
ಹಿಂದಿನ "ಬೆಂ.ಮ.ಸಾ.ಸಂ. ಬಸ್ಸುಗಳಲ್ಲಿ ಕನ್ನಡ ಏಕೆ ಕೇಳಿಸುವುದಿಲ್ಲ?" ಲೇಖನಕ್ಕೆ ಪೂರಕವಾಗಿ ಈ ಬರಹ.
ಕಳೆದ ಕೆಲವು ವಾರಗಳಿಂದ ಜಾಗೃತ ಕನ್ನಡ ಗ್ರಾಹಕರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಕನ್ನಡ ಹಾಡನ್ನೇ ಪ್ರಸಾರ ಮಾಡಬೇಕು ಎಂಬ ನಿಟ್ಟಿನಲ್ಲಿ ಹಲವು ರೀತಿಯಲ್ಲಿ ಇದರ ಅನುಷ್ಠಾನಕ್ಕೆ ಮುಂದಾಗಿತ್ತು. ಬಸ್ಸಿನಲ್ಲಿ ಪ್ರಯಾಣಿಸುವ ಈ ಎಲ್ಲಾ ಕನ್ನಡ ಗ್ರಾಹಕರು ಬೆಂ.ಮ.ಸಾ.ಸಂ.ಯ ಮಿಂಚೆ ವಿಳಾಸಕ್ಕೆ ಪತ್ರ ಬರೆದು ಮನವರಿಕೆ ಸಲ್ಲಿಸಿ ಏಕೆ ಬಸ್ಸುಗಳಲ್ಲಿ ಕನ್ನದ ಹಾಡಿನ ಪ್ರಸಾರ ಪ್ರಸ್ತುತ ಎಂದು ತಿಳಿಹೇಳಿದ್ದರು. ಹಲವರ ಮಿಂಚೆಗೆ ಪ್ರತಿಕ್ರಿಯಿಸಿ ಉತ್ತರ ನೀಡಿದ್ದ ಬೆಂ.ಮ.ಸಾ.ಸಂ. ವ್ಯವಸ್ಥಾಪಕರು ಬಸ್ಸುಗಳಲ್ಲಿ ಕನ್ನಡ ಹಾಡನ್ನೇ ಹಾಕುವ ಕ್ರಮ ಜರುಗಿಸುವುದಾಗಿ ಸೂಚಿಸಿದ್ದರು.
ಜಾಗೃತ ಕನ್ನಡ ಗ್ರಾಹಕ ಗುಂಪಿನ ಚಟುವಟಿಕೆಯಿಂದ ನಗರ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುವ ಇನ್ನು ಕೆಲವರು ಸ್ವಯಂ ಪ್ರೇರಿತರಾಗಿ ತಮ್ಮ ತಮ್ಮ ಮನೆಗಳ ಬಳಿ ಇರುವ ಬಸ್ ಘಟಕಗಳಿಗೆ ತೆರಳಿ (ಡಿಪೋ), ಘಟಕದ ಮುಖ್ಯಸ್ಥರನ್ನು ಭೇಟಿ ಮಾಡಿ ಕನ್ನಡ ಹಾಡು ಹಾಕುವ ಬಗ್ಗೆ ಮನವಿ ಸಲ್ಲಿಸಿ ಬಂದಿದ್ದರು. ಇನ್ನು ಕೆಲವರು ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ, ಬ್ಲಾಗ್ ಗಳಲ್ಲಿ ಪತ್ರ ಬರೆದು ಬೆಂ.ಮ.ಸಾ.ಸಂ ಯ ಗಮನ ಸೆಳೆದಿದ್ದರು. ಸಂಯುಕ್ತ ಕರ್ನಾಟಕದ ೧೮ನೇ ಮೇ ೨೦೦೮ ರ ಪತ್ರಿಕೆಯಲ್ಲಿ ಈ ಕುರಿತಾಗಿ ಕೆಲವು ದೂರುಗಳು ದಾಖಲಾಗಿದ್ದವು.
