Saturday, September 25, 2010

ನೋಂದಣಿ ಮತ್ತು ಕನ್ನಡ ಅನುಷ್ಠಾನ...

*****





ಮೇಲಿನ ಚಿತ್ರದಲ್ಲಿನ ಬರವಣಿಗೆ ಸ್ವವಿವರಣಾತ್ಮಕ.

*****

ಹೇಗೆ ಪುಣೆಯಲ್ಲಿ ಮರಾಠಿ ಇದೆಯೋ, ಗೋವಾದಲ್ಲಿ ಕೊಂಕಣಿ ಬೇಕು ಎನ್ನುತ್ತಿದ್ದಾರೆಯೋ ಅಂತೆಯೇ ಬೆಂಗಳೂರು-ಕರ್ನಾಟಕದಲ್ಲಿನ ನೋಂದಣಾದಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸುವ ಯಾವುದೇ ದಾಖಲೆಗಳಿರಲಿ ಅವುಗಳನ್ನು ಕನ್ನಡದಲ್ಲೇ ನೋಂದಣಿ ಮಾಡಿಸಲು "ನಾವು" ಮುಂದಾದಾಗ ಮಾತ್ರ ಆಡಳಿತದಲ್ಲಿ ಕನ್ನಡದ ಅನುಷ್ಠಾನ 'ನಮಗೆ'ಕಾಣಲು ಸಾಧ್ಯ.

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

*****

Friday, September 17, 2010

ಗಣೇಶೋತ್ಸವಗಳಿಗೆ ಕಾರ್ಪೊರೇಟ್ ಕಳೆ.... ಕನ್ನಡಕ್ಕೆ ಗುಳೆ...

*****


*****
೧೯೬೦ ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ರಾಮನವಮಿ, ಗಣೇಶೋತ್ಸವ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಗೆ, ಕನ್ನಡ ಕಲಾವಿದರಿಗೆ ಅವಕಾಶಗಳು ದುರ್ಲಭವಾಗಿದ್ದವು. ಕನ್ನಡಿಗರೇ ಆಯೋಜಕರಾಗಿದ್ದ ಈ ಸಭೆ ಸಮಾರಂಭಗಳಲ್ಲಿ ಕನ್ನಡೇತರ ಹಾಡುಗಾರರು-ಕಲಾವಿದರಿಗೆ ಹೆಚ್ಚಿನ ಅವಕಾಶ ಮಾಡಿಕೊಡಲಾಗುತ್ತಿತ್ತು! . ಕನ್ನಡನಾಡಿನ ಪ್ರತಿಭಾವಂತ ಕಲಾವಿದರು ಸಾಕಷ್ಟು ಮಂದಿ ಇದ್ದರೂ ಅವರು ಪ್ರಸಿದ್ಧರಲ್ಲ ಎಂಬ ಕಾರಣಕ್ಕೆ ಅವಕಾಶ ವಂಚಿತರಾಗುತ್ತಿದ್ದರು. ಅಂದು ಕನ್ನಡದ ನೆಲದಲ್ಲಿ ಕನ್ನಡಿಗ ಕಲಾವಿದನಿಗೆ ನ್ಯಾಯ ಸಿಗಬೇಕು ಮತ್ತು ಕನ್ನಡ-ಕನ್ನಡಿಗನಿಗೆ ಈ ನೆಲದಲ್ಲಿ ಸಾರ್ವಭೌಮತ್ವ ದೊರಕಿಸಿಕೊಡಲು ಬೆಂಗಳೂರಿನ ಚಾಮರಾಜಪೇಟೆಯ ರಾಮನವಮಿ ಉತ್ಸವದಲ್ಲಿ ಅನಕೃ-ರಾಮಮೂರ್ತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯೇ ಮಂದಿನ ಕನ್ನಡ ಚಳವಳಿಯ ಉದಯಕ್ಕೆ ನಾಂದಿಯಾಯಿತು. ಚಳವಳಿಯಿಂದ ಪ್ರೇರಿತರಾದ ಹಲವಾರು ಉತ್ಸಾಹಿಗಳು ನಂತರದಲ್ಲಿ ಕನ್ನಡ ಸಂಘಟನೆಗಳು, ಯುವಕ ಸಂಘಗಳು, ಗಣೇಶ ಮತ್ತು ರಾಮಸೇವಾ ಮಂಡಳಿಗಳನ್ನು ಸ್ಥಾಪಿಸಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ, ಕನ್ನಡ ಕಲೆ-ಕಲಾವಿದರ ಪೋಷಣೆಗೆ ಮುಂದಾದರು.

