು ಸಹ ಸತ್ಯವಾದದ್ದು] ಹಾಗಾಗಿ ಕರ್ನಾಟಕದ ಅಧಿಕೃತ ಭಾಷೆ ಕನ್ನಡವಾಗಿದ್ದು, ನಮ್ಮ ಸಂವಿಧಾನದ ಭಾಷ ಸೂತ್ರದ ನಿಲುವಿನಂತೆ ದೇಶೀಯ ಭಾಷೆಗಳಲ್ಲೇ ಆದಳಿತ-ವ್ಯವಹಾರ ನಡೆಸಬೇಕೆಂಬುದರ ಅದೇಶದಂತೆ ಕರ್ನಾಟಕದಲ್ಲಿ ಕನ್ನಡಕ್ಕೆ ಆಧ್ಯತೆ ನೀಡಿ ಎನ್ನುವುದು ನಿರ್ವಿವಾದವಾದವಾಗಿರುವಾಗ ಗ್ರಾಹಕ ಸೇವೆಯಲ್ಲಿ ಕನ್ನಡಿಗ ಕನ್ನಡತನದಿಂದ ವಂಚಿತನಾಗಿರುವುದನ್ನು ನಾವು ಎಲ್ಲೆಡೆ ಕಾಣಬಹುದಾಗಿದೆ.

ನಮ್ಮ ಮನೆಗಳಲ್ಲಿ ಬಹು ಜಾಗರೂಕತೆಯಿಂದ ಉಪಯೋಗಿಸಬೇಕಾದ ಅನಿಲ ಸಿಲಿಂಡರಿನ ಮೇಲಿನ ಸುರಕ್ಷಿತ ಉಪಯೋಗದ ವಿವರ ಕನ್ನಡದಲ್ಲಿಲ್ಲದಿರುವುದನ್ನು, ನಮ್ಮ ಆರೋಗ್ಯ-ಜೀವ ರಕ್ಷಣೆಗೆ ಉಪಯೋಗಿಸುವ ಔಷದಿ-ಮಾತ್ರೆ-ಚುಚ್ಚುಮದ್ದಿನ ಬಗ್ಗೆ ಮಾಹಿತಿ ಸಹ ಕನ್ನಡದಲ್ಲಿ ಇಲ್ಲದಿರುವುದನ್ನು, ಇವುಗಳ ಕುರಿತು ನಾವು ಸುರಕ್ಷತೆಯಿಂದಿರಬೇಕಾದ ಸೂಕ್ಷ್ಮವನ್ನು ಗಂಭೀರವಾಗಿ ಪರಿಗಣಿಸದೆ ಬಹಳ ಹಗುರವಾಗಿದ್ದು ಬಿಟ್ಟಿದ್ದೇವೆ. ದೂರವಾಣಿಯಲ್ಲಿ ನಮ್ಮನ್ನು ಸಂಪರ್ಕಿಸಿ, ನಾವು ಅವರಿಗೆ ಗ್ರಾಹಕರಾಗಬಯಸುವ ಬ್ಯಾಂಕುಗಳು, ವಾಣಿಜ್ಯ ಮಳಿಗೆಗಳವರು, ಮನೆ-ನಿವೇಶನ ದೊರಕಿಸುವವರು, ಸಾಲ ನೀಡುವವರು, ಕಾರು-ಮೋಟಾರು ಮಾರುವವರು, ಗ್ರಾಹಕನಾದವನು ವ್ಯಾಪಾರಸ್ಥನ ಭಾಷೆಯಲ್ಲಿ ಮಾತನಾಡಲು ಒತ್ತಾಯಿಸುವುದು ಸರ್ವೇ ಸಾಮಾನ್ಯವಾಗಿದ್ದು ನಾವ್ಯಾರೂ ಅಲ್ಲಿ ಸಹಜವಾಗಿರಬೇಕಾಗಿದ್ದ ಕನ್ನಡಕ್ಕಾಗಿ, ಆಗ್ರಹಿಸುವುದು ಸಂಕೋಚವೋ-ಸಂಕುಚಿತವೆನ್ನಿಸಿಯೋ ಸುಮ್ಮನಿದ್ದುಬಿಟ್ಟಿದ್ದೇವೆ. ನಮ್ಮ ಕನ್ನಡದ ಸ್ವಾಭಿಮಾನವನ್ನು ವ್ಯಕ್ತಪಡಿಸುವುದು ಸಹ ಅವಮಾನವೆಂದು ತೆಪ್ಪಗಾಗಿದ್ದೇವೆ. ಹೀಗೆ ಉತ್ಪತ್ತಿಯಾಗುತ್ತಿರುವ ಎಲ್ಲಾ ರೀತಿಯ ಸಲಕರಣೆಗಳು, ಟಿವಿ-ಫ್ರಿಡ್ಜು-ನೀರು-ಬೀರು-ಸಾಬೂನು-ಕೀಟನಾಷಕ-ತಲೆಗೆ ಬಳಿದುಕೊಳ್ಳುವ ಬಣ್ಣ-ಹಚ್ಚಿಕೊಳ್ಳುವ ಎಣ್ಣೆ ಇವೆಲ್ಲವನ್ನು ಉಪಯೋಗಿಸುವ ವಿವರಗಳು-ಇದರ ಬಗ್ಗೆ ಮಾಹಿತಿ ನಮ್ಮ ಕನ್ನಡ ಭಾಷೆಯಲ್ಲಿ ನೀಡದೆ, ಆದರೂ ನೀವಿದನ್ನು ಖರೀದಿಸಬೇಕು ಎಂದು ಹೆಮ್ಮೆಯಿಂದ ಅವರು ಜಾಹೀರಾತು ನೀಡುವುದನ್ನು ಕಣ್ಣು ಮುಚ್ಚಿ ನೋಡಿ! ಕಿವಿ ಮುಚ್ಚಿ ಆಲಿಸಿ!! ಕಿಸೆಯಿಂದ ಕಾಸು ತೆಗೆದು ನಾವೆಲ್ಲರೂ ಖರೀದಿಸುತ್ತಿದ್ದೇವೆ!

ಇಲ್ಲಿ ಗಮನಿಸಬೇಕಾಗಿರುವ ಬಹಳ ಸುಲಭವಾದ ಅಂಶವೆಂದರೆ, ನಾವು ಗ್ರಾಹಕರಾಗಿ ಎಲ್ಲೆಡೆ ಕನ್ನಡಕ್ಕಾಗಿ ಆಗ್ರಹಿಸಿದರೆ. ಕನ್ನಡದಲ್ಲಿ ಸೇವೆ ನೀಡಲು ಕನ್ನಡಿಗನಿಗೆ ಕೆಲಸ ದೊರೆಯುತ್ತದೆ. ಹಾಗು ಉತ್ಪನ್ನಗಳ ವಿವರ ಕನ್ನಡದಲ್ಲಿ ದೊರೆಯುವುದು ಎಂದರೆ ಕನ್ನಡದಲ್ಲಿ ವಿವರಣೆ ಬರೆಯುವವನಿಗೆ, ಕನ್ನಡ ಮುದ್ರಿಸುವವನಿಗೆ ಕೆಲಸ ದೊರೆಯುತ್ತದೆಯಲ್ಲವೇ? ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇದು ಕನ್ನಡವನ್ನು ಬೆಳೆಸುವ-ಸಂರಕ್ಷಿಸುವ, ಬಹುದೊಡ್ಡ ಸಾಧಕವೆನಿಸುತ್ತದ್ದಲ್ಲವೇ? ಕನ್ನಡ ಬಾರದವನು ಕನ್ನಡ ಕಲಿಯುವ ಅನಿವಾರ್ಯತೆಯನ್ನು ಸಹ ಇದು ಹುಟ್ಟುಹಾಕುತ್ತದೆ. ಎಲ್ಲಿಯವರೆಗೆ ಬಳಕೆದಾರರಾದ ನಾವು ಸೇವೆಯನ್ನು ಕನ್ನಡದಲ್ಲಿ ಕೇಳುವುದಿಲ್ಲವೋ ಉತ್ಪಾದಕ ಅಥವ ಮಾರಾಟಗಾರ ಸಹಜವಾಗಿರಬೇಕಾಗಿದ್ದ ನಮ್ಮ ಹಕ್ಕನ್ನು ಕಡೆಗಣಿಸುವುದು ಸಾಮಾನ್ಯ. ಸಹಜವಾಗಿ ನಮಗೆ ದೊರಕಬೇಕಾದದ್ದ ಕನ್ನಡದಲ್ಲಿನ ಗ್ರಾಹಕ ಸೇವೆಯನ್ನು ಇಂದು ನಾವು ಆಗ್ರಹ ಮಾಡಿ ಪಡೆಯಬೇಕಾದ ಸ್ಥಿತಿ ತಂದುಕೊಂಡಿದ್ದೇವೆ.

