
*****
ಕಳೆದ ಭಾನುವಾರ, ೨೬ ಡಿಸಂಬರ್ ೨೦೧೦ ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ, ಕರ್ನಾಟಕ ಮಹಿಳಾ ಹಿಂದಿ ಸೇವಾ ಸಮಿತಿಯ ೩೭ನೇ ಘಟಿಕೋತ್ಸವದಲ್ಲಿ ಸಾಹಿತಿ ಜಯಂತ ಕಾಯ್ಕಿಣಿ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತ "ರಾಷ್ಟ್ರ ಭಾಷೆ ಹಿಂದಿ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳು ಭಾರತದ ಏಕತೆಯ ಸಂಕೇತಗಳಿದ್ದಂತೆ" ಎಂದು ತಿಳಿಸಿರುತ್ತಾರೆ(ವಿಜಯ ಕರ್ನಾಟಕ ಸುದ್ಧಿ ೨೭/೧೨/೨೦೧೦, ಪುಟ ೧೧).
ಮೊದಲಿಗೆ ಹಿಂದಿ ಭಾರತದ ರಾಷ್ಟ್ರ ಭಾಷೆ ಅಲ್ಲ. ಹಾಗೆಂದು ನಮ್ಮ ಸಂವಿಧಾನದಲ್ಲಿ ಎಲ್ಲೂ ನಮೂದಾಗಿಲ್ಲ. ಅರಿವು-ತಿಳಿವುಳ್ಳ ಕಾಯ್ಕಿಣಿಯಂತಹವರೇ, ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂಬ ತಪ್ಪು ಅಭಿಪ್ರಾಯ ಹೊಂದಿರುವಾಗ ಇನ್ನು ಜನ ಸಾಮಾನ್ಯರ ಆಭಿಪ್ರಾಯದ ಕುರಿತಾಗಿ ಹೇಳುವುದೇನಿದೆ? ಇದು ಈ ಹಿಂದಿ ಸೇವಾ ಸಮಿತಿಗಳು, ತಮ್ಮ ಪ್ರಚಾರಕ್ಕಾಗಿ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಬಿಂಬಿಸುತ್ತಿರುವ ಪರಿಯನ್ನು ಎತ್ತಿ ತೋರಿಸುತ್ತಿದೆ ಮತ್ತು ಜನಸಾಮಾನ್ಯರಲ್ಲಿ, ಹಿಂದಿ ಭಾರತದ ರಾಷ್ಟ್ರ ಭಾಷೆ, ಹಿಂದಿ ಬಲ್ಲವ ಮಾತ್ರ ರಾಷ್ಟ್ರ ಭಕ್ತಿ ಹೊಂದಿರಲು ಸಾಧ್ಯ , ಇಡೀ ಭಾರತದ ಸಂಸ್ಕೃತಿಯೆಂದರೆ ಕೇವಲ ಹಿಂದಿ ಸಂಸ್ಕೃತಿ ಮಾತ್ರ, ಹಿಂದಿ ಬಲ್ಲವನಿಗೆ ಮಾತ್ರ ಸರ್ಕಾರದ ಎಲ್ಲಾ ಉದ್ಯಮಗಳಲ್ಲಿ ಕೆಲಸ ಲಭ್ಯ, ಹಿಂದಿಯನ್ನು ಕಲಿತು ಇಡೀ ಭಾರತವನ್ನು ಸುತ್ತಾಡಿ ಎಲ್ಲವನ್ನು ಗ್ರಹಿಸಿ, ಎಲ್ಲರೊಂದಿಗೆ ಐಕ್ಯತೆಯನ್ನು ಸಾಧಿಸಿಬಿಡಬಹುದು ಮತ್ತು ಹಿಂದಿ ಬಾರದಿರುವುದೇ ನಮ್ಮ ಜನಪ್ರತಿನಿಧಿಗಳಿಗೆ ರಾಷ್ಟ್ರ ವರ್ಚಸ್ಸು ಗಳಿಸಲು ಸಾಧ್ಯವಾಗದಿರುವ ಕಾರಣ ಎಂಬ ಕಲ್ಪನೆ - ಭ್ರಮೆಯನ್ನು ಆಳವಾಗಿ ಬಿತ್ತಿದೆ. ವಾಸ್ತವವೆಂದರೆ ಭಾರತದೆಲ್ಲೆಡೆ ಹಿಂದಿಯ ಪ್ರತಿಪಾದನೆ ಕೇವಲ ಹಿಂದಿ ಭಾಷಿಕರಿಗೆ/ಪ್ರದೇಶಗಳಿಗೆ ಮಾತ್ರ ಒಲಿದಿರುವ ವರದಾನವಾಗಿ ಪರಿಣಮಿಸಿದೆ ಮತ್ತು ಹಿಂದಿ ಭಾಷಿಕರು ತಾವು ನೆಲಸಲು ಬರುವ ಪ್ರದೇಶಗಳ ಭಾಷೆಯನ್ನು ಕಡೆಗಣಿಸಲು ಮತ್ತು ಅಸಡ್ಡೆ ತೋರಲು ಪರೋಕ್ಷವಾಗಿ ಸಹಕಾರಿಯಾಗಿದೆ.
ಭಾಷೆ ಕೇವಲ ಸಂಪರ್ಕ ಸಾಧನವಲ್ಲ. ಅದು ಒಂದು ಪ್ರದೇಶದ ಆಚಾರ,ವಿಚಾರ,ನಡೆ,ನುಡಿಗಳ ಸಂಕೇತ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋಗುವವ ಹಿಂದಿ ಕಲಿತು ಹೋಗುವುದು/ ರಾಷ್ಟ್ರಭಾಷೆ ಸೋಗಿನಲ್ಲಿ ಹಿಂದಿಗಾಗಿ ಆಗ್ರಹಿಸುವುದು ಖಂಡಿತ ಈ ದೇಶವನ್ನು ಒಗ್ಗೂಡಿಸುವ ಸಾಧನವಲ್ಲ ಎಂಬುದನ್ನು ನಾವು ಅರಿಯಬೇಕಿದೆ. ಯಾವುದೇ ಪ್ರಾಂತ್ಯಕ್ಕೆ ವಲಸೆ ಹೋಗುವವ ಆಯಾ ಪ್ರದೇಶದ ಭಾಷೆ ಕಲಿತು, ಅಲ್ಲಿನ ಸಂಸ್ಕೃತಿಯನ್ನ ಮನ್ನಿಸಿ, ಅಲ್ಲಿಯವರ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಔದಾರ್ಯ-ಸಜ್ಜನಿಕೆ-ಕರ್ತವ್ಯವನ್ನು ಮೆರೆಯುವುದು ಮಾತ್ರ ಪರಸ್ಪರ ಸಂಸ್ಕೃತಿ ವಿನಿಮಯಕ್ಕೆ ಅವಕಾಶವೀಯುತ್ತದೆ. ತಮಿಳ ಕರ್ನಾಟಕಕ್ಕೆ ಬಂದು ನೆಲೆಸಿದರೆ ಅವನು ಕನ್ನಡ ಕಲಿಯಬೇಕು, ಮಲಯಾಳಿ ಮಹಾರಾಷ್ಟ್ರಕ್ಕೆ ಹೋದರೆ ಮರಾಠಿಗೆ ಒಲಿಯಬೇಕು. ಉತ್ತರ-ಮಧ್ಯ-ಹಿಮಾಚಲ ಪ್ರದೇಶದವರು ಆಂದ್ರಕ್ಕೆ ಹೋದರೆ ತೆಲುಗು