ಇಂದು ಬೆಂಗಳೂರಿನಲ್ಲಿ ಗಣೇಶನ ಹಬ್ಬ ಮುಕ್ತಾಯಗೊಂಡ ಕೆಲದಿನ-ವಾರದವರೆಗೂ, ರಸ್ತೆ-ಬೀದಿ-ಬಡಾವಣೆಗಳಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವುದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಗಣೇಶೋತ್ಸವಗಳಲ್ಲಿ ನಾಟ್ಯ-ಹಾಡು-ಹರಿಕತೆ-ನಾಟಕ-ಸಂಗೀತ ಕಾರ್ಯಕ್ರಮಗಳನ್ನೇರ್ಪಡಿಸುವುದು ವಾಡಿಕೆ. ಉದಯೋನ್ಮುಖ ಕಲಾವಿದರ ಪ್ರತಿಭೆ ಪ್ರದರ್ಶನಕ್ಕೆ ಇದು ಅವಕಾಶ ಒದಗಿಸುವ ವೇದಿಕೆಯಾಗಿ ಹಲವಾರು ಸ್ಥಳೀಯ ಪ್ರತಿಭೆಗಳು ಬೆಳಕಿಗೆ ಬರಲು ಸಹ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಹಣವುಳ್ಳ ಕಾರ್ಪೊರೆಟ್ ಸಂಸ್ಥೆಗಳು, ಬಡಾವಣೆ ಅಂಗಡಿ ಮಾಲೀಕರ ಸಂಘದವರು, ರೇಡಿಯೋ ವಾಹಿನಿಗಳು ತಮ್ಮ ಉತ್ಪನ್ನ-ವಸ್ತುಗಳ ಪ್ರಚಾರಕ್ಕಾಗಿ ಪ್ರಾಯೋಜಕತ್ವ ನೀಡುವ ಮೂಲಕ ಗಣೇಶೋತ್ಸವಗಳಿಗೆ ಕಾರ್ಪೊರೆಟ್ ಕಳೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ! ಆದರೆ ಮೆಲ್ಲಗೆ ಇಲ್ಲಿ ಕನ್ನಡತನ ಮತ್ತು ಸ್ಥಳೀಯತೆ ಮಾಯವಾಗುತ್ತಿರುವುದು ಸತ್ಯ. ಬೆಂಗಳೂರಿನ ಅಚ್ಚ ಕನ್ನಡದ ಪ್ರದೇಶ, ಬಸವನಗುಡಿಯ ನರಸಿಂಹರಾಜ ಕಾಲೋನಿಯಲ್ಲಿ ಕಳೆದ ನಾಲ್ಕು ದಶಕಗಳಿಗೂ ಹೆಚ್ಚಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗು ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವ ಸಂಘವೊಂದರ ಕಾರ್ಯಕ್ರಮ ಪಟ್ಟಿ ನೋಡಿದರೆ ನಮಗೆ ಇದು ಸಾಬೀತಾಗುತ್ತದೆ. ಈ ಸಲದ ಕಾರ್ಯಕ್ರಮಗಳಲ್ಲಿ ಶೇಕಡ ೫೦ಕ್ಕೂ ಹೆಚ್ಚಿನವರು ಕನ್ನಡೇತರ ಖ್ಯಾತನಾಮರು! ಇನ್ನು ಈ ಕಾರ್ಯಕ್ರಮಕ್ಕಾಗಿ ಬಸವನಗುಡಿ, ಡಿವಿಜಿ ರಸ್ತೆ, ನರಸಿಂಹ ರಾಜ ಕಾಲೋನಿ ಸುತ್ತ ಮುತ್ತ ಹಾಕಿರುವ ಫಲಕಗಳು, ಪ್ರಾಯೋಜಕರು ಮಾಡಿಸಿರುವ ಜಾಹೀರಾತುಗಳು ಮತ್ತು ಅವರ ಉಡುಗೊರೆ ಚೀಟಿಗಳು ನೂರಕ್ಕೆ ನೂರು ಕನ್ನಡೇತರವಾಗಿವೆ! ಬೆಂಗಳೂರಿನ ಇತರ ಬಡಾವಣೆಗಳ ಗಣೇಶೋತ್ಸವ ಆಚರಣೆಗಳಲ್ಲೂ ಬಹುಷಃ ಇದೇ ಪರಿಸ್ಥಿತಿ ಇರಬಹುದು.