ಇಂದು ಬ್ಯಾಂಕು ಗಳಲ್ಲಿ ಸಾಲ ಪಡೆಯುವ - ಜೀವವಿಮೆ ಮಾಡಿಸುವ ಅರ್ಜಿಯನ್ನು ನಾವು ಕನ್ನಡದಲ್ಲಿ [ನಿಗಮದ ಪ್ರಕಾರ ಇದು ವರ್ನ್ಯಾಕುಲರ್ ಭಾಷೆ] ಭರ್ತಿ ಮಾಡಿ ಸಹಿ ಮಾಡಿದರೆ "ನನ್ನ ಹೆಸರು ಇಂಥದ್ದು, ನನಗೆ ಕನ್ನಡ ಭಾಷೆ ಒಂದೇ ಬರೋದು, ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ, ನೀವು ಇಂಗ್ಲಿಷ್-ಹಿಂದಿ ಭಾಷೇಲಿ ಬರೆದಿರುವುದೆಲ್ಲವನ್ನೂ, ಓದಿಸಿ ಕೇಳಿ ಅರ್ಥ ಮಾಡಿಕೊಂಡಿದ್ದೇನೆ" ಎಂದು ಷರಾ ಬೇರೆ ಬರೆದುಕೊಡಬೇಕಾದಂತ ದುಸ್ಥಿತಿ ಕನ್ನಡ ಗ್ರಾಹಕನಿಗೆ ಬಂದೊದಗಿದೆ.

ಹಲವು ಭಾಷೆ, ಸಂಸ್ಕೃತಿಗಳಿಂದ ಮೇಳೈಸುತ್ತಿರುವ ವಿವಿಧತೆಯಲ್ಲಿ ಏಕತೆ ಸಾರುವ ರಾಷ್ಟ್ರ ನಮ್ಮದು. ಇವುಗಳೆಲ್ಲವನ್ನು ಪ್ರೀತಿಸುವ ಮತ್ತು ಗೌರವಿಸುವ ಔದಾರ್ಯ ಸಾಮೂಹಿಕವಾಗಿ ಇದ್ದಾಗ ಸಾಮರಸ್ಯ ತನ್ನಿಂತಾನೆ ಮೂಡುತ್ತದೆ. ಹೇಗೆ ಜಾಗೃತ ಗ್ರಾಹಕ ಜವಾಬ್ದಾರಿ ಯುತ ಉತ್ಪಾದಕನಿಗೆ ಕಾರಣಕರ್ತನಾಗುತ್ತಾನೋ, ಜಾಗೃತ ಕನ್ನಡ ಗ್ರಾಹಕ ಕರ್ನಾಟಕದಲ್ಲಿ ಕನ್ನಡತನವನ್ನು ಉಳಿಸುವ ಮೂಲಕ, ಇತರ ಭಾಷಿಕರಿಗೆ ಅವರವರ ರಾಜ್ಯಗಳಲ್ಲಿ ಅವರ ಭಾಷೆ ಉಳಿಸಿಕೊಳ್ಳಲು ಸ್ಪೂರ್ತಿಯಾಗುತ್ತ, ಅನೇಕತೆಯಲ್ಲಿರುವ ಈ ದೇಶದ ಏಕತೆಯನ್ನು ಸಾರುತ್ತ ಸಮಗ್ರ ದೇಶದ ಬೆಳವಣಿಗೆ, ಅಭಿವೃದ್ಧಿಗೆ ಪೂರಕನಾಗಬಹುದಲ್ಲವೇ?

