Friday, August 6, 2010

ಡಬ್ಬಿಂಗ್ ಮತ್ತು ಕನ್ನಡ ಚಿತ್ರರಂಗ

*****



*****

'ಡಬ್ಬಿಂಗ್ ನಿಷೇದ' ಕುರಿತಾದ ಬರವಣಿಗೆಯೊಂದಕ್ಕೆ ಕನ್ನಡ ಚಿತ್ರರಂಗದ ಕೆಲವರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹೊರಡಿಸಿದ್ದ, 'ಕನ್ನಡ ಚಿತ್ರರಂಗದ ಸಮೀಕ್ಷಾ ವರದಿ' ಯನ್ನು ಹಿಂಪಡೆದಿದೆ. ೧೯೬೦ ರವರೆಗೂ ಕನ್ನಡ ಸಿನಿಮಾಗಳ ನಿರ್ಮಾಣವೇ ವಿರಳವಾಗಿತ್ತು. ಅಂದಿನ ಚಲನಚಿತ್ರ ನಿರ್ಮಾಣ ಸಂಸ್ಥೆಗಳೂ ಪರಭಾಷೆಯವರದೇ ಆಗಿದ್ದುದರಿಂದ ಜನಪ್ರಿಯವಾದ ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆಗೊಳಿಸುತ್ತಿದ್ದರು. ಸ್ವಂತ ನೆಲೆಯಿರದಿದ್ದ ಕನ್ನಡ ಚಲನಚಿತ್ರರಂಗಕ್ಕೆ, ಬೇಕಾದ ಸ್ಟೂಡಿಯೋ, ತಂತ್ರಜ್ಞಾನ-ತಂತ್ರಜ್ಞರು ಅಂದು ಕನ್ನಡ ನಾಡಿನಲ್ಲಿ ಲಭ್ಯವಿರಲಿಲ್ಲ. ಎಲ್ಲದಕ್ಕೂ ನೆರೆಯ ಚೆನ್ನೈಯನ್ನು (ಮದ್ರಾಸನ್ನು) ಅವಲಂಬಿಸಬೇಕಾಗಿತ್ತು. ಆದ್ದರಿಂದ ಕನ್ನಡ ಚಿತ್ರೋದ್ಯಮ ಸಂಪೂರ್ಣವಾಗಿ ಚೆನ್ನೈ ನಗರದಲ್ಲಿ ಬೀಡು ಬಿಟ್ಟಿತ್ತು. ಜತೆಗೆ ಡಬ್ಬಿಂಗಿನ ಕಾರಣದಿಂದಾಗಿ ಕನ್ನಡ ಚಿತ್ರನಿರ್ಮಾಣ ಮತ್ತಷ್ಟು ವಿರಳಗೊಂಡು ಕನ್ನಡ ಕಲಾವಿದರು ಮತ್ತು ಕನ್ನಡ ಚಿತ್ರರಂಗ ಅಸ್ತಿತ್ವಕ್ಕಾಗಿ ಚಡಪಡಿಸುತ್ತಿದ್ದವು. ವರುಷಕ್ಕೆ ಕೇವಲ ನಾಲ್ಕೈದು ಮೂಲ ಕನ್ನಡ ಚಿತ್ರಗಳು ತೆರೆಕಾಣುತ್ತಿದ್ದವು. ಇದರಿಂದ ಡಬ್ಬಿಂಗ್ ಚಿತ್ರಗಳ ಹಾವಳಿ ಕನ್ನಡ ಚಿತ್ರರಂಗಕ್ಕೆ ದೊಡ್ಡಸಮಸ್ಯೆಯಾಗಿ ಕಾಡುತ್ತಿತ್ತು. ಡಬ್ಬಿಂಗ್ ನಿಂದಾಗಿ ಕನ್ನಡದ ಕಲಾವಿದರಿಗೆ, ತೆರೆಯಹಿಂದೆ ಕೆಲಸ ಮಾಡುವ ಚಲನಚಿತ್ರ ಕಾರ್ಮಿಕರ ಕೆಲಸಕ್ಕೆ ಹೊಡೆತ ಬಿತ್ತು. ಅಂದು ಕನ್ನಡದ ಕಟ್ಟಾಳು 'ಅನಕೃ' ಮುಂದಾಳತ್ವದಲ್ಲಿ, ಮೇರುನಟ ರಾಜ್ ಕುಮಾರ್ ಮತ್ತು ಇತರ ಹಿರಿಯರ ಡಬ್ಬಿಂಗ್ ವಿರುದ್ಧದ ಚಳವಳಿಯ ಕಾರಣದಿಂದಾಗಿ ಕನ್ನಡ ಚಿತ್ರರಂಗದ ಉತ್ಥಾನಕ್ಕೆ ನಾಂದಿಯಾಯಿತು. ಹಾಗಾಗಿ ೧೯೬೦ ರ ಆ ಸನ್ನಿವೇಶದಲ್ಲಿ ಡಬ್ಬಿಂಗ್ ಬೇಡ ಎನ್ನುವ ನಿಲುವು ಸರಿಯಾದುದೇ ಆಗಿತ್ತು.