ಕರ್ನಾಟಕದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವವರು ಪ್ರಧಾನವಾಗಿ ಕನ್ನಡದಲ್ಲಿ ಜಾಹೀರಾತು ಹೊರಡಿಸಬೇಕು ಎಂಬ ಸರ್ಕಾರದ ಆದೇಶವನ್ನು ಕನ್ನಡಿಗರೆ ಆದ ಇಲ್ಲಿನ ಪ್ರಾಯೋಜಕರು ಗಾಳಿಗೆ ತೂರಿದರೆ, ಕನ್ನಡಿಗರೇ ಆಯೋಜಕರಾಗಿರುವೆಡೆ ಕನ್ನಡತನ ಪ್ರದರ್ಶನಕ್ಕೆ-ಕನ್ನಡಿಗರ ಕಾರ್ಯಕ್ರಮಗಳಿಗೆ ಅವಕಾಶವಿಲ್ಲವಾದರೆ, ಹೊಸ ಹೊಸ ಕನ್ನಡ ಪ್ರತಿಭೆಗಳು ಬೆಳಕಿಗೆ ಬರುವುದು ಮತ್ತು ಅವರಿಗೆ ಸೂಕ್ತ ಅವಕಾಶಗಳು ದೊರೆಯುವುದು ಹೇಗೆ?. ನಮ್ಮಲ್ಲಿ ಇತರ ಭಾಷೆ-ಭಾಷಿಕರ ಕಾರ್ಯಕ್ರಮಗಳಿಗೆ ಅವಕಾಶ ನೀಡುವ ಆಯೋಜಕರು, ಇತರ ರಾಜ್ಯಗಳಲ್ಲಿ ಕನ್ನಡ-ಕನ್ನಡಿಗರ ಕಾರ್ಯಕ್ರಮಗಳಿಗೆ ಅವಕಾಶ ದೊರಕುತ್ತದೆಯೆ ಎಂದು ಯೋಚಿಸಿದ್ದಾರೆಯೆ? ಅವಕಾಶ ದೊರಕದೆ ಕಣ್ಮರೆಯಾಗುತ್ತಿರುವ ನಮ್ಮದೆ ನೆಲದ ಕಲೆ-ನಿಪುಣತೆ-ಜಾನಪದ ಕೌಶಲ್ಯ ಪ್ರದರ್ಶನಕ್ಕೆ, ದೊಡ್ಡಮಟ್ಟದ ಪ್ರಾಯೋಜಕತ್ವ-ಪ್ರಚಾರದಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳಲ್ಲಿ ಅನುವು ಮಾಡಿಕೊಟ್ಟ ಅವುಗಳನ್ನು ಉಳಿಸಿ ಬೆಳೆಸುವುದು ಇಂತಹ ಸಂಘಟನೆಗಳ ಮುಖ್ಯ ಕರ್ತವ್ಯವಾಗಬೇಕು ಅಲ್ಲವೇ? ಮುಂದಿನ ದಿನಗಳಲ್ಲಾದರೂ ಇಂತಹ ಕಾರ್ಯಕ್ರಮಗಳ ಆಯೋಜನೆಗಳ ಹಿಂದಿರುವ, ಪೋಷಿಸುವ, ಬಡಾವಣೆಗಳನ್ನು ಪ್ರತಿನಿಧಿಸುವ ಪಾಲಿಕೆ ಸದಸ್ಯರು, ಶಾಸಕರು ಮತ್ತು ಇತರ ಜನಪ್ರತಿನಿಧಿಗಳು ಕಾರ್ಯಕ್ರಮ ಆಯೋಜಕರ ಚಿತ್ತ ಇತ್ತ ಹರಿಯುವಂತೆ ಗಮನ ಸೆಳೆದು ನಮ್ಮತನವನ್ನು ಉಳಿಸಿ-ಬೆಳೆಸಿ-ಮುನ್ನಡೆಸಬೇಕಾದ ಅವರ ಜವಾಬ್ದಾರಿಗಳಲ್ಲೊಂದಾಗಿದೆ.