ಕೇವಲ ವ್ಯಾಪಾರಿ ಸಂಸ್ಥೆಗಳ ನಾಮಫಲಕಗಳಲ್ಲಿ ಮಾತ್ರ ಕನ್ನಡ ಕಾಣುವಂತಾಗುವ ಕಾನೂನಿನಿಂದ ಏನೂ ಪ್ರಯೋಜನವಿಲ್ಲ! ಕನ್ನಡ ನಾಡಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ನಿರಾಕರಿಸುವುದು 'ಶಿಕ್ಷಾರ್ಹ ಅಪರಾಧ' ಎಂಬ ಕಾನೂನನ್ನು ನಮ್ಮ ಸರ್ಕಾರ ಜಾರಿಗೆ ತರಬೇಕಿದೆ. ಹೀಗೆ ಕಾನೂನು ಜಾರಿಯಾದಲ್ಲಿ ಕನ್ನಡ ಅನುಷ್ಠಾನದ ಎಲ್ಲಾ ರೀತಿಯ ವ್ಯಾಪಾರಿ ಸಂಸ್ಥೆಗಳು ಎಚ್ಚರಿಕೆ ವಹಿಸುತ್ತವೆ ಮತ್ತು ಗ್ರಾಹಕನೇ ದೇವರು ಎನ್ನುವ ಮಾತಿಗೆ ಬೆಲೆ ಸಿಗುವಂತಾಗುತ್ತದೆ. ಆದರೆ ಭಾರತದಲ್ಲಿ ಗ್ರಾಹಕನ ಹಕ್ಕುಗಳಿಗಾಗಿರೋ ಮಾರ್ಗದರ್ಶಿ/ ನಿಯಮಗಳ ದೊಡ್ಡ ಪಟ್ಟಿಯಲ್ಲಿ ಭಾಷಾ ಆಯಾಮವೇ ಇಲ್ಲದಿರುವುದು ಮತ್ತೊಂದು ವಿಪರ್ಯಾಸವೇ ಸರಿ!

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ - ಕೆಂಪಿನ ಚಿಂತನೆ ಕಪ್ಪು

****

Tuesday, March 2, 2010

ಕರ್ನಾಟಕ ಬ್ಯಾಂಕ್ ನಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ!

*****

ಸ್ವಲ್ಪ ಸಮಯದ ಹಿಂದೆ ಜಾಗೃತ ಕನ್ನಡ ಗ್ರಾಹಕರು, "ಕರ್ನಾಟಕ ಬ್ಯಾಂಕ್" ತನ್ನ ದೈನಂದಿನ ವ್ಯವಹಾರದಲ್ಲಿ ಕನ್ನಡ ಕಡೆಗಣಿಸಿರುವ ಬಗ್ಗೆ ಮನವರಿಕೆ ಮಾಡಿಸಿ ಕರ್ನಾಟಕದ ಅವರ ಎಲ್ಲ ಶಾಖೆಗಳಲ್ಲಿ ಗ್ರಾಹಕ ಸೇವೆಯಲ್ಲಿ ಕನ್ನಡ ಬಳಕೆಗೆ ತರುವಂತೆ ಒತ್ತಾಯಿಸಿತ್ತು.ಬ್ಯಾಂಕ್ ನಲ್ಲೇ ಕನ್ನಡಲ್ಲಿ ಗ್ರಾಹಕ ಸೇವೆ ಇಲ್ಲ ಅಂದ್ರೆ ನಾವು ಇನ್ಯಾವ ಬ್ಯಾಂಕ್ ನಲ್ಲಿ ಕನ್ನಡ ಗ್ರಾಹಕ ಸೇವೆ ಅಪೇಕ್ಷಿಸಲು ಸಾಧ್ಯ ಎಂಬುದು ಜಾಗೃತ ಗ್ರಾಹಕರ ಪ್ರಶ್ನೆಯಾಗಿತ್ತು.