ಕಲಿಯಬೇಕು... ಎನ್ನುವುದೇ ಸತ್ಯವಾದದ್ದು ಮತ್ತು ಇದೇ ಭಾರತ ಒಕ್ಕೂಟ ವ್ಯವಸ್ಥೆಯ ಐಕ್ಯತೆಯನ್ನು ಬಲಪಡಿಸುವ ಇಂದಿನ ಬಹುದೊಡ್ಡ ಸಾಧನವಾಗಿದೆ ಮತ್ತು ಕಾಯ್ಕಿಣಿಯವರು ತಿಳಿಸಿದಂತೆ "ಎಲ್ಲ ಪ್ರಾದೇಶಿಕ ಭಾಷೆಗಳು ಭಾರತದ ಏಕತೆಯ ಸಂಕೇತಗಳಂತೆ " ಎಂಬ ಮಾತಿಗೆ ಅರ್ಥ ಬರುತ್ತದೆ. ಹಾಗಾಗಿ ಆಯಾ ರಾಜ್ಯಗಳ ಸಂಸ್ಕೃತಿಯ - ಭಾಷೆಯ ಬೆಳವಣಿಗೆಗೆ ಅಕಾಡಮಿ, ನಿಗಮ, ಮಂಡಳಿ, ಸೇವಾ ಸಂಸ್ಥೆಗಳು ಶ್ರಮಿಸಬೇಕಾಗಿರುವುದು ಪ್ರಸ್ತುತ ಸತ್ಯವಾಗಿದೆ.
ಕನ್ನಡಿಗರು ಕನ್ನಡವನ್ನು ಪ್ರೀತಿಸಿ ಕನ್ನಡ ಪ್ರಾದೇಶಿಕತೆಯನ್ನು ಬಲಪಡಿಸುವುದು ಸಹ ನಮ್ಮ ರಾಷ್ಟ್ರವನ್ನು ಬಲಪಡಿಸಿದಂತೆ ಎಂಬುದನ್ನು ಅರಿಯಬೇಕಿದೆ. ಒಂದು ಹಿಂದಿ ಪದ ಮಾತನಾಡದೇ ತಮ್ಮ ಯಾವುದೇ ಕೆಲಸ ಮಾಡಿಕೊಳ್ಳಲು, ಮಾಡಿಸಿಕೊಳ್ಳಲು, ಕೇಂದ್ರದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲು, ತಾವು ಸಬಲರಾಗಿ ಈ ದೇಶದ ಆರ್ಥಿಕತೆಗೆ ಬೆನ್ನೆಲುಬಾಗಲು ಈ ಮೂಲಕ ತಮ್ಮ ಅಧಮ್ಯ ದೈವ ಭಕ್ತಿ, ರಾಷ್ಟ್ರ ಭಕ್ತಿಯನ್ನು ಕಟ್ಟಿಕೊಳ್ಳಲು ಸಮರ್ಥವಾಗಿರುವ ನಮ್ಮ ಪಕ್ಕದ ತಮಿಳುನಾಡನ್ನು ನಾವು ಗಮನಿಸಬೇಕಿದೆ. ಅಂತೆಯೇ ಕನ್ನಡಿಗನ ರಾಷ್ಟ್ರೀಯತ್ವಕ್ಕೆ ಹಿಂದಿ ಬೇಕಿಲ್ಲ, ಕನ್ನಡ ಮಾತ್ರ ಸಾಕು. ಈ ಹಿನ್ನಲೆಯಲ್ಲಿ ಇಂದು ಕರ್ನಾಟಕದಲ್ಲಿ ಹಿಂದಿ ಸೇವಾ ಸಂಸ್ಥೆಗಳಿಗೆ ಯಾವುದೇ ವಾಸ್ತವಿಕ ಮೌಲ್ಯ ಮತ್ತು ಅರ್ಥ ಇಲ್ಲ. ಅವು ಕನ್ನಡ ಸೇವಾ ಸಂಸ್ಥೆಗಳಾಗಿ ಮಾರ್ಪಾಡಾಗಬೇಕಾಗಿರುವುದು ಸಹಜ, ಸ್ವಾಭಾವಿಕವಾದುದಾಗಿದೆ.
ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ
*****