ಡಬ್ಬಿಂಗ್ ಚಾಲ್ತಿಯಲ್ಲಿದ್ದ ಸಮಯದಲ್ಲಿ ಕನ್ನಡಿಗ ಸಿನಿಮಾ ವೀಕ್ಷಕರ ಜತೆಗೆ, ಪರಭಾಷಿಗಳು ಸಹ ಕನ್ನಡಕ್ಕೆ ಡಬ್ ಆದ ಪರಭಾಷಾ ಚಿತ್ರಗಳನ್ನು (ಕನ್ನಡ ಭಾಷೆಯಲ್ಲೆ) ವೀಕ್ಷಿಸುತ್ತಿದ್ದರು. ಡಬ್ಬಿಂಗ್ ನಿಷೇದದನಂತರದ ಈ ೫೦ ವರ್ಷದಲ್ಲಿ ಡಬ್ಬಿಂಗ್ ಗೆ ಪರ್ಯಾಯವಾಗಿ ಪರಭಾಷ ಚಿತ್ರಗಳು ನೇರವಾಗಿ ಆಯಾ ಭಾಷೆಗಳಲ್ಲಿ ಬಿಡುಗಡೆಯಾಗುವ ಪರಂಪರೆ ನಮ್ಮಲ್ಲಿ ಮುಂದುವರೆದದ್ದು ಕಾಲಾನುಕಾಲಕ್ಕೆ ಕರ್ನಾಟಕಕ್ಕೆ ಬಂದು ನೆಲೆಸುವ ಪರಭಾಷಿಕರಿಗೆ ಅವರ ಭಾಷೆಯಲ್ಲೇ ಚಿತ್ರಗಳನ್ನು ವೀಕ್ಷಿಸುವ ಅವಕಾಶ ಮತ್ತು ಪರಭಾಷಿಕ ಚಿತ್ರನಿರ್ಮಾಪಕರಿಗೆ ಕರ್ನಾಟಕ ಹೆಚ್ಚುವರಿ ಮಾರುಕಟ್ಟೆಯಾಗಿ ವರಾದಾನವಾಗಿ ಪರಿಣಮಿಸಿದೆ. ಆದರೆ ಹೊರ ರಾಜ್ಯದಲ್ಲಿ ವಾಸಿಸುತ್ತಿರುವ ಕನ್ನಡಿಗರು ತಮ್ಮ ಭಾಷೆಯಲ್ಲೇ ಕನ್ನಡ ಚಿತ್ರ ವೀಕ್ಷಿಸುವ ಅವಕಾಶದಿಂದ ವಂಚಿತರಾಗಿದ್ದಾರೆ.
ಮತ್ತೊಂದು ವಿಪರ್ಯಾಸವೆಂದರೆ