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

*****

Tuesday, September 14, 2010

ಹಿಂದಿಯೇತರ ಭಾಷಿಕರ ಮೇಲೆ ಹಿಂದಿ ಹೇರಿಕೆ ಏಕೆ?

*****



*****
ನಮ್ಮ ಸಂವಿಧಾನದಲ್ಲಿನ ಉಲ್ಲೇಖವೊಂದರಂತೆ ದೆಹಲಿ, ಮದ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಹೀಗೆ ಭಾರತ ಒಕ್ಕೂಟದ 'ಹಿಂದಿ' ರಾಜ್ಯಗಳೆಂದು ಗುರುತಿಸಲ್ಪಡುವ ಪ್ರದೇಶಗಳಿಂದ ಭಾರತದ ಸಂಸತ್ತಿಗೆ ಮಂತ್ರಿಗಳಾಗಿ ಹೋಗುವ ಸಂಸದರು ತಮ್ಮ ಮಾತೃಭಾಷೆ ಹಿಂದಿಯಲ್ಲಿ ಮಾತನಾಡಲು ಮತ್ತು ವಿಷಯ ಮಂಡನೆ ಮಾಡಲು ಅವಕಾಶವಿದೆ. ಆದರೆ ಹಿಂದಿಯೇತರ ರಾಜ್ಯಗಳಿಂದ ಸಂಸತ್ತಿಗೆ ಆರಿಸಿಬಂದು ಮಂತ್ರಿಗಳಾಗುವವರಿಗೆ ತಮ್ಮ ತಮ್ಮ ಮಾತೃ ಭಾಷೆಯಲ್ಲಿ ಮಂಡನೆಗಳನ್ನು ಮಾಡಲು ಅವಕಾಶವಿಲ್ಲ. ಈ ಹಿನ್ನಲೆಯಲ್ಲಿ ಕೆಲ ಹಿಂದಿ ಪರ ಸಂಸದರು, "ಹಿಂದಿ ಭಾರತದ ರಾಷ್ಟ್ರಭಾಷೆ", ಹಿಂದಿ ಮಾತನಾಡದವನು ರಾಷ್ಟ್ರದ್ರೋಹಿ ಎಂದು ಆಗಾಗ್ಗೆ ಲೋಕಸಭೆಯಲ್ಲಿ ಗೊಂದಲ-ಗದ್ದಲವೆಬ್ಬಿಸಿರುವುದನ್ನು ನಾವು ಕಂಡಿದ್ದೇವೆ. ಅಂತೆಯೇ ಹಿಂದಿ ರಾಜ್ಯಗಳ ಶಾಲೆಗಳಲ್ಲಿ ಭಾಷೆಗೆ ಸಂಬಂಧಿಸಿದಂತೆ ಮಕ್ಕಳು ಕಲಿಯುವುದು ಎರಡು ಭಾಷೆ, ಒಂದು ಅಲ್ಲಿನ ಪ್ರದೇಶದ ಭಾಷೆ ಹಿಂದಿ ಮತ್ತೊಂದು ಇಂಗ್ಲೀಷು. ಆದರೆ ಭಾರತ ಒಕ್ಕೂಟದ ಹಿಂದಿಯೇತರ ರಾಜ್ಯಗಳಲ್ಲಿ ಮಕ್ಕಳು ತಮ್ಮ ರಾಜ್ಯ ಭಾಷೆ (ಮಾತೃ ಭಾಷೆ) ಎರಡನೆಯದಾಗಿ ಇಂಗ್ಲೀಷು ಮತ್ತು ಮೂರನೇ ಭಾಷೆಯಾಗಿ ಹಿಂದಿಯನ್ನು ಸಹ ಕಡ್ಡಾಯವಾಗಿ ಕಲಿಯಲೇಬೇಕಾದ ಅನಿವಾರ್ಯತೆಯ ಹೊರೆಗೆ ಒಳಗಾಗಿದ್ದಾರೆ. ಇನ್ನು ಕೇಂದ್ರ ಸರ್ಕಾರದ ಕಚೇರಿಗಳ ಕೆಲಸದ ನೇಮಕಾತಿಯ ಪರೀಕ್ಷೆ-ಸಂದರ್ಶನ-ಬಡತಿಗೆ ಹಿಂದಿ ಅರಿವು ಕಡ್ಡಾಯ. ಇವು ಭಾರತದಲ್ಲಿ ಹಿಂದಿ ಭಾಷೆ-ಭಾಷಿಕರಿಗಿರುವ ಸವಲತ್ತಿನ ಕೆಲ ನಿದರ್ಶನಗಳು.

