ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರು ನಗರದ ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ, ದಿನನಿತ್ಯ ಸ್ವಂತ ವಾಹನದಲ್ಲಿ ಪ್ರಯಾಣಿಸುವವರು ತಮ್ಮ ವಾಹನಕ್ಕೆ ಬಿಡುವು ನೀಡಿ - ಸಾರ್ವಜನಿಕ ವಾಹನ ಬಳಸುವಂತೆ ಉತ್ತೇಜಿಸಲು "ಬಸ್ ದಿನ" ಎಂಬ ಪ್ರಯೋಗಕ್ಕೆ ಚಾಲನೆ ನೀಡಿದೆ.
ಮೊನ್ನೆ ಮೇ ೪ ರಂದು ಬಸ್ ದಿನದ ಆಚರಣೆ ಸಲುವಾಗಿ ಬೆಂ.ಮ.ನ.ಸಾ. ಸಂಸ್ಥೆ, ಬೆಂಗಳೂರಿನ ಖಾಸಗಿ ಎಫ್.ಎಂ. ವಾಹಿನಿಯೊಂದಕ್ಕೆ ಪ್ರಾಯೋಜಕತ್ವ ನೀಡಿ ಆ ಮೂಲಕ ಸಾರ್ವಜನಿಕರನ್ನು ಬಸ್ ಪ್ರಯಾಣದೆಡೆಗೆ ಸೆಳೆಯುವ ತಂತ್ರವನ್ನು ಸಹ ಪ್ರದರ್ಶಿಸಿತು. ಪ್ರಾಯೋಜಕತ್ವ ಪಡೆದಿದ್ದ ಆ ವಾಹಿನಿ ಕನ್ನಡೇತರ ಕಾರ್ಯಕ್ರಮಗಳನ್ನು ಮಾತ್ರ ಪ್ರಸಾರ ಮಾಡುವ ಎಫ್.ಎಂ. ವಾಹಿನಿಯಾಗಿದ್ದದ್ದು ಮಾತ್ರ ವಿಪರ್ಯಾಸವಾದದ್ದು. ಬೆಂ.ಮ.ನ.ಸಾ. ಸಂಸ್ಥೆ ಅಧಿಕಾರಿಗಳು ಅಂದು ಈ ವಾಹಿನಿಯನ್ನು ಮಾತ್ರ ಬಸ್ ಗಳಲ್ಲಿ ಪ್ರಸಾರ ಮಾಡಬೇಕು ಎಂಬ ಆದೇಶ ಹೊರಡಿಸಿದ್ದರೋ ಏನೋ? ಅಂದು ನಾನು ಪ್ರಯಾಣಿಸಿದ ಮೂರು ಬಸ್ ಗಳಲ್ಲಿ ಈ ವಾಹಿನಿಯ "ಕನ್ನಡೇತರ ಕಾರ್ಯಕ್ರಮದ" ಪ್ರಸಾರ ಮಾತ್ರ ಕೇಳಿಬಂತು.
ಬೆಂ.ಮ.ನ.ಸಾ.ಸಂಸ್ಥೆ ಹಲವು ಸಂದರ್ಭಗಳಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ನೀಡಿ ಕನ್ನಡತನವನ್ನು ಎತ್ತಿ ಹಿಡಿದಿರುವ ಸಂಸ್ಥೆ. ಈ ಹಿಂದೆ ಪ್ರಯಾಣಿಕರ ಅನುಕೂಲಕ್ಕಾಗಿ ಸಂಸ್ಥೆಯ ವಾಹನಗಳಲ್ಲಿ ಹಾಡುಗಳ ಪ್ರಸರಣ ಆರಂಭಗೊಂಡಾಗ ಅಂದು ಸಾರಿಗೆ ಸಚಿವರಾಗಿದ್ದ ಚೆಲುವರಾಯ ಸ್ವಾಮಿಯವರು ಕನ್ನಡ ಹಾಡುಗಳನ್ನು ಪ್ರಸಾರ ಮಾಡುವ ವಾಹಿನಿಗಳನ್ನು ಮಾತ್ರ ಬಸ್ ಗಳಲ್ಲಿ ಕೇಳಿಸಬೇಕು ಎಂಬ ಆದೇಶ ಹೊರಡಿಸಿದ್ದರು.