ಕನ್ನಡ ಚಿತ್ರರಂಗ ನೆಲೆಯೂರಿ ಎಪ್ಪತ್ತೈದನೆ ವರ್ಷದ ಸಂಭ್ರಮಾಚರಣೆ ಮುಗಿಸಿಕೊಂಡು ಮುನ್ನಡಿಯಿಟ್ಟಿದ್ದರೂ (ಡಬ್ಬಿಂಗ್ ನಿಷೇದದ ಈ ೫೦ ವರ್ಷದಲ್ಲಿ) ಕನ್ನಡ ಚಿತ್ರಗಳ ಮಾರುಕಟ್ಟೆ ಇನ್ನೂ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆ. ಇಂಗ್ಲೀಷ್ ಮತ್ತು ಹಿಂದಿ ಚಿತ್ರಗಳು (ತೆಲುಗು-ತಮಿಳು ಸಹ) ಹೇಗೆ ವಿಶ್ವವ್ಯಾಪಿಯಾಗಿ ಬಿಡುಗಡೆಗೊಳ್ಳುತ್ತದೆ ಎಂದು ಕನ್ನಡ ಚಿತ್ರರಂಗ ತಲೆಕೆಡಿಸಿಕೊಂಡಂತಿಲ್ಲ. ಆದರೆ ಡಬ್ಬಿಂಗಿನಿಂದಾಗಿ ಕನ್ನಡ ಸಂಸ್ಕೃತಿ - ನೈತಿಕತೆ ಹಾಳದೀತು ಎಂಬ ಕಾರಣ ನೀಡುತ್ತಾ ಪರಭಾಷೆಯಿಂದ ಕನ್ನಡಕ್ಕೆ ಡಬ್ಬಿಂಗ್ ಬೇಡ ಎನ್ನುವ ಮಾತುಗಳನ್ನು ದಾಖಲಿಸುವಲ್ಲಿ ಮಾತ್ರ ನಿಸ್ಸೀಮರಾಗಿದ್ದಾರೆ. ಬದಲಾದ ಕನ್ನಡ ಚಲನ ಚಿತ್ರ ವೀಕ್ಷಕರ ಅಭಿರುಚಿಗೆ ತಕ್ಕಂತಹ ಕನ್ನಡ ಚಿತ್ರಗಳು ತಯಾರಾಗದ ಕಾರಣ (ಅದ್ದೂರಿತನವಿರಬಹುದು, ಹೊಸತನ, ಅವಿಷ್ಕಾರ, ಕತೆಯ ವಸ್ತು, ವ್ಯಾಪ್ತಿ ಹೀಗೆ) ಹಾಗು ಡಬ್ಬಿಂಗ್ ನಿಷೇದ ಕನ್ನಡ ಚಿತ್ರ ವೀಕ್ಷಕರನ್ನು ಪರಭಾಷ ಚಿತ್ರಗಳನ್ನು ವೀಕ್ಷಿಸುವಂತೆ ಪ್ರೇರೇಪಿಸಿದೆ. ಡಬ್ಬಿಂಗ್ ಗೆ ಅವಕಾಶವಿದ್ದಿದ್ದಲ್ಲಿ ಯಡಿಯೂರಪ್ಪನವರು "ಪಾ" ಚಿತ್ರವನ್ನು ಕನ್ನಡದಲ್ಲೇ ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅವಕಾಶವಿರುತ್ತಿತ್ತು! ಜುರಾಸಿಕ್ ಪಾರ್ಕ್, ಹ್ಯಾರಿ ಪಾಟರ್, ಶಿವಾಜಿ, ಥ್ರೀ ಇಡಿಯಟ್ಸ್ ಗಳು ಕನ್ನಡ ಚಿತ್ರಗಳೇ ಆಗಿ ಕನ್ನಡಿಗರನ್ನು ರಂಜಿಸುವಂತೆ ಮಾಡಿರುತ್ತಿತ್ತು. ಕನ್ನಡ ಓದುಗರಿಗೆ ತೆಲುಗಿನ ಯೆಂಡಮೂರಿ, ಹಿಂದಿಯ ಪ್ರೇಮ್ ಚಂದ್, ಬೆಂಗಾಳಿಯ ಠಾಗೂರ್, ಶರಶ್ಚಂದ್ರರು ಅನುವಾದದ ಕಾರಣದಿಂದಲೇ ಹೆಚ್ಚು ಪರಿಚಯದವರಾಗಿದ್ದಾರಲ್ಲವೆ.

ಕನ್ನಡ ನಾಡು ಮತ್ತು ಜನಾಂಗದ ಅಳಿವು ಉಳಿವುಗಳು ಕನ್ನಡ ಭಾಷೆಯ ಅಳಿವು ಉಳಿವಿನ ಮೇಲೆ ತೀರ್ಮಾನವಾಗುತ್ತದೆ. ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳದ ಮತ್ತು ಕನ್ನಡಿಗರನ್ನೇ ಚಿತ್ರಮಂದಿರಕ್ಕೆ ಸೆಳೆಯಲು ವಿಫಲವಾಗಿರುವ ಕನ್ನಡ ಚಿತ್ರರಂಗವೇ, ಇಂದು ಕನ್ನಡ ಚಿತ್ರ ವೀಕ್ಷಕರು ಪರಭಾಷ ಚಿತ್ರಗಳ ವ್ಯಾಮೋಹಿಗಳಾಗಿರುವುದಕ್ಕೆ ಹೊಣೆಗಾರರಾಗಿದ್ದಾರಲ್ಲವೆ?

ಕನ್ನಡ ಉಳಿಯ ಬೇಕಾದರೆ ಕನ್ನಡವಲ್ಲದ ಮತ್ಯಾವ ಮನರಂಜನೆಗೂ ನಮ್ಮಲ್ಲಿ ಅವಕಾಶ ಇರಬಾರದು. ಆದರೆ ಒಕ್ಕೂಟದ ನಮ್ಮ ಈ ವ್ಯವಸ್ಥೆಯಲ್ಲಿ ಕನ್ನಡೇತರ ಚಿತ್ರಗಳನ್ನು ಕರ್ನಾಟಕದಲ್ಲಿ ನಿಷೇದಿಸುವುದು ಸಾಧ್ಯವಿಲ್ಲದ ಮಾತು. ಆ ದೃಷ್ಟಿಯಿಂದ ಡಬ್ಬಿಂಗ್ ಇಂದು ಮತ್ತೆ ಅನಿವಾರ್ಯವಾಗಿದೆ ಎಂದು ಅನ್ನಿಸದಿರದು. ಕನ್ನಡ ಭಾಷೆ ಉಳಿದರೆ ಮಾತ್ರವೇ ಕನ್ನಡಿಗ ಉಳಿದಾನು ಮತ್ತು ಕನ್ನಡ ಚಿತ್ರರಂಗ ಉಳಿದೀತು. ಬಹುಷಃ 'ಅನಕೃ' ಇಂದು ಇದ್ದಿದ್ರೆ, ಕನ್ನಡ ಚಿತ್ರರಂಗ ಕಾಲೂರಿರುವುದು ಕಂಡು, " ಕನ್ನಡ ಚಿತ್ರರಂಗದ ಕಾಯಿಲೆ ಈಗ ವಾಸಿಯಾಗಿರುವಾಗ ಡಬ್ಬಿಂಗ್ ಬೇಡವೆಂಬ ನೀತಿಯ ಔಷದಿ ಇನ್ನೂ ಏಕೆ?" ಎಂದು ಕನ್ನಡದ ಮತ್ತಷ್ಟು ಬೆಳವಣಿಗಾಗಿ, ಹೊಸ ತಂತ್ರ ರೂಪಿಸಲು ಇಂದು ಡಬ್ಬಿಂಗ್ ಅವಶ್ಯಕತೆಯಿರುವುದನ್ನು ಖಂಡಿತಾ ಸಾರಿ ಹೇಳುತ್ತಿದ್ದರು. ಡಬ್ಬಿಂಗ್ ವಿರೋಧಿಸುತ್ತಿರುವವರು ಈ ಬಗ್ಗೆ ಚಿಂತಿಸಿ ಕನ್ನಡದ ಉಳಿವಿಗೆ ಪೂರಕವಾಗುವಂತ ಹೇಳಿಕೆಗಳನ್ನು ನೀಡಲಿ- ಆ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುವಂತವರಾಗಲಿ. ಕನ್ನಡ ಚಿತ್ರರಂಗ ಇನ್ನೂ ಹೆಚ್ಚು ಹೆಚ್ಚು ಕ್ರೀಯಾಶೀಲತೆಯಿಂದ ಬೆಳಗಲು ಶ್ರಮಿಸಲಿ.

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

*****