ಬೆಂ.ಮ.ಸಾ.ಸಂ. ಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರು ಇಂದಿನ ಸಂ.ಕ.ದಲ್ಲಿ ಒಂದು ಸಾರ್ವಜನಿಕ ಸ್ಪಷ್ಟನೆ ನೀಡಿ ಬಸ್ಸುಗಳಲ್ಲಿ ಕನ್ನಡ ಹಾಡು ಪ್ರಸಾರ ಮಾಡುವ ಆದೇಶ ಹೊರಡಿಸಿರುವುದಾಗಿ ತಿಳಿಸಿ ಕನ್ನಡ ಅನುಷ್ಠಾನದ ನಿಲುವಿಗೆ ಬದ್ಧರಾಗಿದ್ದಾರೆ. ಅವರಿಗೆ ಈ ಮೂಲಕ ಅಭಿನಂದನೆಗಳು.
ಇದು ನಗರ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ಜಾಗೃತ ಕನ್ನಡ ಪ್ರಯಾಣಿಕರ ಒತ್ತಡಕ್ಕೆ ಸಂದ ಪ್ರತಿಫಲ
*****
ಈ ಜಾಗೃತಿ ನಿರಂತರವಾದದ್ದು. ನಗರ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ನಾವು ಮುಂದೆ ಸಹ ಇದನ್ನು ಸದಾ ಗಮನಿಸುತ್ತಿರಬೇಕು. ಸಾರಿಗೆ ಸಂಸ್ಥೆಯ ಈ ಆದೇಶವನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೆ ಎಂದು ತಿಳಿದುಕೊಳ್ಳುವುದು ಬಹು ಮುಖ್ಯ. ಹಾಗೆ ತೊಂದರೆ ಕಂಡುಬಂದಲ್ಲಿ ಈ ಕೆಳಗಿನ ನಮೂನೆಯಲ್ಲಿ ಅವರಿಗೆ ಮಿಂಚಿಸಿ ಎಚ್ಚರಿಸಬೇಕಾದ್ದು ನಮ್ಮ ಕರ್ತವ್ಯ.
- ಬಸ್ಸಿನಲ್ಲಿ ನಾವು ಎದುರಿಸಿದ ಸಮಸ್ಯೆ - (ಉದಾ: ಬಸ್ಸಿನ ಸಿಬ್ಬಂದಿ ಕನ್ನಡೇತರ ಹಾಡು ಹಾಕುತ್ತಿದ್ದರು,ಬಸ್ಸಿನೊಳಗಿನ ಡಿಜಿಟಲ್ ಬೋರ್ಡಿನಲ್ಲಿ ಇಂಗ್ಲಿಷ್ ಸೂಚನೆ ಮಾತ್ರ ಇತ್ತು, ಕನ್ನಡದಲ್ಲಿರಲಿಲ್ಲ, ಹೀಗೆ)
- ನಾವು ಪ್ರಯಾಣ ಮಾಡಿದ ಬಸ್ಸಿನ ಮಾರ್ಗ ಸಂಖ್ಯೆ
- ಬಸ್ಸಿನ ವಾಹನ ನೋಂದಣಿ ಸಂಖ್ಯೆ
- ನಾವು ಬಸ್ಸು ಹತ್ತಿದ ಸಮಯ, ಜಾಗ ಮತ್ತು ಪ್ರಯಾಣಿಸಿ ತಲುಪಿದ ಜಾಗ
- ಸಾಧ್ಯವಾದಲ್ಲಿ ಬಸ್ಸಿನ ಸಿಬ್ಬಂದಿಯ ಹೆಸರು
ಅವರ ಮಿಂಚೆ: bmtcmd@gmail.com, ctmobmtc@gmail.com ಅವರನ್ನೊಮ್ಮೆ ಅಭಿನಂದಿಸಲು ಎಲ್ಲರೂ ಮಿಂಚಿಸಿ..
ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ ****