ಆದರೆ ಇಂದು ಬೆಂಗಳೂರು ಬಸ್ ನಲ್ಲಿನ ಮನರಂಜನೆ ಕನ್ನಡವಾಗಿರಬೇಕು ಎಂಬ ನಿಯಮ ಸಂಸ್ಥೆಯಲ್ಲಿ ಯಾರಿಗೂ ನೆನಪಿದ್ದಂತಿಲ್ಲ. ಹಲವಾರು ಬಾರಿ ನಾನು ಕೇಳಿದಂತೆ ಪೂರ್ವನಿಯೋಜಿತವಾಗಿ ಕನ್ನಡೇತರ ಹಾಡುಗಳ ಪ್ರಸಾರವಾಗುತ್ತಿರುತ್ತದೆ. ಬಸ್ ದಿನಾಚರಣೆಯ ಸಲುವಾಗಿ, ಅಂದು ಮಾತ್ರ ಬಸ್ ನಲ್ಲಿ ಪ್ರಯಾಣ ಮಾಡುವ! ಮಾತೆತ್ತಿದರೆ ಕನ್ನಡ-ಕೆಂಪೇಗೌಡರ ಬಗ್ಗೆ ಮಾತನಾಡುವ ಸಾರಿಗೆ ಸಚಿವ ಅಶೋಕ್ ರವರ ಕಿವಿಯ ಗಮನಕ್ಕೆ ಇದು ಬಂದ ಹಾಗೆ ಕಾಣಲಿಲ್ಲ.
ಮಾನ್ಯ ಸಾರಿಗೆ ಸಚಿವರೆ, ಕರ್ನಾಟಕದ ಬಸ್ಸುಗಳಲ್ಲಿ ಕನ್ನಡ ಮನರಂಜನೆ ನಮಗೆ ಸಹಜವಾಗಿ ದೊರಕದಿದ್ದರೆ ತಮಿಳುನಾಡು / ಉತ್ತರ ಪ್ರದೇಶ ಬಸ್ಸುಗಳಲ್ಲಿ ದೊರಕುವುದೇ?. ಬಸ್ಸಿನ ಮನರಂಜನೆಯಲ್ಲಿ ಕನ್ನಡದ ಕಡಗಣನೆ ಇತರ ರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿ ಈ ಬಸ್ಸುಗಳಲ್ಲಿ ಪ್ರಯಾಣಿಸುವವರಿಗೆ "ಕನ್ನಡ ಕಲಿಯದಿದ್ದರೂ ನಡೆಯತ್ತೆ", "ಇಲ್ಲಿನವರಿಗೆ ಕನ್ನಡ ಬೇಕಿಲ್ಲ ನಮಗೇಕೆ ಕನ್ನಡ ಬೇಕು" "ಕನ್ನಡಿಗರಿಗೆ ಕನ್ನಡಕ್ಕಿಂತ ಕನ್ನಡೇತರದವೇ ಇಷ್ಟ" ಎಂಬ ತಪ್ಪು ಕಲ್ಪನೆ ಹುಟ್ಟುಹಾಕುತ್ತದೆಯಲ್ಲವೇ?. ಸಾರಿಗೆ ಸಂಸ್ಥೆಯ ಬೆಂಗಳೂರು-ಕರ್ನಾಟಕದ ಎಲ್ಲಾ ಬಸ್ಸುಗಳಲ್ಲಿ ಕನ್ನಡ ಮನರಂಜನೆ ಮಾತ್ರ ಪ್ರಸರಿಸಬೇಕು ಎಂಬ ಆದೇಶ ಹೊರಡಿಸಲಾಗದಿದ್ದರೆ, ಕನಿಷ್ಟ ಸಂಸ್ಥೆಯ ಬಸ್ಸುಗಳಲ್ಲಿ ಅಳವಡಿಸಿರುವ ರೇಡಿಯೋ - ಟೀವಿ ಗಳನ್ನು ತೆಗೆದುಹಾಕುವಂತೆ ತಿಳಿಸಬಹುದಲ್ಲವೇ?.
ಮೇ ೪ ರಂದು ನಮ್ಮ ಸಾರಿಗೆ ಸಂಸ್ಥೆ ಬಸ್ ದಿನಾಚರಣೆ ಆಚರಿಸ್ತೋ ಅಥವ "ಹಿಂದಿ ದಿವಸ್" ಏನಾದ್ರೂ ಸಂಭ್ರಮಿಸಲ್ಪಟ್ಟಿತೋ ಎಂದು ನಾವೆಲ್ಲರೂ ಪ್ರಶ್ನಿಸಬೇಕಲ್ಲವೇ. ಇದನ್ನ ಪ್ರಶ್ನಿಸಿ, ಸಾರಿಗೆ ಸಚಿವರಿಗೆ / ಬಿ.ಎಂ.ಟಿ.ಸಿಯ ಅಧಿಕಾರಿಗಳಿಗೆ ಪತ್ರ ಬರೆಯಬೇಕಾದ್ದು ನಮ್ಮ ಹಕ್ಕು. ಅವರ ಮಿಂಚೆ: bmtcmd@gmail.com, ctmobmtc@gmail.com ಎಲ್ಲರೂ ಮಿಂಚಿಸಿ.
ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