ಮುಂದುವರೆದಂತೆ ಮೂರು ಭಾಷೆ ಸೂತ್ರವನ್ನು ಪಾಲಿಸಬೇಕಾದ ಹಿಂದಿಯೇತರ ರಾಜ್ಯಗಳ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಇಂದು ವ್ಯವಸ್ಥಿತವಾಗಿ ಆಯಾ ರಾಜ್ಯಗಳ ಭಾಷೆಗಳನ್ನು ಕಡೆಗಣಿಸಲಾಗುತ್ತಿದೆ. ಇದನ್ನು ಸಾರ್ವಜನಿಕ ಸಂಸ್ಥೆಗಳಾದ ಬ್ಯಾಂಕುಗಳು, ವಿಮಾ ಕಚೇರಿ, ಅಂಚೆ ಮತ್ತು ರೈಲ್ವೇ ಇಲಾಖೆ ಹೀಗೆ ಇನ್ನಿತರ ಸಂಸ್ಥೆಗಳು ಸಹ ಅನುಸರಿಸಿಕೊಂಡು ಬರುತ್ತಿವೆ. ಉದಾಹರಣೆಯಾಗಿ ಭಾರತದಾದ್ಯಂತ ಇರುವ ಅಂಚೆ ಕಚೇರಿಗಳ ಸಂಕೇತದಲ್ಲಿನ ಹೊಸ ವಿನ್ಯಾಸದಲ್ಲಿ ಇತರ ರಾಜ್ಯ ಭಾಷೆಗಳನ್ನು ಕೈ ಬಿಟ್ಟಿರುವುದು, ವಿಮಾ ಕಚೇರಿ ಮತ್ತು ಬ್ಯಾಂಕುಗಳ ಅರ್ಜಿ, ಚೆಕ್ ಮತ್ತು ಪಾಸ್ ಪುಸ್ತಕಗಳಲ್ಲಿ ಸೂಚನೆ ಕೇವಲ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಇರುವುದು, ರೈಲ್ವೇ ಇಲಾಖೆ ಹಿಂದಿಯೇತರ ಪತ್ರಿಕೆಗಳಲ್ಲಿ ಹಿಂದಿಯಲ್ಲೇ ಹೊರಡಿಸುವ ಜಾಹೀರಾತು ನಮ್ಮ ನಿತ್ಯ ವ್ಯವಹಾರಗಳಲ್ಲಿ ಕಣ್ಣಿಗೆ ಕಾಣುತ್ತಿವೆ. ಇನ್ನು ದೇಶದೆಲ್ಲೆಡೆ, ತರಕಾರಿಯನ್ನೂ ಸಹ ಬಿಡದೆ, ಚಿಲ್ಲರೆ ವಸ್ತು (retail) ಬಿಕರಿ ಮಾಡಲು ದೊಡ್ಡ ಮಾಲ್ ಗಳನ್ನು ತೆರೆದಿರುವ ಖಾಸಗಿ ಬಂಡವಾಳದಾರರು ಸಹ ಇಡೀ ದೇಶಕ್ಕೆ ಹಿಂದಿ ಹೇಳಿಕೊಡಲು ಮುಂದಾಗುತ್ತ ಆಯಾ ರಾಜ್ಯಗಳಲ್ಲಿ ಬಳಕೆಯಲ್ಲಿರುವ ವಸ್ತುಗಳ ಹೆಸರುಗಳನ್ನು ಸಹ ಕ್ರಮೇಣವಾಗಿ ಮರೆಸಲು ಮುಂದಾಗಿದ್ದಾರೆ. ಇಂದು ಇವರ ಮಾಲ್ ಗಳಿಗೆ ಹೋದರೆ ತೊಗರಿ ಬೇಳೆ - ಹುಣಿಸೆ ಬದಲು ನಮಗೆ ಸಿಗುವುದು ತೂರ್ ದಾಲ್ - ಇಮ್ಲಿ. ಕೇಂದ್ರ ಸರ್ಕಾರ ಮತ್ತು ಖಾಸಗಿ ಬಂಡವಾಳದಾರರ ಈ ರೀತಿಯ ನೀತಿ-ವ್ಯವಸ್ಥೆ, ಭಾರತ ಒಕ್ಕೂಟ ದೇಶದ, ಹಿಂದಿ ಭಾಷಿಕರಿಗೆ ಮಾತ್ರ ವರದಾನವಾಗಿ ಪರಿಣಮಿಸಿ ಅವರು ಎಲ್ಲೆಡೆ ಮೇಲುಗೈ ಸಾಧಿಸಲು ಸಹಕಾರಿಯಾಗಿದೆ.