ಮೊನ್ನೆ ಕರ್ನಾಟಕ ಬ್ಯಾಂಕ್ , ಬಸವನಗುಡಿ ಶಾಖೆಗೆ ಹೋದಾಗ ಅಚ್ಚರಿಯೊಡನೆ ಸಂತೋಷವಾಯಿತು. ಹಣ - ಚೆಕ್ಕು ತುಂಬುವ ಕನ್ನಡ ನಮೂನೆ (ಚಲನ್) ಲಭ್ಯವಿತ್ತು. ಲಗತ್ತಿಸಿರುವ ಚಿತ್ರ ಗಮನಿಸಿ.

ಸಂತೋಷದ ಸಂಗತಿಯೆಂದರೆ ನಮೂನೆಯ ಒಂದು ಬದಿಯಲ್ಲಿ ಕನ್ನಡವನ್ನು ಪೂರ್ತಿಯಾಗಿ ಬಳಸಿ ಹಿಂಬಾಗದಲ್ಲಿ ಹಿಂದಿ-ಇಂಗ್ಲೀಷ್ ನ್ನು ಒಟ್ಟಗೆ ಬಳಸಿದ್ದಾರೆ.

ಕನ್ನಡದ ಈ ನಮೂನೆಯನ್ನು ನಾವು ಇಲ್ಲಿ ನಿರಂತರವಾಗಿ ಕಾಣಬೇಕಾದರೆ, ಈ ನಮೂನೆಯಲ್ಲಿ ನಾವು ಕನ್ನಡದಲ್ಲೇ ಭರ್ತಿ ಮಾಡಬೇಕಾಗಿರುವುದು ಅಗತ್ಯವಾದದ್ದು. ಕರ್ನಾಟಕ ಬ್ಯಾಂಕ್ ಇರಬಹುದು, ಆಂಧ್ರ ಬ್ಯಾಂಕ್ ಅಥವ ತಮಿಳುನಾಡು ಮರ್ಕಂಟೈಲ್ ಬ್ಯಾಂಕ್ ಇರಬಹುದು ಇವೆಲ್ಲವೂ ಕರ್ನಾಟಕದಲ್ಲಿದ್ದರೆ ಕನ್ನಡಿಗರಾದ ನಾವು ಇಲ್ಲಿ ವ್ಯವಹಾರ ನಡೆಸುತ್ತಿದ್ದರೆ ಹಣ-ಚೆಕ್ಕು ತುಂಬುವ, ಖಾತೆ ತೆರೆಯಲು ಅರ್ಜಿ ತುಂಬುವ, ವ್ಯವಹಾರದ ಸಲುವಾಗಿ ಪತ್ರ ಬರೆಯಬೇಕಾದಲ್ಲಿ ಹೀಗೆ ಎಲ್ಲಾ ವಿವರಗಳನ್ನು ಕನ್ನಡದಲ್ಲೇ ಭರ್ತಿ ಮಾಡಲು, ಸಿಬ್ಬಂಧಿಯೊಡನೆ ಕನ್ನಡದಲ್ಲಿ ವ್ಯವಹರಿಸಲು ಮುಂದಾದಲ್ಲಿ ಗ್ರಾಹಕ ಸೇವೆಯಲ್ಲಿ ಕನ್ನಡ ತಂತಾನೆ ಮುನ್ನುಗ್ಗುತ್ತದೆ. ಬ್ಯಾಂಕಿಗ್ ಕಾನೂನು (ಒಂಬಡ್ಸ್ ಮನ್) ನಮಗೆ ಒದಗಿಸಿರುವ ಈ ಸವಲತ್ತಿಗೆ ಕಿಮ್ಮತ್ತು ಬರುತ್ತದೆ.

ಮುಂದಿನ ಸಲ ಯಾವುದೇ ಬ್ಯಾಂಕಿಗೆ ಹೋಗಿ, ಅಲ್ಲಿ ಕನ್ನಡದಲ್ಲೇ ವ್ಯವಹರಿಸಿ. ನಿಮ್ಮ ಕನ್ನಡ ಸ್ನೇಹಿತರಿಗೂ ಹಾಗೆ ಮಾಡಲು ತಿಳಿಸಿ.

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!

*****