ಇನ್ನು ಪ್ರತಿವರ್ಷ ಸೆಪ್ಟಂಬರ್ ಮೊದಲೆರಡು ವಾರದಲ್ಲಿ ಕೇಂದ್ರ ಸರ್ಕಾರವು ಭಾರತದೆಲ್ಲೆಡೆ ಹಿಂದಿ ಪಸರಿಸಲು "ಹಿಂದಿ ಪಾಕ್ಷಿಕ" ಆಚರಣೆ ಸಂಯೋಜಿಸಿ ಕೋಟ್ಯಂತರ ರೂಪಾಯಿಗಳ ಕೃಪಾಕಟಾಕ್ಷದ ಅನುಧಾನ ನೀಡುತ್ತಿದೆ. ಇದು ದೇಶವಾಸಿಗಳಲ್ಲಿ ಹಿಂದಿ ನಮ್ಮ ರಾಷ್ಟ್ರಭಾಷೆ, ಹಿಂದಿ ಬಲ್ಲವ ಮಾತ್ರ ರಾಷ್ಟ್ರ ಭಕ್ತಿ ಹೊಂದಿರಲು ಸಾಧ್ಯ, ಇಡೀ ಭಾರತದ ಸಂಸ್ಕೃತಿಯೆಂದರೆ ಹಿಂದಿ ಸಂಸ್ಕೃತಿ, ಹಿಂದಿಯನ್ನು ಬಿಟ್ಟು ಅನ್ಯವೆಲ್ಲವೂ ಕೀಳು ಎಂಬ ಸಂದೇಶವನ್ನು ಸಾರುತ್ತ ಸರ್ವತ್ರವಾಗಿ ಹಿಂದಿಯನ್ನು ಭಾರತದೆಲ್ಲೆಡೆ ಬೇರೂರಲು ಪ್ರಯತ್ನಿಸುತ್ತಿರುವಂತಿದೆ. ಭಾಷೆ ಕೇವಲ ಸಂಪರ್ಕ ಸಾಧನ ಮಾತ್ರವಲ್ಲ. ಅದು ಒಂದು ಪ್ರದೇಶದ ಆಚಾರ, ವಿಚಾರ, ನಡೆ, ನುಡಿ ಮತ್ತು ಆಗು-ಹೋಗುಗಳ ಸಂಕೇತ. ದೇಶದ ಎಲ್ಲ ಭಾಷೆ, ವೈಶಿಷ್ಟ್ಯ ಮತ್ತು ಸಂಸ್ಕೃತಿಯನ್ನು ಸಮಾನವಾಗಿ ಮನ್ನಿಸಿ, ಉಳಿಸಿ, ಬೆಳಸಿಕೊಂಡು ಮುನ್ನಡೆಯುವುದೇ ಭಾರತದಂತ ಹಲವು ಪ್ರಾಂತ್ಯಗಳ-ಹಲವು ಸಂಸ್ಕೃತಿಗಳ, ಹಲವು ರಾಜ್ಯಗಳ ಒಕ್ಕೂಟದ ಒಗ್ಗಟ್ಟಿಗೆ ಕ್ಷೇಮ. ಹಾಗಾಗಿ ಭಾರತದ ಆಯಾ ರಾಜ್ಯಗಳ ಕೇಂದ್ರ ಸರ್ಕಾರಿ ಕಚೇರಿ ಕೆಲಸಗಳಲ್ಲಿ ಆಯಾ ರಾಜ್ಯಗಳ ಭಾಷೆಯ ಅನುಷ್ಠಾನ, ತಮ್ಮ ರಾಜ್ಯಗಳಿಂದ ನೆರೆ ರಾಜ್ಯಗಳಲ್ಲಿ ಹೋಗಿ ನೆಲಸುವವರಿಗೆ ಆಯಾ ರಾಜ್ಯಗಳ ಭಾಷೆಯ ಕಲಿಕೆಗೆ ಪ್ರೋತ್ಸಾಹ ಮತ್ತು ದೇಶದೆಲ್ಲೆಡೆ ಉದ್ಯಮ ಸ್ಥಾಪಿಸುವ ಖಾಸಗಿ ಬಂಡವಾಳದಾರರು ಸ್ಥಳಿಯ ಭಾಷೆ-ಭಾಷಿಕರಿಗೆ ಅನುಕೂಲ ಕಲ್ಪಿಸುವಂತಹ ಕೆಲಸಗಳಿಗೆ ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳೊಡಗೂಡಿ ಯೋಜನೆ ರೂಪಿಸಿ ಕಾರ್ಯಗತಗೊಳಿಸುವುದು ಸಹಜವಾದದ್ದು. ಇಲ್ಲದಿದ್ದಲ್ಲಿ ಈ "ಹಿಂದಿ ಹೇರಿಕೆ" ಮುಂದೊಂದು ದಿನ ದೇಶವನ್ನು ಒಡೆಯುವ ದೊಡ್ಡ ವಿಷ[ಯ]ವಾಗಿ ಪರಿಣಮಿಸುವುದು ನಿಸ್ಸಂದೇಹ. ಕರ್ನಾಟಕವನ್ನು ಪ್ರತಿನಿಧಿಸುವ ನಮ್ಮ ಸಂಸದರು, ಶಾಸಕರು, ಆಡಳಿತಗಾರರು ಇತ್ತೆಡೆ ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದು ಅವರ ಆಧ್ಯತೆಗಳಲ್ಲೊಂದಾಗಿದೆ..

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

*****